ಪ್ರಧಾನ ಸುದ್ದಿ

ನೀರಿಲ್ಲದೆ ನನಗೇನಿದೆ? ಕಲ್ಯಾಣಿ ತುಂಬಿದರಷ್ಟೆ ಕಲ್ಯಾಣ

ನೀರಿಲ್ಲದೆ ನನಗೇನಿದೆ? ಕಲ್ಯಾಣಿ ತುಂಬಿದರಷ್ಟೆ ಕಲ್ಯಾಣ
Published On :

ಬಿಜಾಪುರ: ಇದೊಂದು ರೀತಿಯ 'ಭಗೀರಥ ಶಪಥ!'
'ಹುಟ್ಟೂರಿಗೆ ನೀರು ಬರುವ ತನಕ ಧಾರೆ ನೀರು ಹಾಕಿಸಿಕೊಳ್ಳುವುದಿಲ್ಲ. ಸಪ್ತಪದಿ ತುಳಿಯೆ. ಊರಿನ ಕಲ್ಯಾಣದ ಬಳಿಕವೇ ನನ್ನ ಕಲ್ಯಾಣ'.
ಹೀಗೆ ಘೋಷಿಸಿ ಶಾಶ್ವತ ಕುಡಿಯುವ ನೀರಿಗಾಗಿ ಸಮರ ಸಾರಿದ್ದಾರೆ ಶಿವಣಗಿ ಗ್ರಾಮದ 34ರ ಹರೆಯದ ಯುವಕ ಗುಂಡಪ್ಪ ಶರಣಪ್ಪ ರೆಡ್ಡಿ!
ಶಿವಣಗಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಕಲ್ಪಿಸುವಂತೆ ಗ್ರಾಮಸ್ಥರ ಜೊತೆ ಸೇರಿ ಗುಂಡಪ್ಪ ಹೋರಾಡುತ್ತಲೇ ಬಂದವರು. ಸರ್ಕಾರ ಇದಕ್ಕೆ ಸ್ಪಂದಿಸಿ 30 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದೆ. ಆದರೆ ಇದು ಅವೈಜ್ಞಾನಿಕ ಹಾಗೂ ಕಳಪೆಯಾಗಿತ್ತು. ಹಾಗಾಗಿ ಸಮಸ್ಯೆ ಹೇಗಿದೆಯೋ ಹಾಗೆಯೇ ಇದೆ.
ಹೋರಾಟ: 20,000 ಜನಸಂಖ್ಯೆಯ ಶಿವಣಗಿ ಗ್ರಾಮಕ್ಕೆ ನೀರಿಗಾಗಿ ಗ್ರಾಮಸ್ಥರು ಪದೇ ಪದೇ ಹೋರಾಡಿದ್ದಾರೆ. ಪ್ರತಿಭಟನೆ ಆದಾಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾರೆ. ಸಮಸ್ಯೆ ಮರುಕಳಿಸಿದಾಗ ಹೋರಾಟವೂ ಮುಂದುವರಿಯುತ್ತದೆ.
ಕೊನೆಗೂ ಗ್ರಾಮಸ್ಥರ ಹೋರಾಟಕ್ಕೆ ಮಣಿದ ಸರ್ಕಾರ 2006-07ರಲ್ಲಿ 30 ಲಕ್ಷ ವೆಚ್ಚದಲ್ಲಿ ಮಾಳೇಹಳ್ಳದಿಂದ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿತ್ತು. 2009ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಆದರೆ ನೀರು ಮಾತ್ರ ಬರಲೇ ಇಲ್ಲ.
2010ರಲ್ಲಿ ತಾಪಂ ಚುನಾವಣೆಯಲ್ಲಿ ಗುಂಡಪ್ಪನ ತಾಯಿ ಸರೋಜಾ ಶರಣಪ್ಪ ರೆಡ್ಡಿ ಸ್ಪರ್ಧಿಸಿ ಆಯ್ಕೆಯಾದರು. ನೀರಿಗಾಗಿ ಗುಂಡಪ್ಪ ಅಧಿಕಾರಿಗಳ ಬೆನ್ನಿಗೆ ಬಿದ್ದು ಮಾಡಿಕೊಂಡ ಮನವಿಯೂ ಪ್ರಯೋಜನವಾಗಲಿಲ್ಲ.
ಮತ್ತೆ ಹೋರಾಟ: 2012ರಲ್ಲಿ ಜಿಪಂ ಹೆಚ್ಚುವರಿ ಅನುದಾನ 18 ಲಕ್ಷ ವೆಚ್ಚದಲ್ಲಿ 1.5 ಲಕ್ಷ ಲೀ. ನೀರು ಸಂಗ್ರಹ ಸಾಮರ್ಥ್ಯಕ್ಕಿಂತ ಮೇಲ್ಮಟ್ಟ ಜಲ ಸಂಗ್ರಹಾಲಯ ನಿರ್ಮಾಣ ಹಾಗೂ 80 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿ ಮನೆ, ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಕೈಗೊಂಡಿತು. ಇಷ್ಟಾದರೂ ಪ್ರಯೋಜನ ನಾಸ್ತಿ. ಅದೇ ವರ್ಷ ಗುಂಡಪ್ಪ ಆಮರಣ ಉಪವಾಸವನ್ನೂ ಕೈಗೊಂಡರು. ಅಧಿಕಾರಿಗಳ ಭರವಸೆ ಮೇರೆಗೆ ನಾಲ್ಕನೇ ದಿನಕ್ಕೆ ಸತ್ಯಾಗ್ರಹ ಕೈಬಿಟ್ಟಿದ್ದರು. ಕಳೆದ ಏ.26ರಂದು ಬಿಎಸ್ಸೆನ್ನೆಲ್ ಟವರ್ ಮೇಲೇರಿ ಕುಳಿತು ಪ್ರತಿಭಟನೆಯನ್ನೂ ನಡೆಸಿದ್ದರು.
2011 ರಲ್ಲಿ ಪ್ರತಿಜ್ಞೆ
ನೀರಿನ ಸಮಸ್ಯೆ ಪರಿಹರಿಸಲು ಸಾಕಷ್ಟು ಹೋರಾಡಿದ್ದರೂ ಗ್ರಾಮಸ್ಥರ ಚುಚ್ಚು ಮಾತು ಘಾಸಿಗೊಳಿಸಿತ್ತು. ಇದರಿಂದ ನೊಂದ ಗುಂಡಪ್ಪ ಗ್ರಾಮಸ್ಥರ ಎದುರೇ ನೀರು ಬರುವ ತನಕ ಮದುವೆ ಆಗಲ್ಲ ಎಂದು 2011ರಲ್ಲೇ ಪ್ರತಿಜ್ಞೆ ಮಾಡಿದ್ದಾರೆ. ಪಾಲಕರು, ಸ್ನೇಹಿತರು, ಹಿತೈಷಿಗಳು ಹಲವು ರೀತಿ ಮನವೊಲಿಕಗೆ ಯತ್ನಿಸಿದರೂ ಪಟ್ಟು ಸಡಿಲಿಸಿಲ್ಲ ಗುಂಡಪ್ಪ.


-ರುದ್ರಪ್ಪ ಆಸಂಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.