ಬಿಜೆಪಿ ಬಣಜಗಳ

ನವದೆಹಲಿ: ಸೀಟು ಹಂಚಿಕೆ ಹಾಗೂ ಹಿರಿಯರ ಕಡೆಗಣನೆ ವಿಚಾರವಾಗಿ ಬಿಜೆಪಿಯೊಳಗೆ ಕುದಿಯುತ್ತಿದ್ದ ಆಕ್ರೋಶ ಈಗ ಸ್ಫೋಟಗೊಳ್ಳಲು ಆರಂಭಿಸಿದೆ.
ಆಡ್ವಾಣಿ ಮೂಲೆಗುಂಪು ಮಾಡಿದ್ದರಿಂದ ಕುದಿದು ಹೋಗಿದ್ದ ಪಕ್ಷದ ಒಂದು ಬಣ ಈಗ ಬಹಿರಂಗವಾಗಿ ವರಿಷ್ಠರ ವಿರುದ್ಧ ತಿರುಗಿ ಬೀಳಲು ಆರಂಭಿಸಿದೆ. ಹೊಸಬರ ಸೇರ್ಪಡೆಗೂ ಅಸಮಾಧಾನ ವ್ಯಕ್ತಪಡಿಸಿದೆ. ಬಾರ್ಮರ್ ಕ್ಷೇತ್ರದಿಂದ ಟಿಕೆಟ್ ನಿರಾಕರಣೆಗೊಳಗಾದ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಬಹಿರಂಗ ಬಂಡಾಯದ ಬಳಿಕ ಈಗ ಆಡ್ವಾಣಿ ಕ್ಯಾಂಪಿನ ಜತೆಗೆ ಗುರುತಿಸಿಕೊಂಡಿರುವ ಮತ್ತೊಬ್ಬ ಹಿರಿಯ ಸಂಸದ ಹರೀಶ್ ಪಾಠಕ್ ಪಕ್ಷದ ನಿರ್ಧಾರಗಳ ಕುರಿತು ಧ್ವನಿ ಎತ್ತಿದ್ದಾರೆ. ಪಕ್ಷದಲ್ಲಿ ನಿಜವಾದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪಕ್ಷಕ್ಕೆ ಜಸ್ವಂತ್ ಸೆಡ್ಡು
ಮೋದಿ ಕ್ಯಾಂಪಿನ ವಿರುದ್ಧ ತಿರುಗಿ ಬಿದ್ದಿರುವ ಜಸ್ವಂತ್ ಸಿಂಗ್ ಪಕ್ಷದ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ, ಬಿಜೆಪಿಗೆ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 'ಸೋಮವಾರ ನಾಮಪತ್ರ ಖಚಿತ. ಆದರೆ, ಬಿಜೆಪಿಯಿಂದಲೋ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿಯೋ ಎನ್ನುವುದು ಪಕ್ಷದ ನಡವಳಿಕೆಯನ್ನು ಅವಲಂಬಿಸಿರಲಿದೆ' ಎಂದಿದ್ದಾರೆ ಜಸ್ವಂತ್. ಬಿಜೆಪಿ ತೊರೆಯುವ ಸಂಬಂಧ 48 ಗಂಟೆಗಳ ಗಡುವು ನೀಡಿದ್ದೇನೆ. ಇಷ್ಟಾದರೂ ಪಕ್ಷದಿಂದ ಯಾರೊಬ್ಬರೂ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ ಎಂದೂ ಜಸ್ವಂತ್ ಹೇಳಿದ್ದಾರೆ.
ರಾಜನಾಥ್ ವಿರುದ್ಧ ಕಿಡಿ
ಸೂಕ್ತ ಸಮಯದಲ್ಲಿ ಜಸ್ವಂತ್ ಸೇವೆಯನ್ನು ಪಕ್ಷ ಬಳಸಿಕೊಳ್ಳಲಿದೆ ಎನ್ನುವ ರಾಜನಾಥ್ಸಿಂಗ್ ಹೇಳಿಕೆಗೂ ಹಿರಿಯ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆ ಬಳಸಿಕೊಳ್ಳಲು ನಾನೇನು ಪೀಠೋಪಕರಣದ ತುಂಡಲ್ಲ. ತತ್ವಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೊಂದಾಣಿಕೆ ಮಾಡಿಕೊಳ್ಳಿ ಎನ್ನುವುದು ಅವಮಾನ ಮಾಡಿದಂತೆ ಸರಿ ಎಂದು ಜಸ್ವಂತ್ ಸಿಂಗ್ ಕಿಡಿಕಾರಿದ್ದಾರೆ.
ಜೇಟ್ಲಿ- ಸುಷ್ಮಾ ಐಐ ವಾರ್
ಬಿಜೆಪಿ ಹಿರಿಯ ನಾಯಕರಾದ ಸುಷ್ಮಾಸ್ವರಾಜ್ ಮತ್ತು ಅರುಣ್ ಜೇಟ್ಲಿ ಮತ್ತೊಂದು ಸುತ್ತಿನ 'ವಾಕ್ ವಾರ್' ನಡೆಸಿದ್ದಾರೆ. ಜಸ್ವಂತ್ ಸಿಂಗ್ ಅವರಿಗೆ ಬಾರ್ಮರ್ನಿಂದ ಟಿಕೆಟ್ ನಿರಾಕರಿಸಿದ ನಿರ್ಧಾರವನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ತೆಗೆದುಕೊಂಡಿಲ್ಲ ಎಂದು ಸುಷ್ಮಾ ಶನಿವಾರವಷ್ಟೇ ತಿಳಿಸಿದ್ದರು. ಇದಕ್ಕೆ ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಎಲ್ಲ ನಿರ್ಧಾರಗಳನ್ನು ಕೇಂದ್ರೀಯ ಚುನಾವಣಾ ಸಮಿತಿಯೇ ತೆಗೆದುಕೊಳ್ಳುವುದಿಲ್ಲ. ಪಕ್ಷವೇ ಆ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದಿದ್ದಾರೆ ಜೇಟ್ಲಿ. ಜತೆಗೆ, ಪಕ್ಷ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ರಾಜಕಾರಣಿಗಳು ಬದ್ಧರಾಗಬೇಕೆಂದೂ ಜೇಟ್ಲಿ ಹೇಳಿದ್ದಾರೆ. 'ಪಕ್ಷ 'ನೋ' ಅಂದಾಗ ರಾಜಕಾರಣಿ ಅಥವಾ ನಾಯಕನ ನಿಷ್ಠೆ ಮತ್ತು ಶಿಸ್ತು ಪರೀಕ್ಷೆಗೊಡ್ಡಲ್ಪಡುತ್ತಿದೆ. ಈ ಸಂದರ್ಭದಲ್ಲಿ ಮೌನ ಮತ್ತು ತಾಳ್ಮೆಯಿಂದಿರುವುದೇ ಉತ್ತಮ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಂಗ್ಗೆ ಟಾಂಗ್ ನೀಡಿದ್ದಾರೆ ಜೇಟ್ಲಿ.
ನನಗೆ, ಕಾರ್ಯಕರ್ತರಿಗೆ ನೋವಾಗಿದೆ; ಹರಿನ್
ಅಹಮದಾಬಾದ್: ಪೂರ್ವ ಕ್ಷೇತ್ರದಿಂದ ಟಿಕೆಟ್ ನೀಡದಿರುವುದು ಬೇಸರ ತಂದಿದೆ ಎಂದು ಸಂಸದ ಹರಿನ್ ಪಾಠಕ್ ತಿಳಿಸಿದ್ದಾರೆ. ಪಕ್ಷದ ಬೆಳವಣಿಗೆಗಳಿಂದ ಕಾರ್ಯಕರ್ತರಿಗೂ ತೀವ್ರ ನೋವಾಗಿದೆ. ಕಾಂಗ್ರೆಸ್ನ ಕೆಲ ಮೂರನೇ ದರ್ಜೆ ಮುಖಂಡರನ್ನು ಸೇರಿಸಿಕೊಳ್ಳಲಾಗುತ್ತಿದೆ. ಮೋದಿ ಅವರಂಥ ಜನಪ್ರಿಯ ನಾಯಕರಿರುವಾಗಲೂ ಹೊರಗಿನವರನ್ನು ಕರೆತರುವ ಅಗತ್ಯ ಏನು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸೇರಿ ಬಿಟ್ಟ ಮುತಾಲಿಕ್
ಹುಬ್ಬಳ್ಳಿ/ನವದೆಹಲಿ/ಪಣಜಿ: ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಷ್ಟೇ ಬೇಗ ಪಕ್ಷದಿಂದ ನಿರ್ಗಮಿಸಿದ್ದಾರೆ. ಮುತಾಲಿಕ್ ಸೇರ್ಪಡೆಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ಟೀಕೆ, ಪಕ್ಷದೊಳಗೇ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ಕೇಂದ್ರ ನಾಯಕತ್ವ ಅವರಿಗೆ ಪಕ್ಷದ ಸದಸ್ಯತ್ವ ನೀಡಲು ನಿರಾಕರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


