ಪ್ರಧಾನ ಸುದ್ದಿ

ಭಾಜಪ ನಮೋ ಜಪ, ಅಧಿಕಾರಕ್ಕೆ ನಾ ಕೈ ಹಿಡಿದವನಲ್ಲ

ಭಾಜಪ ನಮೋ ಜಪ, ಅಧಿಕಾರಕ್ಕೆ ನಾ ಕೈ ಹಿಡಿದವನಲ್ಲ
Published On :

ಕನ್ನಡಪ್ರಭ ವಾರ್ತೆ , ಬೆಂಗಳೂರು , ಮಾ.15
ಸಿದ್ಧಾಂತ ಬಿಟ್ಟಿರುವ ಬಿಜೆಪಿ ನರೇಂದ್ರ ಮೋದಿ ಎನ್ನುವ ವ್ಯಕ್ತಿ ಪೂಜೆಯಲ್ಲಿ ತೊಡಗಿದೆ. ಜನಪರ ಯೋಜನೆ ಮತ್ತು ನಂಬಿದ ಸಿದ್ಧಾಂತವನ್ನು ಅನುಷ್ಠಾನಗೊಳಿಸುವ ಶ್ರದ್ಧೆ ಇಲ್ಲದ ಕಾರಣ ಬಿಜೆಪಿಯವರು ಮೋದಿಯನ್ನು ಬಿಂಬಿಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕಟಕಿಯಾಡಿದ್ದಾರೆ. 'ಕನ್ನಡಪ್ರಭ'ಕ್ಕೆ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ರಾಷ್ಟ್ರ ರಾಜಕಾರಣದ ಜತೆಗೆ ರಾಜ್ಯದ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದರು. ಸಂದರ್ಶನದ ಪೂರ್ಣಪಾಠ...
ಕಾಂಗ್ರೆಸ್ ವ್ಯಕ್ತಿಪೂಜೆ ಮಾಡುತ್ತಿದೆ ಎಂದು ಹೇಳಿದವರೇ ಈಗ ಮೋದಿ ಜಪ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನಿಂದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟು, ಬಿಜೆಪಿಯಿಂದ ಸ್ವೀಕರಿಸಲ್ಪಟ್ಟ ಮೋದಿ ಈಗ ಮಾಧ್ಯಮದವರಿಂದ ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೆ. ಕಾಶ್ಮೀರದಿಂದ ಕನ್ಯಾಕುಮಾರಿ, ಪಶ್ಚಿಮ ಬಂಗಾಳದಿಂದ ಗುಜರಾತ್‌ವರೆಗೆ ಒಪ್ಪಿತವಾದ ಯಾವ ಯೋಜನೆಯನ್ನು ಮೋದಿ ನೀಡಿದ್ದಾರೆ? ಮಾನವ ಅಭಿವೃದ್ಧಿ ಸೂಚ್ಯಂಕ ಗಮನಿಸಿದರೆ ಶಿಕ್ಷಣ, ಮೂಲ ಸೌಕರ್ಯ, ಪೌಷ್ಟಿಕತೆ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುಜರಾತ್ ಹಿಂದಿದೆ. ಹೀಗಿರುವಾಗ ಗುಜರಾತ್ ಇಡಿ ದೇಶಕ್ಕೆ ಮಾದರಿ ಎನಿಸಲು ಸಾಧ್ಯವೇ?
 ಸಿಎಂ ಖುರ್ಚಿಯೇ ಬೇಕಿಲ್ಲ
ಸಮಾಜದ ಬಗ್ಗೆ ಕಳಕಳಿ ಇಲ್ಲದೇ ಇರುವವರು ಮಾತ್ರ ಆಸೆ- ನಿರಾಸೆ ಜಪ ಮಾಡುತ್ತಾರೆ. ನನ್ನ ವ್ಯಕ್ತಿತ್ವ ಆ ರೀತಿಯದ್ದಲ್ಲ. ಮುಖ್ಯಮಂತ್ರಿಯಾಗಬೇಕು ಎಂಬ ನನ್ನ ಆಸೆ ಕೈಗೂಡುತ್ತದೆ, ಅಥವಾ ಇನ್ಯಾವುದೋ ಅಧಿಕಾರ ಸಿಗುತ್ತದೆ ಎಂಬ ಕಾರಣಕ್ಕೆ ನಾನು ಕಾಂಗ್ರೆಸ್ ಸೇರಿಲ್ಲ. ದುರ್ಬಲ ವರ್ಗದವರ ಏಳ್ಗೆಗೆ, ಶೋಷಿತರ ಸಬಲೀಕರಣಕ್ಕೆ, ಎಲ್ಲ ವರ್ಗದವರನ್ನು ಸಮಾನವಾಗಿ ಕಾಣಬೇಕೆಂಬ ನನ್ನ ಹೃದಯಾಂತರ್ಗತ ವಿಚಾರಗಳಿಗೆ ಕಾಂಗ್ರೆಸ್ ಸ್ಪಂದಿಸುತ್ತದೆ ಎಂಬ ಹಿನ್ನೆಲೆಯಲ್ಲಿ ನಾನು ಇಲ್ಲಿದ್ದೇನೆ.
ವಿದ್ಯಾರ್ಥಿ ದೆಸೆಯಿಂದಲೇ ನಾನು ಈ ವಿಚಾರಗಳತ್ತ ತುಡಿಯುತ್ತಿದ್ದೆ. ಆಗ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ಜೀತಪದ್ಧತಿ ನಿರ್ಮೂಲನೆಯಂಥ ಕಾರ್ಯಕ್ರಮಗಳ ಆಶಯ ಇದೇ ಆಗಿತ್ತು. ಹೀಗಾಗಿ 1970- 71ರಲ್ಲಿ ಅವರು ಗುಲ್ಬರ್ಗಕ್ಕೆ ಬಂದಾಗ ನಾವೆಲ್ಲರೂ ಕಾಂಗ್ರೆಸ್ ಸೇರಿದ್ದೇವೆಯೇ ಹೊರತು, ಅಧಿಕಾರ ಪಡೆಯಬೇಕೆಂಬ ಕಾರಣಕ್ಕಲ್ಲ. ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ಹೀಗಾಗಿ ಮುಖ್ಯಮಂತ್ರಿಯಾಗಬೇಕೆಂಬ ನಿಮ್ಮ ಆಸೆ ಕೈಗೂಡಿಲ್ಲ ಎಂಬ ಬೇಸರದ ಪ್ರಶ್ನೆ ಉದ್ಭವವಾಗುವುದಿಲ್ಲ.
ಅಷ್ಟಕ್ಕೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತರೆ ಮಾತ್ರ, ದುರ್ಬಲರು, ಶೋಷಿತರು, ದಲಿತರ ಅಭಿವೃದ್ಧಿ ಸಾಧ್ಯ ಎಂಬುದು ಅರ್ಥಹೀನ. ದೇವೇಗೌಡರು ಮುಖ್ಯಮಂತ್ರಿಯಾದ ಮಾತ್ರಕ್ಕೆ ಒಕ್ಕಲಿಗರ ಬಡತನ ನಿವಾರಣೆಯಾಯ್ತೇ? ನಿಜಲಿಂಗಪ್ಪ, ಜೆ.ಎಚ್. ಪಟೇಲ್, ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಲಿಂಗಾಯಿತರ ಅಭಿವೃದ್ಧಿಯಾಯ್ತೇ? ಬಂಗಾರಪ್ಪನವರು ಮುಖ್ಯಮಂತ್ರಿಯಾದರೆಂಬ ಮಾತ್ರಕ್ಕೆ ಹಿಂದುಳಿದವರ ಕಷ್ಟ ನಿವಾರಣೆಯಾಯ್ತೇ? ರಾಜಕೀಯ ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ. ಆದರೆ ಎಲ್ಲ ವರ್ಗದವರಿಗೂ ರಾಜಕೀಯ ಪ್ರಾತಿನಿಧ್ಯ ಇರಬೇಕು. ನಾವೆಲ್ಲರೂ ಒಂದು ಎಂಬ ಭಾವ ಇರಬೇಕು. ಆಗ ಸಮಾನ ಮನಸ್ಕರ ಕೈಲ್ಲಿ ಅಧಿಕಾರ ಸಿಕ್ಕರೂ ಸಾಕಾಗುತ್ತದೆ.
ಖರ್ಗೆ ನಿರುದ್ಯೋಗಿಯಾಗಲ್ಲ
ಕೇಂದ್ರದಲ್ಲಿ ಯುಪಿಎ ಅಧಿಕಾರ ಕಳೆದುಕೊಂಡರೆ ಖರ್ಗೆ ನಿರುದ್ಯೋಗಿಯಾಗುತ್ತಾರೆ. ನಂತರ ಅವರು ರಾಜ್ಯಕ್ಕೆ ಬಂದು ಸಿದ್ದರಾಮಯ್ಯ ಉದ್ಯೋಗ ಕಳೆಯುತ್ತಾರೆ ಎಂದು ಪ್ರತಿಪಕ್ಷದವರು ಅಲ್ಲಲ್ಲಿ ಕೀಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಈ ಪ್ರಚಾರದಲ್ಲೇ ಸಮಾಜವನ್ನು ಒಡೆಯುವ, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಿದೆ. ಯಾರೂ ಯಾರನ್ನೂ ನಿರುದ್ಯೋಗಿಯಾಗಿಸಲು ಸಾಧ್ಯವಿಲ್ಲ.
ವಾಜಪೇಯಿ, ಆಡ್ವಾಣಿ, ಮುರಳಿ ಮನೋಹರ ಜೋಶಿಯಂಥ ಘಟಾನುಘಟಿಗಳು ಇಂಡಿಯಾ ಶೈನಿಂಗ್ ಮಂತ್ರ ಪಠಿಸುತ್ತಿದ್ದಾಗಲೇ ನಾವು ಅಧಿಕಾರಕ್ಕೆ ಬಂದೆವು. ಈಗ ಶ್ರೇಷ್ಠ ಭಾರತದ ಸ್ಲೋಗನ್ ಮೊಳಗಿಸುತ್ತಿರುವ ಬಿಜೆಪಿ 272
ಸ್ಥಾನ ಗಳಿಸುವುದು ಅಸಾಧ್ಯ. ಜತೆಗೆ ಅವರಿಗೆ ಮಿತ್ರಪಕ್ಷದ ಕೊರತೆ
ಇದೆ. ಹೀಗಾಗಿ ಯುಪಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ.
ದುರದೃಷ್ಟ
ಕಳೆದ 10 ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿರುವ ಯುಪಿಎ ಸರ್ಕಾರದ ಸಾಧನೆ ಕಡಿಮೆಯಲ್ಲ. ಭೂಸ್ವಾಧೀನ ಕಾಯ್ದೆ, ನರೇಗಾ, ನರ್ಮ್, ಆರ್‌ಟಿಐ, ಆರ್‌ಟಿಇ, ಮಹಿಳಾ ಸಶಕ್ತಿಕರಣ, ಆಹಾರ ಭದ್ರತೆ ಕಾಯ್ದೆ ಸೇರಿದಂತೆ ಹತ್ತಾರು ಜನಪರ ಯೋಜನೆ ನೀಡಿದ್ದೇವೆ. ಇದರ ಆಧಾರದ ಮೇಲೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಇಷ್ಟೆಲ್ಲ ಸಾಧನೆ ಮಧ್ಯೆಯೂ ನಮಗೆ ಮತ್ತೆ ಜನಾದೇಶ ಸಿಗದಿದ್ದರೆ ಅದನ್ನು ದುರಾದೃಷ್ಟ ಎಂದು ವ್ಯಾಖ್ಯಾನಿಸಬೇಕಾಗುತ್ತದೆ.್ಢ
ಪ್ರತಿಕ್ರಿಯೆ ಇಲ್ಲ
ದಲಿತರಿಗೆ ಸರಿಯಾದ ಅಧಿಕಾರ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಹೇಳಿಕೆ ಬಗ್ಗೆ ನಾನು ಈ ಸಂದರ್ಭದಲ್ಲಿ ವಿಶ್ಲೇಷಣೆ ಮಾಡುವುದಿಲ್ಲ. ಸಂದರ್ಭ ಬಂದಾಗ ಆ ಬಗ್ಗೆ ಮಾತನಾಡುತ್ತೇನೆ. ಆ ಬಗ್ಗೆ ವ್ಯಾಖ್ಯಾನ ಮಾಡುವುದಕ್ಕೆ ಕಾಲ ಪಕ್ವವಾಗಿಲ್ಲ.



-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.