ಹೆಚ್ಚಿತು ವೃತ್ತಿ ಶಿಕ್ಷಣ ಶುಲ್ಕ ಕಳಚಿತು ಸರಕಾರದ ಬಣ್ಣ

ರಾಜೀವ ಹೆಗಡೆ
ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ.
ಅಧಿಕಾರಕ್ಕೆ ಬಂದ ವರ್ಷದಿಂದ ಶುಲ್ಕ ಹೆಚ್ಚಳವನ್ನೇ ಮಾಡಿಲ್ಲ ಎನ್ನುತ್ತಿದ್ದ ರಾಜ್ಯ ಸರ್ಕಾರ, ಮೌಖಿಕವಾಗಿ ಹೆಚ್ಚುವರಿ ಶುಲ್ಕ ವಸೂಲಿಗೆ ಅನುಮತಿ ನೀಡಿರುವುದು ಬಹಿರಂಗವಾಗಿದೆ. ಕಳೆದ 4 ವರ್ಷದ ರಗಳೆಯಂತೆ ಈ ಬಾರಿಯೂ ಎಂಜಿನಿಯರಿಂಗ್ ಹಾಗೂ ವೈದ್ಯ ಪದವಿ ಕೋರ್ಸ್ಗಳಿಗೆ ಸರ್ಕಾರಿ ಶುಲ್ಕ ಹೊರತುಪಡಿಸಿ 15 ಸಾವಿರದಿಂದ 94 ಸಾವಿರದವರೆಗೂ ಅಧಿಕ ಶುಲ್ಕ ಪಡೆಯಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಹಾಗೂ ರಾಜ್ಯ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣೆ ಸಮಿತಿ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿದೆ.
ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಅಧಿಕೃತ ಮಾಹಿತಿ ದೊರೆತಿದ್ದು, ಬೆಂಗಳೂರಿನ 2 ಎಂಜಿನಿಯರಿಂಗ್, ಮಂಗಳೂರಿನ ಒಂದು ವೈದ್ಯ ಕಾಲೇಜುಗಳಲ್ಲಿ ಸರ್ಕಾರದ ನಿಗದಿತ ಶುಲ್ಕದ ಮೇಲೆ ತಲಾ 18 ಸಾವಿರ, 25,350 ಹಾಗೂ 94 ಸಾವಿರ ಶುಲ್ಕ ಪಡೆದಿರುವುದು ತಿಳಿದುಬಂದಿದೆ. ಈ ವಿದ್ಯಾರ್ಥಿಗಳು ಎಂಜಿನಿಯರಿಂಗ್ಗೆ 41,590, ವೈದ್ಯಕ್ಕೆ 46 ಸಾವಿರ ತುಂಬಬೇಕಾಗಿತ್ತು. ಉನ್ನತ ಶಿಕ್ಷಣ ಹಾಗೂ ವೈದ್ಯ ಶಿಕ್ಷಣ ಇಲಾಖೆ ಹೇಳುವಂತೆ ಈ ಬಾರಿಯ ಶುಲ್ಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಪುಟದಲ್ಲಿ ದಾಖಲಿಸಿರುವಂತೆ ವಿದ್ಯಾರ್ಥಿಗಳು ಯಾವುದೇ ಕಾಲೇಜುಗಳಲ್ಲಿ ಕೆಇಎನಲ್ಲಿ ತುಂಬಿದ ಶುಲ್ಕದ ಹೊರತಾಗಿ ತುಂಬಬೇಕಿಲ್ಲ. ಆದರೆ ಈ ನಿಯಮಗಳು ರಾಜ್ಯದ ಯಾವೊಂದು ಕಾಲೇಜಿನಲ್ಲೂ ಪಾಲನೆಯಾಗುತ್ತಿಲ್ಲ.
ಸರ್ಕಾರದ ಒಪ್ಪಿಗೆ: ರಾಜಕೀಯ ಕಾರಣಕ್ಕೋಸ್ಕರ ರಾಜ್ಯ ಸರ್ಕಾರ ಶುಲ್ಕ ಹೆಚ್ಚಳ ಮಾಡಿಲ್ಲ. ಆದರೆ ಸರ್ಕಾರಿ ಸೀಟುಗಳಿಗೆ ಇಲಾಖೆಯ ಶುಲ್ಕಕ್ಕಿಂತ ಹೆಚ್ಚಿನ ವಸೂಲಿಗೆ ಅನುಮತಿ ದೊರೆತಿದೆ. ಈ ಕಾರಣದಿಂದಲೇ ಎಲ್ಲ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಮೂಲಗಳು ತಿಳಿಸಿವೆ.
ಎಂಜಿನಿಯರಿಂಗ್ ಕಾಲೇಜು ಒಕ್ಕೂಟದ ಸೂಚನೆ ಪ್ರಕಾರ ಎಲ್ಲ ಕಾಲೇಜುಗಳು ತಮ್ಮ ವೆಬ್ಸೈಟ್ನಲ್ಲಿ ಶುಲ್ಕ ವಿವರ ನೀಡಬೇಕು. ಆದರೆ ಆರ್.ವಿ. ಎಂಜಿನಿಯರಿಂಗ್ ಹಾಗೂ ನಂದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜು ಮಾತ್ರ ವೆಬ್ಸೈಟ್ನಲ್ಲಿ ಶುಲ್ಕ ವಿವರ ಪ್ರಕಟಿಸಿವೆ. 'ರಾಜ್ಯ ಸರ್ಕಾರ ಶುಲ್ಕ ಹೆಚ್ಚಳ ಮಾಡಲು ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವುದು ಅನಿವಾರ್ಯ. ಆದರೆ ಎಷ್ಟು ಪಡೆಯಬೇಕು ಎನ್ನುವುದನ್ನು ಸರ್ಕಾರವೂ ನಿಗದಿಪಡಿಸಿಲ್ಲ, ಒಕ್ಕೂಟವೂ ಸೂಚಿಸಿಲ್ಲ. ಅದು ಆಯಾ ಕಾಲೇಜು ಆಡಳಿತ ಮಂಡಳಿಗಳಿಗೆ ಬಿಟ್ಟ ವಿಚಾರ' ಎಂದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ ತಿಳಿಸಿದ್ದಾರೆ.
ಇದು ಈ ವರ್ಷದ ಸಮಸ್ಯೆಯಲ್ಲ. ಪ್ರತಿ ವರ್ಷ ಹೆಚ್ಚುವರಿ ಶುಲ್ಕಕ್ಕೆ ಸಂಬಂಧಿಸಿ ಕೂಗು ಕೇಳಿಬಂದಾಗ, 'ಸೌಲಭ್ಯ ಆಧರಿಸಿ ಶುಲ್ಕ ಪಡೆಯಲಾಗುತ್ತದೆ. ಇದು ಕಡ್ಡಾಯವಲ್ಲ' ಎಂಬ ಹಾರಿಕೆ ಉತ್ತರವನ್ನು ಸರ್ಕಾರ ನೀಡುತ್ತದೆ. ಆದರೆ ಯಾವೊಬ್ಬ ವಿದ್ಯಾರ್ಥಿಯೂ ಶುಲ್ಕ ಭರಿಸದೆ ಪ್ರವೇಶ ಪಡೆಯಲಾಗದ ಸ್ಥಿತಿಯಿದೆ.
ಏಕರೂಪ ಶುಲ್ಕವೂ ಇಲ್ಲ
ಮನಸಿಗೆ ಬಂದಂತೆ ವೃತ್ತಿ ಶಿಕ್ಷಣ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆಯುವುದನ್ನು ನಿಯಂತ್ರಿಸಲು ಏಕರೂಪ ವ್ಯವಸ್ಥೆ ಜಾರಿ ಮಾಡುವಂತೆ 2013ರಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಖಾಸಗಿ ಸಂಸ್ಥೆಗಳ ಹಣ ಲೂಟಿಗೆ ಅನುವು ಮಾಡಿಕೊಟ್ಟಿದೆ. ಒಂದೇ ತರಹದ ಸೌಲಭ್ಯಗಳಿಗೆ ಒಂದೊಂದು ಕಾಲೇಜು ಪ್ರತ್ಯೇಕ ಶುಲ್ಕ ನಿಗದಿಮಾಡುತ್ತಿದೆ. ಖಾಸಗಿ ಕಾಲೇಜುಗಳ ದರ್ಪಕ್ಕೂ ಕಾರಣವಿದೆ. ಕಳೆದ ವರ್ಷ 50ಕ್ಕೂ ಅಧಿಕ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆದಿರುವುದನ್ನು ಒಪ್ಪಿಕೊಂಡರೂ ಕ್ರಮ ಜರುಗಿಸಿರಲಿಲ್ಲ. ಬಹುತೇಕ ವೈದ್ಯ ಕಾಲೇಜುಗಳು 50-94 ಸಾವಿರದವರೆಗೆ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದರೂ ಸರ್ಕಾರ ಗಮನ ನೀಡಿಲ್ಲ.
ದೂರು ಪೆಟ್ಟಿಗೆ ಕೆಲಸ ಮಾಡ್ತಿಲ್ಲ
ಪ್ರವೇಶಕ್ಕೆ ಸಂಬಂಧಿಸಿದ ದೂರು ಆಲಿಸಲು ಸರ್ಕಾರ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣೆ ಸಮಿತಿ ರಚಿಸಿದೆ. ಆದರೆ ಈ ಸಮಿತಿಯ ವೆಬ್ಸೈಟ್ನಲ್ಲಿ 2014ರ ಪ್ರವೇಶ ಪ್ರಕ್ರಿಯೆಯ ದೂರು ಸಲ್ಲಿಸಲು ಅವಕಾಶವೇ ಇಲ್ಲ. 'ಇಯರ್ ಆಫ್ ಅಡ್ಮಿಷನ್' ಎಂಬಲ್ಲಿ '2014' ಎಂಬ ಅಂಶವೇ ಇಲ್ಲ. ವಿದ್ಯಾರ್ಥಿಗಳ ನೆರವಿಗೆ ತೆರೆಯಲಾಗಿದ್ದ ಫೇಸ್ಬುಕ್ ಪುಟವೂ ಕಾರ್ಯನಿರ್ವಹಿಸುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


