ಕಬಿನಿ ಟು ಮೆಟ್ಟೂರು; ತುಂಬ್ದಿದ್ರೂ ಬಿಟ್ರಾ ನೀರು?

ಮೈಸೂರು: ಕಬಿನಿ ಜಲಾಶಯದಿಂದ ಸದ್ದಿಲ್ಲದೇ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರು ಹೋಗುತ್ತಿದೆಯೇ? ಅದೂ ನಿಯಮ ಮೀರಿ ಬಿಡಲಾಗುತ್ತಿದೆಯೇ? ಇಂಥದ್ದೊಂದು ಅನುಮಾನ ಈಗ ಕಾಡತೊಡಗಿದೆ.
ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯಕ್ಕಿದೆ. ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಭರ್ತಿಯಾದ ತಕ್ಷಣ ನೀರು ಬಿಡಲಾಗುತ್ತದೆ. ಆದರೆ ಈ ಬಾರಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಆದರೂ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿದೆ.
ಸೋಮವಾರ ಜಲಾಶಯದಲ್ಲಿ 2272 ಅಡಿ ನೀರಿತ್ತು. ಗರಿಷ್ಠ ಮಟ್ಟ 2284 ಅಡಿ ಇದೆ. ಜಲಾಶಯಕ್ಕೆ 15,000 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 5000 ಕ್ಯುಸೆಕ್ ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ (ಜೂ.23) ಜಲಾಶಯದ ನೀರಿನ ಮಟ್ಟ 2272 ಅಡಿ, ಒಳಹರಿವು 8000 ಕ್ಯುಸೆಕ್ ಮತ್ತು ಹೊರಹರಿವು 1000 ಕ್ಯುಸೆಕ್ ಇತ್ತು. ಹಾಲಿ ಜಲಾಶಯದಲ್ಲಿ 12.50 ಟಿಎಂಸಿ ನೀರಿದೆ. ಇನ್ನೂ 6 ಟಿಎಂಸಿ ನೀರು ಭರ್ತಿಯಾಗಬೇಕಾಗಿದೆ.
ಪಟ್ಟಣಗಳಿಗೆ ಪೂರೈಕೆ: ಸಾಮಾನ್ಯವಾಗಿ ಜಲಾಶಯ ಭರ್ತಿಯಾಗುವವರೆಗೆ ಬೆಂಗಳೂರು ಸೇರಿದಂತೆ ಮಾರ್ಗಮಧ್ಯೆ ಬರುವ ಪಟ್ಟಣಗಳ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ 500ರಿಂದ 1000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ.
ಸ್ಪಷ್ಟ ಉತ್ತರವಿಲ್ಲ: ಎಡದಂಡೆ, ಬಲದಂಡೆ, ಹುಲ್ಲಹಳ್ಳಿ- ರಾಂಪುರ ನಾಲೆಗಳಿಗೆ ನೀರು ಬಿಡುಗಡೆ ಮಾಡುವಾಗ ಮಾತ್ರ 5000 ಕ್ಯುಸೆಕ್ವರೆಗೆ ಹರಿಸಲಾಗುತ್ತದೆ. ಆದರೆ ಈಗ ಜಲಾನಯನ ಪ್ರದೇಶ ವ್ಯಾಪ್ತಿಯ ಯಾವುದೇ ನಾಲೆಗಳಿಗೂ ನೀರು ಬಿಡುಗಡೆ ಮಾಡಿಲ್ಲ.
ಮೆಟ್ಟೂರಿಗೆ: ಜಲಾಶಯದಿಂದ ಬಿಡುಗಡೆ ಮಾಡಿದ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಬೇರೆಲ್ಲೂ ಜಲಾಶಯಗಳಿಲ್ಲ. ಹೀಗಾಗಿ ಈ ನೀರು ತಮಿಳನಾಡಿನ ಮೆಟ್ಟೂರು ಜಲಾಶಯ ತಲುಪುತ್ತದೆ. ಕಾವೇರಿ ನ್ಯಾಯಾಧಿಕರಣದ ಪ್ರಕಾರ, ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲೇಬೇಕು. ಒಂದು ವೇಳೆ ನೀರಿಲ್ಲದಿದ್ದರೂ ಆ ಬಾಕಿಯನ್ನು ನಂತರ ಬಿಡುಗಡೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಿರುವುದರಿಂದ ಹೊರಹರಿವು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
12.50 ಟಿಎಂಸಿ ನೀರು ಲಭ್ಯ
1970ರಲ್ಲಿ ಕಾಮಗಾರಿ ಆರಂಭವಾಗಿ 1974ರಲ್ಲಿ ಪೂರ್ಣಗೊಂಡ ಈ ಜಲಾಶಯದ ಒಟ್ಟು ಶೇಖರಣೆ ಸಾಮರ್ಥ್ಯ 19.516 ಟಿಎಂಸಿ ಅಡಿಗಳು. ಜಲಾಶಯದ ಮಟ್ಟ 2250 ಅಡಿ ತಲುಪುವವರೆಗೆ ನೀರನ್ನು ಜಲಾಶಯದಿಂದ ಹೊರ ತೆಗೆಯಬಹುದು. 2250 ಅಡಿಗಳ ಕೆಳಮಟ್ಟದಲ್ಲಿ ಶೇಖರಣೆಯಾಗಿರುವ ನೀರಿನ ಪ್ರಮಾಣ 3.85 ಟಿಎಂಸಿ. ಹಾಲಿ ಜಲಾಶಯದಲ್ಲಿ ಸುಮಾರು 12.50 ಟಿಎಂಸಿ ನೀರು ಲಭ್ಯ. ಜಲಾಶಯದಲ್ಲಿ ಒಂದು ಅಂದಾಜಿನ ಪ್ರಕಾರ, ಸುಮಾರು 30 ಸೆಂ.ಮೀ. ನಷ್ಟು ಹೂಳು ತುಂಬಿದೆ. ಈ ಹೂಳನ್ನು ತೆಗೆದರೆ ಇನ್ನು ಸುಮಾರು 2 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಶೇಖರಿಸಬಹುದು.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


