ಪ್ರಧಾನ ಸುದ್ದಿ

ನಿರ್ಗಮನಕ್ಕೆ ಮುನ್ನ ಮತ್ತೆ ವಿವಾದಕ್ಕೆ ಸಿಲುಕಿದ ರಾಜ್ಯಪಾಲ

ನಿರ್ಗಮನಕ್ಕೆ ಮುನ್ನ ಮತ್ತೆ ವಿವಾದಕ್ಕೆ ಸಿಲುಕಿದ ರಾಜ್ಯಪಾಲ
Published On :

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಹುದ್ದೆಯಿಂದ ಶನಿವಾರ ನಿವೃತ್ತರಾಗುತ್ತಿರುವ ಎಚ್.ಆರ್.ಭಾರದ್ವಾಜ್ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿಯಾಗಿ ನಿವೃತ್ತ ಐಎಎಸ್ ಅಧಿಕಾರಿಯ ನೇಮಕಕ್ಕೆ ಅಸ್ತು ನೀಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.
 ಮುಂದಿನ ಆದೇಶದವರೆಗೂ ನಿವೃತ್ತ ಐಎಎಸ್ ಅಧಿಕಾರಿ ಮೀರಾ ಸಕ್ಸೇನಾ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ರಾಜ್ಯ ಮಾನವ ಹಕ್ಕುಗಳ ಆಯೋಗ ಕಾಯ್ದೆ ಪ್ರಕಾರ, ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಬರುವವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರಬೇಕು ಅಥವಾ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು. ಸದಸ್ಯರಾಗಿ ಆಯ್ಕೆಯಾಗುವವರು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಿದ್ದು ಕನಿಷ್ಠ 7 ವರ್ಷ ಅನುಭವ ಹೊಂದಿರಬೇಕು.
ಆದರೆ, ನಿಯಮ ಉಲ್ಲಂಘಿಸಿ ಮೀರಾ ಸಕ್ಸೇನಾರ ಹೆಸರನ್ನು ಸರ್ಕಾರ ಶಿಫಾರಸು ಮಾಡಿತ್ತು. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಕಾಯ್ದೆ, ನಿಯಮ ಪಾಲಿಸಬೇಕಾದ ರಾಜ್ಯಪಾಲರೇ ನಿಯಮ ಉಲ್ಲಂಘಿಸಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಮೂರ್ತಿ ಆರೋಪಿಸಿದ್ದಾರೆ.
ಪೊಲೀಸರಿಂದ ದೌರ್ಜನ್ಯ, ಸಾರ್ವಜನಿಕರಿಗೆ ಅಮಾಯಕ ವ್ಯಕ್ತಿಗಳ ಮೇಲಾಗುವ ದೌರ್ಜನ್ಯ, ಬಾಲ ಕಾರ್ಮಿಕತೆ, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ದೌರ್ಜನ್ಯ ಆರೋಪಗಳು ಬಂದಾಗ ಅಧ್ಯಕ್ಷರು ಹಾಗೂ ಸದಸ್ಯರಾದವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ನೀಡಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಜ್ಞಾನ ಹಾಗೂ ಕರ್ತವ್ಯ ನಿರ್ವಹಿಸಿದ ಅನುಭವ ನ್ಯಾಯಮೂರ್ತಿಗಳು, ನ್ಯಾಯಾಧೀಶರಿಗೆ ಮಾತ್ರ ಇರುತ್ತದೆ. ಹೀಗಿರುವಾಗ ಯಾವ ಆಧಾರದ ಮೇಲೆ ಐಎಎಸ್ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ? ರಾಜ್ಯಪಾಲರು ಸ್ಥಾನದಿಂದ ನಿರ್ಗಮಿಸುವ ಮುನ್ನ ನಿಯಮಬಾಹಿರ ನೇಮಕದ ಬಗ್ಗೆ ಮರುಪರಿಶೀಲನೆ ನಡೆಸುತ್ತಾರಾ ಎನ್ನುವುದು ಈಗಿನ ಪ್ರಶ್ನೆ.

ವಿವಾದಾತ್ಮಕಪ್ರಮುಖ ನಿರ್ಧಾರಗಳು
-    ಬಿಜೆಪಿ ಅಧಿಕಾರದಲ್ಲಿರುವವರೆಗೆ ಅಕ್ರಮ-ಸಕ್ರಮ ಯೋಜನೆ ಅನುಮತಿಗೆ ನಕಾರ.
-    ಗೋಹತ್ಯಾ ನಿಷೇಧ ಕಾಯಿದೆಗೆ ವಿರೋಧ.
-    ದಾ.ವಿವಿ ಕುಲಪತಿ ನೇಮಕದಲ್ಲಿ ಅನಂತಮೂರ್ತಿ ಜತೆ ವಾಗ್ವಾದ.
-    ಬೆಂ. ವಿವಿಯ ಕುಲಪತಿ, ಕುಲಸಚಿವರು ಬೀದಿಗೆ ಬಂದು ರಂಪಾಟ ಮಾಡುತ್ತಿದ್ದರೂ ಕೇವಲ ಹೇಳಿಕೆ ನೀಡಿ ಸುಮ್ಮನಿರುತ್ತಿದ್ದ ರಾಜ್ಯಪಾಲರು.
-    ಪ್ರೊ.ರಂಗಪ್ಪ ವಿರುದ್ಧ ಆರೋಪಗಳಿದ್ದರೂ ಮೈಸೂರು ಕುಲಪತಿಯಾಗಿ ನೇಮಕ
-    ಬೆಂಗಳೂರು, ಮೈಸೂರು, ಕೆಎಸ್‌ಒಯು, ದಾವಣಗೆರೆ, ವಿಶ್ವೇಶ್ವರಯ್ಯ ತಾಂತ್ರಿಕ, ರಾಣಿ ಚೆನ್ನಮ್ಮ, ಸಂಸ್ಕೃತ ವಿವಿ ಕುಲಪತಿ ನೇಮಕ ಸಂಬಂಧ ತಜ್ಞರು, ಸರ್ಕಾರ ಜತೆ ಜಟಾಪಟಿ.
-    ಚಿದಾನಂದಮೂರ್ತಿಗೆ ಗೌಡಾಗೆ ವಿರೋಧ.
-    ಖಾಸಗಿ ವಿವಿಗಳ ಸ್ಥಾಪನೆಗೆ ವಿರೋಧ. ಆಮೇಲೆ ಎಲ್ಲ ಖಾಸಗಿ ವಿವಿಗಳಿಗೆ ಒಪ್ಪಿಗೆ.
-    ಸೋಮಣ್ಣ ನಾಮನಿರ್ದೇಶನಕ್ಕೆ ನಕಾರ.
-    ಧರಂಸಿಂಗ್ ಅಕ್ರಮ ಗಣಿಗಾರಿಕೆ ಬಗ್ಗೆ ಮೌನ.
-    ಬಿಎಸ್‌ವೈಗಿಂತ ಸದಾನಂದಗೌಡರೇ ವಾಸಿ ಎಂಬ ರಾಜಕೀಯ ಹೇಳಿಕೆ.
-    ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರವೇ ಚೆನ್ನಾಗಿತ್ತು ಎಂಬ ಹೊಗಳಿಕೆ.
-    ಸಿದ್ದರಾಮಯ್ಯ ಸರ್ಕಾರದ ಸಚಿವರ ಕಾರ್ಯವೈಖರಿಗೆ ಅಸಮಾಧಾನ.

- ಮಂಜುನಾಥ ನಾಗಲೀಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.