ಪ್ರಧಾನ ಸುದ್ದಿ

ಮೇಲ್ಮನೆ ನಾಮಕರಣ: ಶಾಂತಕುಮಾರ್ ನಿರ್ಲಕ್ಷ್ಯ ವಿರುದ್ಧ 'ಕೈ' ವರಿಷ್ಠರಿಗೆ ದೂರು

Published On :

ಬೆಂಗಳೂರು: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ನ ರಾಜ್ಯ ಶಾಖೆಯ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮ ವಿರೋಧಿಸಿ ಹೈಕಮಾಂಡ್‌ಗೆ ದೂರು ಸಲ್ಲಿಸಲಾಗಿದೆ.
ಶಾಂತಕುಮಾರ್ ಅವರನ್ನು ನೇಮಿಸಲು ಸೋನಿಯಾ ಗಾಂಧಿ, ದಿಗ್ವಿಜಯ್ ಸಿಂಗ್ ಹಾಗೂ ರಾಜ್ಯದ ಮುಖಂಡರು ಒಪ್ಪಿಗೆ ಸೂಚಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಶಾಂತಕುಮಾರ್ ಹೆಸರು ಕೈಬಿಡಲಾಗಿದೆ. ರಾಜ್ಯಪಾಲರ ಕಚೇರಿಗೆ ಪಟ್ಟಿ ಸೇರುವ ಹೊತ್ತಿಗೆ ಹೆಸರು ಬದಲಿಸಲಾಗಿದೆ. 36 ವರ್ಷಗಳಿಂದ ಪಕ್ಷಕ್ಕಾಗಿ ಕಾರ್ಮಿಕ ಮುಖಂಡರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಹಿರಿಯ ಮುಖಂಡರ ಸೂಚನೆಗೆ ವಿರುದ್ಧವಾಗಿ ನಾಮನಿರ್ದೇಶಿತರ ಪಟ್ಟಿ ತಯಾರಿಸಲಾಗಿದೆ ಎಂದು ರಾಜ್ಯ ಶಾಖೆಯ ಉಪಾಧ್ಯಕ್ಷ ಎನ್.ಆರ್.ಹೆಗಡೆ ದೂರಿನಲ್ಲಿ ತಿಳಿಸಿದ್ದಾರೆ.
ಸದನದಲ್ಲಿ ಕಾರ್ಮಿಕರ ಧ್ವನಿಯಾಗಬಲ್ಲ ನಾಯಕತ್ವ ಗುಣವನ್ನು ಶಾಂತಕುಮಾರ್ ಹೊಂದಿದ್ದಾರೆ. ಇದೇ ಕಾರಣದಿಂದ ಸೋನಿಯಾ ಗಾಂಧಿ, ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಆಸ್ಕರ್ ಫರ್ನಾಂಡಿಸ್ ಸಮ್ಮುಖದಲ್ಲಿ ನೇಮಕಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಕೊನೆಯ ಗಳಿಗೆ ಬದಲಾವಣೆಯಿಂದ ಕಾರ್ಮಿಕ ಸಮುದಾಯಕ್ಕೆ ನಿರಾಶೆ ಮೂಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮುಖಂಡರಿಗೆ ಪತ್ರ ಬರೆಯಲು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೆಗಡೆ ಹೇಳಿದ್ದಾರೆ. ಕಾರ್ಮಿಕರ ಏಳಿಗೆಗೆ ಸಂಬಂಧಿಸಿ ಟೋಕಿಯೋ, ಸಿಂಗಾಪುರ ಸೇರಿದಂತೆ ನಾನಾ ದೇಶಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಕುಮಾರ್ ಭಾಗವಹಿಸಿದ್ದಾರೆ. ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಪರ ವಾದ ಮಂಡಿಸಿದ್ದಾರೆ.  ಆರಂಭದಿಂದಲೂ ಕಾಂಗ್ರೆಸ್ ಹಾಗೂ ಬಡ ಕಾರ್ಮಿಕ ವರ್ಗದ ಪರ ಧ್ವನಿಯೆತ್ತಿರುವ ಶಾಂತಕುಮಾರ್ ಅವರನ್ನು ಕಡೆಗಣಿಸಿದ್ದು ಕಾರ್ಮಿಕರು, ಕ್ರಿಶ್ಚಿಯನ್ ಹಾಗೂ ತಮಿಳು ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಸಿಎಂ ಸೂಚನೆಯ ಮೇರೆಗೆ ರಾಜ್ಯಪಾಲರಿಗೆ ನಾಮನಿರ್ದೇಶನದ ಪಟ್ಟಿ ಕಳುಹಿಸಲಾಗುತ್ತದೆ. ಕೊನೆಯ ಕ್ಷಣದವರೆಗೂ ಹೈಕಮಾಂಡ್ ಸೂಚನೆಯಂತೆ ಶಾಂತಕುಮಾರ್ ಹೆಸರು ಇತ್ತು. ಪಕ್ಷದಲ್ಲಿನ ಆಂತರಿಕ ವಿಚಾರಗಳಿಂದ ಬೇರೆ ಹೆಸರು ಸೇರಿಸಲಾಗಿದೆ. ಈ ಬಗ್ಗೆ ಗಮನ ನೀಡಿ ಶಾಂತಕುಮಾರ್‌ಗೆ ನ್ಯಾಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ. ಮಂಗಳೂರಿನ ಮತ್ತೊಬ್ಬ ಕ್ರಿಶ್ಚಿಯನ್ ಮುಖಂಡರನ್ನು ನಾಮನಿರ್ದೇಶನ ಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.