ಪರೀಕ್ಷೆ ತಪ್ಪಿಸಿಕೊಳ್ಳಲು ತಾನೇ ಕಿಡ್ನಾಪ್ ಆದ!
ಕ.ಪ್ರ.ವಾರ್ತೆ, ಅಂಕೋಲಾ, ಮಾ.15
ಪಿಯುಸಿ ಪರೀಕ್ಷೆಗೆ ಹೋಗುತ್ತಿದ್ದ ವಿದ್ಯಾರ್ಥಿ ಎರಡು ದಿನಗಳ ಹಿಂದೆ ಅಪಹರಣಕ್ಕೆ ಒಳಗಾದ ಕಥೆ ಹೊಸ ತಿರುವು ಪಡೆದಿದೆ.
ಪರೀಕ್ಷೆ ಬರೆಯುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಯೇ ಸಿನಿಮೀಯ ರೀತಿಯಲ್ಲಿ ಹೆಣೆದ ಅಪಹರಣ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಗರಿಕರಲ್ಲಿ ಸಂಚಲನ ಉಂಟು ಮಾಡಿದ್ದ ಘಟನೆ 'ಇಷ್ಟೇನಾ?' ಎನ್ನುವಂತೆ ಮಾಡಿದೆ. ಎರಡು ದಿನಗಳ ಹಿಂದೆ ಅಂಕೋಲಾದ ಹೆದ್ದಾರಿಯಲ್ಲಿ ಪಿಯುಸಿ ಪರೀಕ್ಷೆಗೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ನಾಲ್ವರು ಮುಸುಕುಧಾರಿಗಳು ಅಪಹರಿಸಿದ್ದಾರೆ ಎಂಬ ಸುದ್ದಿ ತೀವ್ರ ಆತಂಕ ಸೃಷ್ಟಿಸಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪಿಎಸ್ಐ ಬಿ.ಎಂ.ಗೋವಿಂದ, ಇದು ವಿದ್ಯಾರ್ಥಿಯೇ ಹೆಣೆದ ಕಲ್ಪಿತ ಕಥೆ ಎಂಬುದನ್ನು ಸಾಕ್ಷ್ಯಾಧಾರಗಳ ಮೂಲಕ ಬಯಲಿಗೆ ಎಳೆದಿದ್ದಾರೆ.
ವಿದ್ಯಾರ್ಥಿಯೇ ಹೆಣೆದ ಕಥೆ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಜ್ಜಿಕಟ್ಟಾದ ಚೇತನ ಆಗೇರ (17) ಪ್ರತಿಭಾವಂತ. ಆದರೆ, ಪರೀಕ್ಷೆಗೆ ಸಾಕಷ್ಟು ಓದಿಕೊಂಡಿಲ್ಲದ ಕಾರಣ, ಪರೀಕ್ಷೆ ತಪ್ಪಿಸಿಕೊಳ್ಳಲು ಅಪಹರಣದ ನಾಟಕ ಸೃಷ್ಟಿಸಿದ್ದ. ದುಷ್ಕರ್ಮಿಗಳಿಂದ ಪರೀಕ್ಷೆ ತಪ್ಪಿ ಹೋಗಿದೆ. ತನಗಾದ ಶೈಕ್ಷಣಿಕ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸಿ, ಎಂದು ಠಾಣೆ ಮೆಟ್ಟಿಲೇರಿ ಆಗ್ರಹಿಸಿದ್ದ. ಅಜ್ಜಿಕಟ್ಟಾದ ಗ್ರಾಮಸ್ಥರು ಪಪಂ ಮಾಜಿ ಅಧ್ಯಕ್ಷ ರಾಜೇಂದ್ರ ಅವರ ನೇತೃತ್ವದಲ್ಲಿ ಠಾಣೆಗೆ ಬಂದು ದೂರನ್ನೂ ನೀಡಿದ್ದರು. ವಿದ್ಯಾರ್ಥಿ ಚೇತನ್ ಯಾರಿಗೂ ಅನುಮಾನ ಬಾರದಂತೆ ಅಪಹರಣದ ಕಥೆ ಕಟ್ಟಿ ಹೇಳಿದ್ದ. ಆದರೆ, ಪೊಲೀಸರ ಮುಂದೆ ಆತನ ನಾಟಕ ನಡೆಯಲಿಲ್ಲ!
ಸಿನಿಮೀಯ ಪ್ರಕರಣ ಬಯಲಿಗೆ: ಪ್ರಕರಣದ ವಿಚಾರಣೆ ನಡೆಸಿದ ಪಿಎಸ್ಐ ಗೋವಿಂದ ಬಿ.ಎಂ. ಅವರಿಗೆ ವಿದ್ಯಾರ್ಥಿಯ ಒಳ ಉಡುಪಿನಲ್ಲಿ ಬಸ್ ಟಿಕೆಟ್ ಸಿಕ್ಕಿದೆ. ಮಾ.13ರ ಬೆಳಗ್ಗೆ 9.33ಕ್ಕೆ ಅಂಕೋಲದಿಂದ ಕಾರವಾರಕ್ಕೆ ತೆರಳಿದ್ದ ಬಸ್ ಅದು. ಆದರೆ, ವಿದ್ಯಾರ್ಥಿಯನ್ನು ವಿಚಾರಿಸಿದಾಗ, ಅಪಹರಣಕಾರರಿಂದ ತಪ್ಪಿಸಿಕೊಂಡು ಬರುವಾಗ ಯಾರೋ ಒಬ್ಬರು ಇದನ್ನು ಕೊಟ್ಟರು ಎಂದು ಹೇಳಿದ.
ಪೊಲೀಸರು ಕಾಲೇಜಿಗೆ ಹೋಗಿ ವಿದ್ಯಾರ್ಥಿ ಬಗ್ಗೆ ವಿಚಾರಿಸಿದಾಗ ವಿದ್ಯಾರ್ಥಿ ಪ್ರವೇಶ ಪರೀಕ್ಷೆಯ ಪತ್ರವನ್ನೇ ಒಯ್ದಿಲ್ಲ ಎಂಬ ಸಂಗತಿ ಗೊತ್ತಾಯಿತು. ಪ್ರಾಯೋಗಿಕ ಪರೀಕ್ಷೆ ವೇಳೆ ಪಾಚಾರ್ಯರ ಸಹಿಯನ್ನೇ ನಕಲು ಮಾಡಿದ್ದನ್ನೂ ಪೊಲೀಸರು ಪತ್ತೆ ಹಚ್ಚಿದರು. ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ, ಈತನನ್ನು ಪ್ರಜ್ಞೆ ತಪ್ಪಿಸಲು ಯಾವುದೇ ರಾಸಾಯನಿಕ ಬಳಸಿಲ್ಲ ಎಂಬ ಅಂಶವೂ ಗೊತ್ತಾಯಿತು. ಮೇಲಾಗಿ, ಬ್ಲೇಡ್ನಿಂದ ತಾನೇ ಅಂಗೈಗೆ ಗಾಯ ಮಾಡಿಕೊಂಡು, ಅಪಹರಣಕಾರರಿಂದ ತಪ್ಪಿಸಿಕೊಂಡು ಬರುವಾಗ ಆಯಿತೆಂದು ಹೇಳಿದ್ದ.
ಪರೀಕ್ಷೆ ಬರೆಯುವುದನ್ನು ತಪ್ಪಿಕೊಳ್ಳಲು ವಿದ್ಯಾರ್ಥಿ ಈ ರೀತಿ ಸುಳ್ಳು ಅಪಹರಣ ಪ್ರಕರಣವನ್ನು ಹೆಣೆದಿದ್ದಾನೆ. ವಿಚಾರಣೆಯಿಂದ ಪ್ರಕರಣ ಕಪೋಕಲ್ಪಿತವಾಗಿರುವುದು ಬಯಲಿಗೆ ಬಂದಿದೆ.
- ಗೋವಿಂದ ಬಿ.ಎಂ., ಪಿಎಸ್ಐ
ತೀವ್ರ ಆತಂಕಕ್ಕೆ ಕಾರಣವಾಗಿದ್ದ ಅಪಹರಣ ಪ್ರಕರಣವನ್ನು ಪಿಎಸ್ಐ ಗೋವಿಂದ ನೇತೃತ್ವದ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಾಸ್ತವವನ್ನು ಬಯಲಿಗೆ ತಂದಿದ್ದಾರೆ.
- ಎಸ್. ಅಶೋಕ, ಅಂಕೋಲಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

