ಜನರ ಕಿಸೆಗೆ ಮಳೆ ಭಾರ

ನವದೆಹಲಿ: ಪಾತಾಳ ಕಂಡಿರುವ ದೇಶದ ಅರ್ಥ ವ್ಯವಸ್ಥೆ ಮೇಲಕ್ಕೆತ್ತಲು ಹೆಣಗಾಡುತ್ತಿರುವ ಮೋದಿ ಸರ್ಕಾರಕ್ಕೆ ಮಳೆರಾಯನ ಅವಕೃಪೆ ತೀವ್ರ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ. ಇಡೀ ದೇಶ ಬರದ ಛಾಯೆಯಲ್ಲಿದ್ದು, ಮುಂಗಾರು ಕೊರತೆಯಿಂದಾಗಿ ಹಣ್ಣು, ತರಕಾರಿ ಸೇರಿ ಜೀವನಾವಶ್ಯಕ ಪದಾರ್ಥಗಳ ಬೆಲೆ ಮೂರು ತಿಂಗಳಲ್ಲಿ ದುಪ್ಪಟ್ಟಾಗುವ ಅಪಾಯ ಇದೆ.
ದೇಶಕ್ಕೆ ಮುಂಗಾರಿನ ಆಗಮನ ಸಾರುವ ಕೇರಳ, ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಜೂನ್ ಮೊದಲಾರ್ಧದಲ್ಲಿ ವಾಡಿಕೆಗಿಂತ ಶೇ 45ರಷ್ಟು ಕಡಿಮೆ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಸಂಭವಿಸಲಿರುವ ಎಲ್‌ನಿನೋ ಪರಿಣಾಮ, ಈ ಬಾರಿ ಮುಂಗಾರಿನಲ್ಲಿ ಶೇ.7 ಕಡಿಮೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. 'ಸಂಭವನೀಯ ಬರ ಎದುರಿಸಲು ತುರ್ತು ಯೋಜನೆ ರೂಪಿಸಲಾಗಿದೆ' ಎಂದು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ಹೇಳಿದ್ದರು. ಆದರೆ ಎಲ್ಲ ನಿರೀಕ್ಷೆಗಳನ್ನೂ ತಲೆಕೆಳಗು ಮಾಡಿ ಮುಂಗಾರು ಆರಂಭದಲ್ಲೇ ಕೈಕೊಟ್ಟಿದೆ. ದೇಶದ ಶೇ 80ರಷ್ಟು ಪ್ರದೇಶದಲ್ಲಿ ಬರದ ತೂಗುಕತ್ತಿ ನೇತಾಡುತ್ತಿದೆ.
ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಆಹಾರ ಹಣದುಬ್ಬರ ತಡೆಯಲು ಮೋದಿ ಸರ್ಕಾರ ಅಧಿಕಾರ ಸ್ವೀಕರಿಸಿದ ಶುರುವಿನಿಂದಲೇ ಪ್ರಯತ್ನ ಆರಂಭಿಸಿತ್ತು. ಈರುಳ್ಳಿ ಆಮದು ನಿಷೇಧ ಸೇರಿದಂತೆಹಲವು ಕ್ರಮಗಳನ್ನು ಕೈಗೊಂಡಿತ್ತಲ್ಲದೆ ಗೋದಾಮುಗಳಿಂದ ಹೆಚ್ಚುವರಿ ಅಕ್ಕಿ ಬಿಡುಗಡೆಗೆ ಆದೇಶಿಸಿತ್ತು.
ಮಳೆ ಮಾರುತಗಳಿಗೆ ವಿರುದ್ಧ ದಿಕ್ಕಿನಲ್ಲಿ ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಮಳೆಯಾಗುತ್ತಿಲ್ಲ. ರೈತರು ಹತಾಶರಾಗಬೇಕಿಲ್ಲ. ಜುಲೈ, ಆಗಸ್ಟ್‌ನಲ್ಲಿ ಪರಿಸ್ಥಿತಿ ಸುಧಾರಿಸುವ ಆಶಾಭಾವವಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.
50 ವರ್ಷದಲ್ಲೇ ಕಡಿಮೆ ಮಳೆ
ಜೂನ್ 1ರಿಂದ 17ರ ಅವಧಿಯಲ್ಲಿ ದೇಶಾದ್ಯಂತ 43 ಮಿ.ಮೀ ಮಾತ್ರ ಮಳೆಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 78 ಮಿ.ಮೀ ಮಳೆಯಾಗಬೇಕಿತ್ತು. 50 ವರ್ಷಗಳ ಸರಾಸರಿ ತೆಗೆದುಕೊಂಡರೆ ಇದೇ ಮೊದಲ ಸಲ ಇಷ್ಟು ಕಡಿಮೆ ಮಳೆಯಾಗಿದೆ. ಕಳವಳಕಾರಿ ಸಂಗತಿ ಎಂದರೆ ಭತ್ತ, ಎಣ್ಣೆ ಬೀಜಗಳನ್ನು ಬೆಳೆಯುವ ರಾಜ್ಯಗಳಲ್ಲೂ ಮಳೆ ಅಭಾವ ಎದುರಾಗಿರುವುದು. ಇದರಿಂದ ಜನರ ಕಿಸೆಗೇ ಕನ್ನ ಬೀಳುವ ಕಾರಣ ದೇಶದ ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ತರಕಾರಿ ದುಪ್ಪಟ್ಟು
ಮಳೆ ಕೊರತೆಯಿಂದಾಗಿ ಜಲಾಶಯಗಳು ತಳ ಕಾಣುತ್ತಿವೆ. ದೇಶಾದ್ಯಂತ ಬಿತ್ತನೆ ಕುಂಠಿತವಾಗಿವೆ. ಪರಿಣಾಮವಾಗಿ ಈಗಾಗಲೇ ಹಣ್ಣು, ತರಕಾರಿಗಳ ಬೆಲೆ ಗಗನಮುಖಿಯಾಗಿದೆ. 'ಜುಲೈನಲ್ಲಿಯೂ ಉತ್ತಮ ಮಳೆಯಾಗದಿದ್ದರೆ ಮೂರು ತಿಂಗಳಲ್ಲಿ ತರಕಾರಿ, ಈರುಳ್ಳಿ ಬೆಲೆ ದುಪ್ಪಟ್ಟಾಗಲಿದೆ. ಬೇಸಾಯದ ವೆಚ್ಚವೂ ಏರುವುದರಿಂದ ಬೆಲೆ ಏರಿಕೆ ಪ್ರಯೋಜನ ಕೃಷಿಕರಿಗೂ ಸಿಗುವುದಿಲ್ಲ' ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಅಜಯ್ ಝಾಕರ್.
ಎಲ್ಲಿ ಎಷ್ಟು ಕೊರತೆ?
ಪ್ರದೇಶ ಬಿದ್ದಿರುವ ಮಳೆ ವಾಡಿಕೆ ಕೊರತೆ (ಶೇ.)
ಕೇಂದ್ರ ಭಾರತ 31.7 66.2 52
ಪೂರ್ವ, ಈಶಾನ್ಯ ಭಾರತ 100.1 191.2 52
ದಕ್ಷಿಣ ಭಾರತ 64.0 87.6 27
(ಜೂ.1-17ರ ಅವಧಿ, ಮಳೆ ಪ್ರಮಾಣ ಮಿ.ಮೀಗಳಲ್ಲಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


