ಕುಸಿಯುತ್ತಿದೆ ಜೋಗ ಸಂಪರ್ಕಿಸುವ ಸೇತುವೆ
ಕನ್ನಡಪ್ರಭ ವಾರ್ತೆ, ಶಿರಸಿ, ಜೂ.23
ವಿಶ್ವವಿಖ್ಯಾತ ಜೋಗವನ್ನು ಸಂಪರ್ಕಿಸುವ ಖಾನಾಪುರ- ಮಾವಿನಗುಂಡಿ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರ ಸಮೀಪ ಶತಮಾನದ ಹಿಂದಿನ ಸೇತುವೆ ಕುಸಿಯುತ್ತಿದ್ದು, ವಾಹನ ಸಂಚಾರಕ್ಕೆ ಸಾಧ್ಯವೇ ಇಲ್ಲದಂತಾಗಿದೆ. ಪಕ್ಕದಲ್ಲಿ ನಿರ್ಮಿಸಿದ ಕಚ್ಚಾ ರಸ್ತೆಯೂ ಮಳೆಗಾಲದಲ್ಲಿ ನೀರಿನಲ್ಲಿ ಮುಳುಗುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಹಲಗೇರಿ ಗ್ರಾಪಂ ವ್ಯಾಪ್ತಿಯ ಪಡಂಬೈಲ್ ಸಮೀಪ ಅಡಸೊಪ್ಪಿನ ಹಳ್ಳಕ್ಕೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸೇತುವೆ ಇದು. ಕೆಂಪು ಕಲ್ಲಿನಿಂದ ಕಟ್ಟಿದ ಸೇತುವೆ ಕುಸಿಯುವ ಹಂತ ತಲುಪಿದ್ದರೂ ಹೊಸ ಸೇತುವೆ ನಿರ್ಮಿಸಲು ಮುಂದಾಗಿಲ್ಲ. 2 ವರ್ಷದ ಹಿಂದೆಯೇ ಶಿಥಿಲಾವಸ್ಥೆಗೆ ತಲುಪಿರುವ ಸೇತುವೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಇಷ್ಟಾದರೂ ಲೋಕೋಪಯೋಗಿ ಇಲಾಖೆ ಹೊಸ ಸೇತುವೆ ನಿರ್ಮಿಸಿಲ್ಲ. ಬದಲಾಗಿ ಸೇತುವೆ ಪಕ್ಕದಲ್ಲಿ ಕಚ್ಚಾರಸ್ತೆ ಅಂದರೆ ನಾಲ್ಕು ಪೈಪ್ ಅಳವಡಿಸಿ ಮಣ್ಣು ತುಂಬಿ ಮೈಮರೆತಿದೆ.
ಪಿಲ್ಲರ್ಗಳಲ್ಲಿ ಬಿರುಕು: ಮೂರು ವರ್ಷಗಳ ಹಿಂದಿನ ತನಕ ಸೇತುವೆ ಭದ್ರವಾಗಿಯೇ ಇತ್ತು. ಆದರೆ, ಬಳ್ಳಾರಿಯಿಂದ ಅಂಕೋಲಾಕ್ಕೆ ಹೋಗುತ್ತಿದ್ದ ಅದಿರು ಸಾಗಣೆ ಲಾರಿಗಳು ಈ ಮಾರ್ಗದಲ್ಲೂ ಸಾಗಿ ಸೇತುವೆ ಜೀರ್ಣಗೊಂಡಿತು. ಸೇತುವೆಗೆ ಹಾಕಲಾದ ಪಿಲ್ಲರ್ಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಕಚ್ಚಾರಸ್ತೆಯ ಮೇಲೂ ನೀರು ಹರಿಯುತ್ತದೆ. ಇದರಿಂದ ಕಚ್ಚಾ ರಸ್ತೆಯಲ್ಲೂ ಸಂಚಾರ ಸಾಧ್ಯವಾಗದು.
ಪ್ರವಾಸಿಗರಿಗೆ ತಟ್ಟಿದ ಬಿಸಿ: ವಿಶ್ವವಿಖ್ಯಾತ ಜೋಗ ಜಲಪಾತ ನೋಡಲೆಂದು ಪ್ರತಿದಿನ ಸಾಕಷ್ಟು ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇತರ ಪ್ರಯಾಣಿಕರೂ ಸೇರಿ ಸಾವಿರಾರು ಮಂದಿ ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಜೋಗ ಫಾಲ್ಸ್ ಮತ್ತು ಹೊನ್ನಾವರ ನಡುವಣ ಸಂಚಾರಕ್ಕೆ ಜನತೆ ಇದೇ ರಸ್ತೆ ಅವಲಂಬಿಸುತ್ತಾರೆ. ಆದರೆ, ಈ ಸೇತುವೆ ಬಳಿ ಬರುತ್ತಿದ್ದಂತೆ ಪ್ರವಾಸಿಗರು ಹಿಡಿಶಾಪ ಹಾಕುತ್ತ ಸಾಗುವಂತಾಗಿದೆ.
ಸಾವಿನ ಸರಮಾಲೆ
ಸೇತುವೆ ಬಳಿ ರಸ್ತೆ ಹಠಾತ್ ತಿರುವು ಪಡೆದುಕೊಳ್ಳುತ್ತದೆ. ಹೀಗಾಗಿ, ವೇಗವಾಗಿ ಬಂದ ವಾಹನ ಸವಾರರು ಒಮ್ಮೆಲೇ ಬ್ರೇಕ್ ಹಾಕಿ ಅಪಘಾತಕ್ಕೀಡಾದ ಘಟನೆಗಳಿಗೆ ಲೆಕ್ಕವಿಲ್ಲ. 2 ವರ್ಷಗಳಲ್ಲಿ 8ಕ್ಕೂ ಹೆಚ್ಚು ಜನರು ಇಲ್ಲಿ ಉಂಟಾದ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕನ್ನಡಪ್ರಭ ಈ ಕುರಿತು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಎಸ್.ಕೆ. ಪಾಟೀಲ್ರನ್ನು ಪ್ರಶ್ನಿಸಿದಾಗ, ಸೇತುವೆ ಕುಸಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪರ್ಯಾಯ ಸೇತುವೆ ನಿರ್ಮಾಣಕ್ಕೆ ಸಚಿವರ ಗಮನ ಸೆಳೆದು ಹಣ ಬಿಡುಗಡೆಯಾದ ಮೇಲೆ ಕಾಮಗಾರಿ ಆರಂಭಿಸಲಾಗುವುದು ಎನ್ನುತ್ತಾರೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

