ಆರೋಗ್ಯ ವಿವಿಗೆ ಪ್ರತ್ಯೇಕ ಕ್ಯಾಂಪಸ್ ಸ್ಥಾಪನೆ ವಿಳಂಬ

ಬೆಂಗಳೂರು: ರಾಜ್ಯದಲ್ಲಿ ಆರ್‌ಜಿಯುಎಚ್‌ಎಸ್ ಪ್ರತ್ಯೇಕ ಕ್ಯಾಂಪಸ್ ಸ್ಥಾಪಿಸುವ ಕುರಿತು ಸರ್ಕಾರ ತೋರುತ್ತಿರುವ ವಿಳಂಬ ನೀತಿಯಿಂದ ಮನಸ್ಸಿಗೆ ನೋವಾಗಿದೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಸಮಾಧಾನ ಹೊರಹಾಕಿದರು.
ಉಟಾಹ್ ವಿವಿ ಸಹಯೋಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್) ಏರ್ಪಡಿಸಿದ್ದ ಜೀವರಕ್ಷಾ ಸಮಗ್ರ ಎಮರ್ಜೆನ್ಸಿ ಕೇರ್ ಹಾಗೂ ಜೀವಧಾರಕ ರಕ್ಷಣಾ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯಗಳನ್ನು ತಡವಾಗಿ ಜಾರಿ ಮಾಡಬಾರದು. ವಿಚಾರ ಸಂಕಿರಣಗಳನ್ನು ಮಾಡಿ ತೆಗೆದುಕೊಂಡ ನಿರ್ಣಯಗಳು ಜಾರಿಗೆ ಬರುವುದೇ ಇಲ್ಲ. ಈಗಾಗಲೇ ಶಂಕುಸ್ಥಾಪನೆಯಾಗಿರುವ ಜಾಗದಲ್ಲಿ ಕ್ಯಾಂಪಸ್ ಆರಂಭಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಶಿಕ್ಷಣ ಸಚಿವರ ಬಳಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ವಿವಿಯ ಕುಲಪತಿಗಳು ಮಾತ್ರ ಒಬ್ಬರೇ ಹೋರಾಡುತ್ತಿದ್ದಾರೆ. ಹೀಗಾಗಿ ನನ್ನ ಮನಸ್ಸಿಗೆ ನೋವಾಗಿದೆ ಎಂದು ಭೀಮನಕುಪ್ಪೆಯಲ್ಲಿ ಆರ್‌ಜಿಯುಎಚ್‌ಎಸ್ ಆರಂಭಿಸಲು ಉದ್ದೇಶಿಸಿರುವ ಕ್ಯಾಂಪಸ್ ಬಗ್ಗೆ ಉಲ್ಲೇಖಿಸಿದರು. ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕ್ಯಾಂಪಸ್ ಅಗತ್ಯವಿದೆ. ಆದರೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸೋತಿದೆ. ಭೂಮಿಯ ಲಭ್ಯತೆಯಿದ್ದರೂ 5 ವರ್ಷಗಳಲ್ಲಿ ಕ್ಯಾಂಪಸ್ ಮಾಡಲು ಸರ್ಕಾರ ಉತ್ಸಾಹ ತೋರಲಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೌಲಭ್ಯಗಳ ಕೊರತೆಯಿದೆ. ತಾಂತ್ರಿಕತೆ ಇದ್ದರೂ ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡದಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದರು. ಹಳ್ಳಿಗಳಲ್ಲಿ ಹಿಂದೆ ಇದ್ದ ಆಯುರ್ವೇದ ಪದ್ಧತಿ ಇಂದು ಕಣ್ಮರೆಯಾಗುತ್ತಿದೆ. ಅಲೋಪತಿ ಬರುವುದಕ್ಕೆ ಮುಂಚೆಯೂ ಹಳ್ಳಿಗಳಲ್ಲಿ ಚಿಕಿತ್ಸೆ ಲಭ್ಯವಿತ್ತು. 125 ಕೋಟಿ ಜನರಲ್ಲಿ ಶೇ.70 ಜನರು ಬಡವರು. ವೈದ್ಯ ಕ್ಷೇತ್ರದಲ್ಲಿ ಪ್ರತಿಭಾವಂತರನ್ನು ಹುಟ್ಟುಹಾಕಿ ಜನರ ಅಗತ್ಯ ಪೂರೈಸಬೇಕು ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಳೆಯ ಕುಲಪತಿಗಳನ್ನೇ ಮುಂದುವರಿಸುವಂತೆ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದ ರಾಜ್ಯಪಾಲ, ಸರ್ವಾನುಮತದಿಂದಲೇ ಈ ಆಯ್ಕೆ ನಡೆದಿದೆ. ಬೇರೆ ಯಾರೂ ಇಲ್ಲದ ಕಾರಣಕ್ಕೆ ಹಿಂದಿನವರನ್ನೇ ಮುಂದುವರಿಸಲಾಗಿದೆ ಎಂದು ತಿಳಿಸಿದರು. ಹಳೆಯ ಕುಲಪತಿಗಳನ್ನು ಮತ್ತೆ ಮುಂದುವರಿಸಿರುವುದು ಸರ್ಕಾರದ ನಿರ್ಧಾರ. ನಾನು ಯಾವುದೇ ವಿವಾದಗಳಿಲ್ಲದೆ ಯುಪಿಎಸ್‌ಸಿ ಮುಖ್ಯಸ್ಥರನ್ನು ನೇಮಿಸಿದ್ದೇನೆ. ನನ್ನ ಕೆಲಸದಲ್ಲಿ ವಿಳಂಬವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


