ಸ್ಫೋಟ; ರಾಜ್ಯಾದ್ಯಂತ ಕಟ್ಟೆಚ್ಚರ

ಬೆಂಗಳೂರು: ಚೆನ್ನೈನ ರೈಲು ನಿಲ್ದಾಣದಲ್ಲಿ ಬೆಂಗಳೂರು-ಗುವಾಹಟಿ ರೈಲಿನಲ್ಲಿ ಗುರುವಾರ ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಬಾಂಬ್ ಸ್ಫೋಟಿಸಿದ ವ್ಯಕ್ತಿ ಬೆಂಗಳೂರಿನಿಂದಲೇ ರೈಲು ಹತ್ತಿದ್ದ ಎಂಬ ಅನುಮಾನದಿಂದಾಗಿ ತನಿಖೆ ರಾಜ್ಯಕ್ಕೂ ವಿಸ್ತರಿಸಲಿದೆ.
ರಾಜ್ಯದ ಪ್ರಮುಖ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ದೇವಸ್ಥಾನಗಳು ಸೇರಿದಂತೆ ಜನನಿಬಿಡ ಪ್ರದೇಶ ಹಾಗೂ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಆಯಾ ಜಿಲ್ಲೆಗಳಲ್ಲಿನ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸುವಂತೆ ಎಲ್ಲಾ ಜಿಲ್ಲೆಯ ಪೊಲೀಸ್ ಆಯುಕ್ತ ಹಾಗೂ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ)ಗಳಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಎನ್.ರೆಡ್ಡಿ 'ಕನ್ನಡ ಪ್ರಭ'ಕ್ಕೆ ತಿಳಿಸಿದ್ದಾರೆ.
ರೇಲ್ವೇ ನಿಲ್ದಾಣ ಪರಿಶೀಲನೆ: ಈ ನಡುವೆ ಬಾಂಬ್ ಸ್ಫೋಟಗೊಂಡ ರೈಲು ಭೋಗಿಯಲ್ಲಿದ್ದ ಶಂಕಿತ ವ್ಯಕ್ತಿಯನ್ನು ಚೆನ್ನೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಶಂಕಿತ ವ್ಯಕ್ತಿ ಬೆಂಗಳೂರಿನಿಂದ ಪ್ರಯಾಣಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಎನ್.ರೆಡ್ಡಿ, ರೇಲ್ವೆ ವಿಭಾಗದ ಎಸ್ಪಿ ಸಿದ್ದರಾಮಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಸಿಟಿ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೇಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಹಾಗೂ ಭದ್ರತೆಯನ್ನು ಪರಿಶೀಲಿಸಿದರು.
ಸರ್ಪಗಾವಲು: ಪ್ರಮುಖ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದು, ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ರೇಲ್ವೆ ನಿಲ್ದಾಣಗಳಲ್ಲಿ ರೇಲ್ವೆ ಪೊಲೀಸರ ಜತೆಗೆ ಆರ್ಪಿಎಫ್, ಸಿಎಆರ್(ಸಶಸ್ತ್ರ ಮೀಸಲು ಪಡೆ), ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬ ಂದಿ ನಿಯೋಜಿಸಲಾಗಿದೆ. ಅಗತ್ಯಬಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸೂಚಿಸಲಾಗಿದೆ. ಬೆಂಗಳೂರಿನ ರೇಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ.
ಬೆಂಗಳೂರಿಗೆ ತಂಡ: ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಶಂಕಿತ ವ್ಯಕ್ತಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದ ಎಂದು ಶಂಕಿಸಿರುವ ಚೆನ್ನೈ ಪೊಲೀಸರ ತಂಡ ಶುಕ್ರವಾರ ನಗರಕ್ಕೆ ಆಗಮಿಸಲಿದ್ದು, ನಗರದ ರೇಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಿದೆ.
ದಿಕ್ಕಾಪಾಲಾಗಿ ಓಡಿದ ಜನ
ಬೆಂಗಳೂರಿನಿಂದ ಹೊರಟ ಗುವಾಹತಿ ರೈಲು ಬೆಳಗ್ಗೆ ಸುಮಾರು 7.45ರ ವೇಳೆಗೆ ಚೆನ್ನೈ ತಲುಪಿದೆ. ಅದೇ ವೇಳೆಗೆ ಇದ್ದಕ್ಕಿಂದ್ದಂತೆ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಭೋಗಿಗಳಲ್ಲಿ ಕುಳಿತಿದ್ದ ಜನ ದಿಕ್ಕಾಪಾಲಾಗಿ ಓಡುತ್ತಿದ್ದರು. ಅಕ್ಕಪಕ್ಕದ ಭೋಗಿಗಳಲ್ಲಿದ್ದವರೂ ಸಹ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಬ್ಯಾಗ್ಗಳನ್ನು ತೆಗೆದುಕೊಂಡು ಕೆಳಗಿಳಿದರು. ಅಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು. 'ಅಬ್ಬಾ ನಾವು ಬದುಕುಳಿದೆವಲ್ಲ' ಎಂಬ ನಿಟ್ಟುಸಿರು. ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಡಾರ್ಜಲಿಂಗ್ಗೆ ಹೊರಟಿದ್ದ ಶ್ರೀನಿವಾಸ ನಗರದ ಶ್ರೀಹರ್ಷ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ ಸಾಕಷ್ಟು ಮಂದಿಗೆ ಜೀವಭಯಕ್ಕಿಂತ ರೈಲನ್ನು ಬೆಂಗಳೂರಿಗೆ ವಾಪಾಸ್ ಕಳಿಸಿದರೆ ಎಂಬ ಭಯ ಕಾಡುತ್ತಿತ್ತು. ಆದರೆ, ಘಟನೆಯಿಂದ ಸುಮಾರು 6 ಗಂಟೆ ತಡವಾಗಿ 2 ಭೋಗಿ ತೆಗೆದು ಅದೇ ರೈಲನ್ನು ಕಳಿಸಲಾಯಿತು. ಹಾಗಾಗಿ ಎಲ್ಲರೂ ನಿಟ್ಟುಸಿರು ಬಿಟ್ಟರು. ರೈಲು ಹೊರಟ ನಂತರ ಆತಂಕ ದೂರವಾಗಿತ್ತು ಎಂದರು.
ಟಿಕೆಟ್ ಕಾಯ್ದಿರಿಸಿದ್ದ ಆರೋಪಿ?
ಬಂಧಿತನಾಗಿರುವ ಶಂಕಿತ ಆರೋಪಿಯು ಬೆಂಗಳೂರಿನಿಂದ ನಕಲಿ ಹೆಸರಿನಲ್ಲಿ ಮೊದಲೇ ಟಿಕೆಟ್ ಕಾಯ್ದಿರಿಸಿ ಆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಸ್ಫೋಟದ ಹಿಂದಿನ ರೂವಾರಿಗಳ ಗುರಿ ಚೆನ್ನೈ ಆಗಿರಲಿಲ್ಲ. ಈ ರೈಲು ತಡವಾಗಿ ನಿಲ್ದಾಣಕ್ಕೆ ಆಗಮಿಸಿತ್ತು. ಸ್ಫೋಟ ನಡೆಸಿದವರ ಗುರಿ ಬೇರೆಯೇ ಇತ್ತು.
-ಕೆ. ರಾಮಾನುಜಂ,
ತಮಿಳುನಾಡು ಡಿಜಿಪಿ
2ನೇ ಸ್ಫೋಟ
ಬೆಂಗಳೂರು- ಗುವಾಹಟಿ ರೈಲು ಸ್ಫೋಟ ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ರೈಲಿನಲ್ಲಿ ಸಂಭವಿಸಿದ ಎರಡನೇ ಪ್ರಮುಖ ಬಾಂಬ್ ಸ್ಫೋಟ ಇದು. 1997ರಲ್ಲಿ ಚೆನ್ನೈ- ಪಂಡಿಯನ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಮಂದಿ ಸಾವಿಗೀಡಾಗಿದ್ದರು.
1 ಲಕ್ಷ ಪರಿಹಾರ
ಸ್ಫೋಟದಲ್ಲಿ ಮೃತಪಟ್ಟ ಸ್ವಾತಿ ಕುಟುಂಬಕ್ಕೆ 1 ಲಕ್ಷ, ಗಂಭೀರ ಗಾಯಗೊಂಡವರಿಗೆ 25 ಸಾವಿರ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 5 ಸಾವಿರ ಪರಿಹಾರ ವಿತರಿಸಲಾಗುವುದು. ಸ್ಫೋಟಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ದೆಹಲಿಯಿಂದ ತಜ್ಞರೊಬ್ಬರನ್ನು ಚೆನ್ನೈಗೆ ಕಳುಹಿಸಿಕೊಡಲಾಗುವುದು ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


