ಬೇಡ ಅಂದವರಿಗೆ ಕರೆದು ಕೊಟ್ರು, ಗೋಗರೆದವರಿಗೆ ಕೊಡಾಕಿಲ್ಲ ಅಂದ್ರು

ಕನ್ನಡಪ್ರಭವಾರ್ತೆ , ಬೆಂಗಳೂರು , ಮಾ.13
ಟಿಕೆಟ್ ಘೋಷಣೆಯಾದ ನಂತರ ಕಾಂಗ್ರೆಸ್ ಸಂಸದರೊಬ್ಬರು ಮಧ್ಯಪ್ರದೇಶದಲ್ಲಿ ಪಕ್ಷ ತೊರೆದಿದ್ದರಿಂದ ಉಂಟಾದ ಮುಖಭಂಗದಿಂದ ಚೇತರಿಸಿಕೊಳ್ಳುವುದಕ್ಕೆ ಮುನ್ನವೇ ಹಾಲಿ ಸಚಿವರೊಬ್ಬರು ಟಿಕೆಟ್ ಪ್ರಕಟವಾದ ನಂತರ ಸ್ಪರ್ಧಿಸಲೊಲ್ಲೆ ಎಂದು ಹೈಕಮಾಂಡ್ಗೆ ಸೆಡ್ಡು ಹೊಡೆದಿದ್ದಾರೆ.
ಇತ್ತ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾದ ಸಿ.ಕೆ. ಜಾಫರ್ ಶರೀಫ್ ಅವರು ಬಂಡಾಯದ ಬಾವುಟ ಹಾರಿಸುವ ಎಲ್ಲ ಸೂಚನೆಗಳನ್ನು ನೀಡಿದ್ದಾರೆ. ಪಟ್ಟಿಯಲ್ಲಿ ಅವರ ಬದಲು ಬೇರೆಯವರ ಹೆಸರು ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಚುನಾವಣಾ ಸಮಿತಿ ನೀಡಿದ ಆದೇಶವನ್ನು ಸಣ್ಣ ಕೈಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವ ಪ್ರಕಾಶ್ ಬಿ.ಹುಕ್ಕೇರಿ ಉಲ್ಲಂಘಿಸಲು ನಿರ್ಧರಿಸಿದ್ದಾರೆ.
ತಾವು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಅವರನ್ನು ಗೆಲ್ಲಿಸುತ್ತೇನೆ ಎಂದು ಸಚಿವ ಹುಕ್ಕೇರಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದರು.
ಆದರೆ ಹೈಕಮಾಂಡ್ ಆದೇಶವನ್ನು ಮೀರುವ ಎಲ್ಲ ಲಕ್ಷಣವನ್ನು ಹುಕ್ಕೇರಿ ತೋರಿದ್ದಾರೆ. ಈ ಸಂಬಂಧ 'ಕನ್ನಡಪ್ರಭ'ದ ಜತೆ ಮಾತನಾಡಿದ ಅವರು, 'ನಾನು ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದೇನೆ. ಈಗ ಮತ್ತೆ ಚುನಾವಣೆಗೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಹೈಕಮಾಂಡ್ ತನ್ನ ಅಭಿಪ್ರಾಯ ತಿಳಿಸಿದೆ. ಅದೇ ರೀತಿ ನಾನು ನನ್ನ ನಿಲುವನ್ನು ಹೇಳುತ್ತಿದ್ದೇನೆ' ಎಂದು ಹೇಳಿದ್ದಾರೆ.
'ನನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಜತೆಗೆ ಪಕ್ಷದ ಕಾರ್ಯಕರ್ತರು, ಈ ಭಾಗದ ಮುಖಂಡರ ಅಭಿಪ್ರಾಯವೂ ಇದೇ ಆಗಿದೆ. ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ಒತ್ತಾಸೆ ಮೀರಿದರೆ?: ಹುಕ್ಕೇರಿ ಸೇರಿದಂತೆ ಮೂವರು ಸಚಿವರನ್ನು ಲೋಕಸಭಾ ಚುನಾವಣೆ ಕಣಕ್ಕಿಳಿಸಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆಯೂ ಆಗಿತ್ತು. ಆದರೆ ಕೃಷಿ ಸಚಿವ ಕೃಷ್ಣ ಭೈರೇಗೌಡ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಆರಂಭದಲ್ಲೇ ಜಾರಿಕೊಳ್ಳುವ ಪ್ರಯತ್ನ ನಡೆಸಿದರು. ಕೊನೆಯ ಕ್ಷಣದವರೆಗೂ ಲೋಕಸಭಾ ಚುನಾವಣೆ ಎದುರಿಸಲು ನಿರಾಕರಿಸಿದರೂ ಹುಕ್ಕೇರಿಯವರನ್ನು ಮಾತ್ರ ಹೈಕಮಾಂಡ್ ಬಿಟ್ಟಿಲ್ಲ. ಕಾಂಗ್ರೆಸ್ ಮೂಲಗಳ ಪ್ರಕಾರ, ಹುಕ್ಕೇರಿ ಅವರು ಚಿಕ್ಕೋಡಿ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು.
ಷರೀಫ್ರ ಹಾದಿ ಯಾವುದು?: ಅದೇ ರೀತಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಯಸಿದ್ದ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಅವರಿಗೂ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಕೊಕ್ ನೀಡಿದೆ. ಅವರ ಬದಲಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಲಾಗಿದೆ.
ಇದರಿಂದ ಕೆರಳಿರುವ ಷರೀಫ್ ಪಕ್ಷ ತೊರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಟಿಕೆಟ್ ನಿರಾಕರಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿರುವ ಅವರು ಮುಂದಿನ ರಾಜಕೀಯ ನಡೆ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗದಲ್ಲೂ ಭಿನ್ನ ರಾಗ: ಅದೇ ರೀತಿ ಚಿತ್ರದುರ್ಗ ಕ್ಷೇತ್ರದಿಂದ ಚಂದ್ರಪ್ಪ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಪಕ್ಷದ ಮುಖಂಡರ ಕಣ್ಣು ಕೆಂಪಾಗಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ, ಜಿ.ಎಸ್.ಮಂಜುನಾಥ್ ಹಾಗೂ ಮಾಜಿ ಸಚಿವ ಕೆ.ಎಚ್.ರಂಗನಾಥ್ ಅವರ ಅಳಿಯ ಎಸ್.ವಿಜಯಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಜಿಲ್ಲೆಯ ಹೊರಗಿನವರಾದ ಚಂದ್ರಪ್ಪನವರಿಗೆ ಟಿಕೆಟ್ ನೀಡಿರುವುದು ಸ್ಥಳೀಯರ ಕಣ್ಣು ಕೆಂಪಾಗಿಸಿದೆ.
ಕೆನರಾ ಕಗ್ಗಂಟು: ಅದೇ ರೀತಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿದೆ. ಬಿ.ಕೆ.ಹರಿಪ್ರಸಾದ್, ನಿವೇದಿತ್ ಆಳ್ವ ಹಾಗೂ ಪ್ರಶಾಂತ್ ದೇಶಪಾಂಡೆ ಅವರ ಪೈಕಿ ಯಾರನ್ನು ಕಣಕ್ಕಿಳಿಸಬೇಕೆಂಬುದು ಇನ್ನೂ ಬಗೆಹರಿದಿಲ್ಲ.
ಹೈಕಮಾಂಡ್ನವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ನಾನು ನನ್ನ ನಿರ್ಧಾರ ಏನು ಎಂದು ತಿಳಿಸುತ್ತೇನೆ. ದೇವರ ಬಳಿ ಪ್ರಾರ್ಥಿಸುತ್ತೇನೆ. ದೇವರು ಯಾವ ಬುದ್ಧಿ ಕೊಡುತ್ತಾನೋ ಆ ನಿರ್ಧಾರ ಪ್ರಕಟಿಸುತ್ತೇನೆ. ದೇವೇಗೌಡರ ಬಗ್ಗೆ ಮೃದು ಧೋರಣೆ ತಳೆದ ಕಾರಣಕ್ಕೆ ಟಿಕೆಟ್ ತಪ್ಪಿದೆ ಎಂದು ನಾನಂತೂ ಭಾವಿಸಿಲ್ಲ.
- ಸಿ.ಕೆ. ಜಾಫರ್ ಶರೀಫ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


