ವಿವಿ ಅಕ್ರಮ ಕುರಿತು ಚಕಾರ ಎತ್ತಲಿಲ್ಲ, ಕುಲಪತಿ ಮೇಲೆ ಚಾಟಿ ಬೀಸಲೂ ಇಲ್ಲ

ಬೆಂಗಳೂರು: ವಿಶ್ವವಿದ್ಯಾಲಯಗಳ ಘನತೆ ಕಾಪಾಡಬೇಕಾದ ರಾಜ್ಯಪಾಲರು, ಕಳೆದ 5 ವರ್ಷದಲ್ಲಿ ವಿವಿಗಳ ಅಕ್ರಮಗಳ ಕುರಿತು ಎಂದೂ ಚಕಾರವೆತ್ತಲಿಲ್ಲ. ಸರ್ಕಾರದ ಕಾರ್ಯವೈಖರಿ ಕುರಿತು ಟೀಕಿಸುತ್ತಿದ್ದ ಅವರು, ಅವರದ್ದೇ ಸುಪರ್ದಿಯಲ್ಲಿದ್ದ ವಿಶ್ವವಿದ್ಯಾಲಯಗಳ ಕುಲಪತಿಗಳ ಮೇಲೆ ಚಾಟಿ ಬೀಸಲೇ ಇಲ್ಲ.
ಅದಕ್ಕೆ ಬೆಂಗಳೂರು ವಿವಿ ಮತ್ತು ಅದರ ವ್ಯಾಪ್ತಿಯ ಬಿಇಡಿ ಕಾಲೇಜುಗಳ ವಿವಾದ ಮತ್ತು ಅದರ ಬಗ್ಗೆ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಮೌನವೇ ಸಾಕ್ಷಿ. ಇವರ ಅವಧಿಯಲ್ಲಿ ರಾಜ್ಯದ ವಿವಿಗಳಿಗೆ ಕುಲಪತಿ ಮತ್ತು ರಿಜಿಸ್ಟ್ರಾರ್ ನೇಮಕದಲ್ಲಾದಷ್ಟು ವಿವಾದಗಳು ಹಿಂದೆಂದೂ ಆದಂತಿಲ್ಲ.
ರಾಜ್ಯದಲ್ಲಿ ಆಡಳಿತ ಕುಸಿದಿದೆ, ಪಾಲಿಕೆ ಕಸ ತುಂಬಿ ಜಡವಾಗಿದೆ ಎಂದು ರಾಜ್ಯಪಾಲರು ಛೀಮಾರಿ ಹಾಕುತ್ತಿದ್ದರು. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ 3 ವರ್ಷಗಳಿಂದ ನಿರಂತರ ಚರ್ಚೆಗೆ ಒಳಗಾದ ಬಿಇಡಿ ಕಾಲೇಜುಗಳ ಕುರಿತು ತುಟಿಪಿಟಿಕ್ ಅನ್ನಲಿಲ್ಲ. ಇದು ಅವರ ದ್ವಂದ್ವ ನಿಲುವಿನ ಇನ್ನೊಂದು ಉದಾಹರಣೆ.
ಬೆಂ.ವಿ.ವಿ. ವ್ಯಾಪ್ತಿಯ ಬಿ.ಇಡಿ ಕಾಲೇಜುಗಳ ಅರಾಜಕತೆ ಮತ್ತು ಅಕ್ರಮ ಕುರಿತು ವಿವಿ ಕಾರ್ಯಪಡೆ 2012-13ರಲ್ಲೇ ಸಮಗ್ರ ವರದಿ ನೀಡಿತ್ತು. ಅಂದಿನ ಕುಲಾಧಿಪತಿ, ನಿರ್ಗಮಿಸುತ್ತಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾಜ್ಯಪಾಲರ ಕಣ್ಣೆದುರಿಗೇ ವಿವಿ ಮರ್ಯಾದೆ ಹರಾಜಾಗುತ್ತಿದ್ದರೆ, ರಾಜ್ಯಪಾಲರು ಬೇರೆಯವರನ್ನು ಟೀಕಿಸುವುದಲ್ಲಿ ಬ್ಯುಸಿಯಾಗಿದ್ದರು.
ವಿವಿ ವ್ಯಾಪ್ತಿಯಲ್ಲಿ ಯಾವುದೇ ಗುಣಮಟ್ಟ ಕಾಪಾಡಿಕೊಳ್ಳದ ಬಿಇಡಿ ಕಾಲೇಜುಗಳು ನಾಯಿಕೊಡೆಗಳ ಹಾಗೆ ತಲೆ ಎತ್ತಿವೆ. ಈ ಕಾಲೇಜುಗಳನ್ನು ವಿವಿ ನಿಯಂತ್ರಿಸದೆ, ಆ ಕಾಲೇಜುಗಳ ಆಡಳಿತ ಮಂಡಳಿಗಳೇ ವಿವಿಯನ್ನು ನಿಯಂತ್ರಿಸುವ ಮಟ್ಟದಲ್ಲಿ ಬೇರು ಬಿಟ್ಟಿವೆ. ಅಂದು ಬೆಂ.ವಿ.ವಿ. ವ್ಯವಸ್ಥೆ ಅಧೋಗತಿಗೆ ಇಳಿದಿದ್ದನ್ನು ನಿರಂತರ ಮಾಧ್ಯಮಗಳಲ್ಲಿ ನೋಡುತ್ತಿದ್ದ ರಾಜ್ಯಪಾಲರು ಎಂದೂ ವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗಲಿಲ್ಲ.
ವರದಿ ಪೂರ್ಣಪಾಠ: ಕಾರ್ಯಪಡೆ 101 ಕಾಲೇಜುಗಳನ್ನು ಪರಿಶೀಲಿಸಿ 25 ಕಾಲೇಜುಗಳಿಗೆ ಸಂಯೋಜನೆ ಅವಕಾಶ ಕಲ್ಪಿಸಿತ್ತು. 18 ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶ ತಡೆ ಹಿಡಿದು ಮೂಲಸೌಕರ್ಯ ಸುಧಾರಿಸಲು 1 ವರ್ಷ ಕಾಲಾವಕಾಶ ನೀಡಿತ್ತು. ಇದರಲ್ಲಿ 6 ಕಾಲೇಜುಗಳಿಗೆ ಅಂದಿನ ಕುಲಪತಿ ಪ್ರಭುದೇವ ಮತ್ತೊಂದು ಸಮಿತಿ ನೇಮಿಸಿ ಪ್ರವೇಶಕ್ಕೆ ಅವಕಾಶ ನೀಡಿದ್ದರು. 9 ಕಾಲೇಜುಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಶೇ. 25 ಸೌಕರ್ಯವಿದ್ದ ಕಾಲೇಜುಗಳಿಗೆ 1 ವರ್ಷದಲ್ಲಿ ಗುಣಮಟ್ಟ ಸುಧಾರಿಸಿಕೊಳ್ಳುವಂತೆ ಎಚ್ಚರಿಸಿತ್ತು.
ಈ ವರದಿಯನ್ನು ವಿದ್ಯಾವಿಷಯಕ ಪರಿಷತ್ತು ಮತ್ತು ಸಿಂಡಿಕೇಟ್ ಮಂಡಳಿಗಳು ಒಪ್ಪಿದ್ದವು. ಸರ್ಕಾರವೂ ಒಪ್ಪಿತ್ತು. ಅಂದಿನ ಕುಲಾಧಿಪತಿ ಎಚ್.ಆರ್. ಭಾರದ್ವಾಜ್ ಅವರಿಗೂ ವರದಿ ಸಲ್ಲಿಸಲಾಗಿತ್ತು. ಅವರು, ಕುಲಪತಿಗಳನ್ನು ಕರೆದು ವರದಿ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಿಲ್ಲ. ಪರಿಣಾಮ ವರದಿ ಮೂಲೆಗುಂಪಾಯಿತು. ಬಿ.ಇಡಿ ಕಾಲೇಜುಗಳ ದಂಧೆ ಮತ್ತೆ 1.5 ವರ್ಷ ನಿರಾತಂಕವಾಗಿ ಮುಂದುವರಿಯಿತು.
ಕುಲಪತಿ ಮತ್ತು ವಿದ್ಯಾವಿಷಯಕ ಪರಿಷತ್ತು ಮತ್ತು ಸಿಂಡಿಕೇಟ್ ಮಂಡಳಿಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಕಾಲೇಜುಗಳ ನಿಯಂತ್ರಣ ಕಷ್ಟವೇನಲ್ಲ. ಆದರೆ ಇಚ್ಛಾಶಕ್ತಿ ಕೊರತೆ ಮತ್ತು ವಿವಿಗಳಲ್ಲಿ ಶೈಕ್ಷಣಿಕ ಮೌಲ್ಯಕ್ಕಿಂತ ಹಣವೇ ಮಾತನಾಡುತ್ತದೆ ಎಂಬುದು ಗೌಪ್ಯವಾಗಿ ಉಳಿದಿಲ್ಲ.
ಇನ್ನಾದರೂ, ಮುಂದೆ ಬರುವ ಕುಲಾಧಿಪತಿಗಳು ವ್ಯವಸ್ಥೆ ಸರಿಪಡಿಸಿ ಬಿಇಡಿ ಕಾಲೇಜುಗಳ ಅರಾಜಕತೆಗೆ ಕಡಿವಾಣ ಹಾಕಲಿದ್ದಾರೆಯೇ ಎಂಬುದನ್ನು ನಿರೀಕ್ಷಿಸಬೇಕಾಗಿದೆ.
ಶೈಕ್ಷಣಿಕ ವ್ಯವಸ್ಥೆಯ ಅಧೋಗತಿಗೆ ಎಚ್.ಆರ್. ಭಾರದ್ವಾಜ್ ಕಾರಣ. ರಾಜ್ಯಪಾಲರಾಗಿ ಅವರ ಬಗ್ಗೆ ಗೌರವವಿದೆ. ಆದರೆ, ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿ ಅವರ ನಡವಳಿಕೆ ಬೇಸರ ಮೂಡಿಸಿದೆ. ಕುಲಾಧಿಪತಿಯಾಗಿ ರಾಜ್ಯದ ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ವಿವಿಗಳ ಅಧೋಗತಿಯ ನೈತಿಕ ಹೊಣೆಯನ್ನು ರಾಜ್ಯಪಾಲರು ಹೊರಬೇಕು.
ಟಿ ಕರಣ್ ಕುಮಾರ್, ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಳಗಾವಿ
-ಶಶಿರೇಖಾ ಜಿ.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


