ಬಿಜೆಪಿ, ಕಾಂಗ್ರೆಸ್ನಲ್ಲಿ 3 ಸ್ಥಾನ ಬಾಕಿ, ಅಂತಿಮ ಕ್ಷಣದಲ್ಲಿ ಮೊಯ್ಲಿಗೆ ಕೊಟ್ರು, ಜಾಫರ್ ಬಿಟ್ರು

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಯಡಿಯೂರಪ್ಪ ಬಿಗಿ ಪಟ್ಟಿಗೆ ಮಣಿದಿರುವ ಬಿಜೆಪಿ ಹೈಕಮಾಂಡ್ ಉಚ್ಚಾಟಿತ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅವರಿಗೂ ತುಮಕೂರು ಕ್ಷೇತ್ರದಿಂದ ಟಿಕೆಟ್ ಕೊಡಲು ಒಪ್ಪಿದೆ.
ಉಡುಪಿ ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ, ಮೈಸೂರಿನಿಂದ ಕನ್ನಡಪ್ರಭ ಸುದ್ದಿ ಸಂಪಾದಕ, ಅಂಕಣಕಾರ ಪ್ರತಾಪ್ ಸಿಂಹ, ಕೋಲಾರದಲ್ಲಿ ಬೇತಮಂಗಲ ನಾರಾಯಣಸ್ವಾಮಿ, ಮಂಡ್ಯದಲ್ಲಿ ಬಿ. ಶಿವಲಿಂಗಯ್ಯ, ತುಮಕೂರಿನಿಂದ ಜಿ.ಎಸ್. ಬಸವರಾಜ್ ಅವರ ಹೆಸರನ್ನು ಗುರುವಾರ ರಾತ್ರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅಧಿಕೃತವಾಗಿ ಘೋಷಿಸಿದರು. ಆದರೆ ಬೀದರ್, ಹಾಸನ ಮತ್ತು ಬಳ್ಳಾರಿ ಕ್ಷೇತ್ರಗಳು ಇನ್ನೂ ಕಗ್ಗಂಟಾಗಿದೆ ಎಂದು ಮೂಲಗಳು ಹೇಳಿವೆ.
ಬಿಎಸ್ವೈ ಹಟಕ್ಕೆ ಮಣಿದ ನಾಯಕರು: ತುಮಕೂರು ಕ್ಷೇತ್ರವನ್ನು ಕಳೆದುಕೊಂಡರೂ ಪರವಾಗಿಲ್ಲ ಉಚ್ಚಾಟಿತ ಸಂಸದ ಜಿ.ಎಸ್. ಬಸವರಾಜುಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಹಠಕ್ಕೆ ಮಣಿದಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ. ಆಪ್ತರಾದ ಶೋಭಾಗೆ ಉಡುಪಿ- ಚಿಕ್ಕಮಗಳೂರು ಟಿಕೆಟ್ ದಕ್ಕಿಸಿಕೊಂಡಿದ್ದಾರೆ.
ಬಿಜೆಪಿ ಪಟ್ಟಿ
ಉಡುಪಿ, ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ
ಮೈಸೂರು - ಪ್ರತಾಪ್ ಸಿಂಹ
ಕೋಲಾರ - ಬಿ. ನಾರಾಯಣಸ್ವಾಮಿ
ಮಂಡ್ಯ - ಬಿ.ಶಿವಲಿಂಗಯ್ಯ
ತುಮಕೂರು - ಜಿ.ಎಸ್. ಬಸವರಾಜು
ಬಾಕಿ ಕ್ಷೇತ್ರಗಳು
ಬೀದರ್
ಬಳ್ಳಾರಿ
ಹಾಸನ
ಕುಮಾರ್ ಬದಲು ಭಂಡಾರಿ
- ಕನ್ನಡಪ್ರಭ ಪ್ರತಿನಿಧಿಯಿಂದ ನವದೆಹಲಿ: ಲೋಕಸಭಾ ಮಹಾ ಸಮರಕ್ಕೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಸೇರಿದಂತೆ ರಾಜ್ಯದ ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಜಾಫರ್ ಷರೀಫ್ಗೆ ಟಿಕೆಟ್ ನೀಡಿಲ್ಲ. ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಇಲ್ಲಿ ಟಿಕೆಟ್ ಗಿಟ್ಟಿಸಿದ್ದಾರೆ.
ಪ್ರತಿಷ್ಠಿತ ಶಿವಮೊಗ್ಗ ಕ್ಷೇತ್ರಕ್ಕೆ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಆಪ್ತ ಮಂಜುನಾಥ್ ಭಂಡಾರಿಗೆ ಟಿಕೆಟ್ ನೀಡಲಾಗಿದೆ. ಪ್ರಾಥಮಿಕ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜನಾರ್ದನ ಪೂಜಾರಿ ಮಂಗಳೂರಿನಿಂದ ಕಣಕ್ಕಿಳಿಯಲಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದಿರುವ ನಾರಾಯಣ ಸ್ವಾಮಿಗೆ ಟಿಕೆಟ್ ದೊರೆಯಲಿದೆ.
ಆದರೆ, ಅಧಿಕೃತವಾಗಿ ಘೋಷಿಸಬೇಕಷ್ಟೆ. ಇನ್ನುಳಿದಂತೆ ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ.
ತಪ್ಪಿಸಿಕೊಂಡ ಆಂಜನೇಯ, ಸಿಕ್ಕಿಬಿದ್ದ ಹುಕ್ಕೇರಿ: ಕೊನೆಗೂ ಬೀಸುವ ದೊಣ್ಣೆಯಿಂದ ಸಚಿವ ಆಂಜನೇಯ ತಪ್ಪಿಸಿಕೊಂಡಿದ್ದಾರೆ. ಅವರು ಕಣಕ್ಕಿಳಿಯಬೇಕಿದ್ದ ಚಿತ್ರದುರ್ಗ ಕ್ಷೇತ್ರದಲ್ಲಿ ಚಂದ್ರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಇದೇ ಭಾಗ್ಯ ಪ್ರಕಾಶ್ ಹುಕ್ಕೇರಿ ಅವರಿಗೆ ಇಲ್ಲ. ಬೇಡ ಬೇಡ ಎಂದರೂ ಅವರನ್ನು ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಕೊಪ್ಪಳ ಕ್ಷೇತ್ರಕ್ಕೆ ಬಸವರಾಜ್ ಹಿಟ್ನಾಳ್, ರಾಯಚೂರು ಕ್ಷೇತ್ರಕ್ಕೆ ಬಿ.ವಿ. ನಾಯಕ್ ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಅಜಯ್ ಕುಮಾರ್ ಸರನಾಯಕ್ ಟಿಕೆಟ್ ಪಡೆದದ್ದಾರೆ.
'ಕುಮಾರ'ನಿಗಿಲ್ಲ ಟಿಕೆಟ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಜೆಡಿಎಸ್ನಿಂದ ಬಂಗಾರಪ್ಪ ಕುಟುಂಬದ ಸದಸ್ಯರು(ಮಧು ಬಂಗಾರಪ್ಪ ಅಥವಾ ಗೀತಾ ಶಿವರಾಜ್ ಕುಮಾರ್) ಕಣಕ್ಕಿಳಿಯುತ್ತಿರುವುದರಿಂದ ಕುಮಾರ್ ಬಂಗಾರಪ್ಪ ಅವರನ್ನು ಕೈಬಿಡಲಾಗಿದೆ. ಮಂಜುನಾಥ ಬಂಡಾರಿ ಅವರನ್ನು ಕಣಕ್ಕಿಳಿಸಿದೆ.
ಅರ್ಷದ್ಗೆ ಟಿಕೆಟ್: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಯುವಕರ ಕೋಟಾದಡಿ ಟಿಕೆಟ್ ಗಿಟ್ಟಿಸಿದ್ದಾರೆ. ಯುವಕರಿಗೆ ಪ್ರಾತಿನಿಧ್ಯ ನೀಡಬೇಕೆಂಬ ರಾಹುಲ್ ಗಾಂಧಿ ಆಶಯಕ್ಕನುಗುಣವಾಗಿ ರಿಜ್ವಾನ್ಗೆ ಟಿಕೆಟ್ ಸಿಕ್ಕಿದೆ. ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಮೆಕ್ಕಾ ಯಾತ್ರೆಗೆ ತೆರಳಿದ್ದಾರೆ.
ಮೊಯ್ಲಿಗೆ ಟಿಕೆಟ್: ಮೊದಲ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ವೀರಪ್ಪ ಮೊಯ್ಲಿಗೆ ರಿಲಯನ್ಸ್ ಸಂಸ್ಥೆಗೆ ಅನಿಲ ದರ ನಿಗದಿಯಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆಂಬ ಕಾರಣಕ್ಕೆ ಎಫ್ಐಆರ್ ದಾಖಲಾಗಿರುವುದರಿಂದ ಟಿಕೆಟ್ ನಿರಾಕರಿಸಲಾಗಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. ಚಿಕ್ಕಬಳ್ಳಾಪುರದಿಂದ ಮೊಯ್ಲಿ ಸೆಣಸಲಿದ್ದಾರೆ. ಮಹಿಳೆಯರ ಕೋಟಾದಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಳಗಾವಿ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ.
ಘೋಷಿಸಬೇಕಿರುವ ಹಾವೇರಿ ಕ್ಷೇತ್ರದಿಂದ ಸಲೀಂ ಅಹ್ಮದ್, ಐ.ಜಿ. ಸನದಿ, ಡಿ.ಆರ್. ಪಾಟೀಲ್, ಧಾರವಾಡ ಕ್ಷೇತ್ರದಿಂದ ಮಂಜುನಾಥ್ ಕುನ್ನೂರು, ವಿನಯ್ ಕುಲಕರ್ಣಿ, ಎ.ಎಂ. ಹಿಂಡಸಗೇರಿ ಹಾಗೂ ಉತ್ತರ ಕನ್ನಡ ಕ್ಷೇತ್ರದಿಂದ ನಿವೇದಿತ್ ಆಳ್ವ, ಪ್ರಶಾಂತ್ ದೇಶಪಾಂಡೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ಪಟ್ಟಿ
* ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ
* ಬೆಂಗಳೂರು ಕೇಂದ್ರ:ರಿಜ್ವಾನ್ ಅರ್ಷದ್
* ಬಾಗಲಕೋಟೆ: ಅಜಯಕುಮಾರ್ ಸರನಾಯಕ್
* ರಾಯಚೂರು: ಬಿ.ವಿ. ನಾಯಕ್
* ಚಿತ್ರದುರ್ಗ: ಚಂದ್ರಪ್ಪ
* ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ
* ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್
* ಕೊಪ್ಪಳ: ಬಸವರಾಜ್ ಹಿಟ್ನಾಳ್
* ಶಿವಮೊಗ್ಗ: ಮಂಜುನಾಥ ಭಂಡಾರಿ
* ದಕ್ಷಿಣ ಕನ್ನಡ: ಜನಾರ್ದನ ಪೂಜಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


