ಆಡಳಿತ ಸೌಧಗಳಿಗಿಂತ ಮಂಡೂರೇ ವಾಸಿ, ಅಲ್ಲಿ ಕಸ ಹಾಕಲು ವಿರೋಧವಿದೆ, ಇಲ್ಲಿ ಕೇಳುವವರು ಯಾರೂ ಇಲ್ಲ
ಬೆಂಗಳೂರು: ಅಲ್ಲಲ್ಲಿ ಕಸ, ಬಾಗಿಲ ಮುಂದೆಯೇ ಮುರಿದ ಕುರ್ಚಿಗಳ ರಾಶಿ, ಪಾಚಿ ಹಿಡಿದ ಹೂ ಕುಂಡ, ಸ್ಥಳವಿಲ್ಲದೆ ಮೇಜಿನ ಮೇಲಿಟ್ಟ ಕಡತ, ಧೂಳು ಹಿಡಿದ ಕೋಣೆಗಳು...
ಇದು ಯಾವುದೋ ಪಾಳುಬಿದ್ದ ಕಟ್ಟಡದ ದೃಶ್ಯವಲ್ಲ. ನಿತ್ಯ ಸಾರ್ವಜನಿಕರು ಓಡಾಡುವ, ಸರ್ಕಾರಿ ಇಲಾಖೆ ಕಚೇರಿಗಳಿರುವ ಎಂಎಸ್ಬಿಲ್ಡಿಂಗ್ ಮತ್ತು ವಿಶ್ವೇಶ್ವರಯ್ಯ ಟವರ್ಸ್ ಕಟ್ಟಡಗಳ ಸ್ಥಿತಿಯಿದು. ಸರ್ಕಾರಿ ಇಲಾಖೆಗಳು ಜನರಿಗೆ ಸೇವೆ ನೀಡುವಲ್ಲಿ ಮಾತ್ರವಲ್ಲ, ಕಚೇರಿಗಳ ಶಿಸ್ತು ಕಾಪಾಡಿಕೊಳ್ಳುವಲ್ಲೂ ವಿಫಲವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಆಸ್ಪತ್ರೆ, ಸಾರಿಗೆ, ಶಾಲೆ, ಮಾಧ್ಯಮ ಸೇರಿದಂತೆ ಎಲ್ಲಾ ಆಯ್ಕೆಗಳಲ್ಲಿ ಸಾರ್ವಜನಿಕರು ಮೊದಲು ಖಾಸಗಿ ಕ್ಷೇತ್ರವನ್ನೇ ಆರಿಸಿಕೊಳ್ಳುತ್ತಾರೆ. ಸರ್ಕಾರಿ ಇಲಾಖೆಗಳಂತೆ ಖಾಸಗಿ ಕ್ಷೇತ್ರದಲ್ಲೂ ಇಲಾಖೆಗಳಿಗೆ ಅವಕಾಶವಿದ್ದಿದ್ದರೆ ಜನರ ಆದ್ಯತೆ ಖಾಸಗಿಗೇ ಇರುತ್ತಿತ್ತು. 'ಸಕಾಲ'ಕ್ಕೆ ಸೇವೆ ನೀಡುವುದಿರಲಿ, ಸಕಾಲಕ್ಕೆ ಕಚೇರಿಯನ್ನು ಶುಚಿಯಾಗಿಟ್ಟುವಲ್ಲೂ ಇಲಾಖೆಗಳು ಜವಾಬ್ದಾರಿ ಮರೆತಂತಿದೆ.
ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಕೇಂದ್ರದ ಎರಡು ಗೋಪುರಗಳು ಹಾಗೂ ಸಮೀಪದ ಬಹುಮಹಡಿ ಕಟ್ಟಡದಲ್ಲಿ ರಾಜ್ಯದ ಶೇ.75 ರಷ್ಟು ಸರ್ಕಾರಿ ಕೆಲಸ ನಡೆಯುತ್ತದೆ. ಸ್ಥಳೀಯ ಆಡಳಿತಗಳೇ ತಮ್ಮ ಕಚೇರಿಯನ್ನು ಶುಚಿಯಾಗಿಟ್ಟುಕೊಂಡಿರುವಾಗ ಶಕ್ತಿಕೇಂದ್ರದ ಪಕ್ಕದಲ್ಲಿರುವ ಕಟ್ಟಡಗಳು ಅಸಡ್ಡೆಗೆ ಗುರಿಯಾಗಿವೆ.
ವಿವಿ ಗೋಪುರ: ವಿಶ್ವೇಶ್ವರಯ್ಯ ಗೋಪುರದಲ್ಲಿ 50 ಕ್ಕೂ ಅಧಿಕ ಇಲಾಖಾ ಕಚೇರಿಗಳಿವೆ. ದೊಡ್ಡ ಗೋಪುರದ 21 ಮಹಡಿಗಳಲ್ಲಿ ಪ್ರಮುಖ ಇಲಾಖೆಗಳಿದ್ದು, ಪ್ರತಿದಿನ ಸಾವಿರಾರು ಸಾರ್ವಜನಿಕರು ಬರುತ್ತಾರೆ. ಆದರೆ ಎಲ್ಲಾ ಮಹಡಿಗಳಲ್ಲೂ ಕಸ, ರಾಶಿ ಹಾಕಿದ ಮುರಿದ ಕುರ್ಚಿಗಳು, ಒಡೆದ ಕಿಟಕಿ ಗಾಜು, ಕಡತಗಳ ಅಸಮರ್ಪಕ ನಿರ್ವಹಣೆ ಬಾಗಿಲಲ್ಲೇ ಸ್ವಾಗತ ನೀಡುತ್ತವೆ.
8ನೇ ಮಹಡಿಯಲ್ಲಿ ವನ್ಯಜೀವಿ ಮಂಡಳಿ ಎಂಬ ಫಲಕವಿದೆ. ಆದರೆ ಮಂಡಳಿ ಕಚೇರಿ ಬೇರೆಡೆಗೆ ಸ್ಥಳಾಂತರವಾಗಿ 2-3 ತಿಂಗಳು ಕಳೆದಿದೆ. ಈ ಕೊಠಡಿಯಲ್ಲಿ ಭಾಷಾಂತರ ನಿರ್ದೇಶನಾಲಯವಿದ್ದರೂ ಫಲಕವಿಲ್ಲ. ಕೊಠಡಿ ಒಳಗೆ ಹಳೆಯ ಮರದ ಹಲಗೆಗಳನ್ನು ಇಡಲಾಗಿದೆ.
12ನೇ ಮಹಡಿಯಲ್ಲಿ ಅಗ್ನಿಶಾಮಕ ಸಾಧನಗಳಿರುವ ಕಪಾಟಿನ ಗಾಜು ಒಡೆದು ಹಲವು ದಿನ ಕಳೆದರೂ ದುರಸ್ತಿಯಾಗಿಲ್ಲ. ಒಳಗಿನ ಸಾಧನಗಳೂ ಸುಸ್ಥಿತಿಯಲ್ಲಿಲ್ಲ. 13ನೇ ಮಹಡಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಮತ್ತೂ ದುಃಸ್ಥಿತಿಯಲ್ಲಿದೆ. ಕಚೇರಿಯೇ ಸ್ಟೋರ್ ರೂಂ ನಂತಿದ್ದು, ಹಳೆಯ ಕುರ್ಚಿ, ಮೇಜುಗಳನ್ನು ರಾಶಿ ಹಾಕಲಾಗಿದೆ. ಕಡತಗಳಿಗೆ ಪ್ರತ್ಯೇಕವಾದ ಕಪಾಟಿಲ್ಲದೆ ನೌಕರರ ಮೇಜಿನ ಮೇಲೆ ಪೇರಿಸಿಡಲಾಗಿದೆ. 15ನೇ ಮಹಡಿಯ ವಿಮಾ ಇಲಾಖೆ, 18ರ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಮಾಧಿಕಾರಿ ಕಚೇರಿಗಳಲ್ಲಿ ಕಡತಗಳನ್ನು ಎಲ್ಲೆಂದರಲ್ಲಿ ಪೇರಿಸಿಡಲಾಗಿದೆ.
ಚಿಕ್ಕ ಗೋಪುರದಲ್ಲಿ 10 ಮಹಡಿಗಳಿದ್ದು, ಮಹಡಿ 4ರಲ್ಲಿ ಪಾಳುಬಿದ್ದ ಕೊಠಡಿಯನ್ನು ದುರಸ್ತಿ ಮಾಡಿಸದೆ ಖಾಲಿ ಬಿಡಲಾಗಿದೆ. ಈ ಕೋಣೆಯನ್ನು ಯಾವುದಾದರೂ ಕಚೇರಿಗೆ ಬಳಸಿಕೊಳ್ಳಬಹುದಿತ್ತು. ಸರ್ಕಾರಿ ಕೆಲಸಕ್ಕೆ ಅಡಿಗಡಿಗೂ ಅಡ್ಡಿ ಉಂಟಾಗುವ ರೀತಿಯಲ್ಲಿಯೇ 8 ನೇ ಮಹಡಿಯಿಂದ ಮೇಲಕ್ಕೆ ಯಾವುದೇ ಕಡೆಗೆ ಕಾಲಿಟ್ಟರೂ ಹಳೆಯ ಬಾಗಿಲು, ಫ್ಲೈವುಡ್, ಸಿಮೆಂಟ್ ಚೀಲಗಳು ಅಡ್ಡವಾಗುತ್ತವೆ.
ಚಿಕ್ಕಗೋಪುರದ ಲಿಫ್ಟ್ಗೆ ಕಾಲಿಟ್ಟರೆ ಪ್ರಾಣ ಭಯ ಖಚಿತ. ಲಿಫ್ಟ್ ನಿಲ್ಲುತ್ತದೋ ಅಥವಾ ಕುಸಿಯುತ್ತದೋ ಎಂದು ಅರ್ಥವಾಗುವುದಿಲ್ಲ. ಲಿಫ್ಟ್ನೊಳಗೆ ಮಹಡಿ ಸಂಖ್ಯೆ ತೋರಿಸುವ ಫಲಕ ಒಡೆದಿದೆ. ಹೀಗಾಗಿ ನಿರ್ವಾಹಕರಿಲ್ಲದೆ ಲಿಫ್ಟ್ಗೆ ಕಾಲಿಡಲು ಹೆದರುವ ಸ್ಥಿತಿ ಇದೆ. ಕೇಂದ್ರದ ಆವರಣಕ್ಕೆ ಬಂದರೆ ಸುಂದರವಾದ ಹೂ ಕುಂಡಗಳನ್ನು ಮೆಟ್ಟಿಲ ಕೆಳಗೆ ಎಸೆದಿರುವ ದೃಶ್ಯ ಕಾಣುತ್ತದೆ.
3 ದಶಕಗಳ ಹಿಂದೆ ನಿರ್ಮಾಣವಾದ ವಿಶ್ವೇಶ್ವರಯ್ಯ ಕೇಂದ್ರ ಆಕರ್ಷಕವಾಗಿರದಿದ್ದರೂ ಉತ್ತಮ ವಿನ್ಯಾಸ ಹೊಂದಿದೆ ಎಂಬ ಶ್ಲಾಘನೆ ಕೇಳಿಬರುತ್ತದೆ. ತುಂಬಾ ಪ್ರಸಿದ್ಧ ಕಟ್ಟಡವೂ ಹೌದು. ಆದರೆ ಇಂತಹ ಕಟ್ಟಡ ಬಳಸಿಕೊಳ್ಳಲು ಮತ್ತು ಅಂದವಾಗಿ ಕಾಪಾಡಲು ಅಧಿಕಾರಿಗಳಿಗೆ ಕಾಳಜಿಯಿಲ್ಲ.
ಬಹುಮಹಡಿ ಕಟ್ಟಡ
ವಿಧಾನಸೌಧದ ಆವರಣದಲ್ಲೇ ಇರುವ ಬಹುಮಹಡಿ ಕಟ್ಟಡ ಕಸಕ್ಕೆ ಮತ್ತೊಂದು ಹೆಸರು. ಗೇಟ್1 ರಿಂದ ಗೇಟ್4 ರವರೆಗಿನ ಕಟ್ಟಡಗಳಲ್ಲಿ 30ಕ್ಕೂ ಅಧಿಕ ಇಲಾಖೆಗಳಿವೆ. ಆದರೆ ವಿವಿ ಗೋಪುರದ ಮಾದರಿಯಲ್ಲೇ ಹೆಚ್ಚಿನ ಕಚೇರಿಗಳಲ್ಲಿ ಮುರಿದ ಕುರ್ಚಿಗಳ ರಾಶಿ ನಿಮ್ಮನ್ನು ಸ್ವಾಗತಿಸುತ್ತದೆ.
ರಾಜ್ಯ ಯೋಜನಾ ಮಂಡಳಿ ಕಚೇರಿಯ ಎದುರು ಸಾರ್ವಜನಿಕರಿಗೆ ನಿಲ್ಲಲೂ ಜಾಗವಿಲ್ಲದಂತೆ ನೆಲಹಾಸು, ಹಳೆಯ ಮೇಜು, ಮರದ ತುಂಡುಗಳನ್ನು ಹರಡಿ ಇಡಲಾಗಿದೆ. ಯೋಜನಾ ಮಂಡಳಿ ಎದುರೇ ಈ ಸ್ಥಿತಿಯಾದರೆ ರಾಜ್ಯದ ಒಳಿತಿಗೆ ಯೋಜನೆ ರೂಪಿಸುವುದು ಕನಸಿನ ಮಾತಾದೀತು. ಇದೇ ಭಾಗದಲ್ಲಿ ಕೇಂದ್ರ ಪುಸ್ತಕ ಮಳಿಗೆಯಿದ್ದು, ಹೊರಗೆ ಹಾಕಿರುವ ಫಲಕ ನೆಲಕ್ಕೆ ಬೀಳುವ ಹವಣಿಕೆಯಲ್ಲಿ ನೇತಾಡುತ್ತಿದೆ. ಮೂರ್ನಾಲ್ಕು ವರ್ಷದ ಹಿಂದಿನ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಭಿತ್ತಿಪತ್ರಗಳೂ ಇಲ್ಲಿವೆ. ಕಚೇರಿ ಬಾಗಿಲುಗಳನ್ನೇ ಭಿತ್ತಿಪತ್ರ ಅಂಟಿಸಲು ಬಳಸಲಾಗಿದೆ. ಕೆಲವೆಡೆ ಪತ್ರದ ಅರ್ಧಭಾಗವನ್ನು ಹರಿದು ವಿರೂಪಗೊಳಿಸಲಾಗಿದೆ.
ಗೇಟ್1 ರ 7ನೇ ಮಹಡಿಗೆ ಭೇಟಿ ನೀಡಿದರೆ ಮೆತ್ತನೆಯ ಸೋಫಾಗಳು ಸಿಗುತ್ತವೆ. ಆದರೆ ಅಲ್ಲಿ ಕೂರಲು ಸಾಧ್ಯವಿಲ್ಲ. ಮುರಿದ ಸೋಫಾಗಳ ಮೇಲೆ 3 ಕಂಪ್ಯೂಟರ್ ಹಾಗೂ ಸಿಪಿಯುಗಳನ್ನು ಇಡಲಾಗಿದೆ. ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ದಾಟುವ ಇಕ್ಕೆಲಗಳಲ್ಲಿ ಇಂತಹ ದೃಶ್ಯ ಸಾಮಾನ್ಯವಾಗಿದೆ. ಇಂತಹ ಧೂಳು ಹಿಡಿದ ಸ್ಥಳಗಳಲ್ಲೇ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಬೇಕು. ಕೆಲವೆಡೆ ಲಿಫ್ಟ್ ಆಗಾಗ್ಗೆ ಹಾಳಾಗುವುದರಿಂದ ಕಟ್ಟಡ ವಿಕಲಚೇತನಸ್ನೇಹಿಯಾಗಿರುವುದು ಬಿಡಿ, ಸರಿ ಇದ್ದವರು ವಿಕಲಚೇತನರಾಗದಿದ್ದರೆ ಸಾಕು ಎಂಬಂತಿದೆ.
ಹಳೇ ಗಾಡಿ, ಸೌಂದರ್ಯ ಲಗಾಡಿ!
ರಾಜ್ಯದಲ್ಲಿ ಹಳೆಯ ಕಾರುಗಳ ಸಂಗ್ರಹಣೆಗೆ ಸರ್ಕಾರಿ ಕಟ್ಟಡಗಳ ಹಿಂಭಾಗವನ್ನೇ ಆರಿಸಿಕೊಳ್ಳಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧ ಪಾರ್ಕಿಂಗ್ ಸ್ಥಳಗಳಲ್ಲೂ ಧೂಳು ಹಿಡಿದು, ಲಡ್ಡಾಗುತ್ತಿರುವ, ಬಳಕೆಯಾಗದ ಕಾರು, ಜೀಪುಗಳನ್ನು ಕಾಣಬಹುದು. ಹಾಳಾದ ಪೋಲಿಸ್ ವಾಹನ, ಸರ್ಕಾರಿ ಕಾರುಗಳು ಇಲ್ಲಿ ಸಾಮಾನ್ಯ. ಕೆಲವು ಕಾರುಗಳು ತುಕ್ಕು ಹಿಡಿದು ಸಂಪೂರ್ಣ ಹಾಳಾಗಿದ್ದರೆ, ಮತ್ತೆ ಕೆಲವನ್ನು ದುರಸ್ಥಿ ಮಾಡಿಸಿ ಸರಿಪಡಿಸಬಹುದು.
ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಹಳೆಯ ವಸ್ತುಗಳಿದ್ದರೆ ಟೆಂಡರ್ ಕರೆದು ಮಾರಲಾಗುತ್ತದೆ. ಈ ಕಟ್ಟಡಗಳಲ್ಲಿ ಕಾರುಗಳು ಬಹಳ ವರ್ಷಗಳಿಂದ ಇದ್ದಲ್ಲೇ ಇವೆ. ಗುಜರಿಗೆ ಕಳುಹಿಸಿ ಸರ್ಕಾರದ ಬೊಕ್ಕಸ ಸ್ವಲ್ಪಮಟ್ಟಿಗಾದರೂ ತುಂಬಬೇಕೆಂಬ ಕಾಳಜಿ ಯಾರಿಗೂ ಇಲ್ಲ.
ಬಹುಮಹಡಿ ಕಟ್ಟಡ ಹಾಗೂ ವಿವಿ ಗೋಪುರಗಳಲ್ಲಿ ಬೇರೆ ಕಟ್ಟಡಗಳಿಗೆ ಪೈಪೋಟಿ ನೀಡುವಂತೆ ಗುಜರಿ ಕಾರುಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗಿದೆ. ಎರಡೂ ಕಟ್ಟಡಗಳಲ್ಲಿ ಕಾರು ಪಾರ್ಕಿಂಗ್ಗೆ ಸಾಕಷ್ಟು ಜಾಗವಿದೆ. ಅದರಲ್ಲಿ ಕಾಲುಭಾಗದಷ್ಟು ಸ್ಥಳ ಗುಜರಿಕಾರುಗಳಿಗೆ ಮೀಸಲಾಗಿದೆ. 5-6 ವರ್ಷಗಳಷ್ಟು ಹಳೆಯದಾದ ಕಾರುಗಳಿದ್ದು, ಸಾರ್ವಜನಿಕ ನಿಲುಗಡೆಯ ಸ್ಥಳ ಆಕ್ರಮಿಸಿವೆ. ಜತೆಗೆ ಕಟ್ಟಡದ ಪರಿಸರದ ಅಂದಗೆಡಿಸುತ್ತಿವೆ. ನಮ್ಮದೇ ಸ್ವಂತ ವಾಹನವಾಗಿದ್ದರೆ ಅಧಿಕಾರಿಗಳು ಹೀಗೆ ಹಾಳಾಗಲು ಬಿಡುತ್ತಿದ್ದರೇ?
ಮತ್ತೊಂದು ಮಂಡೂರು
ಬಹುಮಹಡಿ ಕಟ್ಟಡದ ಹಿಂಭಾಗಕ್ಕೆ ತೆರಳಿದರೆ ಸಣ್ಣ ಮಂಡೂರನ್ನು ಕಾಣಬಹುದು. ಕಬ್ಬಿಣ, ಗಾಜು, ಕಾಗದ, ಟೈಲ್ಸ್, ಮುರಿದ ಗೇಟ್ ಹಾಗೂ ಮರದ ತುಂಡುಗಳು ಅರ್ಧದಷ್ಟು ಸ್ಥಳದಲ್ಲಿ ತುಂಬಿವೆ. ಕೆಲವು ಕಡೆ ಮದ್ಯದ ಬಾಟಲಿಗಳೂ ದರ್ಶನ ನೀಡುತ್ತವೆ. ಕಟ್ಟಡದ ಬಾಗಿಲು ಹಾಗೂ ಕಿಟಕಿ ಮೂಲೆಗಳೇ ಇಲ್ಲಿ ಕಸದ ಬುಟ್ಟಿಗಳು. ಬಾಳೆಹಣ್ಣು ಸಿಪ್ಪೆ, ಪಾನ್ ಮಸಾಲಾಗಳಿಗೆ ಕಿಟಕಿ ಸಂದಿಗಳೇ ಆಶ್ರಯತಾಣಗಳಾಗಿವೆ. ಸರ್ಕಾರಿ ನೌಕರರು ಪಾರ್ಸಲ್ ತಂದು ಬಿಸಾಡಿದ ಆಹಾರ ಪದಾರ್ಥ ಹಾಗೂ ಪ್ಲಾಸ್ಟಿಕ್ ಚೀಲಗಳು ಕಿಟಕಿಗಳ ಬಣ್ಣವನ್ನೇ ಬದಲು ಮಾಡಿವೆ.
-ಕಾರ್ತಿಕ್ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

