ಹಿಂದೂ ಕಾರ್ಯಕರ್ತರು ರೌಡಿಶೀಟರ್ ಪಟ್ಟಿಗೆ
ಕನ್ನಡಪ್ರಭ ವಾರ್ತೆ , ಮಂಗಳೂರು , ಮಾ.11
ಹಿಂದೂ ಸುಂಘಟನೆಗಳ ಮುಖಂಡರ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಗೂಂಡಾ ಕಾಯ್ದೆ ಪ್ರಕ್ರಿಯೆ ಜತೆಗೆ ರೌಡಿ ಲೀಸ್ಟ್ನಲ್ಲಿ ಹೆಸರು ಸೇರಿಸಲಾಗುತ್ತಿದೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300 ಹೊಸದಾಗಿ ರೌಡಿಶೀಟ್ ತೆರೆಯಲಾಗಿದ್ದು, ಇದರಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೇ 150ಕ್ಕೂ ಹೆಚ್ಚು ಇದ್ದಾರೆ. ಹೊಸದಾಗಿ ರೌಡಿಶೀಟರ್ಗೆ ಸೇರ್ಪಡೆಯಾಗುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪೈಕಿ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ಹಿಂದೂ ಜಾಗರಣೆ ವೇದಿಕೆಯ ಸುಭಾಷ್ ಪಡೀಲ್, ಶರತ್, ಗೋ ರಕ್ಷಾ ಪ್ರಮುಖ ಪ್ರದೀಪ್ ಪಂಪ್ವೆಲ್, ಸುರಕ್ಷಾ ಪ್ರಮುಖ ಪುನೀತ್ ಕೊಟ್ಯಾರಿ ಪ್ರಮುಖರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಸ್ಟೇಷನ್ ವ್ಯಾಪ್ತಿಯಲ್ಲಿ 2ಕ್ಕಿಂತ ಹೆಚ್ಚು ಕೇಸ್ಗಳನ್ನು ಹೊಂದಿರುವ ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ರೌಡಿಶೀಟರ್ಗೆ ಸೇರಿಸಲಾಗುತ್ತಿದೆ.
ಎಡಿಜಿಪಿ ಎಂ.ಎನ್. ರೆಡ್ಡಿ ಸೂಚನೆಯಂತೆ ರಾಜ್ಯಾದ್ಯಂತ ಎಲ್ಲ ಠಾಣೆಗಳಲ್ಲಿ ಹೊಸದಾಗಿ ರೌಡಿ ಶೀಟ್ ತೆರೆಯಲಾಗುತ್ತಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿ ಲೀಸ್ಟ್ ಪರಿಷ್ಕರಣೆ ನಡೆಸಲಾಗಿದೆ. 2, 3 ಕೇಸ್ ಇದ್ದ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧವೂ ರೌಡಿಶೀಟ್ ತೆರೆಯಲಾಗಿದೆ.
ಆಶ್ಚರ್ಯ ಎಂದರೆ, ಕಾಂಗ್ರೆಸ್ ಮುಖಂಡ ತುಂಬೆ ಪ್ರಕಾಶ್ ಶೆಟ್ಟಿಯಂಥ ನಾಯಕರ ಮೇಲಿದ್ದ ರೌಡಿ ಶೀಟ್ಗಳನ್ನು ಕೈಬಿಡುವ ಸೂಚನೆ ಇದೆ. ಮಂಗಳೂರಲ್ಲಿ 600 ಮಂದಿ ರೌಡಿಶೀಟರ್ಗಳಿದ್ದಾರೆ. ಇದರಲ್ಲಿ 300 ಮಂದಿಯನ್ನು ಬಿಟ್ಟು ಹೊಸದಾಗಿ 300 ಮಂದಿಯನ್ನು ಸೇರ್ಪಡೆ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ರೌಡಿಶೀಟರ್ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುತ್ತಾರೆ. ಇವರ ಜತೆಯಲ್ಲಿ ಅಪರಾಧಿಕ ಮನೋಭಾವ ಇಲ್ಲದೆ ಸಂಘಟನೆ ಮುಖಂಡನ ಹಿನ್ನೆಲೆಯಲ್ಲಿ ಫಿಕ್ಸ್ ಆದವರು, ಪ್ರಚೋದನಕಾರಿ ಭಾಷಣ ಮಾಡಿದವರು ಗೂಂಡಾ ಕಾಯ್ದೆಗೆ ಶಿಫಾರಸು ಆಗಿರುವುದು ವಿಶೇಷ. ಶರಣ್ ಪಂಪ್ವೆಲ್ ಮೇಲೆ ಪ್ರಚೋದನಕಾರಿ ಭಾಷಣ ಮತ್ತು ಸಂಘಟನೆ ಮುಖಂಡನ ಹಿನ್ನೆಲೆಯಲ್ಲಿ ಪ್ರಕರಣಗಳಿವೆ.
ಪಡೀಲ್ ಒಮ್ಮೆ ತಪ್ಪಿಸಿಕೊಂಡಿದ್ದರು!
ಹೋಮ್ ಸ್ಟೇ ದಾಳಿ ರೂವಾರಿ ಹಿಂಜಾವೇ ಮುಖಂಡ ಸುಭಾಷ್ ಪಡೀಲ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವಂತೆ ಈ ಹಿಂದೆಯೇ ಸರ್ಕಾರದಿಂದ ಒತ್ತಡ ಬಂದಿತ್ತು. ಆದರೆ, ಅಂದಿನ ಪೊಲೀಸ್ ಕಮಿಷನರ್ ಕಾನೂನು ತೊಡಕಿನ ಕಾರಣ ನೀಡಿದ್ದರು. ಗೂಂಡಾ ಕಾಯ್ದೆ ಜಾರಿಯಾದರೆ ಒಂದು ವರ್ಷ ಕಾಲ ಜೈಲಲ್ಲಿ ಇರಲೇಬೇಕು. ಆದರೆ, ಗೂಂಡಾ ಕಾಯ್ದೆ ಜಾರಿಯಾಗದೆಯೂ ಪಡೀಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಲ್ಲಿದ್ದರು. ಈ ಬಾರಿ ಗೂಂಡಾ ಕಾಯ್ದೆ ಜಾರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈತ ನೈಜ ಗೂಂಡಾ
ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿ ಅಹಪರಿಸಿ ಗೆಳೆಯನಿಂದ ಅತ್ಯಾಚಾರ ನಡೆಸಿದ ಆರೋಪಿ ಇಲ್ಯಾಸ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಇದಕ್ಕೂ ಮೊದಲು ಕೊಲೆ, ಲೂಟಿ, ಹಫ್ತಾ ಪ್ರಕರಣಗಳ ಆರೋಪಿ ಪ್ರದೀಪ್ ಮೆಂಡನ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರೂ ಗೂಂಡಾ ಕಾಯ್ದೆಗೆ ಹೇಳಿ ಮಾಡಿಸಿದಂತಹ ಕ್ರಿಮಿನಲ್ಗಳು.
ರಾಜಕೀಯ ಪ್ರೇರಿತ: ವಿಹಿಂಪ
ಬಜರಂಗದಳ ಮುಖಂಡರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸುವ ವಿಚಾರ ಎಡಿಜಿಪಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಬೇರೆ ಸಂಘಟನೆಯಲ್ಲಿ, ಸಮುದಾಯದಲ್ಲಿ ಮಹಾ ಪಾತಕಿಗಳಿದ್ದಾರೆ. ಅಪರಾಧಿ ಮನೋಭಾವ ಇಲ್ಲದೆ, ರಕ್ತ ಕ್ರಾಂತಿ ಮಾಡದೆ ಹಿಂದೂ ಸಿದ್ಧಾಂತದ ಬಗ್ಗೆ ಹೋರಾಡುವವರ ಮೇಲೆ ರೌಡಿ ಶೀಟ್ ತೆರೆಯಲಾಗುತ್ತಿದೆ ಎಂದು ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ ಶೇಣವ ಆರೋಪಿಸಿದ್ದಾರೆ. ಹಿಂದೂ ಸಂಘಟನೆಗಳಿಂದಾಗಿ ಕೋಮುಗಲಭೆ ನಡೆದಿಲ್ಲ. ಕೋಮು ಗಲಭೆ ನಡೆಸುವವರ ಮೇಲೆ ಗೂಂಡಾ ಕಾಯ್ದೆ, ರೌಡಿಶೀಟ್ ದಾಖಲಿಸುವುದಿಲ್ಲ. ಇದೆಲ್ಲ ರಾಜಕೀಯ ಪ್ರೇರಿತ ಎಂದು ಶೇಣವ ಟೀಕಿಸಿದ್ದಾರೆ.
ಶಿಕ್ಷೆ ಆಗಿರಬೇಕಿಲ್ಲ: ಕಮಿಷನರ್
ಹಿಂದಿನವರು ರೌಡಿ ಲೀಸ್ಟ್ ಮಾಡಿಲ್ಲ, ಈಗ ಮಾಡುತ್ತಿದ್ದಾರೆ ಎಂದಾದರೆ ಅದು ವೈಯಕ್ತಿಕ ಆಸಕ್ತಿ ಎಂದು ತಿಳಿಯುವಂತಿಲ್ಲ. ರೌಡಿ ಲಿಸ್ಟ್ ಪರಿಷ್ಕರಣೆ ಮಾಡುವುದು ಕರ್ತವ್ಯ. ಗೂಂಡಾ ಕಾಯ್ದೆ ಜಾರಿಗೊಳಿಸಬೇಕಾದರೆ ಶಿಕ್ಷೆಯಾಗಬೇಕಾದ ಅಗತ್ಯ ಇಲ್ಲ. ಚಾರ್ಜ್ ಶೀಟ್ ದಾಖಲಿಸಿದ್ದರೆ ಸಾಕು. ಬೆದರಿಸಿ ಸಾಕ್ಷಿ ಹೇಳದಂತೆ ಮಾಡುತ್ತಾನೆ ಎಂಬ ನೆಲೆಯಲ್ಲಿಯೇ ಗೂಂಡಾ ಕಾಯ್ದೆ ದಾಖಲಿಸಬಹುದು. ಯಾರಿಗೆ ಗೂಂಡಾ ಕಾಯ್ದೆ ಹಾಕುತ್ತೇವೆ ಎಂದು ಹೇಳಲಾಗುವುದಿಲ್ಲ, ಹಾಕಿದ ಬಳಿಕ ವಿಚಾರ ಬಹಿರಂಗ ಪಡಿಸುತ್ತೇವೆ ಎಂದು ಕಮಿಷನರ್ ಆರ್. ಹಿತೇಂದ್ರ ತಿಳಿಸಿದ್ದಾರೆ.
ಗೂಂಡಾ ಕಾಯ್ದೆ ಪ್ರಸ್ತಾಪವನ್ನು ಹೈಕೋರ್ಟ್ ಮೂವರು ನ್ಯಾಯಾಧೀಶರ ಬೆಂಚ್ ಎತ್ತಿ ಹಿಡಿಯುವ ಅರ್ಹತೆ ಇದ್ದರೆ ಮಾತ್ರ ಇಲ್ಲಿಂದ ಕಳುಹಿಸಿ ಕೊಡುತ್ತೇವೆ. ಹಿಂದೂ ಇರಲಿ, ಮುಸ್ಲಿಂ ಇರಲಿ, ಆತ ಗೂಂಡಾ ಆಗಿದ್ದರೆ ಅವರ ಮೇಲೆ ಕಾಯ್ದೆ ಜಾರಿಗೊಳಿಸುತ್ತೇವೆ.
- ಆರ್. ಹಿತೇಂದ್ರ, ಕಮಿಷನರ್
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

