ಮೋದಿ ವಿರುದ್ಧ ದಿಗ್ವಿಜಯ್ ಖಚಿತ ; ಝಾನ್ಸಿಗೇ ಉಮಾಭಾರತಿ ಸೀಮಿತ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಅಮೇಠಿಯಲ್ಲಿ ರಾಹುಲ್‌ಗಾಂಧಿ ವಿರುದ್ಧ ಸ್ಮೃತಿ ಇರಾನಿ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಣಕ್ಕಿಳಿದಿರುವ ವಾರಾಣಸಿಯಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಗಂಭೀರವಾಗಿ ಚಿಂತಿಸುತ್ತಿದೆ.
ಈಗಾಗಲೇ ಬಹುಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿರುವ ವಾರಾಣಸಿಯಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ಕಣಕ್ಕಿಳಿಸಿದರೆ, ಮೋದಿಗೆ ಪ್ರಬಲ ಸ್ಪರ್ಧೆ ಏರ್ಪಟ್ಟು ಅವರ ಹಾದಿ ಮತ್ತಷ್ಟು ಕಠಿಣವಾಗಲಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಅವರೇ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದಂತಿದೆ. ಕೊನೆ ಹಂತದಲ್ಲಿ ಅಲ್ಲಿ ಮತದಾನ ನಡೆಯುವುದರಿಂದ ಅಭ್ಯರ್ಥಿ ಘೋಷಣೆಗೆ ಇನ್ನೂ ಕಾಲಾವಕಾಶ ಇದೆ. ಹೀಗಾಗಿ ಕಾಂಗ್ರೆಸ್ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎನ್ನಲಾಗುತ್ತಿದೆ.
ಈ ನಡುವೆ, ವಾರಾಣಸಿಯಲ್ಲಿ ಸ್ಪರ್ಧಿಸಲು ತಾವು ಸಿದ್ಧ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪುನರುಚ್ಚರಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಪಕ್ಷ ಸೂಚಿಸಿದರೆ ನಾನು ಯಾವುದೇ ಸವಾಲು ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ.
ನಾನು ದಿಗ್ಗಜನೇನಲ್ಲ, ನಾನು ಪಕ್ಷ ನಿಷ್ಠ ಕಾರ್ಯಕರ್ತ. ಪಕ್ಷ ನೀಡಿದ ಯಾವುದೇ ಆದೇಶವನ್ನು ಪಾಲಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಮೋದಿ ಕಣಕ್ಕಿಳಿದಿರುವ ಮತ್ತೊಂದು ಕ್ಷೇತ್ರ ವಡೋದರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಕಾಂಗ್ರೆಸ್ ಅಭ್ಯರ್ಥಿ.
ಝಾನ್ಸಿಗೇ ಉಮಾ ರಾಣಿ
ಅಮೇಠಿಯಿಂದ ಸ್ಮೃತಿ ಇರಾನಿ ಅವರ ಸ್ಪರ್ಧೆ ಕುರಿತಂತೆ ಈಗಾಗಲೇ ಆರ್‌ಎಸ್‌ಎಸ್ ಗ್ರೀನ್‌ಸಿಗ್ನಲ್ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಯ್‌ಬರೇಲಿಯಿಂದ ಉಮಾಭಾರತಿ ಅವರನ್ನು ಕಣಕ್ಕಿಳಿಸಲು ಆರ್‌ಎಸ್‌ಎಸ್ ಇನ್ನೂ ಹಿಂದೆ ಮುಂದೆ ನೋಡುತ್ತಿದೆ. ಆದರೂ ಬಿಜೆಪಿ ಸೋನಿಯಾ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಅಮೇಠಿ ಮತ್ತು ರಾಯ್‌ಬರೇಲಿಯಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದಿದ್ದಾರೆ. ಈ ಮಧ್ಯೆ ಉಮಾಭಾರತಿ ಅವರು ಝಾನ್ಸಿಯಿಂದಲೇ ತಮ್ಮ ಸ್ಪರ್ಧೆ, ವರಿಷ್ಠರು ಸೂಚಿಸಿದರೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ. ಆದರೆ ಝಾನ್ಸಿ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿಬಿಜೆಪಿ ಉಮಾಭಾರತಿ ಅವರನ್ನು ರಾಯ್‌ಬರೇಲಿಯಿಂದ ಕಣಕ್ಕಿಳಿಸುವ ಸಂಭವ ಕಡಿಮೆ ಇದೆ.
5ಕ್ಕೆ ರಾಹುಲ್ ಪ್ರಚಾರ
ಏಪ್ರಿಲ್ ಮೊದಲ ವಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ. ಏ. 5 ರಂದು ಮಂಗಳೂರು ಮತ್ತು ಬಳ್ಳಾರಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಈ ವಿವರ ನೀಡಿದೆ. ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಪ್ರಚಾರ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಅದು ತಿಳಿಸಿದೆ.
ನಾಳೆ ಬೆಳಗಾವಿಗೆ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗಾವಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸಿಪಿಎಡ್ ಮೈದಾನದಲ್ಲಿ ಈ ಪ್ರಚಾರ ಸಭೆ ನಡೆಯಲಿದೆ. ಜೊತೆಗೆ ಏ. 5 ಅಥವಾ 6 ರಂದು ಚಿಕ್ಕೋಡಿಯಲ್ಲೂ ಮೋದಿ ರ್ಯಾಲಿ ನಡೆಯಲಿದೆ ಎಂದು ಬಿಜೆಪಿ ಹೇಳಿದೆ. ದಿನಾಂಕದ ಹೊಂದಾಣಿಕೆ ಮಾಡಿಕೊಂಡು ಈ ರ್ಯಾಲಿಯ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


