ಪ್ರಧಾನ ಸುದ್ದಿ

ಇಲ್ಲಿ ಬದುಕು ಭಣಭಣ , ಅಲ್ಲಿ ಬಂಗ್ಲೆ ವೈಭವೀಕರಣ

Published On :

ಹಾಸನ: ಹಿಂದೆಲ್ಲಾ ಆಳುವ ಜನಪ್ರತಿನಿಧಿಗಳು ಜಗವೆಲ್ಲಾ ನಗುತಿರಲಿ, ಜಗದಳುವು ನನಗಿರಲಿ  ಎನ್ನುತ್ತಿದ್ದರು. ಆದರೆ ಈಗಿನವರದು ಜಗವೆಲ್ಲಾ ಅಳುತಿರಲಿ, ಜಗದ ನಗುವು  ನಮಗಿರಲಿ ಎಂಬ ವರ್ತನೆ...!
ಹೌದು. ರಾಜ್ಯ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪನವರ ಕಾರ್ಯ ವೈಖರಿ ಈ ಮಾತು ನೆನಪಿಸಿದರೆ ಅಚ್ಚರಿ ಇಲ್ಲ.
ಹಾಸನ ಜಿಲ್ಲೆ ಉಸ್ತುವಾರಿ ಸಚಿವರಾಗಿರುವ ಮಹಾದೇವಪ್ಪ ಬೆಂಗಳೂರಿನಲ್ಲಿ ತಮ್ಮ ಸರ್ಕಾರಿ ಬಂಗಲೆಯನ್ನು 2ಕೋಟಿ ವೆಚ್ಚದಲ್ಲಿ ನವೀಕರಣ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲೆಯ ಜನ ಸಾಮಾನ್ಯರ ಸಮಸ್ಯೆಗಳಿಗೆ ಕಿವಿಯಾನಿಸುವಷ್ಟೂ ಪುರುಸೊತ್ತಿಲ್ಲ.
ಸರ್ಕಾರಿ ನಿಯಮಗಳ ಪ್ರಕಾರ ಸ್ಥಳೀಯ ಅಧಿಕಾರಿಗಳು ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಉಸ್ತುವಾರಿ ಸಚಿವರ ಸೂಚನೆ ಪಾಲಿಸಬೇಕು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಕಡೆ ತಲೆ ಹಾಕದೆ ಅಧಿಕಾರಿಗಳ ಕೈ ಕಟ್ಟಿದಂತಾಗಿದೆ. ಬಂಗಲೆಯ ಹೊರ ಆವರಣದಲ್ಲಿ ಪುಟಿಯುವ ನೀರಿನ ರಮಣೀಯ ನರ್ತನ ನೋಡಲು ಕಾರಂಜಿ ನಿರ್ಮಿಸಿಕೊಳ್ಳುತ್ತಿರುವ ಸಚಿವರು, ಜಿಲ್ಲೆಯಲ್ಲಿ ಅಂತರ್ಜಲ ಕುಸಿದು ಒಂದು ಬಿಂದಿಗೆ ನೀರಿಗೆ ಉರಿ ಬಿಸಿಲಿನಲ್ಲಿ ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವ  ಮಹಿಳೆಯರ ದುಸ್ಥಿತಿ ಅರ್ಥವೇ ಆಗುತ್ತಿಲ್ಲ.
ಸರ್ಕಾರಿ ಬಂಗಲೆಯಲ್ಲಿ ಜಗಮಗಿಸುವ ಅಲಂಕಾರಿಕ ವಿದ್ಯುತ್ ದೀಪಗಳನ್ನು ಆಳವಡಿಸಲಾಗುತ್ತಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಸಿಂಗಲ್ ಫೇಸ್ ವಿದ್ಯುತ್‌ಗೂ ತತ್ವಾರವಿದೆ. ಈಗಾಗಲೇ ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಮತ್ತಿತರರು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ಮಹಾದೇವಪ್ಪನವರು ಸಮಸ್ಯೆ ಬಗೆಹರಿಸುವ ಗೋಜಿಗೇ ಹೋಗಿಲ್ಲ.
ಅಧಿಕಾರಿಗಳು ನಿರಮ್ಮಳ: ಕುಡಿಯುವ ನೀರಿನ ಸಮಸ್ಯೆ, ಬಿತ್ತನೆ ಬೀಜ ವಿತರಣೆ, ಆಲೂಗಡ್ಡೆ ವಿತರಣೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಉಸ್ತುವಾರಿ ಸಚಿವರ ಗೈರಿನಿಂದ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಮೊಬೈಲ್, ಲ್ಯಾಂಡ್ ಲೈನ್ ಮೂಲಕವಾದರೂ ಉಸ್ತುವಾರಿ ಸಚಿವರು, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡುತ್ತಿದ್ದಾರಾ ಅಂದ್ರೆ ಅದೂ ಇಲ್ಲ. ಕುಡಿಯುವ ನೀರೊದಗಿಸುವುದು ಸೇರಿದಂತೆ ಅಗತ್ಯ ಸ್ಥಳೀಯ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೂ ಸಚಿವರ ಸಮಕ್ಷಮದಲ್ಲೇ ಸಾರ್ವಜನಿಕ ಸಮಸ್ಯೆಗಳು, ವಿಷಯಗಳು ಚರ್ಚೆ ಆಗಬೇಕು. ಲೋಕಸಭೆ ಚುನಾವಣೆ ಫಲಿತಾಂಶ ನಂತರ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲಾಗುವುದು ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸದೇ ಇರುವುದು ಅಧಿಕಾರಿಗಳು ಪಾಲಿಗೆ ವೈದ್ಯರು ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎಂಬಂತಾಗಿದೆ.
ಮಹಾದೇವಪ್ಪ ತಳ ಸಮುದಾಯದಿಂದ ಬಂದವರು. ಬಡವರ ಸಮಸ್ಯೆ ಅವರಿಗೆ ಮುಖ್ಯವಾಗಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಜ್ವಲಂತ ಸಮಸ್ಯೆಗಳತ್ತ ಗಮನಹರಿಸದೇ ಐಷಾರಾಮಿ ಬದುಕಿಗೆ ಶರಣಾಗಿರುವುದು ದುರ್ದೈವದ ಸಂಗತಿ.
- ಕಣಗಾಲು ಮೂರ್ತಿ, ರೈತ ಮುಖಂಡ


-ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.