ಹೊತ್ತಿ ಉರಿದ ಅಸಮಾಧಾನ ಆಗುತ್ತಿಲ್ಲ ಅತೃಪ್ತಿಯ ಶಮನ

ಬೆಂಗಳೂರು: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕು ಪಡೆಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ಗಳಲ್ಲಿ ಅಸಮಾಧಾನ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಬೀದರ್ ಕ್ಷೇತ್ರದಲ್ಲಿನ ಅತೃಪ್ತಿ ಶಮನಗೊಳಿಸಲು ಬಿಜೆಪಿ ಹೆಣಗಾಡುತ್ತಿದ್ದರೆ, ಕಾಂಗ್ರೆಸ್ಗೆ ಶಿವಮೊಗ್ಗ, ಧಾರವಾಡ ತಲೆ ನೋವಾಗಿದೆ.
ಬೀದರ್ನಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೇ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿ ನಾಗಮಾರಪಳ್ಳಿ ಬೆಂಬಲಿಗರು ರಸ್ತೆಗೆ ಇಳಿದಿದ್ದು, ಬೀದರ್ ಹಾಗೂ ಹುಮನಾಬಾದ್ಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ವೇಳೆ ಕೆಲವು ಬೆಂಬಲಿಗರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದರು. 'ನನ್ನ ಮಗನಿಗೆ ಟಿಕೆಟ್ ಕೊಡಿಸಲು ಇನ್ನೊಮ್ಮೆ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿರುವ ಬಿ.ಎಸ್.ಯಡಿಯೂರಪ್ಪ ಅವರು ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ' ಎಂದು ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದ್ದಾರೆ.
ಬಿಜಾಪುರ ಮೀಸಲು ಕ್ಷೇತ್ರದಿಂದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಿರುವುದನ್ನು ಪ್ರತಿಭಟಿಸಿ ಪಕ್ಷೇತರ ಅಭ್ಯರ್ಥಿಯಾಗಿ ಡಾ.ರಾಜೇಶ್ ವಲ್ಲ್ಯಾಪೂರ ನಾಮಪತ್ರ ಸಲ್ಲಿಸಿದ್ದಾರೆ.
ಶಿವಮೊಗ್ಗದಿಂದ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿರುವ ಕುಮಾರ್ ಬಂಗಾರಪ್ಪ, ಪಕ್ಷದ ಹೈಕಮಾಂಡ್ ತನ್ನ ನಿರ್ಧಾರ ಬದಲಿಸಿ ತಮಗೆ ಟಿಕೆಟ್ ನೀಡಲು ಮಾರ್ಚ್ 26ರ ಮಧ್ಯಾಹ್ನ 1.55ರವರೆಗೆ ಗಡುವು ನೀಡಿದ್ದಾರೆ. ಮಾತುಕತೆಗಾಗಿ ಭಾನುವಾರ ದೆಹಲಿಗೆ ಬರುವಂತೆ ವರಿಷ್ಠ ನಾಯಕರು ಅವರಿಗೆ ಸೂಚನೆ ನೀಡಿದ್ದಾರೆ. ಧಾರವಾಡದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ಘೋಷಣೆ ಖಚಿತವಾಗುತ್ತಿರುವಂತೆ ಖುದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಅವರೇ ಅಸಮಾಧಾನ ಹೊರಹಾಕಿದ್ದಾರೆ. 'ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಪ್ರಭಾವಿ ಸಂಖ್ಯೆಯಲ್ಲಿದ್ದಾರೆ. ಪಕ್ಷ ಹೀಗೆ ಮಾಡಬಾರದಿತ್ತು' ಎಂದು ಬಹಿರಂಗವಾಗಿಯೇ ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ. ಆದರೆ ತಾವು ಜೆಡಿಎಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಈಗಷ್ಟೇ ಕಣ್ಣು ಆಮ್ಆದ್ಮಿ ಸಹ ಬಂಡಾಯದ ಬಿಸಿ ಎದುರಿಸುತ್ತಿದೆ. ಧಾರವಾಡದಲ್ಲಿ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷದ ಜಿಲ್ಲಾ ಸಂಚಾಲಕ ಶೈಲೇಂದ್ರಕುಮಾರ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಎಂ.ಆರ್. ವಾಸುದೇವ್ ವಿರುದ್ಧ ಆಪ್ ಸಂಘಟನೆಯಲ್ಲಿ ಆರಂಭದಿಂದಲೇ ಸಕ್ರಿಯರಾಗಿದ್ದ ರಾಬರ್ಟ್ ರೊಸಾರಿಯೊ ಮತ್ತಿತರರು ಸಿಡಿದೆದ್ದಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರೇ ಪರಸ್ಪರ ಕಿತ್ತಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


