ಗ್ಯಾಸ್ ಸಿಲಿಂಡರ್‌ಗೆ 5, ಸೀಮೆಎಣ್ಣೆ ಪ್ರತಿ ಲೀ.ಗೆ 1; ಪ್ರತಿ ತಿಂಗಳು ಹೆಚ್ಚಳ ಚಿಂತನೆ

ನವದೆಹಲಿ: ಹೊಸ ಆಘಾತ ಎದುರಿಸಲು ಸಿದ್ಧರಾಗಿ!
ರೇಲ್ವೆ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಮೋದಿ ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಡೀಸೆಲ್ ದರದಂತೆಯೇ ಎಲ್‌ಪಿಜಿ ಮತ್ತು ಸೀಮೆಎಣ್ಣೆ ದರವನ್ನು ನಿಯಂತ್ರಣಮುಕ್ತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್ ದರ 5ರಂತೆ ಹಾಗೂ ಸೀಮೆಎಣ್ಣೆ ದರ ಲೀಟರ್‌ಗೆ 1ರಂತೆ ಏರಿಕೆಯಾಗುವ ಸಾಧ್ಯತೆಯಿದೆ. ಪೆಟ್ರೋಲಿಯಂ ಸಚಿವಾಲಯವು ಇಂತಹುದೊಂದು ಪ್ರಸ್ತಾಪವನ್ನು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಮುಂದಿಟ್ಟಿದೆ.
ಶೀಘ್ರದಲ್ಲೇ ನಿರ್ಧಾರ
ಅನಿಲ ದರ ನಿಗದಿಗೆ ಸಂಬಂಧಿಸಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. ಮಂಗಳವಾರ ಮತ್ತೆ ಪ್ರಧಾನಿಯ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರೂ ಉನ್ನತ ಮಟ್ಟದ ಎರಡನೇ ಸಭೆ ನಡೆಸಿದ್ದಾರೆ. ಮಿಶ್ರಾ ಹಾಗೂ ಹಣಕಾಸು ಸಚಿವ ಜೇಟ್ಲಿ ಅವರು ರಂಗರಾಜನ್ ಅನಿಲ ದರ ಸೂತ್ರವನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅನಿಲ ದರ ನಿಗದಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ತಗ್ಗಲಿದೆ ಹೊರೆ
ಸೀಮೆಎಣ್ಣೆ ದರವನ್ನು ಲೀ.ಗೆ 1ರಂತೆ ಪ್ರತಿ ತಿಂಗಳು ಹೆಚ್ಚಳ ಮಾಡುತ್ತಾ ಹೋದರೆ, ವರ್ಷಕ್ಕೆ 850 ಕೋಟಿಯಷ್ಟು ಸಬ್ಸಿಡಿ ಹೊರೆಯನ್ನು ತಗ್ಗಿಸಬಹುದು ಎನ್ನುವುದು ಸರ್ಕಾರದ ವಾದ.
ಕಠಿಣ ಕಾಲ ಸನ್ನಿಹಿತ
ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಳೆದೆರಡು ವರ್ಷಗಳಿಂದ ದೇಶದ ಆರ್ಥಿಕಾಭಿವೃದ್ಧಿ ಕುಂಠಿತಗೊಂಡಿದೆ. ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವುದರ ಜೊತೆಗೆ ಹೂಡಿಕೆದಾರರ ಒಲವನ್ನೂ ಗಳಿಸುವತ್ತ ಹೆಜ್ಜೆ ಇಡಬೇಕಿದೆ ಎಂದು ಅವರು ಹೇಳಿದ್ದಾರೆ. ಹಲವು ಸವಾಲುಗಳ ನಡುವೆ ಉತ್ತಮ ಬಜೆಟ್ ನೀಡುವ ಗುರಿ ಹೊಂದಿದ್ದು, ಹೂಡಿಕೆ ವಲಯದ ಹಲವಾರು ಗಣ್ಯರೊಂದಿಗೆ ಕಳೆದ ನಾಲ್ಕು ವಾರಗಳಿಂದ ಸಭೆ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ಜುಲೈ ಮೊದಲ ವಾರದಲ್ಲಿ ಜೇಟ್ಲಿ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ತಜ್ಞರು ಏನೆನ್ನುತ್ತಾರೆ?
ಬೆಲೆಯನ್ನೇ ಏರಿಸದೇ ಇರುವುದಕ್ಕಿಂತ ಹಂತ ಹಂತವಾಗಿ ಬೆಲೆ ಏರಿಸುವುದೇ ಸೂಕ್ತ. ಸೀಮೆಎಣ್ಣೆ ದರ ತಿಂಗಳಿಗೆ 1 ಹೆಚ್ಚಳ ಸಮರ್ಥನೀಯ ಎನ್ನುತ್ತಾರೆ ತೈಲ ಮತ್ತು ಅನಿಲ ತಜ್ಞ ಕಿರಿತ್ ಪಾರಿಖ್. ಇದೇ ವೇಳೆ, ಎಲ್‌ಪಿಜಿ ಸಿಲಿಂಡರ್‌ನ ಪ್ರಸ್ತಾವಿತ ದರ ಹೆಚ್ಚಳವು ಅಗತ್ಯಕ್ಕಿಂತ ತುಂಬಾ ಕಡಿಮೆಯಾಯಿತು ಎಂದೂ ಹೇಳಿದ್ದಾರೆ ಪಾರಿಖ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


