ಚುನಾವಣೆ ಕರ್ತವ್ಯ ಸಂಭಾವನೆ 'ಕನಿಷ್ಠ' ಪರಿಷ್ಕರಣೆ!
ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಚುನಾವಣಾ ಆಯೋಗ ಸಂಭಾವನೆ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಇಂತಿಷ್ಟು ಎಂದು ಗಂಟು ಕೊಡುವ (ಒಟ್ಟಾರೆ) ಮೊತ್ತ ಪ್ರಕಟಿಸಿ ನಾಮ್ಕೆವಾಸ್ತೆ ಪರಿಷ್ಕರಣೆ ಮಾಡಿದ್ದು ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
5 ವರ್ಷ ಬಳಿಕ ಸಂಭಾವನೆ ಪರಿಷ್ಕೃತಗೊಂಡರೂ ಇದು ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬಣ್ಣ ಎಂಬಂತಾಗಿದೆ. ಆಯೋಗ ಅಳೆದೂ ತೂಗಿ ದಿನದ ಲೆಕ್ಕಾಚಾರ ಬದಲು ಒಟ್ಟಾರೆಯಾಗಿ ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಎಂದು ಲೆಕ್ಕ ಹಾಕಿದೆ. ಹೀಗೆ ನೀಡುವ ಸಂಭಾವನೆಯ ಲೆಕ್ಕಾಚಾರ ಹಾಕಿದರೆ ಹಿಂದಿಗಿಂತಲೂ ಕಡಿಮೆಯಾಗಲಿದೆ. ಕಳೆದ ವಿಧಾನಸಭೆ ಚುನಾವಣೆವರೆಗೆ ದಿನಕ್ಕೆ ಇಂತಿಷ್ಟು ಎಂದು ಲೆಕ್ಕ ಹಾಕಿ ಸಂಭಾವನೆ ನೀಡುತ್ತಿದ್ದರು. ಈ ಬಾರಿಯಿಂದ ಅಧಿಕಾರಿ ಹಾಗೂ ಸಿಬ್ಬಂದಿಗೆ ದಿನದ ಲೆಕ್ಕ ಬದಲು ಒಟ್ಟು ಚುನಾವಣೆ ಕರ್ತವ್ಯಕ್ಕೆ ಒಟ್ಟಾರೆಯಾಗಿ ಸಂಭಾವನೆ ನಿಗದಿಪಡಿಸಲಾಗಿದೆ. ಇದು ಅಧಿಕಾರಿ/ಸಿಬ್ಬಂದಿಯ ಪ್ರಯಾಣವೇ ಮುಂತಾದ ಅಗತ್ಯ ವೆಚ್ಚಕ್ಕೆ ಸಾಲದು. ಕೆಲವು ಸಿಬ್ಬಂದಿ ಹೊರತುಪಡಿಸಿ ಬಹುತೇಕರಿಗೆ ಹೆಚ್ಚಳ ತೋರಿಸಿ ಕತ್ತು ಕೊಯ್ಯುವ ಸಾಹಸವನ್ನು ಚುನಾವಣೆ ಆಯೋಗ ಮಾಡಿದೆ. ಯಾವ ಮಾನದಂಡದಲ್ಲಿ ಆಯೋಗ ಸಂಭಾವನೆ ಪರಿಷ್ಕರಿಸಿದೆ ಎಂಬುದು ಅರ್ಥವಾಗದ ಸಂಗತಿ ಎನ್ನುತ್ತಾರೆ ಜಿಲ್ಲಾ ಚುನಾವಣೆ ಶಾಖೆಯ ಸಿಬ್ಬಂದಿ.
40 ದಿನಕ್ಕೆ ಬರೇ 1,500!: ಸೆಕ್ಟರ್ ಆಫೀಸರ್/ವಲಯ ಮ್ಯಾಜಿಸ್ಟ್ರೇಟ್ಗೆ ಒಟ್ಟಾರೆ 1,500. ಇವರಿಗೆ ಕಳೆದ ಬಾರಿ ದಿನಕ್ಕೆ 200 ನೀಡಲಾಗುತ್ತಿತ್ತು. ಈ ಅಧಿಕಾರಿಗಳು ಚುನಾವಣೆ ಘೋಷಣೆಯಿಂದ ತೊಡಗಿ ಮತದಾನ ಮುಕ್ತಾಯವರೆಗೆ ಕನಿಷ್ಠ 35ರಿಂದ 40 ದಿನ ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಇಷ್ಟು ದಿನ ಕರ್ತವ್ಯ ನಿರ್ವಹಿಸಿದ್ದಕ್ಕೆ ಆಯೋಗ ಅಧಿಕಾರಿಗಳಿಗೇ ಕೊಡುವ ಪರಿಷ್ಕೃತ ಸಂಭಾವನೆ ಮೊತ್ತ ಇದು.
ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀಕ್ಷಣಾ ತಂಡ, ಲೆಕ್ಕಪತ್ರ ತಂಡ, ವೆಚ್ಚ ನಿರ್ವಹಣಾ ನಿಯಂತ್ರಣ ಕೊಠಡಿ ಹಾಗೂ ಕರೆ ಕೇಂದ್ರಗಳ ಸಿಬ್ಬಂದಿ, ಫ್ಲೈಯಿಂಗ್ ಸ್ಕ್ವಾಡ್, ಸ್ಪಾಟಿಕ್ ಸರ್ವೆಲೆನ್ಸ್ ತಂಡ ಹಾಗೂ ವೆಚ್ಚ ನಿರ್ವಹಣಾ ಕೋಶಕ್ಕೂ ವಿವಿಧ ರೀತಿಯಲ್ಲಿ ಸಂಭಾವನೆ ಪರಿಷ್ಕರಿಸಲಾಗಿದೆ.
ಇಲ್ಲಿ ಪ್ರಥಮ ಹಾಗೂ ದ್ವಿತೀಯ ದರ್ಜೆ ಅಧಿಕಾರಿಗೆ ಈ ಹಿಂದೆ ದಿನಕ್ಕೆ 200 ಇದ್ದುದನ್ನು ತೆಗೆದು ಹಾಕಿ ಈಗ ಒಟ್ಟಾರೆಯಾಗಿ 1,200, ತೃತೀಯ ದರ್ಜೆ ಸಿಬ್ಬಂದಿಗೆ ದಿನಕ್ಕೆ 150ನ್ನು ಬಿಟ್ಟು ಒಟ್ಟಾರೆಯಾಗಿ 1 ಸಾವಿರ, ಡಿ ದರ್ಜೆ ನೌಕರರಿಗೆ ದಿನಕ್ಕೆ 100 ಇದ್ದುದನ್ನು 200ಕ್ಕೆ ಹೆಚ್ಚಿಸಲಾಗಿದೆ. ಆದಾಯ ತೆರಿಗೆ ನಿರೀಕ್ಷಕ ಅಧಿಕಾರಿಗಳಿಗೆ ದಿನಕ್ಕೆ 200ರ ಬದಲು ಒಟ್ಟಾರೆ 1,200 ನಿಗದಿಪಡಿಸಲಾಗಿದೆ. ಇವರು ನೀತಿಸಂಹಿತೆ ಉಲ್ಲಂಘಿಸಿದವರಿಂದ ಸರ್ಕಾರಕ್ಕೆ ಆದಾಯ ತಂದುಕೊಡಲು ಬೇಕು, ಈ ಕರ್ತವ್ಯ ನಿರ್ವಹಿಸಿದ್ದಕ್ಕೆ ಆಯೋಗ ನಿರ್ಧರಿಸಿದ ಜುಜುಬಿ ಮೊತ್ತ ಇದು. ಮತ ಎಣಿಕೆ ಮೇಲ್ವಿಚಾರಕರಿಗೆ ಹಿಂದೆ ದಿನಕ್ಕೆ 250 ಇದ್ದುದನ್ನು ಈಗ 350 ಮಾಡಿದ್ದಾರೆ. ಮತಗಟ್ಟೆ ಅಧಿಕಾರಿ, ಮತ ಎಣಿಕೆ ಸಹಾಯಕರಿಗೆ 175ರಿಂದ 250ಕ್ಕೆ ನಿಗದಿಯಾಗಿದೆ. ಡಿ ದರ್ಜೆ ನೌಕರರಿಗೆ 100ರಿಂದ 150ಕ್ಕೆ ಹೆಚ್ಚಳ ಮಾಡಲಾಗಿದೆ.
ಕಾಡಿ ಬೇಡಿ ಆಯೋಗದ ಮೊರೆ ಹೋಗಿ ಕಳೆದ ವರ್ಷ 1,500 ಸಾವಿರದಿಂದ 3 ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ. ಮತದಾರರ ಪಟ್ಟಿ ಹಿಡಿದುಕೊಂಡು ಗ್ರಾಮ ಕರಣಿಕರ ಬಳಿ ಹೋದರೆ ಅವರ ದರ್ಪದ ಮಾತು ಕೇಳಬೇಕು. ಯಾಕಾಗಿ ನಮಗೆ ಈ ಕೆಲಸ?
- ಜಯಲಕ್ಷ್ಮಿ, ಬೂತ್ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವವರು
ವರ್ಷಪೂರ್ತಿ ದುಡಿದ್ರೆ 3000 ಮಾತ್ರ!
ಮತದಾರರ ಪಟ್ಟಿ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ವರ್ಷಕ್ಕೆ ಚುನಾವಣೆ ಆಯೋಗ ನೀಡುವುದು ಕೇವಲ 3 ಸಾವಿರ ಮಾತ್ರ. ಬೆಳಗ್ಗಿನಿಂದ ಸಂಜೆವರೆಗೆ ಅಂಗನವಾಡಿ ಕೆಲಸ ಮಾಡಬೇಕು. ಗಣತಿ ಕಾರ್ಯ ಬೇರೆಯೇ. ಇದರ ಜತೆ ಮತದಾರರ ಪಟ್ಟಿ ಸೇರ್ಪಡೆ, ಹೆಸರು ತೆಗೆಯುವುದು, ಹೆಸರು ವರ್ಗಾವಣೆ ಹೀಗೆ ಎಲ್ಲ ಕೆಲಸದ ಹೊಣೆ ಇವರ ಮೇಲೆ. ಪ್ರತಿ ಅಂಗನವಾಡಿ ಕಾರ್ಯಕರ್ತೆ ಬೂತ್ ಮಟ್ಟದ ಅಧಿಕಾರಿಯಂತೆ ವರ್ಷಪೂರ್ತಿ ಕರ್ತವ್ಯ ನಿರ್ವಹಿಸಬೇಕು. ಇಷ್ಟು ಕೆಲಸ ಮಾಡಿದರೆ ಇವರಿಗೆ ದಕ್ಕುವ ಸಂಭಾವನೆ 3 ಸಾವಿರ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

