ಸಪ್ತ ಗೆಲವಿನ ಸರದಾರನಿಗೆ ಸೋಲುಣಿಸಿದ ರತ್ನಮಾಲಾ
ಬೆಳಗಾವಿ: ಜಿಲ್ಲೆಯ ಮಟ್ಟಿಗೆ ರತ್ನಮಾಲಾ ಸವಣೂರು ಮೊದಲ ಮಹಿಳಾ ಲೋಕಸಭೆ ಸದಸ್ಯೆ. ಚೊಚ್ಚಲ ಪ್ರಯತ್ನದಲ್ಲೇ ಬಿ.ಶಂಕರಾನಂದರಂಥ ಘಟಾನುಘಟಿ ನಾಯಕನನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ ರತ್ನಮಾಲಾ, ಹಲವು ದಾಖಲೆಗಳು, ಹಲವು ಪ್ರಥಮಗಳಿಗೆ ನಾಂದಿ ಹಾಡಿದ್ದಾರೆ.
ರತ್ನಮಾಲಾ ಅವರಿಗೆ ರಾಜಕೀಯ ಹಿನ್ನೆಲೆ ಇರಲಿಲ್ಲ. ರಾಜಕೀಯ ಪಕ್ಷಗಳ ಒಡನಾಟವೂ ಗೊತ್ತಿರಲಿಲ್ಲ. ನ್ಯಾಯವಾದಿಯಾಗಿದ್ದವರು. ಅದು 1996ರ ಚುನಾವಣೆ. ಚಿಕ್ಕೋಡಿ ಕ್ಷೇತ್ರದಿಂದ ಅಂದಿನ ಆಡಳಿತ ಪಕ್ಷ ಜನತಾದಳದಿಂದ ಟಿಕೆಟ್ ಪಡೆದ ರತ್ನಮಾಲಾ ಸವಣೂರು 'ಕಪ್ಪು ಕುದುರೆ' ಯಾಗಿ ಅಂದಿನ ರಾಜಕೀಯ ಜಗಜಟ್ಟಿ, 7 ಬಾರಿ ಚಿಕ್ಕೋಡಿ ಕ್ಷೇತ್ರದಲ್ಲಿ ಗೆದ್ದಿದ್ದ ಬಿ. ಶಂಕರಾನಂದಗೆ ಮೊದಲ ಬಾರಿ ಸೋಲಿನ ರುಚಿ ಉಣಿಸಿದರು.
ಸಚಿವೆಯಾದರು: ಶಂಕರಾನಂದ ಸೋಲು ಆಗ ರಾಷ್ಟ್ರೀಯ ಸುದ್ದಿಯಾಯಿತು. ರತ್ನಮಾಲಾ ಸವಣೂರು ಗೆದ್ದಿದ್ದಷ್ಟೇ ಅಲ್ಲ, ದೇವೇಗೌಡರ ಸಚಿವ ಸಂಪುಟದಲ್ಲಿ ಸಚಿವೆಯೂ ಆದರು. ಈ ಚುನಾವಣೆಯಿಂದಲೇ ಶಂಕರಾನಂದ ಅವರ ಸೋಲಿನ ಸರಪಳಿ ಆರಂಭವಾಯಿತು. ಸತತವಾಗಿ ಎರಡು ಬಾರಿ ಪರಾಜಯ ಎದುರಿಸಬೇಕಾಯಿತು. ಬಳಿಕ ಅವರ ಪುತ್ರ ಕಣಕ್ಕಿಳಿದರೂ ಗೆಲವು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಕೈಬಿಟ್ಟ ಚಿಕ್ಕೋಡಿ ಈಗಲೂ ಹಸ್ತ ಪಕ್ಷದಿಂದ ದೂರವೇ ಉಳಿದಿದೆ!
ಕೇವಲ 18 ತಿಂಗಳು ಲೋಕಸಭೆ ಸದಸ್ಯರಾಗಿದ್ದ ರತ್ನಮಾಲಾ ಅವರು, ಅಂದಿನ ಪ್ರಧಾನಿ ದೇವೇಗೌಡರ ಸಂಪುಟದಲ್ಲಿ ಯೋಜನಾ ಖಾತೆಯ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಈ ಚುನಾವಣೆಯವರೆಗೂ ರತ್ನಮಾಲಾ ಅಪರಿಚಿತೆ. ಬಳಿಕವೂ ಅವರು ಅಪರಿಚತರಾಗಿಯೇ ಉಳಿದಿದ್ದು ಮಾತ್ರವಿಪರ್ಯಾಸ. ಬಳಿಕ ಲೋಕಶಕ್ತಿ, ಬಿಜೆಪಿಯಿಂದ ರಮೇಶ ಜಿಗಜಿಣಗಿ ಸತತವಾಗಿ ಮೂರು ಬಾರಿ ಚಿಕ್ಕೋಡಿಯಿಂದ ಗೆಲವು ಸಾಧಿಸಿದರು. ಸ್ವತಃ ಶಂಕರಾನಂದ ಅವರನ್ನು ಒಮ್ಮೆ ಸೋಲಿಸಿದರೆ, ಅವರ ಪುತ್ರ ಓಂಪ್ರಕಾಶ ಕಣಗಲಿ ಅವರನ್ನೂ ಪರಾಭವಗೊಳಿಸಿದರು.
ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು
ಚಿಕ್ಕೋಡಿ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. 1967 ರಲ್ಲಿ ಕ್ಷೇತ್ರ ಮೀಸಲು ಆದಾಗಿನಿಂದ 1991 ರಲ್ಲಿ ನಡೆದ ಚುನಾವಣೆಯ ವರೆಗೂ ಶಂಕರಾನಂದ ಏಳು ಬಾರಿ ಈ ಕ್ಷೇತ್ರದಿಂದ ಗೆದ್ದು ಬಂದರು. ಸರಿಸುಮಾರು 30 ವರ್ಷ ಈ ಕ್ಷೇತ್ರ ಪ್ರತಿನಿಧಿಸಿದರು. ಅಂತಹ ಶಂಕರಾನಂದ ಅವರನ್ನು ಸೋಲಿಸಲು ರಾಜಕೀಯ ಪಕ್ಷಗಳು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದವು. 1983 ರಲ್ಲಿ ಜನತಾರಂಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಶಂಕರಾನಂದ ಸೋಲಿಸುವ ಯತ್ನ ನಡೆದರೂ ಯಶ ಸಿಕ್ಕಿರಲಿಲ್ಲ. ಶಂಕರಾನಂದರ ಸೋಲಿನ ಮೂಲಕ ಚಿಕ್ಕೋಡಿ ಕ್ಷೇತ್ರವೂ ಮೊದಲ ಬಾರಿಗೆ ಕಾಂಗ್ರೆಸ್ ಕೈಬಿಟ್ಟಿತು. 40 ವರ್ಷ ಕಾಂಗ್ರೆಸ್ಸಿಗರನ್ನೇ ಆಯ್ಕೆ ಮಾಡುತ್ತ ಬಂದಿದ್ದ ಚಿಕ್ಕೋಡಿಯಲ್ಲಿ ಇದೀಗ ಸುಮಾರು 18 ವರ್ಷದಿಂದ ಕಾಂಗ್ರಸ್ಸೇತರರೇ ಆಯ್ಕೆಯಾಗುತ್ತ ಬರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

