ಆಲಮಟ್ಟಿ ಡ್ಯಾಂನಲ್ಲಿ 524 ಮೀಟರ್ ನೀರು ನಿಲ್ಲಿಸಲು ಬೇಕು 10ವರ್ಷ!

ಕನ್ನಡಪ್ರಭ ವಾರ್ತೆ, ಬಾಗಲಕೋಟೆ, ಜೂ. 29
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆ ಸದ್ಯಕ್ಕಂತೂ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ರಾಜ್ಯ ಸರ್ಕಾರದ ನಿಧಾನಗತಿ ಪ್ರವೃತ್ತಿ, ಕೇಂದ್ರ ಸರ್ಕಾರದ ನೂತನ ಭೂ ಸ್ವಾಧೀನ ನಿಯಮಾವಳಿ ಹಾಗೂ ರೈತರು ಭೂಮಿ ನೀಡಲು ನಿರಾಕರಿಸುತ್ತಿರುವ ನಡೆ ಗಮನಿಸಿದರೆ ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್ ನೀರು ನಿಲ್ಲಿಸಲು ಇನ್ನೂ ಹತ್ತು ವರ್ಷಗಳಷ್ಟು ಸುದೀರ್ಘ ದಿನಗಳನ್ನು ಸವೆಸಬೇಕಾಗುತ್ತದೆ.
ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಗರಿಷ್ಠ ಮಟ್ಟವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸಲು ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ- 2 ಅನುಮತಿ ನೀಡಿದ ನಂತರ ಹೊಸ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು.
ಅಣೆಕಟ್ಟೆಯನ್ನು ಕೇವಲ 6 ಮೀಟರ್ ಎತ್ತರಗೊಳಿಸಿದರೆ 130.90 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭ್ಯ. ಈ ನೀರಿನ ಸದ್ಬಳಕೆಗೆ 9 ಉಪ ಯೋಜನೆ ರೂಪಿಸಿ 5.30 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಅಲ್ಲದೆ, 2018ರ ಒಳಗಡೆ ಕಾಮಗಾರಿ ಪೂರ್ಣಗೊಳಿಸುವ ಬದ್ಧತೆ ಪ್ರಕಟಿಸಿತ್ತು. ಆದರೆ, ಸರ್ಕಾರದ ಸದ್ಯದ ನಿಧಾನಗತಿಯನ್ನು ನೋಡಿದರೆ ಯೋಜನೆ ಐದು ವರ್ಷದಲ್ಲಿ ಪೂರ್ಣಗೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
176 ಹಳ್ಳಿ ಮುಳುಗಡೆ: ಯೋಜನೆಯ ಮೊದಲ ಹಾಗೂ ಎರಡನೇ ಹಂತಕ್ಕೆ 176 ಹಳ್ಳಿಗಳು ಮುಳುಗಡೆಯಾಗಿದ್ದವು. 136 ಪುನರ್ವಸತಿ ಕೇಂದ್ರ ತೆರೆಯಲಾಗಿತ್ತು. 70,106 ಕುಟುಂಬ ಸ್ಥಳಾಂತರ ಮಾಡಲಾಗಿತ್ತು. ಪುನರ್ವಸತಿ, ಮುಳುಗಡೆ, ಕಾಲುವೆ ಅಚ್ಚುಕಟ್ಟು ಹಾಗೂ ರಸ್ತೆಗಾಗಿ ಒಟ್ಟು 2,58,619 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು, 1978ರಲ್ಲೇ ಅಣೆಕಟ್ಟೆಯಲ್ಲಿ ನೀರು ನಿಲ್ಲಿಸಬೇಕೆಂದು ತೀರ್ಮಾನಿಸಲಾಗಿತ್ತಾದರೂ ಅದು ಸಾಧ್ಯವಾಗಿದ್ದು 1997ರಲ್ಲಿ.
ಇದೀಗ 3ನೇ ಹಂತದ ಕಾಮಗಾರಿಗೆ ಬೃಹತ್ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಚೊಚ್ಚಲ ಬಜೆಟ್ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಖರ್ಚು ಮಾಡುವುದಾಗಿ ಘೋಷಿಸಿದ್ದರು. ವಿಚಿತ್ರವೆಂದರೆ ಒಂದು ವರ್ಷದ ಅವಧಿಯಲ್ಲಿ ಅಧಿಕಾರಿಗಳ ಸಂಬಳ, ಸಾರಿಗೆ ಬಿಟ್ಟರೆ ಒಂದು ಪೈಸೆಯೂ ಭೂ ಸ್ವಾಧೀನದ ಹೆಸರಲ್ಲಿ ವ್ಯಯವಾಗಿಲ್ಲ. ಸೂಕ್ತ ತಾಂತ್ರಿಕ ಸಿಬ್ಬಂದಿ, ಸರ್ವೆಯರುಗಳ ಕೊರತೆಯಿಂದ ಯೋಜನೆಗೆ ಹಿನ್ನಡೆಯಾಗಿದೆ. ಭೂ ಸ್ವಾಧೀನದ ವಿಚಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕೆಬಿಜೆಎನ್ಎಲ್ ಅಧಿಕಾರಿಗಳ ಜತೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.
3ನೇ ಹಂತದ ಕಾಮಗಾರಿ: ಮೂರನೇ ಹಂತದ ಕಾಮಗಾರಿಗಳಿಗೆ ಒಟ್ಟು 1,23,697 ಎಕರೆ ಭೂ ಸ್ವಾಧೀನವಾಗಬೇಕಾಗಿದೆ. ಇದರಲ್ಲಿ 94,640 ಎಕರೆ ಮುಳುಗಡೆಯಾಗುತ್ತದೆ. ಪುನರ್ವಸತಿ ಕೇಂದ್ರಕ್ಕೆ 4372 ಎಕರೆ ಹಾಗೂ ಕಾಲುವೆ ನಿರ್ಮಾಣಕ್ಕೆ 24685 ಎಕರೆ ಭೂಮಿ ಬೇಕು. ಬಾಗಲಕೋಟೆ ನಗರದ 10 ವಾರ್ಡ್ಗಳು ಹಾಗೂ ಗ್ರಾಮಾಂತರ ಪ್ರದೇಶದ 22 ಹಳ್ಳಿಗಳು ಮುಳುಗಡೆಯಾಗಲಿವೆ. ಪಟ್ಟಣ ಪ್ರದೇಶದ ನಿರಾಶ್ರಿತರ ಪುನರ್ವಸತಿಗೆ ಬಾಗಲಕೋಟೆ ಮತ್ತು ಮುಚಕಂಡಿ ಯುನಿಟ್-3ರಲ್ಲಿ 1627 ಎಕರೆ ಪ್ರದೇಶಕ್ಕೆ 4(1) ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಗ್ರಾಮೀಣ ಜನರ ಪುನರ್ವಸತಿ ಪ್ರಕ್ರಿಯೆ ಮಾತ್ರ ತೊಡಕಾಗಿದೆ.
ರೈತರಲ್ಲೂ ಹೆಚ್ಚಿದ ಹಣದಾಸೆ: ಗ್ರಾಮೀಣ ಪ್ರದೇಶದ 9 ಹಳ್ಳಿಗಳಲ್ಲಿ ಉದ್ದೇಶಿತ ಭೂ ಸ್ವಾಧೀನಕ್ಕೆ 4(1) ನೋಟಿಸ್ ಜಾರಿಗೊಳಿಸಲಾಗಿದೆ. ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಪುನರ್ವಸತಿ ಕೇಂದ್ರ ಗುರುತಿಸುವ ಕೆಲಸವಾಗಿಲ್ಲ. ಏತನ್ಮಧ್ಯೆ ಕೇಂದ್ರ ಸರ್ಕಾರದ ನೂತನ ಭೂ ಸ್ವಾಧೀನ ಕಾಯ್ದೆಯಿಂದಾಗಿ ಭಾರಿ ಪ್ರಮಾಣದಲ್ಲಿ ಪರಿಹಾರದ ಹಣ ಹರಿದು ಬರುತ್ತದೆ ಎಂದು ರೈತರು ಭಾವಿಸಿದ್ದಾರೆ. ಹಾಗಾಗಿ ಪುನರ್ವಸತಿ ಕೇಂದ್ರಗಳಿಗೆ ಭೂಮಿ ಕೊಡುವುದಿಲ್ಲವೆಂದು ಪ್ರತಿಭಟನೆಗಳು ನಡೆಯುತ್ತಿವೆ.
ಚಿಕ್ಕಪ್ಪನಹಳ್ಳಿ ಷಣ್ಮುಖ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


