ಜಿನ್ನಿಂಗ್ ಫ್ಯಾಕ್ಟರಿಗೆ ಬೆಂಕಿ: ರು. 2 ಕೋಟಿಯ ಹತ್ತಿ ಭಸ್ಮ
ಬ್ಯಾಡಗಿ: ಮೋಟೆಬೆನ್ನೂರು ಬಳಿಯಿರುವ ಲಾವಣ್ಯ ಜಿನ್ನಿಂಗ್ ಹಾಗೂ ಪ್ರೆಸ್ಸಿಂಗ್ ಫ್ಯಾಕ್ಟರಿಯಲ್ಲಿ ನಡೆದ ಆಕಸ್ಮಿಕ ಅಗ್ನಿ ಅವಘಡದಲ್ಲಿ ರು. 2 ಕೋಟಿ ಮೌಲ್ಯದ ಹತ್ತಿ, 2 ಲಾರಿ ಸುಟ್ಟು ಭಸ್ಮವಾದ ಘಟನೆ ಭಾನುವಾರ ಮಧ್ಯಾಹ್ನ 12ರ ಸುಮಾರಿಗೆ ನಡೆದಿದೆ.
ಬಳ್ಳಾರಿ ಮೂಲದ ಬಿ.ಹರಿಬಾಬು ಅವರಿಗೆ ಸೇರಿದ ಹತ್ತಿ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದ್ದು, 9 ಅಗ್ನಿಶಾಮಕ ವಾಹನಗಳು ಬೆಂಕಿ ತಹಬಂದಿಗೆ ತರಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಫ್ಯಾಕ್ಟರಿ ಭಾಗಶಃ ಸುಟ್ಟುಹೋಗಿದೆಯಾದರೂ, ಯಾವುದೇ ಜೀವಹಾನಿ ಸಂಭವಿಸಿಲ್ಲ.
ಫ್ಯಾಕ್ಟರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ರೈತರು ಬೆಳೆದಿದ್ದ ಹತ್ತಿಯನ್ನು ಖರೀದಿಸಿ, ಸಂಗ್ರಹಿಸಿಟ್ಟಿದ್ದ ಹತ್ತಿ ಸುಟ್ಟು ಭಸ್ಮವಾಗಿದೆ.
ಫ್ಯಾಕ್ಟರಿ ಭಸ್ಮ: ಎರಡು ಎಕರೆ ಪ್ರದೇಶದಲ್ಲಿ ಲಾವಣ್ಯ ಜಿನ್ನಿಂಗ್ ಹಾಗೂ ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ನಿರ್ಮಿಸಲಾಗಿದ್ದು, 6 ತಿಂಗಳ ಹಿಂದೆ ಕಾರ್ಯಾರಂಭ ಮಾಡಿತ್ತು ಎನ್ನಲಾಗಿದೆ. ಆದರೆ, ಭಾನುವಾರ ನಡೆದ ಅಗ್ನಿ ಅವಘಡದಲ್ಲಿ ಕಟ್ಟಡ ಸುಟ್ಟು ಹೋಗಿದೆ.
ಎರಡು ಲಾರಿ ಭಸ್ಮ: ಅಗ್ನಿ ಅವಘಡದಲ್ಲಿ ಹತ್ತಿ ಅನ್ಲೋಡ್ ಮಾಡಲು ಬಂದಿದ್ದ 2 ಲಾರಿಗಳು ಸಂಪೂರ್ಣ ಸುಟ್ಟುಹೋಗಿವೆ. ಘಟನೆಗೆ ಕಾರಣ ಎನ್ನಲಾದ ಲಾರಿ ಹಿಂಭಾಗದಲ್ಲಿಯೇ ನಿಂತಿದ್ದ ಇನ್ನೊಂದು ಲಾರಿಯೂ ಬೆಂಕಿಗಾಹುತಿಯಾಗಿದೆ.
ಎಸ್ಪಿ, ತಹಸೀಲ್ದಾರ್ ಭೇಟಿ: ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶಿವಶಂಕರ ನಾಯಕ್, ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ, ಡಿವೈಎಸ್ಪಿ ಅಶೋಕ ಪೀಸೆ, ಸಿಪಿಐ ಹಾಲಮೂರ್ತಿರಾವ್, ಪಿಎಸ್ಐ ಗಿರೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳೆ ಕಾಣೆ-ಕೆಲಕಾಲ ಗಲಿಬಿಲಿ:ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದು, ಕೆಲಕಾಲ ಪೊಲೀಸರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಗಲಿಬಿಲಿಗೊಂಡರು. ಒಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಬೆಂಕಿಯಲ್ಲಿ ಬೆಂದು ಹೋಗಿದ್ದಾಗಿ ತಪ್ಪಾಗಿ ತಿಳಿದು ಹುಡುಕಲು ಹರಸಾಹಸಪಟ್ಟರು. ಆದರೆ, ಮಹಿಳೆ ಫ್ಯಾಕ್ಟರಿಯ ಇನ್ನೊಂದು ಭಾಗದಲ್ಲಿ ಹೆದರಿ ನಿಂತಿದ್ದನ್ನು ಕಂಡು ನಿಟ್ಟುಸಿರು ಬಿಟ್ಟರು.
ಲಾರಿಯ ತಾಂತ್ರಿಕ
ದೋಷದಿಂದ ಅವಘಡ
ಹತ್ತಿ ಅನ್ಲೋಡ್ ಮಾಡಲು ಬಂದಿದ್ದ ಲಾರಿಯೊಂದು ಚಾಲೂ ಆಗದ ಹಿನ್ನೆಲೆಯಲ್ಲಿ ಚಾಲಕ ಬ್ಯಾಟರಿ ದೋಷ ಸರಿಪಡಿಸಲು ಮುಂದಾದಾಗ ಲಾರಿಯಲ್ಲಿದ್ದ ಹತ್ತಿ ಚೀಲವೊಂದು ಬ್ಯಾಟರಿ ಮೇಲೆ ಬಿದ್ದು ಬೆಂಕಿ ಕಿಡಿ ಕಾಣಿಸಿಕೊಂಡಿತು. ನೋಡು ನೋಡುವಷ್ಟರಲ್ಲೇ ಇಡೀ ಫ್ಯಾಕ್ಟರಿಯನ್ನೇ ಬೆಂಕಿ ಆವರಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಪತ್ರಿಕೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

