ಇಲ್ಲದ ಹೈಸ್ಕೂಲ್ಗೆ ರಂಗಮಂದಿರ ಕಟ್ಟಿದರು, ಬೋರ್ವೆಲ್ ತೋಡಿಸಿದರು!
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ, ಜೂ. 25
ಈ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯೇ ಇಲ್ಲ. ಆದರೂ ಈ ಶಾಲೆಗೆ ಕುಡಿಯುವ ನೀರಿನ ಸೌಲಭ್ಯ, ಬಯಲು ರಂಗಮಂದಿರ ನಿರ್ಮಿಸಲಾಗಿದೆ!
ಹೌದು, ಇದು ಜಿಪಂ ಅಧಿಕಾರಿಗಳ ಅವಾಂತರದ ಮತ್ತೊಂದು ಅವತಾರ!
ಕರೆಂಟ್ ಇಲ್ಲದ ಊರಿಗೆ ವೈರಿಂಗ್ ಸೌಲಭ್ಯ ಕಲ್ಪಿಸಿ, ರಸ್ತೆಯೇ ಇಲ್ಲದ ದುರ್ಗಮ ಹಾದಿಗೆ ಬೋರ್ವೆಲ್ ತೋಡಿಸಿ ಪವಾಡ ಸೃಷ್ಟಿಸಿದ್ದ ಬೆನ್ನಲ್ಲೇ ಅಧಿಕಾರಿಗಳ ಇನ್ನೊಂದು ಪವಾಡ ಈಗ ಬೆಳಕಿಗೆ ಬಂದಿದೆ.
ತಾಲೂಕಿನ ಮಾರ್ಟಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಒಡ್ಡರದೊಡ್ಡಿಯಲ್ಲೇ ಇಂಥದ್ದೊಂದು ಅಕ್ರಮ ನಡೆದಿದೆ. ಇಲ್ಲಿ ಅನುದಾನಿತ ಪ್ರಾಥಮಿಕ ಶಾಲೆ ಇದೆ. ಆದರೆ ಈ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯೇ ಇಲ್ಲ.
ಇಲ್ಲಾಗಿದ್ದೇನು?: ಆದರೆ ಇಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣವಾಗಿದೆ. ಕಾಡಂಚಿನಲ್ಲಿರುವ ಅಲ್ಲಿನ ಮಕ್ಕಳಿಗೆ ನೀರಿನ ಸೌಲಭ್ಯ ಒದಗಿಸುವ ಸಲುವಾಗಿ 1.83 ಲಕ್ಷ ಅನುದಾನ ಪೀಕಿಸಿ ಬಳಸಲಾಗಿದೆ. ಆದರೆ ಇದೆಲ್ಲ ನಕಲಿ ದಾಖಲೆಯಲ್ಲಿ. ಅಧಿಕಾರಿಗಳು ಸ್ಥಳ ಪರಿಶೀಲಿಸದೆ ನಕಲಿ ದಾಖಲೆ ಮೂಲಕ ಡಿ. 7, 2011ರಲ್ಲಿ ಬಿಲ್ ಪಾವತಿಸಿದ್ದಾರೆ. ಈ ಹಣದಲ್ಲಿ ಅಲ್ಲಿನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಾದರೂ ಸೌಲಭ್ಯ ಕಲ್ಪಿಸಿದ್ದಾರೆಯೇ ಎಂದು ಅಲ್ಲಿನ ಮುಖ್ಯಶಿಕ್ಷಕರನ್ನು ವಿಚಾರಿಸಿದರೆ ಜಿಪಂನಿಂದ 4 ವರ್ಷದಿಂದ ಶಾಲೆಗೆ ಕುಡಿಯುವ ನೀರಿನ ಅನುದಾನವೇ ಬಂದಿಲ್ಲ. ಕಾಮಗಾರಿಯೂ ನಡೆದಿಲ್ಲ ಎನ್ನುತ್ತಾರೆ ಅವರು.
ಬಯಲು ರಂಗ ಮಂದಿರವೂ ಇಲ್ಲ: ಒಡ್ಡರದೊಡ್ಡಿ ಗ್ರಾಮದ ಪ್ರೌಢಶಾಲೆಯಲ್ಲಿ ಬಯಲು ರಂಗಮಂದಿರ ನಿರ್ಮಿಸಿದ್ದಾಗಿ ದಾಖಲೆ ತೋರಿಸಿ ಮಾ. 3ರ 2014ರಲ್ಲಿ 2 ಲಕ್ಷ ಅನುದಾನವನ್ನು ಜಿಪಂ ನಿಧಿಯ 13ನೇ ಹಣಕಾಸು ಯೋಜನೆಯಲ್ಲಿ ಡ್ರಾ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಿಸಿದರೆ 2010 ನ. 27ರಲ್ಲಿ ಹಿಂದಿನ ಫಾದರ್ ತಮ್ಮ ಅಮ್ಮನ ನೆನಪಿಗಾಗಿ ಖಾಸಗಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಿದ ಬಯಲು ರಂಗ ಮಂದಿರವಿದೆ.
ಮತ್ತಷ್ಟು ಅವ್ಯವಹಾರ: ಮಾರ್ಟಳ್ಳಿ ವ್ಯಾಪ್ತಿಯ ಗೋಡಸ್ಟ್ನಗರ ಹಾಗೂ ಕಡಬೂರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕ್ರೀಡಾಂಗಣ ಸಮತಟ್ಟು ಕಾಮಗಾರಿ ನಡೆಸಿದ್ದಾಗಿ ಜಿಪಂನ 13ನೇ ಹಣಕಾಸು ನಿಧಿಯಿಂದ 2.99 ಲಕ್ಷ ಹಾಗೂ 2.98 ಲಕ್ಷ ಅನುದಾನವನ್ನು ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ಪಾವತಿಸಲಾಗಿದೆ. ಆದರೆ ಕಡಬೂರು ಶಾಲೆಯತ್ತ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸುಳಿದಿಲ್ಲ. ಗೋಡಾಸ್ ನಗರ ಶಾಲೆಯಲ್ಲಿ ಒಂದು ದಿನ ಮಾತ್ರ ಜೆಸಿಬಿ ತರಿಸಿ ಸಂಪೂರ್ಣ ಕ್ರೀಡಾಂಗಣ ಅಭಿವೃದ್ಧಿಪಡಿಸಿದ್ದಾಗಿ ಹೇಳಿ 5.97 ಸಾವಿರ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ
ಅಂತೂ ಗೊರಸಾಣೆಗೆ ಕೊಳವೆ ಬಾವಿ ಬಂತು
ಕೊಳ್ಳೇಗಾಲ: ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡಂಚಿನ ಗೊರಸಾಣೆ ಗ್ರಾಮದ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾಗಿ ನಕಲಿ ದಾಖಲೆ ಸೃಷ್ಟಿಸಿ 3.82 ಲಕ್ಷ ಸ್ವಾಹ ಮಾಡಿದ್ದ ಜಿಲ್ಲಾ ಪಂಚಾಯ್ತಿ ಈಗ ಎಚ್ಚೆತ್ತುಕೊಂಡಿದೆ. ಜೂ.23ರಂದು ಗೊರಸಾಣೆಶಾಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸದೆ ಅಧಿಕಾರಿಗಳಿಂದ ನಕಲಿ ಬಿಲ್ ಎಂಬ ಶಿರ್ಷಿಕೆಯಡಿ 'ಕನ್ನಡಪ್ರಭ' ಸವಿವರ ವರದಿ ಪ್ರಕಟಿಸಿತ್ತು. ಪತ್ರಿಕೆ ವರದಿ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತ ಅಧಿಕಾರಿಗಳು ಗೊರಸಾಣೆ ಗ್ರಾಮದ ಶಾಲೆಗೆ ದೌಡಾಯಿಸಿದ್ದಾರೆ. ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ನಿಂಗಶೆಟ್ಟಿ, ಜೂನಿಯರ್ ಎಂಜಿನಿಯರ್ ಮಂಜು ಸೇರಿದಂತೆ ಗುತ್ತಿಗೆದಾರರ ತಂಡವೂ ಅಲ್ಲಿ ಹಾಜರಾಗಿದೆ. ಸ್ಥಳಕ್ಕೆ ಬೋರ್ವೆಲ್ ಲಾರಿ ತರಿಸಿಕೊಂಡು ಮಂಗಳವಾರ ರಾತ್ರಿ ಕೊಳವೆಬಾವಿ ಕೊರೆಸಲಾಗಿದೆ. ಅಂತೂ ಇಂತೂ ನಕಲಿ ಬಿಲ್ ಮಾಡಿ ವಿವಾದಕ್ಕಿಡಾದ ಅಧಿಕಾರಿಗಳು ಈಗ ಗಿರಿಜನ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯ ಶಿಕ್ಷಕ ವೀರಪ್ಪ ಪತ್ರಿಕೆ ವರದಿಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ಕೊಳವೆಬಾವಿ ಅಳವಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ 'ಕನ್ನಡಪ್ರಭ'ಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
-ಎನ್. ನಾಗೇಂದ್ರಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

