ಕರ್ನಾಟಕಕ್ಕೆ ಜಲಗಂಡ!

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕರ್ನಾಟಕದ ಪ್ರಮುಖ 9 ಜಲಾಶಯಗಳ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಕೆಳಮಟ್ಟಕ್ಕಿಳಿದಿದೆ. ಅಷ್ಟೆ ಅಲ್ಲ, ಕಳೆದ ಹತ್ತು ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಕಡಿಮೆ ಇದೆ. ರಾಷ್ಟ್ರದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮೇಲೆ ನಿಗಾ ಇಡುವ ಕೇಂದ್ರ ಜಲ ಆಯೋಗ ಈ ಬಗ್ಗೆ ವಿಸ್ತೃತ ಅಂಕಿ ಅಂಶಗಳನ್ನು ಪ್ರಕಟಿಸಿದೆ.
ಕರ್ನಾಟಕದಲ್ಲಿ ಸಕಾಲದಲ್ಲಿ ಮಳೆ ಬಾರದೇ ಬರಗಾಲ ಅಪ್ಪಳಿಸಿದೆ. ಮುಂಗಾರು ವಿಳಂಬವಷ್ಟೆ ಅಲ್ಲ, ಮುಂಗಾರು ಮಳೆ ಪ್ರಮಾಣವೂ ಗಣನೀಯವಾಗಿ ಕಡಮೆ ಆಗಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿಗಳ ನಡುವೆಯೇ ಜಲಾಶಯಗಳಲ್ಲಿನ ನೀರಿನ ಮಟ್ಟ ಕಡಿಮೆ ಇರುವ ಅಂಕಿ ಅಂಶಗಳನ್ನು ಜಲ ಆಯೋಗ ನೀಡಿದೆ.
ನೀರಾವರಿಗಷ್ಟೆ ಅಲ್ಲದೇ ಪ್ರಮುಖ ನಗರ ಮತ್ತು ಪಟ್ಟಣಗಳು ಜಲಾಶಯಗಳನ್ನೇ ಕುಡಿಯುವ ನೀರಿಗೂ ಅವಲಂಬಿಸಿರುವುದರಿಂದ ಕುಸಿದಿರುವ ನೀರಿನ ಮಟ್ಟ ಆತಂಕಕ್ಕೆಡೆ ಮಾಡಿಕೊಟ್ಟಿದೆ.
ಕೇಂದ್ರ ಜಲ ಆಯೋಗ ರಾಷ್ಟ್ರದ ಒಟ್ಟು 86 ಜಲಾಶಯಗಳ ನೀರಿನ ಮಟ್ಟದ ಮೇಲೆ ನಿಗಾ ಇಡುತ್ತದೆ. ಒಟ್ಟಾರೆ ಜಲಾಶಯಗಳಲ್ಲಿ ಲಭ್ಯ ನೀರಿನ ಪ್ರಮಾಣ ಕಳೆದ ಸಾಲಿಗಿಂತ ಹೆಚ್ಚು ಮತ್ತು ಕಳೆದ ಹತ್ತು ವರ್ಷಗಳ ಸರಾಸರಿಗಿಂತ ಹೆಚ್ಚಿದೆ. ಅಂದರೆ, ಎಲ್ಲ ಜಲಾಶಯಗಳಿಂದ ಬಳಕೆಗೆ ಲಭ್ಯ ನೀರಿನ ಪ್ರಮಾಣ 38.022 ಬಿಸಿಎಂ. ಇದು ಕಳೆದ ಸಾಲಿನ ಬಳಕೆಗೆ ಲಭ್ಯ ನೀರಿನ ಪ್ರಮಾಣದ ಶೇ.102ರಷ್ಟು ಮತ್ತು ಕಳೆದ ಹತ್ತು ವರ್ಷಗಳ ಸರಾಸರಿ ಪ್ರಮಾಣದ ಶೇ.131ರಷ್ಟು.
ಆತಂಕದ ವಿಷಯ ಎಂದರೆ ಕರ್ನಾಟಕದಲ್ಲಿರುವ ಜಲಾಶಯಗಳಲ್ಲಿನ ಲಭ್ಯ ನೀರಿನ ಪ್ರಮಾಣ ಕಳೆದ ಸಾಲಿಗಿಂತ ಮತ್ತು ಕಳೆದ 10 ವರ್ಷಗಳ ಸರಾಸರಿಗಿಂತ ಕಡಿಮೆ ಇದೆ. ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 30 ಜಲಾಶಯಗಳಿವೆ. ಇವುಗಳ ಒಟ್ಟಾರೆ ಸಂಗ್ರಹ ಸಾಮರ್ಥ್ಯ 51.37 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್). ಈ ಪೈಕಿ ಬಳಕೆಗೆ ಲಭ್ಯ ನೀರಿನ ಪ್ರಮಾಣ 6.76 ಬಿಸಿಎಂ. ಅಂದರೆ, ಒಟ್ಟಾರೆ ನೀರಿನ ಸಂಗ್ರಹದ ಶೇ.13ರಷ್ಟು. ಕಳೆದ ಸಾಲಿನಲ್ಲಿ ಈ ಪ್ರಮಾಣ ಶೇ.16ರಷ್ಟಿತ್ತು. ಕಳೆದ ಹತ್ತುವರ್ಷಗಳ ಸರಾಸರಿ ಸಂಗ್ರಹ ಶೇ.23ರಷ್ಟಿತ್ತು.
ರಾಜ್ಯದಲ್ಲಿನ 14 ಜಲಾಶಯಗಳ ಪೈಕಿ 9 ಜಲಾಶಯಗಳಲ್ಲಿ ಕಳೆದ ಸಾಲಿಗಿಂತ ನೀರಿನ ಮಟ್ಟ ಕುಸಿದಿದೆ. ಹೇಮಾವತಿ, ಭದ್ರಾ, ಕಬಿನಿಗಳಲ್ಲಿ ಮಾತ್ರ ಕಳೆದ ಸಾಲಿಗಿಂತ ಹಾಗೂ ಕಳೆದ 10 ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಹೆಚ್ಚು ನೀರು ಸಂಗ್ರಹಿಸಿ ಬೆಳಕು ಒದಗಿಸುವ ಲಿಂಗನಮಕ್ಕಿ ಜಲಾಶಯದಲ್ಲೂ ನೀರಿನ ಪ್ರಮಾಣ ಶೇ.12ಕ್ಕೆ ಕುಸಿದಿದೆ. ಇದು ವಿದ್ಯುತ್ ಕ್ಷಾಮಕ್ಕೂ ಕಾರಣವಾಗಬಹುದು. ಸದಾ ತುಂಬಿರುತ್ತಿದ್ದ ಗೇರುಸೊಪ್ಪದಲ್ಲೂ ನೀರಿನ ಸಂಗ್ರಹ ಶೇ.69ಕ್ಕೆ ಇಳಿದಿದೆ. ಪಂಜಾಬ್, ರಾಜಸ್ಥಾನ, ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತಿಸ್ಗಡ ತಮಿಳುನಾಡಿನಲ್ಲಿ ಕಳೆದ ಸಾಲಿಗಿಂತ ನೀರಿನ ಸಂಗ್ರಹ ಹೆಚ್ಚಿದೆ.
ರಾಜ್ಯದ ಪ್ರಮುಖ ಜಲಾಶಯಗಳು ನೀರಿನ ಸಂಗ್ರಹ
ಜಲಾಶಯ ಈಗಿನ ಕಳೆದ ವರ್ಷ 10 ವರ್ಷಗಳ
ಸಂಗ್ರಹ ಸಂಗ್ರಹ ಸರಾಸರಿ
ಕೆಆರ್ಎಸ್ 16 6 17
ತುಂಗಾಭದ್ರ 9 9 11
ಘಟಪ್ರಭ 1 8 10
ಭದ್ರ 28 19 27
ಲಿಂಗನಮಕ್ಕಿ 12 22 17
ನಾರಾಯಣಪುರ 34 52 47
ಮಲಪ್ರಭ 3 4 7
ಕಬಿನಿ 56 35 18
ಹೇಮಾವತಿ 21 11 16
ಹಾರಂಗಿ 30 40 28
ಸೂಪ 22 22 18
ವಿವಿಸಾಗರ 4 13 14
ಆಲಮಟ್ಟಿ 6 31 22
ಗೇರುಸೊಪ್ಪ 69 80 84
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


