ಮೋದಿಗೆ ಇದು ಏಳನೇ ಜನ್ಮ!

ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ವಾಡ್ನಗರ್ ಊರಿನ ಶ್ರೀಮತಿ ಹೀರಾಬೆನ್ ಹಾಗೂ ಶ್ರೀ ದಾಮೋದರದಾಸ್ ದಂಪತಿಗೆ ಮೂರನೇ ಮಗುವಾಗಿ ತಾ. 17-9-1950 ರ ಬೆಳಗ್ಗೆ 10ಕ್ಕೆ ಜನಿಸಿದ ವ್ಯಕ್ತಿ ಇವತ್ತು ನಮಗೆಲ್ಲ ಪ್ರಧಾನಿ. ಹೆಸರು ನರೇಂದ್ರ ಮೋದಿ.
ಅನುರಾಧಾ ನಕ್ಷತ್ರ ವೃಶ್ಚಿಕ ರಾಶಿಯ ತುಲಾ ಲಗ್ನದಲ್ಲಿ ಮೋದಿ ಜನಿಸಿದರು. ಜನನದ ವೇಳೆ ಶನಿ ದೆಶೆ ನಡೆಯುತ್ತಿತ್ತು. ಈಗಿವರಿಗೆ ಚಂದ್ರ ದಶೆ ಗುರು ಭುಕ್ತಿ ನಡೆಯುತ್ತಿದೆ. ಇದು 20-12-2015ರ ವರೆಗೆ ಇರುವ ಕಾರಣ ಉತ್ತಮ ಫಲ ಇರುವುದು. ಲಗ್ನದಿಂದ ಎರಡನೇ ಮನೆಯಲ್ಲಿ ಚಂದ್ರ ಹಾಗೂ ಕುಜ ಇರುವುದರಿಂದ ಮಾತಿನಲ್ಲಿ ಮೃದುತ್ವ ಇರುವುದು. ಅಷ್ಟೇ ಕಠಿಣತ್ವವೂ ಇರುತ್ತದೆ.
ಚಂದ್ರ 2ನೇ ಮನೆಯಲ್ಲಿ ಇರುವುದರಿಂದ ಕತೆ, ಕವಿತೆ ಬರೆಯುವ ಹವ್ಯಾಸ ಬಾಲ್ಯದಲ್ಲಿ ಇತ್ತು. ರಾಜಕೀಯಕ್ಕೆ ಇಳಿದ ಮೇಲೆ ಬಿಟ್ಟು ಹೋಗಿರಬೇಕು. ಲಗ್ನದಿಂದ 11ರಲ್ಲಿ ಶನಿ ಹಾಗೂ ಕುಜ ಸ್ವಂತ ಮನೆಯಲ್ಲಿರುವುದರಿಂದ ದೇಶದ ಅಭಿವೃದ್ಧಿಗೆ ಉತ್ತಮ ಕಾರ್ಯ ಕೈಗೊಳ್ಳುವರು. ಶುಕ್ರನು 11ರಲ್ಲಿ ಇರುವುದರಿಂದ ಆರ್ಥಿಕ ಕ್ಷೇತ್ರವನ್ನು ಬಲಪಡಿಸುತ್ತಾರೆ. ಲಗ್ನದಿಂದ 6ರಲ್ಲಿ ರಾಹು ಇರುವುದರಿಂದ ವಿರೋಧಿಗಳು ಹೆಚ್ಚಾಗುವರು. ರಕ್ತ ಸಂಬಂಧಿ ಕಾಯಿಲೆ, ಮೂಳೆಗೆ ಸಂಬಂಧಪಟ್ಟ ತೊಂದರೆ ಕಾಣಿಸುತ್ತದೆ. ಇವರಿಗೆ ಬೆನ್ನುನೋವು ಸದಾ ಇದ್ದಿದ್ದೇ.
ಭಾಗ್ಯಾಧಿಪತಿ ಹಾಗೂ ವ್ಯಯಾಧಿಪತಿಯಾದ ಬುಧ ಸ್ವಂತ ಮನೆಯಲ್ಲಿ ಉಚ್ಚ ಕ್ಷೇತ್ರದಲ್ಲಿ ರವಿ ಹಾಗೂ ಕೇತು ಜೊತೆಯಲ್ಲಿ ಇರುವುದರಿಂದ ಮಾತಿನಲ್ಲಿ ಚತುರ, ಕುಶಲ, ವಿನಯಶೀಲತೆ ಇರುವುದು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಮಾತುಗಳಿಂದಲೇ ಮಿಂಚುವರು. ಗುರು ಕುಂಭ ರಾಶಿಯಲ್ಲಿ 5ರಲ್ಲಿ ಇರುವುದರಿಂದ ತ್ಯಾಗದ ಭಾವನೆ ಹೆಚ್ಚು. ಲಗ್ನದಿಂದ ಕೇತು 12ರಲ್ಲಿ ಅಂದರೆ ವ್ಯಯದಲ್ಲಿರುವುದರಿಂದ ಈ ಜನ್ಮವೇ ಕೊನೆಯದು. ಈ ಜನ್ಮದಲ್ಲೇ ಮೋಕ್ಷ ಸಿಗುವುದು.
ಕಾಡದ ಸಾಡೆಸಾತ್ ಶನಿ
ಮೋದಿಗೆ ಈಗ ಸಾಡೆಸಾತ್ ಶನಿ ನಡೆಯುತ್ತಿದೆ. ಇದು ಅವರ ಜೀವನದಲ್ಲಿ 2ನೇ ಬಾರಿಗೆ ಬಂದಿರುವುದು. ನವೆಂಬರ್ನಲ್ಲಿ ಶನಿ ವೃಶ್ಚಿಕ ರಾಶಿಗೆ ಬರುವುದು ಆಗ ಮನಸ್ಸಿಗೆ ನೆಮ್ಮದಿ ಕಡಿಮೆ. ಹಿತ ಶತ್ರುಗಳು ಹೆಚ್ಚು ತೊಂದರೆ ಕೊಡುವರು, ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುವುದು, ಕುಂಡಲಿಯಲ್ಲಿ ಶನಿ 11ರಲ್ಲಿ ಇರುವುದರಿಂದ ಶನಿ ದೋಷ ಕಡಿಮೆ ಎಂದೇ ಹೇಳಬಹುದು.ಅಲ್ಲದೆ, 2ನೇ ಬಾರಿ ಸಾಡೆಸಾತ್ ಶನಿ ಆಗಿರುವುದರಿಂದ ತೊಂದರೆ ಕಡಿಮೆ.
ಬಜೆಟ್ಗೂ ಮುನ್ನ
ಪ್ರಧಾನಿಗಳ ಕುಂಡಲಿನೋಟ
ಇನ್ನೇನು ಕೆಲವೇ ದಿನಗಳಲ್ಲಿ ಮೋದಿ ಸರ್ಕಾರದ ಮೊದಲ ಬಜೆಟ್ ಮಂಡನೆ. ಹೆಸರಾಂತ ಜ್ಯೋತಿಷಿಗಳೊಬ್ಬರು ನಮ್ಮ ಪ್ರಧಾನಮಂತ್ರಿಗಳ ಜಾತಕ ನೋಡಿದ್ದಾರೆ. ಅವರ ಯೋಜನೆಗಳು ದೇಶದ ಆರ್ಥಿಕತೆಯನ್ನು ಸುಧಾರಿಸುತ್ತವೆಯೇ? ಹೀಗೊಂದು ಕುಂಡಲಿ ನೋಟ...
- ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಮೋದಿಗಿರುವ ಯೋಗ
ಮೋದಿಯವರ ಜಾತಕದಲ್ಲಿ ಹಲವು ಯೋಗಗಳಿವೆ.
ಗಜಕೇಸರಿ ಯೋಗ: ಈ ಯೋಗ ಚಂದ್ರ ಹಾಗೂ ಗುರು ಗ್ರಹದಿಂದ ಉಂಟಾಗುವುದು. ಈ ಯೋಗದಿಂದ ರಾಜಯೋಗವುಂಟಾಗಿ ನಾಯಕತ್ವದ ಗುಣ ಹೆಚ್ಚುತ್ತದೆ.
ಸಿಂಹಾಸನ ಯೋಗ: ಈ ಯೋಗದಿಂದ ಕೀರ್ತಿ, ಅಧಿಕಾರ ಪ್ರಾಪ್ತಿ, ರಾಜಕೀಯದಲ್ಲಿ ಪ್ರತಿಷ್ಠಿತ ಸ್ಥಾನಮಾನ ದೊರೆಯುತ್ತದೆ.
ರಾಜಯೋಗ: ಈ ಯೋಗ ಉತ್ತಮವಾದದ್ದು, ಅಂದುಕೊಂಡಿದ್ದೆಲ್ಲ ಆಗುತ್ತದೆ.
ಅಮಲ ಯೋಗ: ಪ್ರೇರಣೆ ನೀಡುವವರು, ತ್ಯಾಗಜೀವಿಗಳೂ, ವೈರಾಗ್ಯತನವೂ ಹೆಚ್ಚು ಆವರಿಸಿಕೊಳ್ಳುತ್ತದೆ.
ಜನ್ಮದಿನ: 17-9-50
ಜನ್ಮ ನಕ್ಷತ್ರ: ಅನುರಾಧ
ಜನ್ಮಲಗ್ನ: ತುಲಾ ರಾಶಿ
ಜನ್ಮಸ್ಥಳ: ವಾಡ್ನಗರ್
ನಾಯಿ ಹೇಳಿದ ಲಂಚತಂತ್ರಕಥೆ
ಭ್ರಷ್ಟಾಚಾರ ಬೇಕೇ ಬೇಡವೇ? ಬೇಕು ಎಂದಾದರೆ 'ಟಿಟಿವಿ' ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು 'ವೈ' ಎಂದು ನಮೂದಿಸಿ, ಬೇಡ ಎಂದಾದರೆ 'ನೋ' ಎಂದು ನಮೂದಿಸಿ 9876543210ಗೆ ಎಸ್ಸೆಮ್ಮೆಸ್ ಮಾಡಿ. ಇದರ ಫಲಿತಾಂಶವನ್ನು ರಾತ್ರಿ 9 ಗಂಟೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ನಲ್ಲಿ ಪ್ರಕಟಿಸಲಾಗುವುದು. ಎಸ್ಸೆಮ್ಮೆಸ್ ಕಳಿಸಿದ ಎಲ್ಲರಿಗೂ ಆಕರ್ಷಕ ಗಿಫ್ಟ್ ವೋಚರ್ ನೀಡಲಾಗುವುದು. ಅದೃಷ್ಟಶಾಲಿಯೊಬ್ಬರಿಗೆ 1000 ರು. ಬಹುಮಾನ ನೀಡಲಾಗುವುದು ಎಂದು ಪ್ರೈವೇಟ್ ಟಿವಿಯಲ್ಲಿ ಪ್ರಕಟಿಸಲಾಯ್ತು.
ರಾತ್ರಿ 9ಕ್ಕೆ ಬಿಗ್ ಬುಲೆಟಿನ್ ಶುರುವಾಯ್ತು; 'ವೀಕ್ಷಕರೇ, ಭ್ರಷ್ಟಾಚಾರ ಬೇಕೇ ಬೇಡವೇ ಎಂಬ ಪ್ರಶ್ನೆಗೆ ಶೇ. 90 'ಬೇಡ' ಎಂದೂ, ಶೇ. 10'ಬೇಕು' ಎಂದೂ ಎಸ್ಸೆಮ್ಮೆಸ್ ಬಂದಿದೆ. ಭ್ರಷ್ಟಾಚಾರ ಬೇಕು ಅಂತ ಎಸ್ಸೆಮ್ಮೆಸ್ ಕಳಿಸಿದ ಆ
ನಂಬರಿಗೆ ಡಯಲ್ ಮಾಡೋಣ!
'.... ಹಲೋ ನಾವು ಪ್ರೈವೇಟ್ ಟಿವಿಯಿಂದ ಮಾತಾಡ್ತಿದ್ದೀವಿ. ಭ್ರಷ್ಟಾಚಾರ ಬೇಕು ಅಂತ ಮೆಸೇಜ್ ಮಾಡಿದ್ದೀರಲ್ಲಾ, ನಿಮ್ಮ ಹೆಸರೇನು?'. ಆ ಕಡೆಯಿಂದ ಉತ್ತರ ಬಂತು; 'ಸಾರ್ ನನ್ನ ಹೆಸರು ಟಾಮಿ. ನಾನು ಎಸ್ಐ ಸೋಮರಾಜು ಮನೆಯ ನಾಯಿ'.
'ನೀನ್ಯಾಕಪ್ಪಾ ಮೆಸೇಜ್ ಮಾಡ್ದೇ? ನಿನಗೂ ಭ್ರಷ್ಟಾಚಾರಕ್ಕೂ ಏನ್ ಸಂಬಂಧ?'
ನಾಯಿ ಹೇಳಿತು; 'ನೋಡಿ ಸಾರ್... ನಮ್ಮ ಎಸ್ಐ ಸಾಹೇಬ್ರಿಗೆ ಮೊನ್ನೆ ಸಕತ್ ಲಂಚ ಬಂತು. ಅವರು ಅಮ್ಮನೋರಿಗೆ ಸೀರೆ- ಒಡವೆ- ಹಣ ಎಲ್ಲ ತಂದ್ಕೊಟ್ರು. ಅಮ್ಮನೋರು ಅವರ ಮಗನಿಗೆ ಪಾಕೆಟ್
ಮನಿ ಅಂತ ತುಂಬಾ ದುಡ್ಡು ಕೊಟ್ರು. ಮಗ ಅವ್ರು ನನಗೆ ವಾಕಿಂಗ್ ಕರ್ಕೊಂಡ್ ಹೋಗಿ ಒಳ್ಳೇ ಬಿಸ್ಕತ್ತು- ಬ್ರೆಡ್ಡು ಕೊಡಿಸಿದ್ರು. ಆದ್ರೆ ನಿನ್ನೆ ಏನಾಯ್ತು ಗೊತ್ತಾ? ನಮ್ಮ ಸಾಹೇಬ್ರಿಗೆ ಏನೂ ಸಿಗ್ಲಿಲ್ವಂತೆ. ಮನೆಗೆ ಬಂದೋರೆ ಅಮ್ಮಾವ್ರ ಮೇಲೆ ಎಗರಾಡಿದ್ರು. ಅಮ್ಮನೋರು ಮಗನ ಮೇಲೆ ಕೂಗಾಡಿದ್ರು. ಆ ಮಗ ನನ್ನನ್ನ ಹಿಡ್ಕೊಂಡು ಬಡಿದು ಬಿಡೋದಾ? ಅಷ್ಟೊತ್ತಿಗೆ ಟಿವಿಯಲ್ಲಿ ನಿಮ್ಮ ಎಸ್ಸೆಮ್ಮೆಸ್ ಕಾರ್ಯಕ್ರಮ ಬರ್ತಿತ್ತು. ಮೆಸೇಜ್ ಮಾಡ್ದೆ. ಭ್ರಷ್ಟಾಚಾರ ಬೇಕು ಅಂತಾ'!
- ಪಿ.ಜೆ. ರಾಘವೇಂದ್ರ
ಅವನೇ 'ಆ್ಯಪಲ್'ನ
ಸೇಬು ಕಚ್ಚಿದನಾ?
ಫಿಫಾ ವಿಶ್ವಕಪ್ನಲ್ಲಿ ಇಟಲಿಯ ಚೀಲ್ಲಿನಿಗೆ ಕಚ್ಚಿ ವಿಲನ್ ಆಗಿರುವ ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸೂರೆಜ್ ಬಗ್ಗೆ ಟ್ವೀಟರ್ನಲ್ಲಿ ಬಗೆಬಗೆಯ ಜೋಕ್ವಾರ್ಗಳು ಶುರುವಾಗಿವೆ. 'ಆ್ಯಪಲ್ ಕಂಪನಿಯ ಲೋಗೋ ಸೇಬುವನ್ನು ಕಚ್ಚಿದ್ದು ಸೂರೆಜ್' ಅಂತೆ. ಉರುಗ್ವೆಯ ಮೆಕ್ಡೊನಾಲ್ಡ್ ಕಂಪನಿಯಂತೂ, 'ಸೂರೆಜ್ಗೆ ಅಷ್ಟು ಹಸಿವಾಗಿದ್ದರೆ ಮೆಕ್ಡಿನೇ ತಿನ್ನಲಿ, ಕಚ್ಚೋದು ಬೇಡ' ಎಂದಿದೆ. ಸೂರೆಜ್ ಮುಖಕ್ಕೆ ಹೆಲ್ಮೆಟ್ ಹೊದಿಸಿದ ಚಿತ್ರಗಳೂ
ವ್ಯಂಗ್ಯದ ಬಾಣ ಬಿಟ್ಟಿವೆ. ಇದರ ಹೊರತಾಗಿಯೂ
ಹೆಚ್ಚು ನಗಿಸುವ ಫೋಟೋವನ್ನು ಈ ಕೆಳಗೆ ನೋಡಬಹುದು. ಬಾಟಲ್ ಓಪನರ್ ಆಗಿ ಸೂರೆಜ್!
ಹಾರರ್ ಕತೆಗಳು
ಪ್ರೇತಾಯುಗ
ಬೆಳಗ್ಗೆ ಏಳೋ ಹೊತ್ತಿಗೆ ನನ್ನ ಸೆಲ್ಫೋನಿನಲ್ಲಿ ನಾನು ನಿದ್ದೆ ಮಾಡುತ್ತಿರುವ ಫೋಟೋ ಬಂದಿತ್ತು. ಭಯ ಆಗ್ತಿದೆ... ಯಾಕಂದ್ರೆ, ನನ್ನ ಮನೆಯಲ್ಲಿರೋದು ನಾನೊಬ್ಬಳೇ!
***
ನಿನ್ನೆ ಮಧ್ಯರಾತ್ರಿ ಹೆಂಡತಿ ನನ್ನನ್ನು ನಿದ್ದೆಯಿಂದ ಎಬ್ಬಿಸಿ ನಮ್ಮನೆಯೊಳಗೆ ಒಬ್ಬ ಅಪರಿಚಿತ ಪ್ರವೇಶಿಸಿರುವುದನ್ನು ತೋರಿಸಿದಳು. ಆ ಅಪರಿಚಿತನಿಂದಲೇ ಆಕೆ ಎರಡು ವರುಷಗಳ ಹಿಂದೆ ಕೊಲೆಯಾದದ್ದು!
***
ಆ ಮಗು ಕೇಕೆ ಹಾಕಿ ನಗುತ್ತಿತ್ತು. ನಾನು ಆನಂದಿಸುತ್ತಿದ್ದೆ. ಆದರೆ, ಅದೇ ನಗು ಮಧ್ಯರಾತ್ರಿ ಒಂದು ಗಂಟೆಗೆ ಕೇಳಿದಾಗ ಆ ಮಗುವಿನ ಭಯಾನಕತೆ ಅನುಭವಕ್ಕೆ ಬಂತು! ಒಮ್ಮೆ ಆ ಮಗುವಿನ ಮಧ್ಯರಾತ್ರಿಯ ನಗುವನ್ನು ನೀವೂ ಕಲ್ಪಿಸಿಕೊಳ್ಳಿ.
ಮೂತ್ರಿಸುವಾಗ ಗೊತ್ತಾಗಲಿಲ್ಲ!
ಪಕ್ಕದ ಮನೆಯವನೊಂದಿಗೆ ನಡೆಯುತ್ತಿದ್ದ ಹಲವು ವರ್ಷಗಳ ಒಳಜಗಳ ಕಡೆಗೂ ತಿಳಿಯಾಯಿತು. ಇದೇ ಖುಷಿಯಲ್ಲಿ ಒಂದು ದಿನ ಆತ ನಮ್ಮ ಮನೆಯವರೆಲ್ಲರನ್ನೂ ಔತಣಕ್ಕೆಂದು ತನ್ನ ಮನೆಗೆ ಆಹ್ವಾನಿಸಿದ. ಊಟಕ್ಕೆ ಮುನ್ನ ಮಧ್ಯಾಹ್ನ ಬಿಸಿಲಿದ್ದಿದ್ದರಿಂದ ಮನೆಯ ಹಿಂಬದಿಯಲ್ಲಿದ್ದ ತೆಂಗಿನಮರದಿಂದ ಎಳನೀರು ತರಿಸಿಕೊಟ್ಟ. ಆದರೆ, ಆತನಿಗೆ ಎಳನೀರೇಕೋ ರುಚಿಯೆನಿಸಲಿಲ್ಲ. ಆಗಲೇ ನೆನಪಾಗಿದ್ದು ಜಗಳ ನಡೆಯುವ ದಿನಗಳಲ್ಲಿ ಅವನಿಲ್ಲದ ಸಮಯದಲ್ಲಿ ಅವರ ಕೊಟ್ಟಿಗೆಗೆ ಹೋಗಿ ಅಲ್ಲಿದ್ದ ಆ ತೆಂಗಿನಮರದ ಬುಡಕ್ಕೆ ಮೂತ್ರಿಸಿದ್ದು! ರುಚಿಯನ್ನು ಕೇವಲ ನಾಲಗೆಯಷ್ಟೇ ಗುರುತಿಸುವುದಿಲ್ಲ. ಹೃದಯವೂ...
- ಸಂತೋಷ್ ಕುಮಾರ್
ಹೌ ಟು
ಶಾರ್ಪನ್ ಪೆನ್ಸಿಲ್!
ಮೆಂಡರ್ ಇದ್ದರೆ ಪೆನ್ಸಿಲ್ ಅನ್ನು ಚೂಪುಗೊಳಿಸುವುದು ಆರು ಸೆಕೆಂಡಿನ ಕೆಲಸ. ಆದರೆ, ಈ ಆರು ಸೆಕೆಂಡಿನ ಕಲೆಯನ್ನೇ ಒಬ್ಬ ಪುಸ್ತಕ ಮಾಡಿದ್ದಾನೆ. ಅಮೆರಿಕದ ಡೇವಿಡ್ ರೀಸ್ ಎಂಬಾತ 'ಹೌ ಟು ಶಾರ್ಪನ್ ಪೆನ್ಸಿಲ್' ಅದನ್ನೇನು ಹತ್ತಿಪ್ಪತ್ತು ಪುಟಗಳಲ್ಲಿ ಹೇಳಿ ಮುಗಿಸಿಲ್ಲ. 218 ಪುಟಗಳಲ್ಲಿ ಹೇಳಿದ್ದಾನೆ. ಪ್ರ್ಯಾಕ್ಟಿಕಲ್ ಮತ್ತು ಥಿಯೋರಿಟಿಕಲ್ ಆಗಿ ವಿವರಿಸಿರುವ ಈತ ಒಳಗಿನ ಗ್ರಾಫೈಟಿನಲ್ಲಿ ಮಿಲಿಗ್ರಾಮನ್ನೂ ವ್ಯರ್ಥ ಮಾಡಬಾರದು ಎಂದು ಪ್ರತಿಪಾದಿಸುತ್ತಾನೆ. 2013ರಲ್ಲಿ ಮೆಲ್ವಿಲ್ ಹೌಸ್ ಇದನ್ನು ಪ್ರಕಟಿಸಿದೆ. ಎಲ್ಲಾದ್ರೂ ಈ ಪುಸ್ತಕ ಅಂಗ್ಡೀಲಿ ಕಂಡ್ರೆ ಅತ್ತ ದೃಷ್ಟಿ ಕೂಡ ಹಾಕ್ಬೇಡಿ!
ಅವನೇ 'ಆ್ಯಪಲ್'ನ
ಸೇಬು ಕಚ್ಚಿದನಾ?
ಫಿಫಾ ವಿಶ್ವಕಪ್ನಲ್ಲಿ ಇಟಲಿಯ ಚೀಲ್ಲಿನಿಗೆ ಕಚ್ಚಿ ವಿಲನ್ ಆಗಿರುವ ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸೂರೆಜ್ ಬಗ್ಗೆ ಟ್ವೀಟರ್ನಲ್ಲಿ ಬಗೆಬಗೆಯ ಜೋಕ್ವಾರ್ಗಳು ಶುರುವಾಗಿವೆ. 'ಆ್ಯಪಲ್ ಕಂಪನಿಯ ಲೋಗೋ ಸೇಬುವನ್ನು ಕಚ್ಚಿದ್ದು ಸೂರೆಜ್' ಅಂತೆ. ಉರುಗ್ವೆಯ ಮೆಕ್ಡೊನಾಲ್ಡ್ ಕಂಪನಿಯಂತೂ, 'ಸೂರೆಜ್ಗೆ ಅಷ್ಟು ಹಸಿವಾಗಿದ್ದರೆ ಮೆಕ್ಡಿನೇ ತಿನ್ನಲಿ, ಕಚ್ಚೋದು ಬೇಡ' ಎಂದಿದೆ. ಸೂರೆಜ್ ಮುಖಕ್ಕೆ ಹೆಲ್ಮೆಟ್ ಹೊದಿಸಿದ ಚಿತ್ರಗಳೂ
ವ್ಯಂಗ್ಯದ ಬಾಣ ಬಿಟ್ಟಿವೆ. ಇದರ ಹೊರತಾಗಿಯೂ
ಹೆಚ್ಚು ನಗಿಸುವ ಫೋಟೋವನ್ನು ಈ ಕೆಳಗೆ ನೋಡಬಹುದು. ಬಾಟಲ್ ಓಪನರ್ ಆಗಿ ಸೂರೆಜ್!
ರಾಣಿ ಸ್ಟಂಟು, ನೋ ಸೆಂಟಿಮೆಂಟು
ಕತ್ರೀನಾ ಅಷ್ಟೇ ಸ್ಟಂಟ್ ಮಾಡೋದಾ? ಅನ್ನೋ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ರಾಣಿಯೇ ಉತ್ತರ. ಮುಖರ್ಜಿ ಮತ್ತೆ ಹೊಸ ಮುಖ ಹೊತ್ತು ಬರ್ತಿದ್ದಾಳೆ. 'ಮರ್ದಾನಿ' ಚಿತ್ರದಲ್ಲವಳು 'ಗನ್'ಧಾರಿ. ಪೊಲೀಸ್ ಅಧಿಕಾರಿಯಾದ ರಾಣಿಯ ಈ ಚಿತ್ರದ ಟ್ರೈಲರ್ ಈಗ ಎಲ್ಲೆಡೆ ಹವಾ ಎಬ್ಬಿಸಿದೆ. ಮೈನವಿರೇಳಿಸುವ ಸ್ಟಂಟ್ಸ್, ಜಬರ್ದಸ್ತ್ ಡೈಲಾಗ್ಸ್ ಚಿತ್ರದ ಹೈಲೈಟ್ಸ್. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿ, ಮಾರಾಟ ಮಾಡುವ ಮಾಫಿಯಾವನ್ನು ಸದೆಬಡಿಯುವ ಪೊಲೀಸ್ ಅಧಿಕಾರಿಯಾಗಿ ರಾಣಿ ಮಿಂಚಿದ್ದಾಳೆ. ಅಂದಹಾಗೆ, ಈ ಚಿತ್ರವನ್ನು ಆಕೆಯ ಪತಿ ಆದಿತ್ಯಚೋಪ್ರಾ ಅವರೇ ನಿರ್ಮಿಸಿದ್ದಾರೆ. ಇದೇನಾದರೂ ಹಿಟ್ ಆದರೆ, ಆದಿತ್ಯ ಚೋಪ್ರಾ ಅವರು ಕನ್ನಡದ ನಿರ್ಮಾಪಕ ಕೋಟಿ ರಾಮು ಅವರಂತೆ ತಮ್ಮ ಪತ್ನಿಗಾಗಿಯೇ ಸಾಲು ಸಾಲು ಆ್ಯಕ್ಷನ್ ಚಿತ್ರಗಳನ್ನು ನಿರ್ಮಿಸುತ್ತಾರಾ? ಗೊತ್ತಿಲ್ಲ.
ಭವಿಷ್ಯದ 10 ಅಮ್ಮಾ ಯೋಜನೆ!
ಅಮ್ಮಮ್ಮಾ... ತಮಿಳರನ್ನು ಅದೇನು 'ಮಾ'ಂತ್ರಿಕವಾಗಿ ಅವರು ಆವರಿಸಲು ಹೊರಟಿದ್ದಾರೋ! ಸಿಎಂ ಜಯಲಲಿತಾ ಮೇಲಿಂದ ಮೇಲೆ 'ಅಮ್ಮಾ' ಪ್ರಾಡಕ್ಟುಗಳನ್ನು ಮಾರುಕಟ್ಟಿಗೆ ಬಿಡುತ್ತಲೇ ಇದ್ದಾರೆ. 'ಅಮ್ಮಾ ಇಡ್ಲಿ', 'ಅಮ್ಮಾ ತರಕಾರಿ', 'ಅಮ್ಮಾ ವಾಟರ್', 'ಅಮ್ಮಾ ಸಾಲ್ಟ್'... ಏನೆಲ್ಲ ಆಯ್ತು. ಹಾಗಾದರೆ, ಭವಿಷ್ಯದ 'ಅಮ್ಮಾ' ಯೋಜನೆಗಳು ಏನಿರಬಹುದು? ಅಂಥದ್ದೊಂದು ಎಕ್ಸ್ಕ್ಲ್ಯೂಸಿವ್ ಮುನ್ನೋಟ ಇಲ್ಲಿ...
1. ಅಮ್ಮಾಡೆಂಟ್ (ಟೂತ್ಪೇಸ್ಟ್)
2. ವಾಷಿಂಗ್ ಪೌಡರ್ 'ಅಮ್ಮಾ'
3. ತ್ರಿಬಲ್ ಎಕ್ಸ್ ಅಮ್ಮಾ (ಅಗ್ಗದ ಮದ್ಯ)
4. ಏರ್ ಅಮ್ಮಾ (ವಿಮಾನ ಸಾರಿಗೆ)
5. ಅಮ್ಮಾ ಬಾಮ್ (ಝಂಡೂ ಬಾಮ್ ಥರದ್ದು)
6. ಅಮ್ಮಾ ಆಲ್ ಕ್ಲಿಯರ್ (ಶಾಂಪೂ)
7. ಅಮ್ಮಾಮಿಕ್ಸ್(ಸೋಪು)
8. ಅಮ್ಮಾ ಮೇಲ್ (ಜಿಮೇಲ್ ಬದಲು)
9. ಅಮ್ಮಾಜಾನ್.ಕಾಂ. (ಆನ್ಲೈನ್ ವ್ಯವಹಾರಕ್ಕೆ)
10. ಮೆಕ್'ಅಮ್ಮಾ' (ಮೆಕ್ಡಿ ಬದಲು)
ಬ್ರೆಜಿಲಿಯನ್ಸ್ ಏಕೆ
ಪೆಪ್ಸಿ ಇಷ್ಟಪಡುವುದಿಲ್ಲ?
ನಮ್ಮಲ್ಲಿ ಕ್ರಿಕೆಟ್ ವಿಶ್ವಕಪ್ ನಡೆದರೆ ಸಾಕು, ಕೋಕಾಕೋಲಾ- ಪೆಪ್ಸಿಯಂಥ ಬ್ರಾಂಡುಗಳ ಭರಾಟೆ ಜೋರು. ಸೆಲೆಬ್ರಿಟಿಗಳೆಲ್ಲ ಆ ಪಾನೀಯಗಳ ಬಾಟಲಿ ಹಿಡಿದು 'ದಿಲ್ ಮಾಂಗೇ ಮೋರ್' ಅಂತಾರೆ. ಆ ಟೈಮಲ್ಲಿ ಈ ಪೇಯಗಳ ಮಾರಾಟದಲ್ಲೂ ಅಪಾರ ಆಫರ್. ಇದಕ್ಕೆ ಪೂರಕವಾಗಿ ನಾವು ಮುಗಿಬಿದ್ದು ಪೆಪ್ಸಿ- ಕೋಕನ್ನು ಕುಡೀತೀವಿ. ಆದರೆ, ಈಗ ಬ್ರೆಜಿಲ್ನಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿದೆ. ಆದರೆ, ಅಲ್ಲಿನ ಟಿವಿ- ಬೀದಿಗಳಲ್ಲಿ ಈ ಪೇಯಗಳ ಜಾಹೀರಾತು ಕಾಣಿಸುತ್ತಿಲ್ಲ. ಬ್ರೆಜಿಲಿಯನ್ ಮಂದಿಯೂ ಅದರ ಮೊರೆ ಹೋಗಿಲ್ಲ. ಅಲ್ಲೀಗ ಸ್ವದೇಶಿ ಪೇಯ 'ಗ್ವರಾನಾ'ದ್ದೇ ಸುದ್ದಿ. ಇದು ಅವರ ದೇಶದ್ದೇ ಪಾನೀಯ. ಅಮೆಜಾನ್ ನದಿಯ ದಡದಲ್ಲಿ ಬೆಳೆಯುವ ಗ್ವರಾನಾ ಹಣ್ಣಿನಿಂದ ಇದನ್ನು ಸಿದ್ಧಗೊಳಿಸುತ್ತಾರೆ. ಪಕ್ಕದ ದೇಶ ಅಮೆರಿಕದಲ್ಲೇ ಪೆಪ್ಸಿ ಹುಟ್ಟಿದ್ದರೂ ಬ್ರೆಜಿಲ್ಗೆ ಗಟ್ಟಿಯಾಗಿ ಕಾಲಿಡಲಾಗಲಿಲ್ಲ. ಫಿಫಾ ವಿಶ್ವಕಪ್ನಲ್ಲೂ ಅದಕ್ಕೆ ಸಾಧ್ಯವಾಗುತ್ತಿಲ್ಲ. ಅಂದಹಾಗೆ, ಗ್ವರಾನಾ ಒಂದು ಎನರ್ಜಿ ಡ್ರಿಂಕ್.
ಮೋದಿಯಾಗಿ ಆಮೀರ್ಖಾನ್!
ಇತ್ತೀಚೆಗೆ ಆಮೀರ್ಖಾನ್, ಮೋದಿ ಅವರನ್ನು ಭೇಟಿ ಮಾಡಿದ್ದು ಯಾಕೆ ಅಂತ ಅಂದ್ಕೊಂಡ್ರಿ? 'ಸತ್ಯಮೇವ ಜಯತೇ'ಯ ಡಿವಿಡಿ ಕೊಡಲಿಕ್ಕಷ್ಟೇ ಅಲ್ಲ... 'ಮೋದಿ' ಸಿನಿಮಾದ ಮೇಕಿಂಗ್ ಬಗ್ಗೆ ಚರ್ಚಿಸಲು! ಹೌದು, ಆಮೀರ್ ಖಾನ್ ಅವರು ನರೇಂದ್ರ ಮೋದ ಪಾತ್ರದಲ್ಲಿ ಕಾಣಸಿಕೊಳ್ತಿದ್ದಾರೆ. ಈ ವೇಳೆ ತಮ್ಮ ಮ್ಯಾನರಿಸಂ ಅಭ್ಯಸಿಸಲು ಆಮೀರ್ಗೆ ನೆರವಾಗುವುದಾಗಿ ಮೋದಿ ತಿಳಿಸಿದ್ದಾರಂತೆ!
ಹಿಮ್ಮುಖವಾಗಿ 25 ವರ್ಷದಿಂದ ನಡೀತಿದ್ದಾನೆ!
ಇಲ್ಲೊಬ್ಬ ಇದ್ದಾನೆ. ಹೆಸ್ರು ಮಣಿ ಮಣಿತನ್ ಅಂತ. ಚೆನ್ನೈ ಮೂಲದ ಈತ ನಡೆಯೋದು ಸದಾ ಹಿಮ್ಮುಖವಾಗಿ. ನಾವು ನೀವೆಲ್ಲ ಮುಂದೆ ಹೆಜ್ಜೆ ಇಟ್ಟು ನಡೆಯುವಷ್ಟೇ ವೇಗವಾಗಿ ಈತ ಹಿಮ್ಮುಖಿಯಾಗಿ ನಡೆಯಬಲ್ಲ! ಯಾವುದೋ ದಾಖಲೆಗಾಗಿ ಈತ ಇದನ್ನು ಮಾಡ್ತಿಲ್ಲ. ಹೀಗೆ ನಡೆಯೋದು 'ವಿಶ್ವಶಾಂತಿ'ಗಾಗಿಯಂತೆ. ದೇಶದಲ್ಲಿನ ಹಿಂಸೆಯ ಘಟನಾವಳಿಗಳನ್ನು ಕೇಳಿ, ಕೇಳಿ ರೋಸಿಹೋಗಿದ್ದ ಈತ 1989ರ ಜೂ.14ರಂದು ವಿಶ್ವಶಾಂತಿಯ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸಲು ಹಿಮ್ಮುಖನಾದ. ಆದರೆ, ಅದೇ ಈತನಿಗೆ ಅಭ್ಯಾಸವಾಗಿ ಹೋಯಿತು. ಈಗ, ಈತ ಎಲ್ಲರಂತೆ ನಡೆಯಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವಂತೆ!
ಲೈನ್ಶಾಪ್
ಚಾಕ್ಲೇಟ್ನಲ್ಲಿ ಕೀಟ, ಹಾಲಿನಲ್ಲಿ ಕೆಮಿಕಲ್ಸ್, ನೀರಲ್ಲಿ ವೈರಸ್, ಕೂಲ್ ಡ್ರಿಂಕ್ಸ್ನಲ್ಲಿ ಕೀಟನಾಶಕ.... ಉಫ್! ಸದ್ಯ... ಬಿಯರ್ನಲ್ಲಿ ಏನೂ ಸಿಕ್ಕಿಲ್ವಲ್ಲ!
ನಿಮಗೆ ಗುರಿ ತೋರುವವರು, ಸರಿ ದಾರಿಗೆ ಕೊಂಡೊಯ್ಯುವವರು ಕಾಣದಿದ್ದಾಗ ನಮ್ಮಲ್ಲಿ ಬನ್ನಿ... ನಾವು ನಿಮ್ಮನ್ನು ಕಣ್ಣಿನ ವೈದ್ಯರ ಬಳಿಗೆ ಕರೆದೊಯ್ಯುತ್ತೇವೆ!
ಬೆಂಗ್ಳೂರಿನ ಒಂದು ಬೀದಿಗೆ ಹೋದ್ರೆ ವಾಪಸು ಮನೆಗೇ ಬರೋದಿಕ್ಕೆ ನಮ್ಗೆ ಮನೆ ವಿಳಾಸ ಗೊತ್ತಾಗಲ್ಲ. ಆದರೆ, ದೂರದ ಮರದಲ್ಲೆಲ್ಲೋ ಗೂಡು ಕಟ್ಟಿದ ಜೇನುಗಳು, ಅಲ್ಲೆಲ್ಲೋ ವಾಸವಿದ್ದ ಚಿಟ್ಟೆಗಳು ಮಕರಂದ ಹೀರಿ ವಾಪಸು ಹೇಗೆ ಕರೆಕ್ಟಾಗಿ ಗೂಡು ತಲುಪುತ್ತವೆ? ವರ್ಷಾನುಗಟ್ಟಲೆ ವಿಜ್ಞಾನಿಗಳು ಈ ಜೇನು- ಚಿಟ್ಟೆಹೆಜ್ಜೆಗಳನ್ನು ಹಿಂಬಾಲಿಸಿದರು. ಸೂರ್ಯನ ಹಾಗೂ ಭೂಮಿಯ ಆಯಸ್ಕಾಂತೀಯ ಕ್ಷೇತ್ರವನ್ನಾಧರಿಸಿ ತಾವು ಚಲಿಸುತ್ತಿರುವ ದಿಕ್ಕನ್ನು ಅವು ನಿರ್ಧರಿಸುತ್ತವೆ. ಅಲ್ಲದೆ, ಎಷ್ಟು ದೂರ ಸರಿದರೂ ಯಾವ ದಿಕ್ಕಿನಿಂದ ಬಂದಿದ್ದೆವು ಎಂಬುದದರ ಅರಿವು ಅವುಗಳ ಮೆದುಳಲ್ಲಿ ವರ್ಷ ಕಳೆದರೂ ನೆನಪಿರುತ್ತೆ. ಭೂಮಿ, ಸೂರ್ಯ, ಚಂದ್ರರು ಅಯಸ್ಕಾಂತೀಯ ಗುಣ (ಗುರುತ್ವ) ಹೊಂದಿರುವುದು ನಮ್ಮೆಲ್ಲರಿಗೂ ತಿಳಿದ ವಿಚಾರವೇ. ಗುರುತ್ವ ಇಲ್ಲದ ಗ್ರಹಗಳಲ್ಲಿ ಇವು ಹಾದಿಯನ್ನು ಪುನಃ ಗುರುತಿಸುವುದು ಕಷ್ಟ. ಏನೇ ಅನ್ನಿ, ಗೂಗಲ್ ಮ್ಯಾಪ್ ಇಲ್ಲದೆ ಅವು ರಸ್ತೆ ಕಂಡುಹಿಡಿಯುತ್ತಾವಲ್ಲಾ... ಗ್ರೇಟ್!
ಜೋಕ್ಟ್ರೀ
ಬಾಸ್: ಯಾಕಯ್ಯಾ ಒಂಥರಾ ಇದೀಯಾ ?
ನೌಕರ: ಸರ್. ನಾಳೆ ನಾನು ಆಫೀಸ್ಗೆ ರಜಾ ಹಾಕ್ಲೇಬೇಕಂತ ನನ್ ಹೆಂಡ್ತಿ ಹೇಳಿದಾಳೆ. ನಾಳೆ ರಜಾ ಹಾಕಿ ಆಕೆ ಮನೆ ಕ್ಲೀನ್ ಮಾಡೋಕ್ಕೆ ಹೆಲ್ಪ್ ಮಾಡ್ಬೇಕಂತೆ.
ಬಾಸ್: ಸಾರಿ. ನಿಮಗೆ ರಜಾ ಕೊಡೋದಿಕ್ಕಾಗಲ್ಲ.
ನೌಕರ: (ತುಂಬಾ ಖುಷಿಯಾಗಿ) ಥ್ಯಾಂಕ್ಯೂ ಸರ್. ನಂಗೊತ್ತಿತ್ತು ನೀವು ನನ್ ಸಹಾಯಕ್ಕೆ ಬರ್ತೀರ ಅಂತ!
ಜೇನುಗಳಿಗೆ ಗೂಗಲ್ ಮ್ಯಾಪ್ ಬೇಡ!
ಓದುಗರ ಟಾಪ್ 10
1. ಮಲೆಗಳಲ್ಲಿ ಮದುಮಗಳು- ಕುವೆಂಪು
2. ಮರಳಿ ಮಣ್ಣಿಗೆ- ಶಿವರಾಮ ಕಾರಂತ
3. ಬದುಕಲು ಕಲಿಯಿರಿ- ಸ್ವಾಮಿ ಜಗದಾತ್ಮಾನಂದ
4. ಶೂನ್ಯ ಸಂಪಾದನೆ- ಡಾ. ಎಚ್. ತಿಪ್ಪೇರುದ್ರಸ್ವಾಮಿ
5. ಪಾಲಿಟಿಕ್ಸ್- ಅರಿಸ್ಟಾಟಲ್
6. ಮದರ್- ಮ್ಯಾಕ್ಸಿಮ್ ಗೋರ್ಕೆ
7. ವಾರ್ ಆ್ಯಂಡ್ ಪೀಸ್
8. ಸ್ಟೋರಿ ಆಫ್ ಫಿಲಾಸಫಿ- ವಿಲ್ ಡ್ಯೂರಂಟ್
9. ಐ ಬಿಲೀವ್- ಖುಷ್ವಂತ್ ಸಿಂಗ್
10. ಬಿಚ್ಚಿದ ಜೋಳಿಗೆ- ಸ.ಜ. ನಾಗಲೋಟಮಠ
ಟ್ವೀಟಮಿನ್ ಎ
ಅಪ್ಪಿಕೊಳ್ಳುವ ದೃಶ್ಯವನ್ನು ಎಲ್ಲ ನಟರೂ ರೀಟೇಕ್ ತೆಗೆದುಕೊಳ್ಳುತ್ತಾರೆ. ಅಲ್ಲೇನು ಮಜಾ ಸಿಗುತ್ತೋ ನಾ ಕಾಣೆ.
- ಸೋನಾಕ್ಷಿ ಸಿನ್ಹಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


