ಪ್ರಧಾನ ಸುದ್ದಿ

ಪಿಯು ಪುಸ್ತಕ ತುಟ್ಟಿಗೆ ಸರ್ಕಾರದ್ದೇ ಮಧ್ಯಸ್ಥಿಕೆ

ಪಿಯು ಪುಸ್ತಕ ತುಟ್ಟಿಗೆ ಸರ್ಕಾರದ್ದೇ ಮಧ್ಯಸ್ಥಿಕೆ
Published On :

ಬೆಂಗಳೂರು:  ಮಧ್ಯವರ್ತಿಗಳಿಗೆ ಶೇ.15 ಲಾಭಾಂಶ ನೀಡುವಂತೆ ಕರ್ನಾಟಕ ಪಠ್ಯ ಪುಸ್ತಕ ಸಂಘವೇ  ಟೆಂಡರ್‌ನಲ್ಲಿ ಸೂಚಿಸಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪುಸ್ತಕ ಸಂಘದ ಇಂಥ ಬೇಜವಾಬ್ದಾರಿ ನೀತಿಯಿಂದ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಶೇ.15 ಅಧಿಕ ಹಣ ನೀಡಿ ಪುಸ್ತಕ ಖರೀದಿಸುವ ಪರಿಸ್ಥಿತಿ ಇದೆ.
ಇದೇ ಸರ್ಕಾರ ಎಸ್‌ಎಸ್‌ಎಲ್‌ಸಿವರೆಗೆ ಪುಸ್ತಕ ಮಾರಾಟಕ್ಕೆ ಇಂಥ 'ಮಧ್ಯವರ್ತಿ ಶುಲ್ಕ' ವಿಧಿಸಿಲ್ಲ. ಆದರೆ ಸರ್ಕಾರವೇ ಕಡ್ಡಾಯ ಮಾಡಿದ ಪಿಯು ಪುಸ್ತಕ ಮಾರಾಟಕ್ಕೆ ಈ ಆದೇಶ ನೀಡುತ್ತಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿಯೇ ಈ ನಿಯಮ ಸೇರಿಸಿದ್ದರು. ಆದರೆ ಅಲ್ಲಿ ಹಣದ ಬಗ್ಗೆ ಸ್ಪಷ್ಟನೆ ಇಲ್ಲದೇ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈ ಬಾರಿ ರಾಜ್ಯ ಟೆಕ್ಸ್ಟ್‌ಬುಕ್ ಸೊಸೈಟಿಯ ಟೆಂಡರ್ ಪ್ರತಿಯಲ್ಲಿಯೇ ಈ  ವಿವಾದಾಸ್ಪದ ಅಂಶ ಸೇರಿಸಲಾಗಿದೆ.
ಮೂಲ ತಿದ್ದುಪಡಿ: ರಾಜ್ಯ ಪಠ್ಯಪುಸ್ತಕ ಸಂಘ ಫೆ.2ಕ್ಕೆ ಹೊರಡಿಸಿದ್ದ ಟೆಂಡರ್ ಅಧಿಸೂಚನೆ ಪ್ರಕಾರ ಪುಸ್ತಕ ಪ್ರಕಟಣೆ ಗುತ್ತಿಗೆ ಪಡೆದವ ಲಾಭಾಂಶದ ಶೇ.10 ಹಣವನ್ನು ಮಾರಾಟಗಾರರಿಗೆ ನೀಡಬೇಕು ಎಂದಿದೆ. ಆದರೆ ಮಾ.14ಕ್ಕೆ ಮಾಡಿರುವ ತಿದ್ದುಪಡಿ ಪ್ರಕಾರ ಶೇ.15ಕ್ಕೆ ಏರಿಸಲಾಯಿತು. ಅನಧಿಕೃತವಾಗಿ ಪ್ರಕಾಶಕರು ಶೇ.15ರಿಂದ 20 ಲಾಭಾಂಶ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಪ್ರಕಾಶಕರು ಮಾರಾಟಗಾರರಿಗೆ ಲಾಭಾಂಶ ನೀಡಿಯೇ ನೀಡುತ್ತಾರೆ. ಆದರೆ ಅದನ್ನು ಕಡ್ಡಾಯ ಮಾಡುವ ಅಗತ್ಯವೇನಿತ್ತು?
2012-13ನೇ ಶೈಕ್ಷಣಿಕ ವರ್ಷದಲ್ಲಿ ಪಿಯು ಪಠ್ಯ ಬದಲಿಸುವ ಪ್ರಕ್ರಿಯೆ ಆರಂಭವಾಯಿತು. ಅಂದಿನಿಂದ ಪುಸ್ತಕಗಳನ್ನು ಇಲಾಖೆಯಿಂದಲೇ ಪ್ರಕಟಿಸಿ ಕಡಿಮೆ ದರಕ್ಕೆ ನೀಡಲು ನಿರ್ಧರಿಸಿದೆ. ಇದರ ಸಂಪೂರ್ಣ ಹಕ್ಕು ಇಲಾಖೆ ಬಳಿಯಿದೆ. ಅನಿವಾರ್ಯವಾಗಿ ವಿದ್ಯಾರ್ಥಿಗಳು ಇವನ್ನು ಕೊಳ್ಳಲೇಬೇಕು.
ಪ್ರಕಾಶಕರು ಮಾರಾಟಗಾರರಿಗೆ ಲಾಭಾಂಶ ನೀಡುವುದಿಲ್ಲ. ಬದಲಾಗಿ ಶೇ.15 ಹೆಚ್ಚಿನ ಹೊರೆಯನ್ನು ಪುಸ್ತಕಗಳ ಮುಖ ಬೆಲೆಯಲ್ಲಿಯೇ ಸೇರಿಸಲಾಗುತ್ತದೆ. ಮತ್ತೊಂದೆಡೆ ಪ್ರತಿ ಪುಸ್ತಕಕ್ಕೆ ಶೇ.12ರಿಂದ ಶೇ.17.2ರವರೆಗೆ ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಇದೆಕ್ಕೆಲ್ಲ ವಿನಾಯಿತಿ ನೀಡಿದರೆ ಪುಸ್ತಕದ ಮುಖಬೆಲೆ ಶೇ.25ರಷ್ಟು ಕಡಿಮೆ ಮಾಡಬಹುದಿತ್ತು.
15% ಲಾಭಾಂಶ ಮಧ್ಯವರ್ತಿಗಳಿಗೆ ನೀಡಲು ಟೆಂಡರ್‌ನಲ್ಲಿ ಸೂಚನೆ
12-17.2%
ವರೆಗೆ ಪ್ರತಿ ಪುಸ್ತಕಕ್ಕೆ
ಸೇವಾ ಶುಲ್ಕ
12 ಲಕ್ಷ
ವಿದ್ಯಾರ್ಥಿಗಳಿಗೆ ಹೊರೆ
25% ಸೇವಾ ಶುಲ್ಕ ವಿನಾಯಿತಿ, ಟೆಂಡರ್ ಬದಲಿಸಿದರೆ ಪುಸ್ತಕ ಇಷ್ಟು ಅಗ್ಗ


-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.