ಆಧಾರ್ ದಂಧೆ, ಯುಪಿಎ ನೈಜ ಐಡೆಂಟಿಟಿ ಬಯಲು

-ಭದ್ರತೆಗೆ ಸವಾಲು, ಭಾರತೀಯರಿಗೆ ಮಕ್ಮಲ್ ಟೋಪಿ ಪಾಕಿಗಳಿಗೂ ಗುರುತಿನ ಸಂಖ್ಯೆ ನೀಡಲು ಸರ್ಕಾರ ಸೈ!
ಕನ್ನಡಪ್ರಭ ವಾರ್ತೆ | ಬೆಂಗಳೂರು | ಮಾ.24
ಆಧಾರ್ ಗುರುತಿನ ಸಂಖ್ಯೆ ವೈಶಿಷ್ಟ್ಯ ಬೆತ್ತಲಾಗಿದೆ. ಸತ್ತ ಲಾಡೆನ್ ಹೆಸರಿನಲ್ಲೂ ಆಧಾರ್ ಪಡೆಯಬಹುದು, ಬದುಕಿರುವ ಉಗ್ರ ರಿಯಾಜ್ ಭಟ್ಕಳ್‌ಗೂ ಆಧಾರ್ ಸಿಗುತ್ತದೆ. ದೇಶದ ಜನಕ್ಕೆ 'ಐಡೆಂಟಿಟಿ' ನೀಡಲು ಹೊರಟವರ ನಿಜ ಐಡೆಂಟಿಟಿ ಈ ಮೂಲಕ ಬಯಲಾಗಿದೆ.
ದೇಶದ ಭದ್ರತೆ ಹಾಗೂ 120 ಕೋಟಿ ಭಾರತೀಯರ ವೈಯಕ್ತಿಕ ದಾಖಲೆಗಳನ್ನು ಆಧಾರ್ ಹೆಸರಿನಲ್ಲಿ ಖಾಸಗಿ ಕಂಪನಿಗಳ ಸ್ವತ್ತು ಮಾಡಲಾಗಿದೆ. ಸುಪ್ರೀಂ ಆದೇಶಕ್ಕೆ ವಿರುದ್ಧವಾಗಿ ದೇಶದ ರಕ್ಷಣೆಗೆ ಸವಾಲಾಗಿರುವ ಪಾಕ್ ಹಾಗೂ ಬಾಂಗ್ಲಾ ಅಕ್ರಮ ವಲಸಿಗರಿಗೆ ಗುರುತಿನ ಸಂಖ್ಯೆ ನಿರಂತರವಾಗಿ ನೀಡಲಾಗುತ್ತಿದೆ. ದೇಶದ 65 ಕೋಟಿ ಜನರಿಗೆ ಗುರುತು ನೀಡಿದ್ದೇನೆ ಎನ್ನುವುದನ್ನು ಹೆಗ್ಗಳಿಕೆ ಎಂದು ಬಿಂಬಿಸಿಕೊಳ್ಳುತ್ತಿರುವ ನಂದನ್ ನಿಲೇಕಣಿ ಹಾಗೂ ಕಾಂಗ್ರೆಸ್ ಪಕ್ಷ, ದೇಶದ ಜನರಿಗೆ ಮಕ್ಮಲ್ ಟೋಪಿ ಹಾಕಿದೆ. ವಿಶಿಷ್ಟ ಗುರುತಿನ ಪ್ರಾಧಿಕಾರದ 'ಆಧಾರ' ದಂಧೆಯನ್ನು ಕೋಬ್ರಾ ಪೋಸ್ಟ್ ಬಯಲು ಮಾಡಿದೆ. ವಲಸಿಗರಿಗೆ ಆಧಾರ್ ಗುರುತಿನ ಸಂಖ್ಯೆ ನೀಡಬೇಡಿ ಎಂಬ ಸುಪ್ರೀಂ ಆದೇಶ ಧಿಕ್ಕರಿಸಿ ರಾಷ್ಟ್ರೀಯ ಭದ್ರತೆಯನ್ನು ನಂದನ್ ನಿಲೇಕಣಿ ತಂಡ ಮಾರಿಕೊಳ್ಳಲು ಮುಂದಾಗಿರುವುದು ದುರಂತ.
ಆಧಾರ್ ಗೋಲ್‌ಮಾಲ್‌ಗಳ ಬಗ್ಗೆ ಸಂಶಯವಿರುವುದರಿಂದಲೇ ಕೇಂದ್ರ ಸರ್ಕಾರಕ್ಕೆ ಪದೇಪದೆ ಸುಪ್ರೀಂ ಎಚ್ಚರಿಸುತ್ತಿದೆ. ಸುಪ್ರೀಂ ಆದೇಶದ ಒಂದು ತಿಂಗಳ ಬಳಿಕ ಎಂದರೆ ಅ.23 ಮತ್ತು 24ರಂದು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳ ಸಂತ್ರಸ್ತರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಒಟ್ಟು 11 ಕುಟುಕು ಕಾರ್ಯಾಚರಣೆಯಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕಾರಿಗಳು ಕೇವಲ ಒಂದೆರಡು ಸಾವಿರ ರುಪಾಯಿಗೆ ದೇಶದ ಭದ್ರತೆ ಹೇಗೆಲ್ಲ ಒತ್ತೆ ಇಡಲು ತಯಾರಿದ್ದಾರೆ ಎನ್ನುವುದನ್ನು ಸಾಬೀತು ಮಾಡಿವೆ.
'ಐಡೆಂಟಿಟಿ' ಚಟಕ್ಕಾಗಿ 18000 ಕೋಟಿ!
'ನಾನು ಈ ದೇಶದ ನಾಗರಿಕ' ಎಂದು ಹೇಳಿಕೊಳ್ಳಲು ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳಿವೆ. ಪಡಿತರ ಚೀಟಿಯಲ್ಲಿಯೂ ಬಯೋವುಟ್ರಿಕ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ನಂದನ್ ನಿಲೇಕಣಿ ತಂಡವು ಕೊಡುತ್ತಿರುವ ಈ ಗುರುತಿನ ಸಂಖ್ಯೆಯಲ್ಲಿ ಹೊಸತೇನಿದೆ. ಯಾವುದೆ ಹೊಸತನವಿಲ್ಲದ ಗುರುತಿನ ಸಂಖ್ಯೆ ವಿತರಣೆಗೆ ಕೇಂದ್ರ ಸರ್ಕಾರ ಖರ್ಚು ಮಾಡಲು ಹೊರಟಿರುವುದು ಬರೋಬ್ಬರಿ 18 ಸಾವಿರ ಕೋಟಿ. ಇಷ್ಟೆಲ್ಲ ಖರ್ಚು ಮಾಡಿದ ಬಳಿಕ ಸುಪ್ರೀಂ ಕೋರ್ಟ್ ನೀಡುವ ಆದೇಶ, 'ಆಧಾರ್ ನೋಂದಣಿ ಕಡ್ಡಾಯ ಮಾಡಬೇಡಿ'. ಇದೊಂದು ಗುರುತಿನ ಸಂಖ್ಯೆ ಅಥವಾ ಚೀಟಿ ಕಡ್ಡಾಯವೇ ಅಲ್ಲ ಎಂದಾದ ಮೇಲೆ, ಇದರ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ಮೂಡಿದೆ.
3,813.17 ಕೋಟಿ
ಜನವರಿ ಅಂತ್ಯಕ್ಕೆ ಪ್ರಾಧಿಕಾರ ಮಾಡಿದ ವ್ಯಯ
ಗೌಪ್ಯ ಮಾಹಿತಿ ಮಾರಾಟ?
ಆಧಾರ್ ನೋಂದಣಿ ಸಿಬ್ಬಂದಿ ಹೇಳುವ ಪ್ರಕಾರ ಅರ್ಜಿದಾರರು ಬಯೋವುಟ್ರಿಕ್ ಮಾಹಿತಿಯನ್ನು ನೀಡುವ ಅಗತ್ಯವಿಲ್ಲ. ನಮ್ಮ ಬೆರಳಚ್ಚನ್ನು ಕೂಡ ಸಿಬ್ಬಂದಿ ಸೃಷ್ಟಿಸಿಕೊಳ್ಳುವ ಮಟ್ಟಿಗೆ ಆಧಾರ್ ಅಸುರಕ್ಷಿತವಾಗಿದೆ. ಯಾವುದೋ ಅರ್ಜಿದಾರರಿಗೆ ಮತ್ಯಾರದೋ ಬೆರಳಚ್ಚು ನಮೂದಿಸಿದರೆ ಮೂಲ ಬೆರಳಚ್ಚುದಾರನ ಗೌಪ್ಯತೆಯ ಕತೆಯೇನು? ಒಂದೊಮ್ಮೆ ಈ ಅರ್ಜಿದಾರ ಯಾವುದಾದರೂ ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡರೆ ಮೂಲ ಬೆರಳಚ್ಚುದಾರ ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮತ್ತೊಂದೆಡೆ ಅಮೆರಿಕದ ಗುಪ್ತಚರ ಸಂಸ್ಥೆಗಳ ಕೃಪಾಪೋಷಿತ ಸಂಸ್ಥೆಗಳೊಂದಿಗೆ ಭಾರತೀಯರ ಮಾಹಿತಿಯನ್ನು ಮಾರಾಟ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಮಾಥ್ಯೂ ಥಾಮಸ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯಲ್ಲಿ ಆಧಾರ್ ಸುರಕ್ಷತೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಮೂಡಿಸಿದೆ. ಆಧಾರ್ ನೋಂದಣಿಗಾಗಿ ಗುತ್ತಿಗೆ ಪಡೆದಿರುವ ಸಂಸ್ಥೆಗಳ ಹಿನ್ನೆಲೆಯನ್ನು ಪರಿಶೀಲಿಸಲಾಗಿದೆಯೆ ಎಂಬುದಕ್ಕೆ 'ಇಲ್ಲ' ಎಂದು ಪ್ರಾಧಿಕಾರ ಉತ್ತರ ನೀಡಿದೆ. ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಕೋಮ್ಯಾಟ್‌ನಂತಹ ಸಂಸ್ಥೆಗಳಿಗೂ ಗುತ್ತಿಗೆ ನೀಡಲಾಗಿದೆ. ಆಧಾರ್ ನೋಂದಣಿ ಗುತ್ತಿಗೆ ಪಡೆದ ಸಾಕಷ್ಟು ಕಂಪನಿಗಳು ಕೆಲ ದೇಶಗಳ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿವೆ ಎಂಬ ಗುಮಾನಿಯನ್ನು ಥಾಮಸ್ ವ್ಯಕ್ತಪಡಿಸುತ್ತಾರೆ.
ವಿಶಿಷ್ಟ ಗುರುತು ಪ್ರಾಧಿಕಾರ ಹಾಗೂ ಆಧಾರ್ ಯೋಜನೆ ಜಾರಿ ಕುರಿತಂತೆ ಸಿಬಿಐ ತನಿಖೆ ಮಾಡಬೇಕು. ಈ ಮೂಲಕ ನಂದನ್ ನಿಲೇಕಣಿ ಹಾಗೂ ಕೇಂದ್ರ ಸರ್ಕಾರದ ಪಾತ್ರವನ್ನು ಬಹಿರಂಗ ಪಡಿಸಬೇಕು
- ಡಿ.ವಿ.ಸದಾನಂದಗೌಡ, ಮಾಜಿ ಸಿಎಂ
ಇದು ನಿಮ್ಮ ಸಾಧನೆಯೇ?
ನೂರಿಪ್ಪತ್ತು ಕೋಟಿ ಜನರಿಗೆ 'ಐಡೆಂಟಿಟಿ' ನೀಡಲು 18 ಸಾವಿರ ಕೋಟಿ ನೀಡುವ ಯೋಜನೆಗೆ ನಂದನ್ ನಿಲೇಕಣಿ ನೇತೃತ್ವ ವಹಿಸಿದ್ದರು. ಈಗಾಗಲೇ ದೇಶದ 65 ಕೋಟಿ ಜನರಿಗೆ 'ಐಡೆಂಟಿಟಿ' ನೀಡಿದ್ದೇವೆ ಎನ್ನುವ ನಿಲೇಕಣಿ, ತಮ್ಮ ಸಾಧನೆಯ ಪರಾಮರ್ಶೆ ಮಾಡಬೇಕಿದೆ.
ವಿಶೇಷವಾಗಿ ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಅಕ್ಷರಶಃ 'ಆಧಾರ್ ಫಾರ್ ಸೇಲ್' ಎಂದು ನಾಮಫಲಕ ಹಾಕಿಕೊಂಡು ವ್ಯವಹಾರ ಮಾಡುತ್ತಿಲ್ಲವಷ್ಟೆ. ಪಾಕಿಸ್ತಾನದ ಉಗ್ರಗಾಮಿಗೂ ಭಾರತದ ಐಡೆಂಟಿಟಿ ನೀಡುವ ನಿಲೇಕಣಿ, ಭಾರತೀಯರಿಗೆ ಇನ್ನೆಂತಹ ಗೌಪ್ಯತೆ ಒದಗಿಸುತ್ತಾರೆ.
ವಿದೇಶದ ಯಾವುದೋ ಬೇಹುಗಾರಿಕೆ ಕಂಪನಿಗಳ ಪೈಕಿ ಕರ್ನಾಟಕದ ಮೂಲೆಯಲ್ಲಿರುವ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಬಯೋವುಟ್ರಿಕ್ ಡಾಟಾ ಮಾರಿಕೊಂಡರೆ ಗತಿಯೇನು ಸ್ವಾಮಿ? ಇಂತಹ ಅಕ್ರಮ ಹಾಗೂ ಹಸಿ ಸುಳ್ಳುಗಳನ್ನು ಸಾಧನೆ ಎಂದರೆ ಜನ ಹೇಗೆ ನಂಬಬೇಕು? ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕ ಹಣ ಪೋಲು ಮಾಡಿ, ಮಾಹಿತಿಯನ್ನು ಹೊರದೇಶದವರ ಕೈಗಿತ್ತಿದ್ದೇ ನಿಮ್ಮ ಸಾಧನೆಯೇ?
ಒಂದು ಸ್ಪಷ್ಟ ಯೋಜನೆ ಇಲ್ಲದೆ ಪ್ರಾರಂಭಿಸಿದ್ದೇ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದಂತಾಗಿತ್ತು. ಬೇರೆ ದೇಶಗಳ ಅಕ್ರಮ ನುಸುಳುಕೋರರಿಗೆ ಆಧಾರ್ ಗುರುತಿನ ಚೀಟಿ ಸಿಕ್ಕರೆ ದೇಶದ ಭದ್ರತೆಗೆ ಮಾರಕ. ಸಂಸ್ಥೆಗಿಲ್ಲ. ಬ್ರಿಟನ್ ಹಾಗೂ ಇಂಗ್ಲೆಂಡ್‌ನಲ್ಲಿ ಇದು ವಿಫಲವಾಗಿದೆ.
-ಸೋಮಶೇಖರ್, ಗ್ರಾಹಕ ಶಕ್ತಿ ಸಂಘದ ಅಧ್ಯಕ್ಷ
ಯೋಜನೆ ತುಘಲಕ್ ನಿರ್ಧಾರದಂತಿದೆ. ಇದರಿಂದ ವಂಚನೆಯಾಗಿದೆ. ಇದನ್ನು ಶೀಘ್ರ ನಿಲ್ಲಿಸಬೇಕು. ಇದರ ಗುತ್ತಿಗೆ ಪಡೆದದ್ದು ಎಲ್‌ಐ ಐಡೆಂಟಿಟಿ ಸಲ್ಯೂಷನ್ ಎಂಬ ಸಂಸ್ಥೆ. ಇದು ಈ ಹಿಂದೆ ಅಮೆರಿಕದ ಬೇಹುಗಾರಿಕಾ ಸಂಸ್ಥೆಯಾಗಿತ್ತು. ಇದೇ ಕಂಪನಿ ಪಾಕಿಸ್ತಾನದಲ್ಲೂ ಕಾರ್ಯನಿರ್ವಹಣೆ ಮಾಡುತ್ತಿದೆ.
-ಕರ್ನಲ್ ಮ್ಯಾಥ್ಯೂ ಥಾಮಸ್
ಆಧಾರ್‌ಗೆ ದಿಕ್ಕಿಲ್ಲ, ಸಾಧಕ-ಬಾಧಕದ ಬಗ್ಗೆ ಚರ್ಚೆಯಾಗಿಲ್ಲ, ಪೂರ್ವತಯಾರಿ ಇಲ್ಲ, ಜತೆಗೆ ಗೊಂದಲಗಳಿವೆ ಎಂದು ಜಂಟಿ ಸಂಸದೀಯ ಸಮಿತಿ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂ ಬೇಡವೆಂದರೂ ಕೇಂದ್ರ ಸರ್ಕಾರ ಹಿಂಬಾಗಿಲಿನ ಮೂಲಕ ಜಾರಿ ಮಾಡಿದೆ. ಇದರ ಹಿಂದಿನ ಮರ್ಮ ಏನು?
- ವಿ.ಎಸ್. ಹೆಗ್ಡೆ, ಹಿರಿಯ ವಕೀಲ
ಭ್ರಷ್ಟಾಚಾರ ನಿರ್ಮೂಲನೆ ಹೆಸರಿನಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. ಮುಗ್ದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಭಾರೀ ಮೋಸವಾಗಿದೆ. ಆಧಾರ್ ಭಾರತದ ನಿವಾಸಿಗಳಿಗೆ ಸಿಗಕೂಡದು. ನಾಗರಿಕರಿಗೆ ಸಿಗಬೇಕು. ಇದರ ಹೆಸರಲ್ಲಿ ದೇಶದ ಲೂಟಿ ನಡೆಯುತ್ತಿದೆ.
-ಶ್ರೀನಿವಾಸ್, ನಿವೃತ್ತ ಸೈನಿಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


