ರೈತನಿಗೆ ಅಲ್ಫೋನ್ಸೋ ಹುಳಿ

ಧಾರವಾಡ: ಭಾರತದ ಅಲ್ಫೋನ್ಸೋ ಮಾವಿಗೆ ಐರೋಪ್ಯ ಒಕ್ಕೂಟದ ನಿಷೇಧದ ನೇರ ಪರಿಣಾಮ ರಾಜ್ಯದ ಮಾವು ಖರೀದಿ ಮೇಲೆ ಆಗುತ್ತಿದೆ. ಖರೀದಿ ಹಾಗೂ ಬೆಲೆ ಎರಡೂ ಇಳಿಯುತ್ತಿರುವುದು ರೈತರ ಕಂಗಾಲಾಗಿಸಿದೆ.
ದೇಶದ ನಾನಾ ಕಡೆಯಿಂದ ರಫ್ತಾಗುತ್ತಿದ್ದ ಅಲ್ಫೋನ್ಸೋ ಮಾವು ಪ್ರಸ್ತುತ ಜ್ಯೂಸ್ ಕಂಪನಿಗಳಿಗೆ ಸರಬರಾಜಾಗುತ್ತಿತ್ತು. ನಿಷೇಧದ ಬಳಿಕ ಜ್ಯೂಸ್ ಕಂಪನಿಗಳು ಕಡಿಮೆ ದರದಲ್ಲಿ ಮಾವು ಖರೀದಿಸಿ ಸಂಗ್ರಹಿಸಿವೆ. ಹಾಗಾಗಿ ಹೆಚ್ಚುವರಿ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಸ್ಥಳೀಯ ದಲ್ಲಾಳಿಗಳೂ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಮೈಸೂರು, ಚನ್ನಪಟ್ಟಣ, ಬೆಳಗಾವಿ ಹಾಗೂ ಧಾರವಾಡದಲ್ಲಿ ಹೆಚ್ಚಿನ ಮಾವು ಬೆಳೆಯಲಾಗುತ್ತದೆ. ಏ.25ರಿಂದಲೇ ಅಲ್ಫೋನ್ಸೋ ಖರೀದಿ ಆರಂಭವಾಗಿದೆ. ನಿಷೇಧಕ್ಕೆ ಮುನ್ನ ಪ್ರತಿ ಟನ್ ಮಾವಿಗೆ 25 ಸಾವಿರ ಬೆಲೆ ಇತ್ತು. ಈಗ ದರ ಟನ್‌ಗೆ 18ಕ್ಕಿಳಿದಿದೆ.
ಆತಂಕದಲ್ಲಿ ರೈತರು: ಧಾರವಾಡ ಜಿಲ್ಲೆಯೊಂದರಲ್ಲೇ 12 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದ್ದು, ನಿತ್ಯ ಸಂಜೆ ಮಾವು ಮಾರುಕಟ್ಟೆಗೆ ಬರುತ್ತಿದೆ. ಆದರೆ, ಖರೀದಿದಾರರೇ ಇಲ್ಲದೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಾರುಕಟ್ಟೆಗೆ ನಿತ್ಯ 200 ಟನ್ ಅಲ್ಫೋನ್ಸೋ ಬರುತ್ತಿದೆ. ಮಹಾರಾಷ್ಟ್ರದ ಜಲಗಾಂವ್, ನಾಸಿಕ್, ಆಂಧ್ರದ ಚಿತ್ತೂರು, ಗುಜರಾತ್‌ನ ಜ್ಯೂಸ್ ಕಂಪನಿಗಳು ಖರೀದಿಗೆ ಮುಂದಾಗುತ್ತಿಲ್ಲ.
- ಇಕ್ಬಾಲ್ ಜಮಾದಾರ, ಧಾರವಾಡ ಮಾವು ಖರೀದಿಗಾರ
- ಪಾ.ಶ್ರೀ.ಅನಂತರಾಮ್
ಕೋಲಾರ: ಐರೋಪ್ಯ ನಿಷೇಧದಿಂದ ರಾಜ್ಯದ ಇತರೆ ಭಾಗದ ಮಾವು ಬೆಳೆಗಾರರು ಕಂಗಾಲಾಗಿರಬಹುದು. ಆದರೆ, ಕೋಲಾರ ಬೆಳೆಗಾರರು ಮಾತ್ರ ನಿರಾತಂಕ.
ಶ್ರೀನಿವಾಸಪುರ ಸೇರಿದಂತೆ ಇನ್ನಿತರ ಕಡೆ ಶೇ.20 ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಅಲ್ಫೋನ್ಸೋ ಮೇ 20ರ ವೇಳೆಗಷ್ಟೇ ಮಾರುಕಟ್ಟೆ ಪ್ರವೇಶಿಸುವುದೇ ಇದಕ್ಕೆ ಕಾರಣ. ಅಷ್ಟರಲ್ಲಿ ಸಮಸ್ಯೆಗೊಂದು ಪರಿಹಾರ ಸಿಗಬಹುದೆನ್ನುವುದು ರೈತರ ನಂಬಿಕೆ.
ಧಾರವಾಡ, ರಾಮನಗರ, ಮೈಸೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಯುವ ಮಾವಿಗೂ ಕೋಲಾರ ಮಾವಿಗೂ ಸಾಕಷ್ಟು ವ್ಯತ್ಯಾಸವಿದೆ. ಕೋಲಾರ ಬಾದಾಮಿಗೆ ದರ ಹೆಚ್ಚು. ಬೆಂಗಳೂರಿನ ಲಾಲ್‌ಬಾಗ್ ಮತ್ತು ಇನ್ನಿತರ ಕಡೆ ಕೋಲಾರದ ಬಾದಾಮಿ ಕೆ.ಜಿ.ಗೆ 36 ರಿಂದ 60ರವರೆಗೂ ಮಾರಾಟವಾಗುತ್ತಿದೆ.
ಶ್ರೀನಿವಾಸಪುರ ಎಪಿಎಂಸಿಯಲ್ಲಿ ಇನ್ನೂ ಮಾವು ಬಂದಿಲ್ಲ. ರಾಮನಗರ, ಧಾರವಾಡ ಇನ್ನಿತರ ಕಡೆಯ ಅಲ್ಫೋನ್ಸೋ ಮುಗಿದ ಮೇಲೆ ಕೋಲಾರ ಮಾವಿಗೆ ಬೇಡಿಕೆ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆ ರೈತರದ್ದು. ಈ ಬಾರಿ ಅಲ್ಫೋನ್ಸೋ ಆವಕ ಕಡಿಮೆ ಆಗುವುದರಿಂದ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಆಗಬಹುದು.
ಕಳೆದ ವರ್ಷದಂತೆ ಈ ಬಾರಿಯೂ ಕೆ.ಜಿ.ಗೆ 18ರಿಂದ 35 ಗೆ ಮಾರಾಟವಾದರೆ ರೈತರಿಗೆ ನಷ್ಟವಾಗದು. ಜಿಲ್ಲೆಯಲ್ಲಿ ಬೆಳೆಯುವ ಮಾವಿಗೂ ಕೋಲಾರ ಮಾವಿಗೂ ಸಾಕಷ್ಟು ವ್ಯತ್ಯಾಸವಿದೆ.
- ಬಲ್ಲಂ ಶ್ರೀನಿವಾಸರೆಡ್ಡಿ,
ಚೌಡರೆಡ್ಡಿ, ಶ್ರೀನಿವಾಸಪುರ ರೈತರು
-ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


