ವಿಚ್ಛೇದನ ಪದ್ಧತಿ ಹಿಂದೂ ಸಂಸ್ಕೃತಿಯಲ್ಲ: ಹೈಕೋರ್ಟ್
ಬೆಂಗಳೂರು: ವಿಚ್ಛೇದನ ಪದ್ಧತಿ ಹಿಂದೂ ಸಂಸ್ಕೃತಿಯಲ್ಲ. ಪುರಾತನ ಕಾಲದಲ್ಲಿ ವಿಚ್ಛೇದನವೇ ಇರಲಿಲ್ಲ. ಆದ್ದರಿಂದ ಹಿಂದೂ ವಿವಾಹ ಕಾಯ್ದೆಯಲ್ಲಿ ವಿಚ್ಛೇದನ ಅವಕಾಶ ಕಲ್ಪಿಸುವ ಸೆಕ್ಷನ್ 13ರ ಎ,ಬಿ,ಸಿ ಉಪಸೆಕ್ಷನ್ಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು.
ಹಿಂದೂ ಸಂಸ್ಕೃತಿಯ ಪ್ರಕಾರ, ವಿವಾಹವೆಂದರೆ ಇಬ್ಬರು ವ್ಯಕ್ತಿಯ ನಡುವಿನ ಸಂಬಂಧವಲ್ಲ. ಬದಲಿಗೆ, ಎರಡೂ ಸಂಸ್ಕೃತಿಯನ್ನು ಬೆಸೆಯುವ ಬಂಧ. ಇದನ್ನು ಬೇರ್ಪಡಿಸುವ ವಿಚ್ಛೇದನ ಎಂಬ ಪದ್ಧತಿಯನ್ನು ರದ್ದುಗೊಳಿಸಬೇಕು. ಐದು ಸಾವಿರ ವರ್ಷಗಳ ಇತಿಹಾಸವಿರುವ ಹಿಂದೂ ಸಂಸ್ಕೃತಿಯಲ್ಲಿ ವಿಚ್ಛೇದನವಿರಲಿಲ್ಲ. ಜನರು ಹೊಂದಿಕೊಂಡು ಕೂಡಿ ಬಾಳುತ್ತಿದ್ದರು. ಆದರೆ, ವಿಚ್ಛೇದನ ಎಂಬ ಕಾಯ್ದೆ ಜನರಲ್ಲಿ ಒಡಕು ಮೂಡಿಸಿದೆ ಎಂದು ಆರೋಪಿಸಿ ಬಿ.ಎ. ವಾಣಿ ಎಂಬುವರು ಅರ್ಜಿ ಸಲ್ಲಿಸಿದ್ದರು.
1955ರಲ್ಲಿ ವಿಚ್ಛೇದನ ಕಾಯ್ದೆ ಹಾಗೂ 1976ರಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆಯುವ ಕಾಯ್ದೆ ಜಾರಿಗೆ ಬಂದ ನಂತರ ಹಿಂದೂ ಸಂಸ್ಕೃತಿ ನಾಶವಾಗುತ್ತಿದೆ. ಆದ್ದರಿಂದ ಹಿಂದೂ ವಿವಾಹ ಕಾಯ್ದೆಯಿಂದ ವಿಚ್ಛೇದನಕ್ಕೆ ಅವಕಾಶ ಕಲ್ಪಿಸುವ ಸೆಕ್ಷನ್ ಅನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಸಂಸ್ಕೃತಿಯ ಬದಲಾವಣೆ ನಿರಂತರ: ಆದರೆ, ಈ ವಾದ ಒಪ್ಪದ ಮುಖ್ಯ ನ್ಯಾ.ಡಿ.ಎಚ್. ವಘೇಲ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ವಿಚ್ಛೇದನ ಕುರಿತು ಅರ್ಜಿದಾರರ ಅಭಿಪ್ರಾಯ ಸರಿಯಿರಬಹುದು. ಆದರೆ, ಅದನ್ನು ಸಂಪೂರ್ಣ ಸಮಾಜಕ್ಕೆ ಅಳವಡಿಸಲು ಸಾಧ್ಯವಿಲ್ಲ.
ಏಕೆಂದರೆ, ಸಂಸ್ಕೃತಿ ಹಾಗೂ ನಾಗರಿಕತೆ ನಿಂತ ನೀರಲ್ಲ. ಅದು ಕಾಲದೊಂದಿಗೆ ಬದಲಾಗುತ್ತಿರುತ್ತದೆ. ದಂಪತಿ ಪರಸ್ಪರ ಬೇರಾಗಿ ಹೊಸ ಜೀವನ ನಡೆಸಲು ಬಯಸಿದಲ್ಲಿ ಅದರಲ್ಲಿ ತಪ್ಪೇನಿದೆ? ವಿಚ್ಛೇದನ ಕಾಯ್ದೆ ಜಾರಿಗೆ ಬರುವ ಮುನ್ನ ಸಂಸತ್ತಿನಲ್ಲಿ ಈ ಕುರಿತು ಗಂಭೀರ ಚರ್ಚೆಗಳು ನಡೆದಿವೆ. ಅಲ್ಲದೆ, ಸುಪ್ರೀಂಕೋರ್ಟ್ ಕೂಡ ವಿಚ್ಛೇದನಕ್ಕೆ ಅವಕಾಶ ನೀಡಿದೆ. ಅಲ್ಲದೆ, ತಾವು ಈಗಾಗಲೇ 'ಲಿವಿಂಗ್ ಟುಗೆದರ್' ಸಂಬಂಧವನ್ನು ಕೂಡ ಒಪ್ಪಿಕೊಂಡಿದ್ದೇವೆ.ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಲಿವಿಂಗ್ ಟುಗೆದರ್ ಸಂಬಂಧದ ಮೂಲಕ ಜನಿಸುವ ಮಕ್ಕಳ ಮೇಲೆ ಪೋಷಕರಿಗೆ ಕಾನೂನುಬದ್ಧ ಹಕ್ಕು ಕಲ್ಪಿಸಲಾಗಿದೆ. ಅಲ್ಲದೆ, ವಿವಾಹವೆಂಬುದು ಕೇವಲ ಗಂಡು- ಹೆಣ್ಣಿಗೆ ಸೀಮಿತವಾಗಿರದೆ, ಗಂಡು- ಗಂಡು ಇಲ್ಲವೇ ಹೆಣ್ಣು- ಹೆಣ್ಣು ಕೂಡ ವಿವಾಹವಾಗಬಹುದಾಗಿದೆ. ನೀವು 19ನೇ ಶತಮಾನದ ಚಿತ್ರಣ ನೀಡುತ್ತಿದ್ದೀರಿ. ನಾವು 21ನೇ ಶತಮಾನದಲ್ಲಿದ್ದೇವೆ ಎಂದು ತಿಳಿ ಹೇಳಿದರು.
ಅಲ್ಲದೆ, ಈ ಸಂಬಂಧ ಬದಲಾವಣೆಗೆ ಬೇಕಿದ್ದಲ್ಲಿ ಮತ್ತೊಮ್ಮೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು. ನ್ಯಾಯಾಲಯಗಳಲ್ಲಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿಯಲ್ಲಿ ಯಾವುದೇ ಕಾನೂನು ಅಂಶಗಳಿಲ್ಲದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

