ರವೀಂದ್ರನಾಥ್ ಇಲಾಖಾ ತನಿಖೆ
ವಿಧಾನಪರಿಷತ್ತು: ಕಾಫಿ ಶಾಪ್ನಲ್ಲಿ ಯುವತಿ ಫೋಟೋ ಸೆರೆ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ರವೀಂದ್ರನಾಥ್ ವಿರುದ್ಧ ಇಲಾಖೆ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಒಡಿ ಅಧಿಕಾರಿಗಳು ಸಲ್ಲಿಸಿದ ವರದಿ ಪ್ರಕಾರ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಸದ್ಯಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಸದನದಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದ ಕ್ರಮನ್ನು ಸಮರ್ಥಿಸಿದರು. ಇದೇ ಪ್ರಥಮ ಬಾರಿಗೆ ಫೋಟೋ ಪ್ರಕರಣದ ದೂರು ನೀಡಿದ ಯುವತಿ ಹೆಸರನ್ನೂ ದೀಪಾ ಎಂದು ಪ್ರಕಟಿಸಿ, ಘಟನೆ ವೃತ್ತಾಂತವನ್ನೂ ವಿವರಿಸಿದರು.
ಮೇ 26ರಂದು ಕನ್ನಿಂಗ್ ಹ್ಯಾಮ್ ರಸ್ತೆಯ 'ಒಬೊಪೆ' ಕಾಫಿ ಶಾಪ್ನಲ್ಲಿ ಬಿ.ಪಿ.ದೀಪಾ ಎಂಬ ಯುವತಿ ಸಂಬಂಧಿಕರೊಂದಿಗೆ ಕುಳಿತಿದ್ದರು. ಆಗ ರವೀಂದ್ರನಾಥ್ ಫೋಟೋ ತೆಗೆದ ಬಗ್ಗೆ ಆಕ್ಷೇಪಿಸಿ, ನಂತರ ಫೋಟೋ ತೆಗೆದ ಮೊಬೈಲ್ ಕೇಳಿದ್ದಾರೆ. ಅದನ್ನು ರವೀಂದ್ರನಾಥ್ ನೀಡಲು ನಿರಾಕರಿಸಿದ್ದಾಗ ಅಲ್ಲಿ ಗದ್ದಲವಾಗಿದೆ. ಆದರೆ ಅಲ್ಲಿಗೆ ಬಂದ ಹೊಯ್ಸಳ ಪೊಲೀಸ್ ಅಧಿಕಾರಿ(ಪಿಎಸ್ಐ)ಎಂ.ಎಸ್.ರವಿ ಮತ್ತು ಪೇದೆ ಮಂಜುನಾಥ್ ರವೀಂದ್ರನಾಥ್ ಜತೆ ಒರಟಾಗಿ ವರ್ತಿಸಿದ್ದಾರೆ. ಹಿರಿಯ ಅಧಿಕಾರಿ ಜತೆ ಹೀಗೆ ವರ್ತಿಸಿದ್ದ ತಪ್ಪಿಗೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಾರ್ಜ್ ವಿವರಿಸಿದರು.
ಇದಲ್ಲದೆ, ರವೀಂದ್ರನಾಥ್ ಮಾಧ್ಯಮಗಳ ಬಳಿ ಹೋಗಿದ್ದು ಮತ್ತು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿರುವ ಬಗ್ಗೆ ವಿವರ ನೀಡುವಂತೆ ನೋಟಿಸ್ ನೀಡಲಾಗಿದೆ. ಅವರಿಂದ ಹೇಳಿಕೆ ಬಂದ ನಂತರ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಎಂ.ಸಿ.ನಾಣಯ್ಯ, ಇಡೀ ಪ್ರಕರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟು ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿದರು. ಅಧಿಕಾರಿಯೊಬ್ಬರು ತಪ್ಪು ಮಾಡಿದಾಗ ಅವರಿಗೆ ಜಾತಿ ಹಣೆಪಟ್ಟೆ ಕಟ್ಟಿ ರಕ್ಷಿಸುವುದು ಸರಿಯಲ್ಲ. ಇದು ಎಲ್ಲಾ ಜಾತಿಯಲ್ಲೂ ಇದೆ. ಇದನ್ನು ಅಂತ್ಯಗೊಳಿಸದಿದ್ದರೆ, ಮುಂದೆ ಅಧಿಕಾರಿಗಳು ನಮ್ಮ ಮೇಲೆ ಸವಾರಿ ಮಾಡುತ್ತಾರೆ ಎಂದು ಎಚ್ಚರಿಸಿದರು.
ಇಷ್ಟೆಲ್ಲಾ ಆದರೂ ಸರ್ಕಾರ ರವೀಂದ್ರನಾಥ್ ಅವರನ್ನು ಅಮಾನತು ಮಾಡಿಲ್ಲ. ಅವರನ್ನು ಅಮಾನತುಗೊಳಿಸಲು ಯುಪಿಎಸ್ಸಿ ಅನುಮತಿ ಕೇಳುವ ಅಗತ್ಯವಿಲ್ಲ. ಆದರೂ ಸರ್ಕಾರ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ದಯಾನಂದ್ ಮಾತನಾಡಿ, ಹೊಯ್ಸಳ ಪೊಲೀಸ್ ಅಧಿಕಾರಿ ಎಂ.ಎಸ್.ರವಿ ಮತ್ತು ಪೇದೆ ಮಂಜುನಾಥ್ ಅವರು ರವೀಂದ್ರನಾಥ್ ವಿರುದ್ಧ ನಡೆದುಕೊಂಡ ರೀತಿ ಸರಿಯಲ್ಲ. ಹಾಗೆಯೇ ರವಿಂದ್ರನಾಥ್ ಹಿರಿಯ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ಕೇಸು ಹಾಕಿದ್ದೂ ಸರಿಯಲ್ಲ. ಇಡೀ ಪ್ರಕರಣ ಎರಡು ಗುಂಪುಗಳ ನಡುವಿನ ದ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದು, ತನಿಖೆಯಿಂದ ತಿಳಿಯಬೇಕಿದೆ ಎಂದರು. ಬಿಜೆಪಿಯ ಅಶ್ವಥ್ನಾರಾಯಣ ಮಾತನಾಡಿ, ಈ ಪ್ರಕರಣದಲ್ಲಿ ರವೀಂದ್ರನಾಥ್ ಇರಲಿ, ದೂರು ನೀಡಿದ ಯುವತಿ ದೀಪಾ ಅವರದು ತಪ್ಪಿದ್ದರೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

