ಪ್ರಧಾನ ಸುದ್ದಿ

ಬರಬೇಡವೆಂದರೂ ಬಂತು ಬರದ ಲಕ್ಷಣ

ಬರಬೇಡವೆಂದರೂ ಬಂತು ಬರದ ಲಕ್ಷಣ
Published On :

ರಾಜ್ಯಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಬಹುತೇಕ ಜಲಾಶಗಳಲ್ಲಿ ನೀರು ಕಡಿಮೆಯಾಗಿವೆ, ಮತ್ತೂ ಕೆಲವೆಡೆ ಹನಿ ನೀರೂ ಸಿಗುತ್ತಿಲ್ಲ. ಮಳೆಗಾಲ ಶುರುವಾದರೂ ಎಲ್ಲ ಜನರಿಗೂ ಸರಿಯಾಗಿ ಕುಡಿಯಲು ನೀರೂ ಸಿಗುತ್ತಿಲ್ಲ. ಬಿತ್ತನೆಗೆ ಭೂಮಿ ಹದಗೊಳಿಸಿಕೊಂಡಿರುವ ರೈತ ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ. ಇನ್ನು ಈಗಾಗಲೇ ಬಿತ್ತನೆ ಮಾಡಿದವರು ಶುಭ್ರ ಆಗಸ ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾತ್ರ ಎಲ್ಲದಕ್ಕೂ ತಾವು 'ಸಿದ್ಧ'ರಾಗಿದ್ದೇವೆ ಎಂಬ 'ಸಿದ್ಧ' ಉತ್ತರವನ್ನೂ ನೀಡುತ್ತಿದೆ. ಆದರೆ ಅಸಲಿ ವಿಷಯದ ಬಗ್ಗೆ ಕನ್ನಡಪ್ರಭ ರಿಯಾಲಿಟಿ ಚೆಕ್ ನಡೆಸಿದಾಗ ಕಂಡು ಬಂದ ಆಘಾತಕಾರಿ ಅಂಶವೆಂದರೆ, ಇನ್ನೂ ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಯಾವುದೇ ರೀತಿಯ 'ಸಿದ್ಧ'ತೆ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಏನಂತೀರಿ ಮುಖ್ಯಮಂತ್ರಿಗಳೇ..?

ಕೊಪ್ಪಳ
ಜೂನ್ ಕೊನೆ ವಾರಕ್ಕೆ (ಜೂ. 26ಕ್ಕೆ) ಕೇವಲ 3.7 ಸೆಂ.ಮೀ. ಮಳೆ (ವಾಡಿಕೆ 6.9 ಸೆಂ.ಮೀ.) ಆಗಿದೆ. ಜಿಲ್ಲಾದ್ಯಂತ ಮಳೆಯಾಶ್ರಿತ ಪ್ರದೇಶದಲ್ಲಿ ಸುಮಾರು 2.52 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿತ್ತು. ಈವರೆಗೂ ಕೇವಲ 49 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.
ಕೆರೆ, ನದಿ, ಜಲಾಶಯಗಳ ಮಾಹಿತಿ: ತುಂಗಭದ್ರಾ ಜಲಾಶಯದ ಒಳಹರಿವು ಕಡಿಮೆಯಾಗಿರುವುದರಿಂದ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲೂ ಆತಂಕ ಸೃಷ್ಟಿಯಾಗಿದೆ. ಹಿರೇಹಳ್ಳ ಜಲಾಶಯದಲ್ಲಿ ಈವರೆಗೂ ನೀರಿನ ಒಳಹರಿವು ಪ್ರಾರಂಭವೇ ಆಗಿಲ್ಲ. ಹಾಗಾಗಿ ಕಾಲುವೆಗೆ ನೀರು ಹರಿಸಲಾಗಿಲ್ಲ. ಅಕಾಲಿಕ ಮಳೆಯಾಗಿದ್ದರಿಂದ ನದಿ, ಜಲಾಶಯಗಲ್ಲಿ ಹಾಗೂ ಕೆರೆ ಕಟ್ಟೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಆದರೆ, ಇನ್ನೊಂದು ವಾರ ಮಳೆ ಆಗದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ.
ಸಿದ್ಧವಾಗದ ಜಿಲ್ಲಾಡಳಿತ: ಮಳೆ ಅಭಾವ ಇದ್ದು, ಬರದ ಛಾಯೆ ಆವರಿಸಿದ್ದರೂ ಈವರೆಗೆ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ವಹಿಸಿಯೇ ಇಲ್ಲ.

ಯಾದಗಿರಿ
ಜಿಲ್ಲೆಯಾದ್ಯಂತ ಜೂನ್‌ನಲ್ಲಿ 117 ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆಗಿದ್ದು 18.2 ಮಿ.ಮೀ.
ಬಿತ್ತನೆ: ಒಟ್ಟು 2,66,192 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 5353 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದೆ.
ಜಲಾಶಯ: ಮಳೆ ಹೆಚ್ಚಾಗಿ ಆಗದ ಕಾರಣ ನಾರಾಯಣಪುರ ಜಲಾಶಯದಲ್ಲಿ ಒಳ, ಹೊರ ಹರಿವು ಇಲ್ಲ. ಇಲ್ಲಿ 17 ಟಿಎಂಸಿ ಲಭ್ಯವಿದ್ದು, 2.5 ಟಿ.ಎಂ.ಸಿ ಕುಡಿಯಲು ಉಪಯೋಗಿಸಲಾಗುತ್ತಿದೆ.
ಜಿಲ್ಲಾಡಳಿತದ ಕ್ರಮ: ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರದ ಭೀತಿಯಿದೆ. ಜಿಲ್ಲಾಡಳಿತದಿಂದ ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 276 ಕೊಳವೆ ಭಾವಿ ಕೊರೆಸಲಾಗಿದ್ದು, ಪೈಪ್‌ಲೈನ್ ಅಳವಡಿಕೆ ನಡೆದಿದೆ. ಕೊಳವೆ ಬಾವಿ ಕೊರೆದರೂ ನೀರು ಬೀಳದಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ.


ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ 2014ನೇ ಜನವರಿಯಿಂದ ಜೂ. 25ರವರೆಗೆ 684.59 ಮಿ.ಮೀ. ಮಳೆಯಾಗಿದೆ. ಸುಮಾರು 1116 ಮಿ.ಮೀ. ಮಳೆ ಆಗಬೇಕಿತ್ತು. 2013ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ 1203.9 ಮಿ.ಮೀ. ಮಳೆ ಸುರಿದಿತ್ತು. ವಾಡಿಕೆಯಂತೆ ಜೂನ್ ತಿಂಗಳಿನಲ್ಲಿ 914.8 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಜೂ. 25ರವರೆಗೆ ಸುರಿದದ್ದು ಒಟ್ಟು 446.7 ಮಿ.ಮೀ. ಮಳೆ.
ಕಡಿಮೆ ಬಿತ್ತನೆ: ಜಿಲ್ಲೆಯಲ್ಲಿ ಬತ್ತ ಬಿತ್ತನೆ ಕಾರ್ಯ ಆರಂಭಗೊಂಡಿದ್ದು, 33 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದೆ. ಈ ಬಾರಿ ಒಟ್ಟು 1710 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. 2013ನೇ ಸಾಲಿನಲ್ಲಿ 2527 ಹೆಕ್ಟೇರ್ ಬತ್ತ ಬಿತ್ತನೆ ಮಾಡಲಾಗಿತ್ತು.
ಕೆರೆಗಳ ಮಾಹಿತಿ:  ದ.ಕ. ಜಿಲ್ಲೆಯ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 159 ಕೆರೆಗಳಿವೆ. ಇವುಗಳಲ್ಲಿ ಶೇ.50 ಕೆರೆಗಳಲ್ಲಿ ಬೇಸಗೆಯಲ್ಲಿ ನೀರು ಬತ್ತಿ ಹೋಗಿದೆ. ಈ ಮಳೆಗಾಲದಲ್ಲೇ ಈ ಕೆರೆಗಳು ತುಂಬಬೇಕಿವೆ.
ಜಿಲ್ಲಾಡಳಿತದ ಕ್ರಮ: ಯಾವುದೇ ತಾಲೂಕು ಬರ ಪೀಡಿತ ಎಂಬುದಾಗಿ ಇಲ್ಲಿಯವರೆಗೆ ಘೋಷಣೆಯಾಗಿಲ್ಲ. ಇತ್ತೀಚೆಗೆ ಒಂದು ಸುತ್ತು ಮಳೆ ಬಂದಿದ್ದರಿಂದ ತೊರೆಗಳಲ್ಲಿ ನೀರಿನ ಒರತೆ ಕಂಡುಬರುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.


ಬೀದರ್
ಬೀದರ್ ತಾಲೂಕಿನಲ್ಲಿ ಜೂನ್‌ನಲ್ಲಿ 14.9 ಸೆಂ.ಮೀ. ಮಳೆಯಾಗಬೇಕಿತ್ತು. ಇಲ್ಲಿವರೆಗೆ 0.182 ಸೆ.ಮೀ. ಮಳೆಯಾಗಿದ್ದರೆ, ಭಾಲ್ಕಿಯಲ್ಲಿ 4.24 ಸೆ.ಮೀ, ಬಸವಕಲ್ಯಾಣದಲ್ಲಿ 4.4 ಸೆಂ.ಮೀ, ಹುಮನಾಬಾದ್‌ನಲ್ಲಿ 5.74 ಸೆಂ.ಮೀ., ಔರಾದ್‌ನಲ್ಲಿ 2.38 ಸೆ.ಮೀ. ಮಳೆಯಾಗಿದೆ. ಜೂನ್‌ನಲ್ಲಿ ಒಟ್ಟಾರೆ 12.72 ಸೆಂ.ಮೀ. ಮಳೆಯಾಗಬೇಕಿತ್ತು, ಈವರೆಗೆ 3.72 ಸೆ.ಮೀ. ಮಾತ್ರ ಮಳೆಯಾಗಿದೆ.
ಬಿತ್ತನೆ: ಜಿಲ್ಲೆಯಲ್ಲಿ 3.39 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ. ಇಲ್ಲಿವರೆಗೆ ಶೇ.70 ಬಿತ್ತನೆ ಆಗಬೇಕಿದ್ದು ಶೇ. 1ರಷ್ಟೂ ಆಗಿಲ್ಲ. 100 ಎಕರೆ ಮಾತ್ರ ಬಿತ್ತನೆಯಾಗಿದೆ.
ಒಳಹರಿವಿಲ್ಲ: ಜಲಾಶಯ ಕಾರಂಜಾಕ್ಕೆ 6 ತಿಂಗಳಿಂದ ಒಳಹರಿವಿಲ್ಲ. ಸದ್ಯ 2.83 ಟಿಎಂಸಿ ಸಂಗ್ರಹವಿದ್ದು ಇದರಲ್ಲಿ 0. 59 ಟಿಎಂಸಿ ನೀರು ಬೀದರ್, ಭಾಲ್ಕಿ ಹಾಗೂ ಹುಮನಾಬಾದ್ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜಿಗಾಗಿ ಮೀಸಲಿಡಲಾಗಿದೆ.
ಜವಾಬ್ದಾರಿಯಿಲ್ಲ: ಅಗತ್ಯಕ್ಕೆ ತಕ್ಕಂತೆ ನೀರಿನ ಸಂಗ್ರಹ ಇದೆ. ಆದರೆ ನಗರ ನೀರು ಸರಬರಾಜು ಮಂಡಳಿ, ನಗರಸಭೆ ತಿಕ್ಕಾಟದಿಂದ ಬೀದರ್‌ಗೆ ಕುಡಿಯುವ ನೀರಿನ ಸರಿಯಾಗಿ ಸಿಗುತ್ತಿಲ್ಲ. ಮಳೆ ಬರುಬಹುದು ಎಂಬ ನಿರೀಕ್ಷೆ ಬಿಟ್ಟರೆ, ಬರ ಎದುರಿಸಲು ಜಿಲ್ಲಾಡಳಿತ ಈವರೆಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ.

ಕೊಡಗು
ಜೂನ್ ಮೊದಲ ವಾರದಲ್ಲೇ ಕೊಡಗಿಗೆ ಮುಂಗಾರು ಪ್ರವೇಶವಾಗುತ್ತದೆ. ಜೂನ್ ಮುಗಿಯುತ್ತಾ ಬಂದರೂ ಮಳೆ ಇಲ್ಲ. ಈವರೆಗೆ ಜಿಲ್ಲೆಯಲ್ಲಿ 54 ಸೆಂ.ಮೀ. ಮಳೆಯಾಗಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳ ತವರಿನಲ್ಲೇ ಬರದ ಆತಂಕ ಎದುರಾಗಿದೆ.
ಬಿತ್ತನೆ: ಮಳೆ ಕೊರತೆಗೆ ಬತ್ತದ ಸಸಿಮಡಿ ನಾಟಿ ವಿಳಂಬ. ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ಬತ್ತ ಕೃಷಿ ಗುರಿಯಿದ್ದು, ಸಕಾಲದಲ್ಲಿ ಮಳೆಯಾಗದ್ದರಿಂದ ಇನ್ನೂ ಸಸಿಮಡಿ ಆರಂಭಿಸಿಲ್ಲ. 3500 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿಯಿದ್ದು 2950 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.
ಕೆರೆ, ನದಿ, ಜಲಾಶಯಗಳ ಮಾಹಿತಿ: ಹಾರಂಗಿಯ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 2859 ಅಡಿ. ಈಗ ಇಲ್ಲಿ 2822 ಅಡಿ ನೀರಿನ ಸಂಗ್ರಹವಿದೆ. ಜಲಾಶಯ ಭರ್ತಿಗೆ ಇನ್ನೂ 37 ಅಡಿ ನೀರು ಬೇಕಾಗಿದೆ.
ಜಿಲ್ಲಾಡಳಿತ ಮುಂಜಾಗ್ರತೆ: ಕಾಫಿ, ಕರಿಮೆಣಸು, ಏಲಕ್ಕಿ, ಬತ್ತದ ಬೆಳೆಗಳಿಗೆ ಅಗತ್ಯ ಮಳೆ ದೊರಕದೇ ಇರುವುದರಿಂದಾಗಿ ವಾಣಿಜ್ಯ ಬೆಳೆಗಳ ಕೃಷಿಕರಿಗೆ ಸಮಸ್ಯೆ ತಲೆದೋರಲಿದೆ. ಜಿಪಂನಲ್ಲಿ ಈಗಾಗಲೇ ಕೊಡಗನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿದೆ.


ಚಾಮರಾಜನಗರ
ಜಿಲ್ಲಾದ್ಯಂತ 21 ದಿನಗಳಿಂದ ಮಳೆಯಿಲ್ಲ. 279 ಮಿ.ಲೀ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 243 ಮಿ.ಮೀ.ನಷ್ಟಾಗಿದ್ದು (24. 3 ಸಿ.ಎಂ) ಶೇ. 15ರಷ್ಟು ಮಳೆ ಕೊರತೆಯಾಗಿದೆ. 1.57 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಇತ್ತು. 59,339 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಪೂರ್ವ ಮುಂಗಾರಿಗೆ ಗುಂಡ್ಲುಪೇಟೆ ತಾಲೂಕಿನಲ್ಲಿ 37,780 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮುಂಗಾರಿಗೆ ಬಿತ್ತನೆಯಾಗುವ ಕೊಳ್ಳೇಗಾಲ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲೂಕಿನ ಹೆಚ್ಚಿನ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಜೋಳ, ಮುಸುಕಿನ ಜೋಳ, ದ್ವಿದಳ ಧಾನ್ಯ, ಎಳ್ಳು ಬೆಳವಣಿಗೆ ಹಂತದಲ್ಲಿದ್ದು, ಇಳುವರಿ ಕೊರತೆ ಭೀತಿ ಎದುರಾಗಿದೆ. 2012-13ರ ಬರ ಪರಿಹಾರದಡಿ ಬೋರ್‌ವೆಲ್‌ಗಳನ್ನು ಕೊರೆಸಿದ್ದರಿಂದ ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಇಲ್ಲ. ಜಾನುವಾರುಗಳಿಗೆ ಮೇವಿನ ಕೊರತೆಯೂ ಇಲ್ಲ.

ಗದಗ
ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತೀವ್ರ ಕುಸಿದಿದೆ. ಬಿತ್ತನೆಯಾಗಿರುವ ಬೆಳೆಗಳು ಒಣಗುತ್ತಿವೆ. ಜೂನ್ ಅಂತ್ಯಕ್ಕೆ 87 ಮಿ.ಮೀ. ವಾಡಿಕೆ ಮಳೆಬೇಕಿತ್ತು. ಈವರೆಗೆ 45 ಮಿ.ಮೀ. ಆಗಿದ್ದು, ಶೇ. 42 ಮಳೆ ಕೊರತೆ ಇದೆ.
ಬಿತ್ತನೆ:  ಜೂನ್ ಅಂತ್ಯಕ್ಕೆ 1.70 ಲಕ್ಷಕ್ಕೂ ಹೆಕ್ಟೇರ್ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. 35 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 1.35 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ಬಿತ್ತನೆಗಾಗಿ ಕಾಯುತ್ತಿದ್ದಾರೆ.
ನದಿ, ಕೆರೆ, ಜಲಾಶಯಗಳು:  ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಮಲಪ್ರಭಾ ನದಿ ಹರಿದಿದ್ದು, ಎರಡೂ ನದಿಗಳಲ್ಲಿ ನೀರು ಕಡಿಮೆಯಾಗಿದೆ. ಜಲಕ್ಷಾಮ ಶುರುವಾಗಿದ್ದು, ಗದಗ- ಬೆಟಗೇರಿ ನಗರಗಳಿಗೆ 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ ರೈತರ ಹೊಲಗಳಿಗೆ ನೀರುಣಿಸುವ 3 ಬೃಹತ್ ಕೆರೆಗಳಿದ್ದು, ಅವುಗಳಲ್ಲಿ ನೀರಿಲ್ಲ. ಐತಿಹಾಸಿಕ 504 ಎಕರೆಯ ಡಂಬಳ ವಿಕ್ಟೋರಿಯಾ ಮಹಾರಾಣಿ ಕೆರೆ ಸಂಪೂರ್ಣ ಬತ್ತಿ ಹೋಗಿದೆ.
ಜಿಲ್ಲಾಡಳಿತ ಸಜ್ಜು:  ಜಿಲ್ಲಾಡಳಿತ ಕುಡಿವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ವಿಶೇಷ ಸಮಿತಿ ರಚಿಸಿ, ಅದಕ್ಕಾಗಿ ಒಂದು ಪ್ರತ್ಯೇಕ ವಿಭಾಗ ತೆರೆದಿದೆ. ಜಿಲ್ಲೆಯ 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.

ಮೈಸೂರು ಜಿಲ್ಲೆ
ಜಿಲ್ಲೆಯಲ್ಲಿನ ವಾರ್ಷಿಕ ವಾಡಿಕೆ ಮಳೆ 80 ಸೆಂ.ಮೀ. ಜೂ. 26ರವರೆಗಿನ ಸಂಚಿತ ವಾಡಿಕೆ ಮಳೆ 28.4 ಸೆಂ.ಮೀ. ಈವರೆಗೆ ಆಗಿದ್ದು 27. 1 ಸೆಂ.ಮೀ.
ಕಬಿನಿ ಜಲಾಶಯ ಮಟ್ಟ:  ಟ ಗರಿಷ್ಠ ಮಟ್ಟ- 2284 ಅಡಿ ಟ ಇಂದಿನ ಮಟ್ಟ- 2271.60 ಟ ಒಳಹರಿವು- 2100 ಕ್ಯುಸೆಕ್ ಟ ಹೊರಹರಿವು- 4400 ಕ್ಯುಸೆಕ್
ನದಿ- ಕೆರೆ ಕಟ್ಟೆಗಳು: ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಹರಿಯುತ್ತವೆ. ನುಗು, ತಾರಕ ನೀರಾವರಿ ಯೋಜನೆಗಳಿವೆ.
ಬಿತ್ತನೆ: ಗುರಿ- 4.19 ಲಕ್ಷ ಹೆಕ್ಟೇರ್, ಬಿತ್ತನೆ- 2.12 ಲಕ್ಷ ಹೆಕ್ಟೇರ್
ನೀರು: ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ತಾಲೂಕಿನ 19 ಗ್ರಾಮಗಳಲ್ಲಿ ತೀವ್ರ ಸಮಸ್ಯೆ ಇದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಕ್ರಮ ಏನು?: ಜಿಲ್ಲೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಇನ್ನೂ 10 ದಿನ ಮಳೆಯಾಗದಿದ್ದಲ್ಲಿ ಸಮಸ್ಯೆ ಉಂಟಾಗುತ್ತದೆ. ಜಿಲ್ಲಾಡಳಿತ ಪರ್ಯಾಯ ಬೆಳೆ ಯೋಜನೆ ಸಿದ್ಧ ಮಾಡುತ್ತಿದೆ. ಕುಡಿಯುವ ನೀರಿಗೆ ಜಿಲ್ಲಾಧಿಕಾರಿ ಹಾಗೂ ಜಿಪಂನಲ್ಲಿ ಸಾಕಷ್ಟು ಅನುದಾನ ಇದೆ.


ರಾಮನಗರ
ಜಿಲ್ಲೆಯ ವಾಡಿಕೆ ಮಳೆ 25 ಸೆ.ಮೀ. ಅದಕ್ಕಿಂತಲೂ 1 ಸೆಂ.ಮೀ. ಅಧಿಕ (26 ಸೆಂ.ಮೀ.) ಮಳೆ ಸುರಿದಿದೆ. ಆದರೆ, ಬೇಸಾಯಕ್ಕೆ ಅನುಕೂಲವಾಗುವಂತೆ ಕಾಲ ಕಾಲಕ್ಕೆ ಮಳೆಯಾಗಿಲ್ಲ. ಮುಂಗಾರು ಪ್ರಾರಂಭ ಆದಾಗಿನಿಂದ ಈವರೆಗೆ ಮಳೆ ಬಂದಿಲ್ಲ. ಮುಂಗಾರು ಬಾರದೆ ದ್ವಿದಳ ಧಾನ್ಯ, ಮೇವಿನ ಬೆಳೆಗಳಿಗೆ ಅಡ್ಡಿಯಾಗಿದೆ.
ಕೆರೆ, ನದಿ, ಜಲಾಶಯಗಳು: ಜಿಲ್ಲೆಯಲ್ಲಿ ಗರಿಷ್ಠ 1 ಟಿಎಂಸಿ ನೀರು ತುಂಬುವ ಸಣ್ಣ ಅಣೆಕಟ್ಟೆಗಳಷ್ಟೇ ಇವೆ. ಕಣ್ವ, ವೈ.ಜಿ. ಗುಡ್ಡ, ಮಂಚನಬಲೆ ಸಹಿತ ಬಹುತೇಕ ಅಣೆಕಟ್ಟೆ, ಕೆರೆಗಳು ಬರಿದಾಗಿವೆ. ನೀರು, ಕೃಷಿಗಾಗಿ ಕೊರೆಸಲ್ಪಟ್ಟ ಶೇ.60ರಷ್ಟು ಕೊಳವೆ ಬಾವಿಗಳು ವಿಫಲವಾಗಿವೆ.
ಜಿಲ್ಲಾಡಳಿತ ಕ್ರಮ:  ಜಿಲ್ಲೆಯಲ್ಲಿ ಕುಡಿಯುವ ನೀರಿನ ವಿಷಯವಾಗಿ 70ಕ್ಕೂ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ಮತ್ತು ನಗರ ಪ್ರದೇಶಗಳ 8 ವಾರ್ಡ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ತುರ್ತು ಕಾಮಗಾರಿಗಳ ಸಂಬಂಧ ಸರ್ಕಾರಕ್ಕೆ 17 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಕೆಯಾಗಿತ್ತಾದರೂ ಬಿಡುಗಡೆಗೊಂಡಿರುವುದು 2.63 ಕೋಟಿ ಮಾತ್ರ. ಇನ್ನು ಶಾಸಕರಿಗೆ ತಲಾ 1 ಕೋಟಿ ಅನುದಾನ ಬಂದಿದೆ. ಅದರಲ್ಲೇ ಸಮಸ್ಯೆ ನೀಗಿಸಬೇಕಿದೆ.

ಧಾರವಾಡ
ಜಿಲ್ಲೆಯಲ್ಲಿ ಜೂ. 25ರ ವರೆಗೆ ಒಟ್ಟಾರೆ 22.7 ಸೆ.ಮೀ. ಮಳೆಯಾಗಬೇಕಿತ್ತು. ಈ ಪೈಕಿ 23.6 ಸೆಂ.ಮೀ.ನಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ 2,07,615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ.  ಆಗಿದ್ದು 1,20,343 ಹೆಕ್ಟೇರ್ ಅಷ್ಟೆ. ಈ ಮೊದಲು ಬಿತ್ತಿದ್ದ ಪ್ರದೇಶರ್ದಲ್ಲಿ ಮಳೆಯಾಗದ ಕಾರಣ ಬೆಳೆಗಳು ಒಣಗಿವೆ.
ಕೆರೆ:  ಕುಂದಗೋಳ, ನವಲಗುಂದ ತಾಲೂಕುಗಳ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಈ ತಾಲೂಕುಗಳ ಕೆರೆ-ಕಟ್ಟೆಗಳೆಲ್ಲವೂ ಬತ್ತಿ ಹೋಗಿವೆ.
ಜಿಲ್ಲಾಡಳಿತ ಕ್ರಮ: ನೀರಿನ ಸಮಸ್ಯೆಯಿರುವ ಕುಂದಗೋಳ ತಾಲೂಕಿನ 16 ಗ್ರಾಮಗಳೂ ಸೇರಿ ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮಗಳಿಗೆ ನಿತ್ಯ ಒಟ್ಟು 80 ಟ್ರಿಪ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಹುಬ್ಬಳಿ: ಇನ್ನು, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಸರಬರಾಜು ಮಾಡುವ ಸವದತ್ತಿಯ ಮಲಪ್ರಭಾ ನದಿಯಲ್ಲಿ ಸಾಕಷ್ಟು ನೀರಿದೆ. ಪ್ರತಿ ದಿನ ಅವಳಿ ನಗರಕ್ಕೆ 0.16 ಟಿಎಂಸಿ ನೀರು ಬೇಕು. ಸದ್ಯ ಮಲಪ್ರಭಾ ಜಲಾಶಯದಲ್ಲಿ 0.90 ಟಿಎಂಸಿ ನೀರಿದೆ. ಜುಲೈ ಮೊದಲ ವಾರದ ವರೆಗೂ ಮಳೆಯಾಗದಿದ್ದರೆ ಬೆಳೆ ಹಾಗೂ ದನಕರುಗಳಿಗೆ ತೊಂದರೆಯಾಗುತ್ತದೆ.

ಗುಲ್ಬರ್ಗ  
ಜೂನ್ ತಿಂಗಳ ವಾಡಿಕೆ ಮಳೆ 210 ಮಿ.ಮೀ. ಆದರೆ ಶೇ.25ರಷ್ಟೂ ಮಳೆ ಸುರಿದಿಲ್ಲ. ಮುಂಗಾರು ಬಿತ್ತನೆ ಸಂಪೂರ್ಣ ಸ್ಥಗಿತ. ಶೇ.10 ರಷ್ಟೂ ಬಿತ್ತನೆ ಕಂಡಿಲ್ಲ.
ಕೆರೆ, ನದಿ, ಜಲಾಶಯ: ಜಿಲ್ಲೆಯ ಪ್ರಮುಖ ಜೀವನದಿ ಭೀಮಾ ಬತ್ತಿ ಹೋಗಿದೆ. ಗುಲ್ಬರ್ಗ ಮಹಾನಗರಕ್ಕೆ ಭೀಮಾ ನದಿಯೇ ಜಲಮೂಲ. ಸರಡಗಿ ಬಳಿ ಭೀಮೆಗೆ ನಿರ್ಮಿಸಲಾಗಿರುವ ಬಾಂದಾರಲ್ಲಿ 25 ಅಡಿ ಮಾತ್ರ ನೀರಿದೆ. ಇನ್ನು ವಾರ ಮಳೆ ಬಾರದೆ ಹೋದಲ್ಲಿ ನಗರದಲ್ಲಿ ನೀರಿಗೆ ಹಾಹಾಕಾರ ನಿಶ್ಚಿತ. ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಮರುಕಳಿಸುತ್ತಿದೆ. ಮೂಲಗಳ ಪ್ರಕಾರ ಜಿಲ್ಲೆಯ ತಾಂಡಾಗಳು ಹಾಗೂ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗಾಗಿ ಜನ ಪರಿತಪಿಸುವಂತಾಗಿದೆ.
ಜಿಲ್ಲಾಡಳಿತ ಏನು ಮಾಡ್ತಿದೆ?: ಬರಗಾಲ ಜಿಲ್ಲೆಯನ್ನಾವರಿಸಿದೆ. ಸರ್ಕಾರ ತಕ್ಷಣ ಪರಿಹಾರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿ ಎಂಬ ಆಗ್ರಹ ಕೇಳಿಬರುತ್ತಿವೆ. ಜಿಲ್ಲಾಡಳಿತ ಇನ್ನೂ ಬರ ಎದುರಿಸಲು ಸಜ್ಜಾಗಬೇಕಿದೆ. ಇಂದಿಗೂ ಬರಗಾಲ ಪರಿಸ್ಥಿತಿ ಚರ್ಚಿಸಲು ಒಂದೂ ಸಭೆ ನಡೆದಿಲ್ಲ.

ರಾಯಚೂರು
ಜಿಲ್ಲೆಯಲ್ಲಿ ವಾಡಿಕೆ ಮಳೆ (ಜೂನ್ ಅಂತ್ಯದವರೆಗೆ) 13.50 ಸೆಂ.ಮೀ. ಸುರಿದಿದ್ದು 10.1 ಸೆಂಮೀ. ಅಷ್ಟೇ.
ನದಿಗಳು, ಕೆರೆಗಳು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿವೆ. ಸದ್ಯಕ್ಕೆ ನೀರಿದೆ. ಸಿಂಧನೂರು, ಮಾನವಿ ಮತ್ತು ರಾಯಚೂರು ತಾಲೂಕು ಹಾಗೂ ನಗರಕ್ಕೆ ಕುಡಿಯುವ ನೀರು ಒದಗಿಸಲು 200ಕ್ಕೂ ಹೆಚ್ಚು ಕೆರೆಗಳಲ್ಲಿ ಮಾರ್ಚ್‌ನಲ್ಲಿ ನೀರು ತುಂಬಲಾಗಿತ್ತು.
ಬಿತ್ತನೆ: ಜಿಲ್ಲೆಯಲ್ಲಿ ಬಿತ್ತನೆ ಗುರಿ ಒಟ್ಟು 3,07,100 ಹೆಕ್ಟೇರ್. ಬಿತ್ತನೆಯಾಗಿದ್ದು 4098 ಹೆಕ್ಟೇರ್. ನೀರಾವರಿ ಬಿತ್ತನೆ ಗುರಿ 142150 ಹೆಕ್ಟೇರ್. ಬಿತ್ತನೆಯಾಗಿದ್ದು 2281 (ಶೇ.2ರಷ್ಟು). ಮಳೆಯಾಧರಿತ ಪ್ರದೇಶದಲ್ಲಿ ಬಿತ್ತನೆ ಗುರಿ 164950 ಹೆಕ್ಟೇರ್. ಈಗ ಬಿತ್ತನೆಯಾಗಿರುವ ಪ್ರದೇಶ 1870 ಹೆಕ್ಟೇರ್.(ಶೇ.1 ರಷ್ಟು).
ನೀರು:   ಸದ್ಯಕ್ಕೆ ನೀರಿನ ಅಭಾವವಿಲ್ಲ. ಆದರೆ ಮಳೆ ಮತ್ತಷ್ಟು ವಿಳಂಬವಾದರೆ ನೀರಿಗೆ ಪರದಾಟ ನಿಶ್ಚಿತ.
ಜಿಲ್ಲಾಡಳಿತದ ಸಿದ್ಧತೆ:  ಜಿಲ್ಲೆಯ ರಾಯಚೂರು, ಸಿಂಧನೂರು ಹೊರತುಪಡಿಸಿ ದೇವದುರ್ಗ, ಲಿಂಗಸ್ಗೂರು, ಮಾನವಿ ತಾಲೂಕುಗಳಲ್ಲಿ ಮಳೆ ತೀರಾ ಕಡಿಮೆ. ಬರ ಪರಿಸ್ಥಿತಿಯಿದೆ. ಜಿಲ್ಲಾಡಳಿತ ಜೂ. 30ರವರೆಗೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಜೂ.30ರ ನಂತರವಷ್ಟೇ ಬರ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಿದೆ.

ದಾವಣಗೆರೆ
ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ 191 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಈವರೆಗೆ 186.8 ಮಿ.ಮೀ. ಮಳೆಯಾಗಿದೆ. ಜೂನ್‌ನಲ್ಲಿ ವಾಡಿಕೆ ಮಳೆ 68 ಮಿ.ಮೀ. ಆಗಿದ್ದು, ಈವರೆಗೆ ಸರಾಸರಿ 58 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಕೆಲವೆಡೆ ಮಾತ್ರ ಮಳೆಯಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಳಿಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ 3.40 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ.30ರಷ್ಟು ಬಿತ್ತನೆ ಮಾಡಲಾಗಿದೆ.
ಬತ್ತುತ್ತಿರುವ ಕೆರೆ, ಜಲಾಶಯ:  ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಒಣಗಲಾರಂಭಿಸಿವೆ. ಭದ್ರಾ, ತುಂಗಾ ಡ್ಯಾಂನಲ್ಲೂ ನೀರು ಸಂಗ್ರಹಣಾ ಸಾಮರ್ಥ್ಯ ಕುಸಿಯುತ್ತಿದೆ. ಸಾಕಷ್ಟು ಕೊಳವೆ ಬಾವಿಗಳೂ ಬತ್ತಿ ಹೋಗಿವೆ. ಕೆಲವು ಕಡೆ ನೀರಿದ್ದರೂ, ಫ್ಲೋರೈಡ್ ಅಂಶ ಹೆಚ್ಚಿದೆ. ನೀರಿನ ಕೊರತೆ ಇರುವೆಡೆ ಟ್ಯಾಂಕರ್ ನೀರು ಪೂರೈಸುವ ಕೆಲಸ ನಡೆದಿದೆ. ಜಿಲ್ಲಾಡಳಿತ, ಜಿಪಂ ಸಹ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

 ತುಮಕೂರು
ಜಿಲ್ಲೆಯಲ್ಲಿ ಈವರೆಗೆ ಬಿದ್ದಿರುವ ಮಳೆ ಪ್ರಮಾಣ 4.66 ಸೆ.ಮೀ. ಜೂ. 14ರಿಂದ ಇಲ್ಲಿಯವರೆಗೆ ಮಳೆಯೇ ಬಿದ್ದಿಲ್ಲ. ಬಹುತೇಕ ಎಲ್ಲಾ ಕೆರೆಕಟ್ಟೆಗಳು ಒಣಗಿವೆ. 4.4 ಲಕ್ಷ ಹೆಕ್ಟೇರ್‌ನಲ್ಲಿ 79,950 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಈಗ ಕೇವಲ 24,613 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಕೇವಲ 5 ವಾರಗಳಿಗೆ ಸಾಕಾಗುವಷ್ಟು ಮೇವಿದೆ. ನೀರು ತಳಮುಟ್ಟಿದೆ. ಒಂದು ಸಾವಿರ ಅಡಿ ಕೊರೆದರೂ ನೀರಿಲ್ಲ. ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಸಲು ಆಗುತ್ತಿಲ್ಲ. ತಾಲೂಕಿನ ಕೆಲವೇ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಸದ್ಯ ಗೋಶಾಲೆ ನಿರ್ಮಿಸಿಲ್ಲ. ಈಗಾಗಲೇ ಜಿಲ್ಲಾಡಳಿತ ನಿರಂತರ ಸಭೆ ನಡೆಯುತ್ತಿದೆ.

ಬಿಜಾಪುರ
ಜಿಲ್ಲೆಯಲ್ಲಿ 30.4 ಮಿ.ಲೀ. ಮೀಟರ್ ಮಳೆ ಬಿದ್ದಿದೆ. ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ 507.37 ಮೀಟರ್ ನೀರು ಸಂಗ್ರಹವಿದೆ. ಒಳ, ಹೊರ ಹರಿವು ಇಲ್ಲ. ಮಳೆಯಿಲ್ಲದೆ ಬಿತ್ತನೆ ಕುಂಠಿತ. ಶೇ.4ರಷ್ಟು ಬಿತ್ತನೆ.
ನೀರಿಲ್ಲ: ಜಿಲ್ಲೆಯಲ್ಲಿ ಕೃಷ್ಣಾ, ಡೋಣಿ ಹಾಗೂ ಭೀಮಾ ನದಿಗಳಿದ್ದು, ಕೃಷ್ಣಾ ಮತ್ತು ಭೀಮಾ ನದಿಯಲ್ಲಿ 15-20 ದಿನಗಳವರೆಗೆ ಸಾಕಾಗುವಷ್ಟು ಅತ್ಯಲ್ಪ ಪ್ರಮಾಣದ ನೀರು ಸಂಗ್ರಹವಿದೆ. ಡೋಣಿ ನದಿ ಸಂಪೂರ್ಣ ಬತ್ತಿದೆ.
ಸಜ್ಜಾಗಿಲ್ಲ: ಗ್ರಾಮೀಣದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಬಿಟ್ಟರೆ, ಇತರ ಯಾವುದೇ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿಲ್ಲ.

 ಬಾಗಲಕೋಟೆ
ಜೂನ್‌ವರೆಗೆ ಜಿಲ್ಲೆಯ ವಾಡಿಕೆ ಮಳೆ 16.68 ಸೆ.ಮೀ. ಇದ್ದು, 21.98 ಸೆ.ಮೀ ಮಳೆ ಬಿದ್ದಿದೆ.
ಬಿತ್ತನೆ: 1.22 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ. ಕೇವಲ 40 ಸಾವಿರ ಹೆಕ್ಟೇರಿನಲ್ಲಿ ಬಿತ್ತನೆ. 86900 ಹೆಕ್ಟೇರ್ ಕಬ್ಬು ಬಿತ್ತನೆ ಗುರಿ ಇದ್ದು 86164 ಹೆಕ್ಟೇರ್ ಬಿತ್ತನೆಯಾಗಿದೆ.
ಜಲಾಶಯ: ಹಿಪ್ಪರಗಿ ಜಲಾಶಯದಲ್ಲಿ ಅರ್ಧ ಟಿಎಂಸಿಯಷ್ಟು ನೀರಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ 179 ಹಾಗೂ ಜಲಸಂಪನ್ಮೂಲ ವ್ಯಾಪ್ತಿಯಲ್ಲಿ 37 ಕೆರೆಗಳಿವೆ. ಎಲ್ಲೂ ನೀರಿಲ್ಲ.
ಜಿಲ್ಲಾಡಳಿತ ಸಜ್ಜು: ಬರ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಖಾತ್ರಿಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ.

ಬೆಳಗಾವಿ
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ 105.5 ಮಿ.ಮೀ ಮಳೆ ಆಗಬೇಕಿತ್ತು. ಆದರೆ, ಈವರೆಗೆ 78.2 ಮಿ.ಮೀ ಮಾತ್ರ ಮಳೆಯಾಗಿದೆ. ಶೇ. 26 ರಷ್ಟು ಮಳೆ ಕೈಕೊಟ್ಟಿದೆ.
ಬಿತ್ತನೆ: ಜಿಲ್ಲೆಯಲ್ಲಿ ಶೇ. 80 ರಷ್ಟು ಆಗಬೇಕಿದ್ದ ಬಿತ್ತನೆ ಕಾರ್ಯ ಈಗ ಕೇವಲ ಶೇ. 35 ರಷ್ಟಾಗಿದೆ.
ಜಲಾಶಯಗಳ ಸ್ಥಿತಿ: ಘಟಪ್ರಭಾ ಜಲಾಶಯದ ಗರಿಷ್ಠ ಮಟ್ಟ 2175 ಅಡಿ ,ಇಂದಿನ ಮಟ್ಟ  2068.16 ಅಡಿ, 336 ಕ್ಯುಸೆಕ್ ಒಳಹರಿವಿದೆ. 86 ಕ್ಯುಸೆಕ್ ಹೊರಹರಿವಿದೆ. ಮಲಪ್ರಭಾ ಜಲಾಶಯದ ಗರಿಷ್ಠ ಮಟ್ಟ 2079.50 ಅಡಿ, ಇಂದಿನ ಮಟ್ಟ 2035. 88 ಅಡಿ, ಒಳ ಹರಿವಿಲ್ಲ. 124 ಕ್ಯುಸೆಕ್ ಹೊರ ಹರಿವಿದೆ. ಅಂತರ್ಜಲಮಟ್ಟ ಪಾತಾಳ ಸೇರಿದ್ದು, ನದಿ, ಹಳ್ಳ ಕೊಳ್ಳ, ಕೆರೆ ಬಾವಿಗಳು ಬತ್ತಿವೆ.
ಜಿಲ್ಲಾಡಳಿತ ಕ್ರಮ: ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜಿಲ್ಲೆಯ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅಲ್ಲದೇ, ಬರ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಹಾವೇರಿ
ಜಿಲ್ಲೆಯ ಸರಾಸರಿ ವಾಡಿಕೆ ಮಳೆ 79.27 ಸೆ.ಮೀ. ಇದ್ದು, ಈವರೆಗೆ 26.8 ಸೆ.ಮೀ ಮಳೆ ಬಿದ್ದಿದೆ. ಜೂನ್ ತಿಂಗಳಲ್ಲಿ 11.49 ಸೆ.ಮೀ. ಆಗಬೇಕಿತ್ತು. ಆದರೆ 6.79 ಸೆ.ಮೀ. ಮಳೆಯಾಗಿದೆ. ಒಟ್ಟು 2,74,895 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. 1.88,835 ಹೆಕ್ಟೇರ್‌ನಲ್ಲಿ ಬಿತ್ತನೆ. ನೀರಾವರಿ ಪ್ರದೇಶದಲ್ಲಿ 40,050 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ. ಆಗಿದ್ದು 13,176 ಹೆಕ್ಟೇರ್‌ನಲ್ಲಿ.
ಕೆರೆ, ಜಲಾಶಯ: ವರದಾ ನದಿಗೆ 10 ದಿನಗಳ ಹಿಂದೆ ಮೇಲ್ಭಾಗದಲ್ಲಿ ಮಳೆಯಾದ್ದರಿಂದ ನೀರು ಬಂದಿದೆ. ತುಂಗಭದ್ರಾ ನದಿಗೆ ಇನ್ನೂ ನೀರು ಬಂದಿಲ್ಲ. ಆದರೆ ಜಿಲ್ಲೆಯ ಯಾವ ಕೆರೆಕಟ್ಟೆಯಲ್ಲೂ ನೀರಿಲ್ಲ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಇನ್ನೂ ಏರಿಲ್ಲ. ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ.
ಜಿಲ್ಲಾಡಳಿತ ಸಜ್ಜು: ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಕುಡಿವ ನೀರಿನ ಸಮಸ್ಯೆಯಿರುವೆಡೆ ಕ್ರಮ ಕೊಗೊಳ್ಳಲು ಸೂಚಿಸಲಾಗಿದೆ. 3 ತಿಂಗಳಿಗೆ ಸಾಲುವಷ್ಟು ಮೇವು ದಾಸ್ತಾನಿದೆ.
ಅಲ್ಲದೇ ರೈತರಿಗೆ 16 ಸಾವಿರ ಮೇವು ಕಿಟ್ ನೀಡಲಾಗಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತದ ಬಳಿ ರು. 4 ಕೋಟಿ ಅನುದಾನವಿದೆ.

 ಹಾಸನ
ಈ ಬಾರಿಯ ಮುಂಗಾರು ರೈತರ ನಿರೀಕ್ಷೆ ಮುಟ್ಟಿಲ್ಲ. ಜಿಲ್ಲೆಯ ಹೇಮಾವತಿ, ಯಗಚಿ ಜಲಾಶಯಗಳು ಖಾಲಿಯಾಗಿವೆ. ಮಳೆಯಾಗದಿದ್ದರೆ ನೀರಿಗೆ, ಮೇವಿಗೂ ಕುತ್ತು ಬರಲಿದೆ. ಅಪ್ಪಟ ಮಲೆನಾಡು ತಾಲೂಕುಗಳಾದ ಸಕಲೇಶಪುರ, ಬೇಲೂರಿನಲ್ಲೂ ಮಳೆಯಿಲ್ಲ.
ಹೇಮಾವತಿ ಜಲಾಶಯದ ಮಟ್ಟ, ಒಳ- ಹೊರ ಹರಿವು: ಗರಿಷ್ಠ ಮಟ್ಟ -2922 ಅಡಿ. ಈಗಿನ ಮಟ್ಟ - 2876.20 ಅಡಿಗಳು (ಕಳೆದ ವರ್ಷ ಇದೇ ದಿನ 2883. 50 ಅಡಿ ಇತ್ತು.). ಒಳ ಹರಿವು -  702 ಕ್ಯುಸೆಕ್(ಕಳೆದ ವರ್ಷ 23,701 ಕ್ಯುಸೆಕ್). ಹೊರಹರಿವು - 1500 ಕ್ಯುಸೆಕ್.
ಶೇ. 34 ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ. 34 ರಷ್ಟು ಬಿತ್ತನೆಯಾಗಿದೆ. 2, 55, 115 ಹೆಕ್ಟೇರ್ ಪೈಕಿ 86, 208 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.
ಜಿಲ್ಲಾಡಳಿತ ಸನ್ನದ್ಧ: ಬರ ಎದುರಾದರೆ ಅದನ್ನು ನಿರ್ವಹಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಕೃಷಿ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚೆ ಮಾಡಿದ್ದಾರೆ.


ಚಿಕ್ಕಮಗಳೂರು
ಮಳೆ ನಾಡು ಚಿಕ್ಕಮಗಳೂರಿನಲ್ಲಿ ಈ ವರ್ಷ ಒಟ್ಟಾರೆ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಜ.1ರಿಂದ ಜೂ. 25 ರವರೆಗೆ ಸರಾಸರಿ ಶೇ.103.5ರಷ್ಟು ಮಳೆ ಬಂದಿದೆ. ಆದರೆ, ಬಿತ್ತನೆ ಬೀಜ ಮೊಳಕೆಯೊಡೆಯುವ ಸಂದರ್ಭದಲ್ಲಿ ಕೈ ಕೊಟ್ಟಿದೆ. ಜೂ.25ರವರೆಗಿನ ಅವಧಿಯಲ್ಲಿ ವಾಡಿಕೆ ಸರಾಸರಿ ಒಟ್ಟು 308 ಸೆ.ಮೀ. ಮಳೆಯಾಗಬೇಕಿತ್ತು. ಈ ಅವಧಿಯಲ್ಲಿ 319 ಸೆ.ಮೀ. ಮಳೆ ಸುರಿದಿದೆ. ಅಂದರೆ, ಶೇ. 103.5ರಷ್ಟು ಮಳೆಯಾಗಿದೆ.
ನದಿ- ಅಣೆಕಟ್ಟು-ಕೆರೆಗಳ ವಿವರ:  ಜಿಲ್ಲೆಯಲ್ಲಿ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳ ನೀರಿನ ಮಟ್ಟ ಇಳಿಮುಖವಾಗಿದೆ. ಮೇ ತಿಂಗಳು ಬಂದ ಮಳೆಯಿಂದಾಗಿ ಅಲ್ಪಸ್ವಲ್ಪ ನೀರು ಕಂಡಿದ್ದ ಕೆರೆಗಳು ಇದೀಗ ಸಂಪೂರ್ಣವಾಗಿ ಬತ್ತಿ ಹೋಗಿವೆ. ಇಂದಿಗೂ ಅನೇಕ ಕಡೆ ನೀರಿನ ಹಾಹಾಕಾರ ಮುಂದುವರಿದಿದೆ.
ಬಿತ್ತನೆ ಗುರಿ: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಗುರಿ 1.60 ಲಕ್ಷ ಹೆಕ್ಟೇರ್, ಈವರೆಗೆ ಬಿತ್ತನೆಯಾಗಿರುವುದು 35 ಸಾವಿರ ಹೆಕ್ಟೇರ್.
ಜಿಲ್ಲಾಡಳಿತ ಸಿದ್ಧ: ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ನೀರಿನ ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರೆಯುವ ಕಾರ್ಯ ಮುಂದುವರೆದಿದೆ.

ಚಿತ್ರದುರ್ಗ
ಜನವರಿಯಿಂದ ಈವರೆಗೆ ಆಗಿರುವ ಮಳೆಯ ಪ್ರಮಾಣ 22.49 ಸೆಂ.ಮೀ. ಇದೇ ಅವಧಿಯ ವಾಡಿಕೆ ಮಳೆ ಪ್ರಮಾಣ- 10.44 ಸೆಂ.ಮೀ. ಜಿಲ್ಲೆಯಲ್ಲಿ ಇತರೆ ನದಿಗಳು ಇಲ್ಲ. ಮುಂಗಾರು ಹಂಗಾಮಿನ ಬಿತ್ತನೆ ಗುರಿ - 3.58 ಲಕ್ಷ ಹೆಕ್ಟೇರ್. ಈವರೆಗೆ ಬಿತ್ತನೆಯಾಗಿರುವ ಪ್ರದೇಶ 83,462 ಹೆಕ್ಟೇರ್. ಬಿತ್ತನೆಯಾಗಿರುವ ಶೇಕಡಾವಾರು ಪ್ರಮಾಣ ಶೇ.23.3 ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. 15 ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಮೆಕ್ಕೆಜೋಳ, ಹತ್ತಿ ಉತ್ತಮವಾಗಿ ಬಿತ್ತನೆಯಾಗಿದೆ. ಹೆಸರು, ಶೇಂಗಾ, ಸೂರ್ಯಕಾಂತಿ, ಎಳ್ಳು ಬಿತ್ತನೆಯಾಗಿದೆ. ಸದ್ಯಕ್ಕೆ ಒಂದೆರಡು ಮಳೆ ಬಿದ್ದರೆ ಬಿತ್ತನೆ ಪ್ರಮಾಣ ಹೆಚ್ಚಾಗುತ್ತದೆ.
ಜಲಾಶಯ: ಹಿರಿಯೂರು ತಾಲೂಕಿನಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಾಣಿವಿಲಾಸ ಸಾಗರ ಅಣೆಕಟ್ಟೆಗೆ ಒಳ ಹರಿವೇ ಇಲ್ಲ. ಚಿತ್ರದುರ್ಗ ಮತ್ತು ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ 15 ದಿನಗಳಿಗೆ ಒಂದು ಟಿಎಂಸಿ ನೀರು ಹೊರ ಬಿಡಲಾಗುತ್ತಿದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಲ್ಲ. ಸಮಸ್ಯೆ ಇರುವ ಗ್ರಾಮಗಳಲ್ಲಿ ಜಿಲ್ಲಾಡಳಿತ ಮತ್ತು ಜಿಪಂನಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಬರ ಪರಿಸ್ಥಿತಿ ಎದುರಾದರೆ ಕುಡಿಯುವ ನೀರು, ಗೋಶಾಲೆಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.

ಶಿವಮೊಗ್ಗ
ನಿರೀಕ್ಷೆಗಿಂತ ಕಡಿಮೆ ಮಳೆ ಸುರಿದಿದೆ. ತುಂಗಾ ಹೊರತುಪಡಿಸಿ ಇತರೆ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಮಳೆಯೇ ಇಲ್ಲ. ಕೃಷಿ ಇಲಾಖೆ ರೈತರಿಗೆ ಪರ್ಯಾಯ ಬೆಳೆ ಸೂಚಿಸುವತ್ತ ಚಿಂತನೆ ನಡೆಸುತ್ತಿದೆ.
ಜಲಾಶಯ: ಜಿಲ್ಲೆಯಲ್ಲಿನ ಲಿಂಗನಮಕ್ಕಿ ಜಲಾಶಯದ ಗರಿಷ್ಠಮಟ್ಟ 1,819 ಅಡಿ ಇದ್ದು, ಈಗಿನ  ಮಟ್ಟ 1,749 ಅಡಿ ಇದೆ. ಇನ್ನು, ಜಲಾಶಯಕ್ಕೆ ಒಳಹರಿವು ಇಲ್ಲ. ಹೊರಹರಿವು  7,161 ಕ್ಯುಸೆಕ್ಸ್ ಇದೆ. ಇನ್ನು, ಭದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ ಇದ್ದು, ಈಗಿರುವ  ಮಟ್ಟ 138 ಅಡಿ ಇದೆ. ುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀ. ಈಗಿನ ಮಟ್ಟ 588.24 ಮೀ. ಇದೆ. ತುಂಗಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸದ್ಯಕ್ಕೆ ಸಮಸ್ಯೆ ಇಲ್ಲ.
1,80,000 ಹೆಕ್ಟೇರ್‌ನಲ್ಲಿ ಬಿತ್ತಿದ್ದು 37,493 ಹೆಕ್ಟೇರೆ
ಸಿದ್ಥತೆ: ಬರ ಎದುರಿಸಲು ಸಿದ್ಧತೆ ಆರಂಭವಾಗಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿವೆ. ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಿಲ್ಲ.

ಕೋಲಾರ
ಈ ವರ್ಷ ಜೂನ್‌ವರೆಗೆ ಒಟ್ಟು 443.8 ಮಿ.ಮೀ ಮಳೆ ಆಗಿದೆ. ಮುಳಬಾಗಿಲು ತಾಲೂಕಿನಲ್ಲಿ ಅತಿ ಹೆಚ್ಚು (169.3 ಮಿ.ಮೀ), ಶ್ರೀನಿವಾಸಪುರ ತಾಲೂಕಿನಲ್ಲಿ ಅತಿ ಕಡಿಮೆ (44.5 ಮಿ.ಮೀ) ಮಳೆ ಆಗಿದೆ. ಕೆರೆ-ಕಲ್ಯಾಣಿಗಳು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಯಾವುದೇ ನದಿ, ನಾಲೆಗಳು ಇಲ್ಲ. ಬೂದಿಕೋಟೆಯ ಮಾರ್ಕಂಡೇಯ ಜಲಾಶಯ, ಬೇತಮಂಗಲದ ಜಲಾಶಯಗಳಲ್ಲಿ ಶೇ. 25ಕ್ಕಿಂತ ಕಡಿಮೆ ನೀರಿದೆ. ಕಲ್ಯಾಣಿಗಳಲ್ಲಿನ ಒಂದಿಷ್ಟು ನೀರು ಬಳಕೆಗೆ ಯೋಗ್ಯವಿಲ್ಲ. ಬಂಗಾರಪೇಟೆಯ ದೊಡ್ಡ ಗುರ್ಕಿ ಕೆರೆ ನೀರು ಬಿಸಿಲಿನ ತಾಪಕ್ಕೆ ಮಾಯವಾಗಿದೆ. ಸಾಮಾನ್ಯವಾಗಿ ಕೋಲಾರ ಜಿಲ್ಲೆಗೆ ಮುಂಗಾರು ಜುಲೈ ಅಂತ್ಯಕ್ಕೆ ಇಲ್ಲವೇ ಆಗಸ್ಟ್ ಮೊದಲ ವಾರದಲ್ಲಿ ಪ್ರವೇಶವಾಗುವುದರಿಂದ ರೈತರು ವರುಣನಿಗಾಗಿ ಕಾಯುತ್ತಿದ್ದಾರೆ. ಜಿಲ್ಲೆಯ ಕೆಲ ಭಾಗದಲ್ಲಿ ಮಾತ್ರ ನೆಲಗಡಲೆ ಬಿತ್ತನೆ ಮಾಡಲಾಗುತ್ತಿದೆ.  
ಸಿದ್ಧತೆ:  ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಅಂತರ್ಜಲ ಸಮಸ್ಯೆ ಹೆಚ್ಚಿರುವ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಪಂಚಾಯಿತಿಗಳಿಗೆ ಆದೇಶಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಮಂಡ್ಯ
ಜಿಲ್ಲಾದ್ಯಂತ ಕಳೆದ ಜನವರಿಯಿಂದ ಜೂ.26ರವರೆಗೆ ಮಳೆ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದು ಬೆಳೆ ನಷ್ಟಕ್ಕೆ ಕಾರಣವಾಗಿದೆ. ಸರಾಸರಿ 238.1 ಮಿ.ಮೀ ನಿರೀಕ್ಷಿತ ಮಳೆಯಾಗಬೇಕಿತ್ತು.
ಆದರೆ ಈ ಬಾರಿ 271.8 ಮಿ.ಮೀ. ಮಳೆಯಾಗಿದೆ. ಕೆರೆ ಕಟ್ಟೆಗಳಿಗೆ ಅಲ್ಪ ಸ್ವಲ್ಪ ನೀರು ಬಂದಿದೆ. ಜತೆಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ.
ಜಲಾಶಯಗಳ ವಿವರ: ಮಂಡ್ಯ ಜಿಲ್ಲೆಯ ಕೃಷ್ಣರಾಜ ಜಲಾಶಯದಲ್ಲಿ ಜೂ. 27ರ ನೀರಿನ ಮಟ್ಟ - ಗರಿಷ್ಠ - 124.80 ಅಡಿ, ಇಂದಿನ ಮಟ್ಟ - 81.25 ಅಡಿ, ಒಳ ಹರಿವು - 2953 ಕ್ಯುಸೆಕ್, ಹೊರ ಹರಿವು - 1911 ಕ್ಯುಸೆಕ್.
ಜಿಲ್ಲೆಯ 7 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಕುಡಿಯುವ ನೀರು, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ನೀರಿನ ಸಮಸ್ಯೆಯಿರುವ  ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ತೆರೆಯಲಾಗಿದೆ. ವಾರಾಂತ್ಯದಲ್ಲಿ ತಾಲೂಕುಗಳಿಂದ ವರದಿ ತರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

ಉಡುಪಿ
ಅತ್ಯಂತ ಕಡಿಮೆ ಮಳೆಯಾಗಿದೆ. ವಾಡಿಕೆಯಂತೆ ಮೊದಲ ತಿಂಗಳು ಜೂನ್‌ನಲ್ಲಿ ಜಿಲ್ಲೆಯಲ್ಲಿ ಸರಾಸರಿ 11.50 ಸೆ.ಮೀ. ಮಳೆಯಾಗುತ್ತದೆ.
ಬಿತ್ತನೆ: ಮೊದಲ ತಿಂಗಳಲ್ಲಿ 350 ಹೆಕ್ಟೇರಿಗೂ ಕಡಿಮೆ ಪ್ರದೇಶದಲ್ಲಿ ಬತ್ತ ನಾಟಿ ಆಗಿದೆ. ಆದರೆ ಪೈರು ಕೂಡ ನೀರಿಲ್ಲದೆ ಒಣಗುತ್ತಿದೆ.
ಜಲಾಶಯ: ಜಿಲ್ಲೆಯಲ್ಲಿರುವ ಏಕೈಕ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕಿರು ಜಲಾಶಯದಲ್ಲಿ ಹೊರಹರಿವು ಇನ್ನೂ ಆರಂಭವಾಗಿಲ್ಲ. ಸಂಪೂರ್ಣ ಬತ್ತಿದ್ದ ಜಲಾಶಯದಲ್ಲಿ ಇದೀಗ ನೀರು ತುಂಬಿಕೊಳ್ಳುತ್ತಿದೆ.
ಜಿಲ್ಲಾಡಳಿತ ಅತಿ ಆತ್ಮವಿಶ್ವಾಸ?: ಸದ್ಯಕ್ಕಂತು ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಮಳೆ ಕೈಕೊಟ್ಟರೆ ಕೃಷಿ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಇದಕ್ಕೆ ಜಿಲ್ಲಾಡಳಿತದ ಬಳಿ ಉಪಾಯಗಳೇನೂ ಇಲ್ಲ. ಜಿಲ್ಲೆಗೆ ಈವರೆಗೆ ಬರ ಬಂದಿಲ್ಲ, ಬರುವುದೂ ಇಲ್ಲ ಎನ್ನುವ ನಂಬಿಕೆಯಲ್ಲಿದ್ದಾರೆ ಅಧಿಕಾರಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.