ನಾಗರಹೊಳೆ, ಬಂಡೀಪುರದಲ್ಲಿ ಬೆಂಕಿ: ನೂರಾರು ಎಕ್ರೆ ಕಾಡು ನಾಶ
ಗೋಣಿಕೊಪ್ಪಲು/ಗುಂಡ್ಲುಪೇಟೆ: ವಿಶ್ವವಿಖ್ಯಾತ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆಯಷ್ಟು ಕಾಡು ನಾಶವಾಗಿರುವ ಘಟನೆ ನಡೆದಿದೆ.
ಒಣಗಿದ ಬಿದಿರಿಗೆ ಬೆಂಕಿ ಹೊತ್ತಿಕೊಂಡಿದ್ದು ಸಾಕಷ್ಟು ಪ್ರಮಾಣದ ಕಾಡು ನಾಶವಾಗಿದೆ. ನಾಗರಹೊಳೆ ಅಭಯಾರಣ್ಯದ ಏಳು ವನ್ಯಜೀವಿ ವಲಯಗಳಲ್ಲಿ ತಿತಿಮತಿ ಸಮೀಪದ ಆನೆಚೌಕೂರು ವನ್ಯಜೀವಿ ವಲಯದಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರ ಸಮೀಪ ಗುರುವಾರ ಬೆಳಗ್ಗೆ 10ಕ್ಕೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಆದರೆ, ಮಧ್ಯಾಹ್ನ 12 ಗಂಟೆಗೆ ಪರಿಸ್ಥಿತಿಯ ಗಂಭೀರತೆ ಅರಿತ ಅರಣ್ಯಾಧಿಕಾರಿಗಳು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು.
ಬಿದಿರು ಮೆಳೆಗಳಿಗೆ ವ್ಯಾಪಿಸಿದ ಬೆಂಕಿ ಗಗನ ಚುಂಬಿಯಂತೆ ಧಗಧಗನೆ ಉರಿದು, ಪಟಾಕಿಯಂತೆ ಸಿಡಿಯುತ್ತಿತ್ತು. ಪರಿಣಾಮ ಇದರ ಕಿಡಿಗಳು ದೂರದ ಮತ್ತೊಂದು ಬಿದಿರು ಮೆಳೆಗಳ ಮೇಲೆಯೂ ಹರಡಿ ಮತ್ತಷ್ಟು ಅನಾಹುತ ಸೃಷ್ಟಿಸಿದೆ.
ನಾಗರಹೊಳೆಯಲ್ಲಿ ಗೋಣಿಕೊಪ್ಪಲಿನಿಂದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದರೂ, ಬೆಂಕಿಯ ಪ್ರಖರತೆಯಿಂದಾಗಿ ಕಾಡಿಗೆ ತೆರಳಲಾಗಲಿಲ್ಲ. ನಾಗರಹೊಳೆಯ 7 ಅರಣ್ಯ ವಲಯದಿಂದಲೂ ಅರಣ್ಯ ಸಿಬ್ಬಂದಿ, ಫೈರ್ ವಾಚರ್ಸ್ ಹಾಗೂ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಸುಮಾರು 200ಕ್ಕೂ ಅಧಿಕ ಜನರ ತಂಡ ಕಾರ್ಯಾಚರಣೆ ನಡೆಸಿತು. ಆದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.
ಬಂಡೀಪುರ ಉದ್ಯಾನದಲ್ಲಿ ನಾಶ: ಬೆಂಕಿಯ ಆರ್ಭಟಕ್ಕೆ ಬಂಡೀಪುರ ಅರಣ್ಯದ ಹಲವಾರು ಎಕರೆ ಪ್ರದೇಶ ಕಾಡು ಕೂಡ ನಾಶವಾಗಿದೆ. ಬಂಡೀಪುರ ಪೂರ್ವದ ಮಂಗಲ ಗ್ರಾಮದ ಬಳಿಯಿರುವ ಕಾರೇಮಾಳ ಬಳಿ ಸಂಜೆ 5ಕ್ಕೆ ಈ ಬೆಂಕಿ ಕಾಣಿಸಿಕೊಂಡಿದ್ದು, 300 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಬಂಡೀಪುರ ಅರಣ್ಯ ಜೊತೆಗೆ ಗೋಪಾಲಸ್ವಾಮಿ ಬೆಟ್ಟದ ಕೆಲವೆಡೆ ಬೆಂಕಿ ಬಿದ್ದಿದೆ. ಓಂಕಾರ ಅರಣ್ಯ ವಲಯದಲ್ಲಿಯೂ ಗುರುವಾರವೇ ಕೆಲ ಕಡೆ ಬೆಂಕಿ ಬಿದ್ದಿದೆ. ಇವೆರಡು ಕಡೆ ಬೆಂಕಿ ನಂದಿಸಲಾಗಿದೆ.
ವನ್ಯ ಪ್ರಾಣಿಗಳು, ಮೊಲ, ಕಾಡುಕೋಳಿ, ಉರಗ, ಉಡ ಇತ್ಯಾದಿ ಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವ ಸಾಧ್ಯತೆ ಇದೆ. ಅಲ್ಲದೆ, ಸಾಕಾನೆ ಶಿಬಿರದಲ್ಲಿ ಸುಮಾರು 33 ಆನೆಗಳಿದ್ದು, ಇತ್ತೀಚೆಗೆ ಸಕಲೇಶಪುರ, ಹಾಸನದ ಪುಂಡಾನೆಗಳನ್ನೂ ಪಳಗಿಸುವ ಸಲುವಾಗಿ ಮತ್ತಿಗೋಡು ಶಿಬಿರಕ್ಕೆ ಕರೆತರಲಾಗಿತ್ತು. ಹೀಗಾಗಿ ಸಾಕಾನೆ ಶಿಬಿರದಿಂದ ಆನೆಗಳನ್ನು ಕಾಡಿಗಟ್ಟಲು ಇದೀಗ ಅಸಾಧ್ಯವಾಗಿದೆ.
ಮೀನುಗಾರನ ಬಂಧನ
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬೆಂಕಿ ಹಾಕಿದ್ದಾನೆ ಎಂಬ ಸಂಶಯದ ಮೇಲೆ ಮೀನುಗಾರನೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ. ಮಂಗಳ ಗ್ರಾಮದ ಬಳಿಯಿರುವ ಕೆರೆಯಲ್ಲಿ ಗುರುವಾರ ಮದ್ಯಾಹ್ನ ಮೀನು ಹಿಡಿಯುವ ಮಂದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೆರಯಿಂದ ಹೊರಗಡೆ ಕಳುಹಿಸಿದ್ದರು. ಇದರಿಂದ ಮೀನು ಹಿಡಿಯಲು ಬಿಡದ ಕೋಪಕ್ಕೆ ಬೆಂಕಿ ಹಾಕಿದ್ದಾರೆ ಎಂದು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

