ತೆಲುಗರ ಆತ್ಮಾಭಿಮಾನಕ್ಕೆ ಕೊಳ್ಳಿ ಇಟ್ಟ ಯುಪಿಎ ನಿಮಗೆ ಬೇಕೇ?

ಮದನಪಲ್ಲಿ/ಗುಂಟೂರು/ತಿರುಪತಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುರುವಾರ ಆಂಧ್ರಪ್ರದೇಶದ ಮದನಪಲ್ಲಿ ಮತ್ತು ಗುಂಟೂರುಗಳಲ್ಲಿ ಪ್ರಚಾರ ನಡೆಸಿದರು. ಯುಪಿಎ ಸರ್ಕಾರ ತೆಲುಗು ಭಾಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಂಧ್ರಪ್ರದೇಶವನ್ನು ವಿಭಜಿಸಿತು ಎಂದು ಆರೋಪಿಸಿದರು.
ಮೋದಿ ಹೇಳಿದ್ದೇನು?
- ಯುಪಿಎ ಸರ್ಕಾರ ತೆಲುಗು ಭಾಷಿಕರ ಆತ್ಮಾಭಿಮಾನಕ್ಕೆ ಧಕ್ಕೆ ತಂದು ಆಂಧ್ರಪ್ರದೇಶ ವಿಭಜನೆ ಮಾಡುವ ನಿರ್ಧಾರ ಕೈಗೊಂಡಿತು.
- ಮತದಾರರೇ ನಿಮಗೆ ಹಗರಣಗಳ ಆಂಧ್ರಪ್ರದೇಶ ಬೇಕೋ ಅಥವಾ ಸುವರ್ಣ ಆಂಧ್ರಪ್ರದೇಶ ಬೇಕೋ ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಿ
- ಟಿಡಿಪಿ ಸರ್ಕಾರ ಆಂಧ್ರದಲ್ಲಿ ಆಡಳಿತದಲ್ಲಿದ್ದಾಗ ರಾಜ್ಯ ಅಭಿವೃದ್ಧಿಯ ಉತ್ತುಂಗಕ್ಕೆ ಏರಿತ್ತು. ಈ ಬಾರಿ ಮತ್ತೆ ಬಿಜೆಪಿ-ಟಿಡಿಪಿ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಆಂಧ್ರದಲ್ಲಿ ಹೊಸ ಮನ್ವಂತರಕ್ಕೆ ಕಾಯಲಾಗುತ್ತಿದೆ.
-ಎನ್ಡಿಎ ಅಧಿಕಾರಕ್ಕೆ ಬಂದರೆ ದೇಶದಲ್ಲಿ ನದಿಗಳ ಸಂಪರ್ಕ ಜೋಡಣೆಗೆ ಆದ್ಯತೆ ಕೊಡಲಾಗುತ್ತದೆ. ಆಂಧ್ರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಹಿಮಾಚಲದಲ್ಲಿ ರಾಹುಲ್
ಹಿಮಾಚಲಪ್ರದೇಶದ ಸೋಲನ್ ಮತ್ತು ಬಿಲಾಸ್ಪುರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸಿದರು. ಅವರು ಹೇಳಿದ್ದು
- ಮೋದಿಗೆ ಮಹಿಳೆಯರ ಅಭ್ಯುದಯದಲ್ಲಿ ನಂಬಿಕೆ ಇಲ್ಲ. ಅವರು ಆರ್ಎಸ್ಎಸ್ನ ನಾಯಕರಾಗಿದ್ದ ಎಂ.ಎಸ್.ಗೋಲ್ವಲ್ಕರ್ ಹಾದಿಯಲ್ಲಿ ನಡೆಯುತ್ತಿದ್ದಾರೆ.
-ಅವರು ಅಧಿಕಾರಕ್ಕೆ ಏರಿದರೆ ಮಹಿಳೆಯ ಅಭ್ಯುದಯ ವಿಚಾರವನ್ನೇ ಮರೆತು ಬಿಡುತ್ತಾರೆ.
- ಗುಜರಾತ್ನಲ್ಲಿ ನರೇಂದ್ರ ಮೋದಿ ಸರ್ಕಾರ ಅದಾನಿ ಗ್ರೂಪ್ಗೆ ಹೆಚ್ಚಿನ ಆದ್ಯತೆ ನೀಡಿದೆ.
ಫೈಜಾಬಾದ್ನಲ್ಲಿ ಸೋನಿಯಾ
ಉತ್ತರಪ್ರದೇಶದ ಫೈಜಾಬಾದ್ನಲ್ಲಿ ಪ್ರಚಾರ ಮಾಡಿದ ಸೋನಿಯಾ ಗಾಂಧಿ ಮೋದಿ ಪ್ರಧಾನಿಯಾಗಿರುವವರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಅವರು ಹೇಳಿದ್ದು
- ಅವರು ಚುನಾವಣಾ ಫಲಿತಾಂಶ ಘೋಷಣೆಯಾಗಿ ಅಧಿಕಾರಕ್ಕೆ ಏರಿದಂತೆ ವರ್ತಿಸುತ್ತಿದ್ದಾರೆ.
-ಮೋದಿ ತಮ್ಮ ಕೈಯ್ಯಲ್ಲಿಯೇ ಎಲ್ಲ ಸಂಪತ್ತು ಕೇಂದ್ರೀಕೃತವಾಗಿರಬೇಕು ಎಂದು ಬಯಸುತ್ತಿದ್ದಾರೆ.
-ಜನರು ದೇಶಕ್ಕೆ ಯಾವ ಸರ್ಕಾರ ಬೇಕೆಂದು ನಿರ್ಧಾರ ಮಾಡುತ್ತಾರೆಯೇ ಹೊರತು ಯಾರು ಬೇಕೆಂದಲ್ಲ.
ಕೇಜ್ರಿವಾಲ್ಗೆ ಜೆಡಿಯು ಬೆಂಬಲ
ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ಗೆ ಜೆಡಿಯು ಬೆಂಬಲ ವ್ಯಕ್ತಪಡಿಸಿದೆ. ಕೇಜ್ರಿವಾಲ್ ಪರವಾಗಿ ಜೆಡಿಯು ಅಧ್ಯಕ್ಷ ಶರದ್ ಯಾದವ್ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಎಫ್ಐಆರ್ ಆತುರದ ಕ್ರಮ
ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಿ ಕೇಂದ್ರ ಚುನಾವಣಾ ಆಯೋಗ ಆತುರದ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದು ಸಾಂವಿಧಾನಿಕ ಕ್ರಮಗಳ ಉಲ್ಲಂಘನೆಯಾದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ಸಭೆ ಅಂದರೆ ಸಾರ್ವಜನಿಕ ಸಭೆಯೇ ಆಗಿರುತ್ತದೆ. ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸಾರ್ವಜನಿಕ ಸಭೆ ಆಗಲಾರದು ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳಲ್ಲಿ ಮತದಾನದ ದಿನ ರಾಜಕಾರಣಿಯ ಹೇಳಿಕೆ ಪ್ರಸಾರ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಾದರೆ ಅದು ಸಾಂವಿಧಾನಿಕ ಕ್ರಮಗಳ ಉಲ್ಲಂಘನೆ ಆಗುತ್ತದೆ ಎಂದಿದ್ದಾರೆ ಜೇಟ್ಲಿ.
ತಿರುಪತಿಯಲ್ಲಿ ಮೋದಿ ಪೂಜೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಿರುಪತಿಯಲ್ಲಿ ಶ್ರೀವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಇದ್ದರು. ಸುಮಾರು 20 ನಿಮಿಷಗಳ ಕಾಲ ದೇಗುಲದಲ್ಲಿ ಇದ್ದರು.
ನೀತಿ ಉಲ್ಲಂಘಿಸಿಲ್ಲ
ಅಹ್ಮದಾಬಾದ್: ಮೊದಲ ಬಾರಿಗೆ ಬುಧವಾರ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ರಿಲೀಫ್ ಸಿಕ್ಕಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಮೋದಿ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಅವರು ನೀತಿ ಸಂಹಿತೆ ಉಲ್ಲಂಘಿಸಿಯೇ ಇಲ್ಲ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ. ಮೋದಿ ಅವರು ಮತಗಟ್ಟೆಗಿಂತ 100 ಮೀಟರ್ ದೂರದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ನಡೆಸಿದ್ದರು. ಗೋಷ್ಠಿ ನಡೆಸಿದ ಸ್ಥಳ ಮತಗಟ್ಟೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. 100 ಮೀಟರ್ ವ್ಯಾಪ್ತಿಯೊಳಗೆ ಸಭೆ ಕರೆದಿದ್ದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದರೆ ಮೋದಿ ಅವರು ಸಂಹಿತೆ ಉಲ್ಲಂಘಿಸಿಲ್ಲ ಎಂದೂ ಅವರು ಹೇಳಿದ್ದಾರೆ. ಹೀಗಾಗಿ ಮೋದಿ ಅವರಿಗೆ ದಂಡ ವಿಧಿಸಲಾಗುತ್ತದೆ, 2 ವರ್ಷ ಶಿಕ್ಷೆಯಾಗುತ್ತದೆ ಎಂಬ ಊಹಾಪೋಹಗಳಿಗೆ ಸದ್ಯಕ್ಕೆ ತೆರೆಬಿದ್ದಿದೆ.
ಎಫ್ಐಆರ್ಗೆ ಆಗ್ರಹ: ಏತನ್ಮಧ್ಯೆ, ನರೇಂದ್ರ ಮೋದಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಗುರುವಾರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಜತೆಗೆ ಮೋದಿ ಅವರ ಆಪ್ತ ಅಮಿತ್ ಶಾ, ಸಂಸದ ಕಿರಿತ್ ಸೋಲಂಕಿ ಸೇರಿದಂತೆ ಇನ್ನಿತರ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ಎಐಸಿಸಿ ಕಾನೂನು ಇಲಾಖೆ ಕಾರ್ಯದರ್ಶಿ ಕೆ.ಸಿ. ಮಿತ್ತಲ್ ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


