ಪ್ರಧಾನ ಸುದ್ದಿ

ಕೆಪಿಎಸ್‌ಸಿ ಅಕ್ರಮ; 'ಹೈ' ತರಾಟೆ

Published On :

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪ್ರೊಬೆಷನರ್ಸ್‌ನ 'ಎ' ಮತ್ತು 'ಬಿ' ವರ್ಗದ ಹುದ್ದೆಗೆ ನಿಯಮ ಬಾಹಿರವಾಗಿ ನೇಮಕಗೊಂಡಿರುವ ಮೂವರು ಅಭ್ಯರ್ಥಿಗಳಿಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ತಪ್ಪಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಯ ಪ್ರವೇಶ ಪರೀಕ್ಷೆಯಲ್ಲಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಿಯಮ ಬಾಹಿರವಾಗಿ ಆಯ್ಕೆಯಾಗಿರುವ ಮೂವರು ವ್ಯಕ್ತಿಗಳ ಹೆಸರನ್ನು ಖುದ್ದು ಕೆಪಿಎಸ್‌ಸಿ ನ್ಯಾಯಾಲಯಕ್ಕೆ ತಿಳಿಸಿತ್ತು. ಅಲ್ಲದೆ, ಅವರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ಸರ್ಕಾರ ನ್ಯಾಯಪೀಠಕ್ಕೆ ಭರವಸೆ ನೀಡಿತ್ತು.
ಆದರೆ, ಅಭ್ಯರ್ಥಿಗಳಿಗೆ ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ ಸರ್ಕಾರ, ಹೈಕೋರ್ಟ್ ಆದೇಶದ ಮೇರೆಗೆ ಶೋಕಾಸ್ ನೋಟಿಸ್ ನೀಡಿರುವುದಾಗಿ ಉಲ್ಲೇಖಿಸಿತ್ತು. ಅಲ್ಲದೆ, ಈ ಸಂಬಂಧ ನ್ಯಾಯಾಲಯಕ್ಕೆ ಮೆಮೋ ಕೂಡ ಸಲ್ಲಿಸಿತು. ಬುಧವಾರ ಮೆಮೋ ಪರಿಶೀಲಿಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಭ್ರಷ್ಟ ಅಧಿಕಾರಿಗಳಿಗೆ ಪರೋಕ್ಷ ಬೆಂಬಲ: ನಾವು ನಿಮಗೆ ಶೋಕಾಸ್ ನೀಡುವಂತೆ ಸೂಚಿಸಿದ್ದೇವೆಯೇ? ನೀವು ನಿರ್ವಹಿಸಬೇಕಾದ ಜವಾಬ್ದಾರಿಗೆ ನ್ಯಾಯಾಲಯದ ಹೆಸರನ್ನೇಕೆ ಬಳಸಿಕೊಳ್ಳುತ್ತಿದ್ದೀರಿ. ನಿಮಗೆ ನಿಮ್ಮ ಕೆಲಸಗಳಲ್ಲಿ ಗಂಭೀರತೆ ಇಲ್ಲ. ಇಂತಹ ನೋಟಿಸ್‌ಗಳನ್ನು ಜಾರಿ ಮಾಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಬಚಾವಾಗಲು ನೀವೇ ಪರೋಕ್ಷವಾಗಿ ದಾರಿ ಮಾಡಿಕೊಡುತ್ತಿದ್ದೀರಿ. ಈಗ ಸರ್ಕಾರ ಬದಲಾಗಿದೆ, ಕೆಪಿಎಸ್‌ಸಿಯಲ್ಲಿನ ಅಧಿಕಾರಿಗಳು ಬದಲಾಗಿದ್ದಾರೆ. ಇಷ್ಟಾದರೂ, ನಿಮಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಎದುರಾಗುತ್ತಿರುವ ತಡೆ ಏನು?  ಈ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರಿ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡಿತು.
ಮೊದಲು ಜವಾಬ್ದಾರಿ ಅರಿತುಕೊಳ್ಳಿ: ಬೇಜವಾಬ್ದಾರಿ ಪ್ರಮಾಣಪತ್ರ ಸಲ್ಲಿಸಿದ ಅಧಿಕಾರಿಗಳಿಗೆ ರು. 500 ದಂಡ ವಿಧಿಸಿದ ಪೀಠ, ತಮ್ಮ ಹುದ್ದೆಯ ಜವಾಬ್ದಾರಿ ಅರಿಯುವಂತೆ ಸೂಚಿಸಿತು. ಅಲ್ಲದೆ, ನಿಯಮಬಾಹಿರವಾಗಿ ನೇಮಕಗೊಂಡಿದ್ದಾರೆ ಎನ್ನಲಾದ 94 ಅಭ್ಯರ್ಥಿಗಳಿಗೆ ಆರು ವಾರಗಳಲ್ಲಿ ಮರು ಸಂದರ್ಶನ ನಡೆಸಿ ವರದಿ ಸಲ್ಲಿಸುವಂತೆ ಪೀಠ ಕೆಪಿಎಸ್‌ಸಿಗೆ ಆದೇಶಿಸಿದೆ.
ಏನದು ವಿವಾದ?: ಕೆಪಿಎಸ್‌ಸಿ ವತಿಯಿಂದ 1998, 99 ಹಾಗೂ 2004ನೇ ಸಾಲಿನಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆ ಪ್ರವೇಶ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಆರೋಪಿಸಿ ಹುದ್ದೆ ಆಕಾಂಕ್ಷಿಗಳಾದ ಕಲೀಲ್ ಅಹಮದ್ ಮತ್ತಿತರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಆದರೆ, ಸಿಐಡಿ ವರದಿಯಿಂದ ತೃಪ್ತಿ ಹೊಂದದ ಪೀಠ, ಈ ಸಂಬಂಧ ಸತ್ಯಶೋಧನಾ ಸಮಿತಿಯನ್ನು ಕೂಡ ರಚಿಸಿತ್ತು. ಇದೀಗ ಸಮಿತಿ ಕೂಡ ವರದಿ ಸಲ್ಲಿಸಿದ್ದು, ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವುದಾಗಿ ಕೆಪಿಎಸ್‌ಸಿ ಭರವಸೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.