ಪ್ರಧಾನ ಸುದ್ದಿ

ಕೆರೆ ಅಭಿವೃದ್ಧಿಗೆ ಯಾರಾದರೇನು? ಕೆಲಸ, ಮಾಡ್ರೀ: ಸ್ಪೀಕರ್ ಗರಂ

ಕೆರೆ ಅಭಿವೃದ್ಧಿಗೆ ಯಾರಾದರೇನು? ಕೆಲಸ, ಮಾಡ್ರೀ: ಸ್ಪೀಕರ್ ಗರಂ
Published On :

ವಿಧಾನಸಭೆ: ಅಲ್ರೀ ಕೆರೆ ನಿಮ್ಮ ಇಲಾಖೆಯದ್ದು. ಅದರ ಕಾಮಗಾರಿ ಏನು ನಡೆಯುತ್ತಿದೆ, ಪರಿಸ್ಥಿತಿ ಏನು ಎಂಬುದು ತಿಳಿದುಕೊಳ್ಳುದಕ್ಕೆ ಆಗುವುದಿಲ್ಲವಾ? ಒಂದು ವರದಿ ತರಿಸಿಕೊಡೋಕೂ ಆಗಲ್ವಾ?... ಇದೇನಿದು...?
ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ ತಂಗಡಗಿ ಅವರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ತರಾಟೆಗೆ ತೆಗೆದುಕೊಂಡ ರೀತಿ ಇದು. ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಏಳು ವರ್ಷದಿಂದ ಕೆರೆಗಳ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿ ಏನೂ ಆಗಿಲ್ಲ ಎಂದು ಶಾಸಕ ಸಿದ್ದು ನ್ಯಾಮಗೌಡ ಆರೋಪಿಸಿದರು. ಆ ಕೆರೆಗಳ ಅಭಿವೃದ್ಧಿ ಯಾವಾಗ ಆಗುತ್ತದೆ ಎಂದು ಸಚಿವರು ಹೇಳಲಿ ಎಂದು ಆಗ್ರಹಿಸಿದರು.
ಇದು ನನ್ನ ಇಲಾಖೆಗೆ ಬರುವುದಿಲ್ಲ, ಬೃಹತ್ ನೀರಾವರಿ ಇಲಾಖೆಯದ್ದು. ಆ ಸಚಿವರನ್ನೇ ಕೇಳಿ ಎಂದು ಶಿವರಾಜ್ ತಂಗಡಗಿ ಬೇಜವಾಬ್ದಾರಿ ಉತ್ತರ ನೀಡಿದಾಗ, ಸ್ಪೀಕರ್ ವರದಿ ತರಿಸಿಕೊಡಿ ಎಂದು ಸಲಹೆ ನೀಡಿದರು. ಆದರೂ ಪದೇಪದೆ ನನ್ನ ಇಲಾಖೆಯಲ್ಲ, ಅವರು ಮಾಡುತ್ತಿರುವುದು ಎಂದು ಸಚಿವರು ನುಡಿದಾಗ, 'ವರದಿ ತರಿಸಿಕೊಡ್ರಿ. ಅದೂ ಆಗಲ್ವಾ?' ಎಂದು ಸ್ಪೀಕರ್ ಗದರಿದರು. ನಂತರ ವರದಿ ಕೊಡಿಸುತ್ತೇನೆ ಎಂದು ಸಚಿವರು ಹೇಳಿದರು.
 ವಿಧಾನಸಭೆಯಲ್ಲಿ ನ್ಯಾಯ ಇಲ್ಲ!
ವಿಧಾನಸಭೆಯಲ್ಲೂ ನ್ಯಾಯ ಇಲ್ಲವೇ? 'ನ್ಯಾಯ ಇಲ್ಲ, ಬಿಡಿ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ. ಸೋಮವಾರ ವಿಧಾನಸಭೆ ಕಲಾಪ ಆರಂಭವಾದಾಗ ಪ್ರಶ್ನೋತ್ತರದಲ್ಲಿ ಪ್ರಥಮ ಪ್ರಶ್ನೆಗೆ ಉತ್ತರ ನೀಡಬೇಕಾದ ಯುವಜನ ಸೇವಾ ಸಚಿವ ಅಭಯಚಂದ್ರ ಜೈನ್ ಹಾಜರಿರಲಿಲ್ಲ. ಅಲ್ಲದೆ, ಒಂದಿಬ್ಬರು ಸಚಿವರನ್ನು ಬಿಟ್ಟರೆ ಐದಾರು ಕಾಂಗ್ರೆಸ್ ಶಾಸಕರು ಮಾತ್ರ ಇದ್ದರು. ಇದೇನು ಅಧ್ಯಕ್ಷರೇ, ಆಡಳಿತ ಪಕ್ಷದಲ್ಲಿ ಕನಿಷ್ಠ ಕೋರಂ ಸಹ ಇಲ್ಲ. ಉತ್ತರಿಸಬೇಕಾದ ಸಚಿವರೂ ಇಲ್ಲ. ಇದೆಂಥಾ ನ್ಯಾಯ ಅಧ್ಯಕ್ಷರೇ? ವಿಧಾನಸಭೆಯಲ್ಲೂ ನ್ಯಾಯ ಇಲ್ಲವೇ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ, ಜೀವರಾಜ್, ಸಿ.ಟಿ. ರವಿ ಪ್ರಶ್ನಿಸಿದರು.
'ನ್ಯಾಯ ಇಲ್ಲ ಬಿಡ್ರೀ' ಎಂದು ಸ್ಪೀಕರ್ ಹೇಳಿ, ಸಚಿವರು ಬಂದ ನಂತರ ಉತ್ತರ ಕೊಡಿಸುವುದಾಗಿ ಹೇಳಿ ಸಮಾಧಾನಪಡಿಸಿದರು. ಸಚಿವರು ಬರಬೇಕು ಎಂದು ಆಡಳಿತ ಪಕ್ಷದವರಿಗೆ ಸೂಚಿಸಿದರು.

ಸೂಕ್ತ ಉತ್ತರ ನೀಡದೆ ಶ್ರೀನಿವಾಸ್ ತಬ್ಬಿಬ್ಬು
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ತಬ್ಬಿಬ್ಬಾದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ರಕ್ಷಿಸಿದರು. ಬಂಗಾರಪೇಟೆ ಕ್ಷೇತ್ರದಲ್ಲಿ ಎಷ್ಟು ಅನಧಿಕೃತ ಬಡಾವಣೆಗಳಿವೆ ಎಂಬ ಪ್ರಶ್ನೆಗೆ, ಒಂದು ಹೋಬಳಿಯ ಸರ್ವೆ ನಂಬರ್‌ನಲ್ಲಿ ಇಷ್ಟು ಕಟ್ಟಡಗಳು ಅನಧಿಕೃತ ಎಂದು ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಉತ್ತರ ನೀಡಿದ್ದರು. ಉತ್ತರವೇ ಸರಿಯಿಲ್ಲ, ನಾನು ಕೇಳಿದ್ದೇ ಬೇರೆ. ಇವರು ಹೇಳಿದ್ದೇ ಬೇರೆ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು. ಅನಧಿಕೃತ ಬಡಾವಣೆಗಳ ಮಾಹಿತಿ ನನಗೆ ಬೇಕಿರುವುದು, ಕಟ್ಟಡಗಳಲ್ಲ ಎಂದು ಶಾಸಕರು ಎಷ್ಟು ಬಾರಿ ಹೇಳಿದರೂ ಸಚಿವರಿಗೆ ಅರ್ಥವಾಗಲೇ ಇಲ್ಲ. ಸ್ಪೀಕರ್ ಕೂಡ ಅನಧಿಕೃತ ಬಡಾವಣೆ ಮಾಹಿತಿ ಕೊಡಬೇಕಲ್ವ ಎಂದು ಕೇಳಿದರೂ, 'ಸ್ಪಷ್ಟ ಉತ್ತರವನ್ನೇ ಕೊಟ್ಟಿದ್ದೇನೆ' ಎಂದು ಸಚಿವರು ಸಮರ್ಥಿಸಿಕೊಂಡರು. ಕೊನೆಗೆ, ಶಾಸಕರಿಗೆ ಮನವಿ ಮಾಡಿಕೊಂಡ ಸ್ಪೀಕರ್ ನಿಮಗೆ ಏನು ಮಾಹಿತಿ ಬೇಕೋ ನನಗೆ ತಿಳಿಸಿ, ನಾನು ತರಿಸಿಕೊಡುತ್ತೇನೆ ಎಂದು ಸಮಾಧಾನಪಡಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.