ಪ್ರಧಾನ ಸುದ್ದಿ

ರಾಹುಲ್‌ಗೆ ಸಿಕ್ಕ ಅನುಮತಿ ಮೋದಿಗಿಲ್ಲ

ರಾಹುಲ್‌ಗೆ ಸಿಕ್ಕ ಅನುಮತಿ ಮೋದಿಗಿಲ್ಲ
Published On :

ವಾರಾಣಸಿ/ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ವಾರಾಣಸಿಯ ಒಂದು ಸ್ಥಳದಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡದಿರುವುದು ಈಗ ಹೊಸ ವಿವಾದ ಸ್ಫೋಟಗೊಳ್ಳಲು ಕಾರಣವಾಗಿದೆ. ಕೇಂದ್ರ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ವಾದ ಮಂಡಿಸಿರುವ ಬಿಜೆಪಿ ನವದೆಹಲಿಯಲ್ಲಿ ಮತ್ತು ವಾರಾಣಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲು ತೀರ್ಮಾನಿಸಿದೆ.
ಇದೆಲ್ಲದರ ನಡುವೆ ಅಮೇಠಿಯಲ್ಲಿ ನರೇಂದ್ರ ಮೋದಿ ನಡೆಸಿದ ರ್ಯಾಲಿಗೆ ಪ್ರತಿಯಾಗಿ  ಮೇ 10ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.
ರ್ಯಾಲಿಗೆ ಇಲ್ಲ ಅನುಮತಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಗುರುವಾರ ಎರಡು ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ  ಮಾತನಾಡಲು ನಿರ್ಧರಿಸಿದ್ದರು. ಅದಕ್ಕೆ ಪೂರಕವಾಗಿ ಜಿಲ್ಲಾಡಳಿತಕ್ಕೆ ಅನುಮತಿ ನೀಡುವಂತೆ ಕೋರಿದ್ದರು. ಒಂದು ರ್ಯಾಲಿಯನ್ನು ವಾರಾಣಸಿಯ ಬೇನಿಯಾ ಬಾಗ್‌ನಲ್ಲಿ ಗುರುವಾರ ಸಾಯಂಕಾಲ ಮತ್ತು ಮತ್ತೊಂದು ರ್ಯಾಲಿಯನ್ನು ರೋಹನಿಯಾ ಎಂಬಲ್ಲಿ ಏರ್ಪಡಿಸಲಾಗಿತ್ತು. ಈ ಪೈಕಿ ಬೇನಿಯಾ ಬಾಗ್‌ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಗೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.
ಕಾರಣವೇನು?: ಜಿಲ್ಲಾಡಳಿತ ಹೇಳುವ ಪ್ರಕಾರ ಬೇನಿಯಾ ಬಾಗ್‌ನಲ್ಲಿರುವ ಮೈದಾನ ಚಿಕ್ಕದಾಗಿದೆ. ಅಲ್ಲಿ ಯಾವತ್ತೂ ಜನರು ಹೆಚ್ಚಿನ ಪ್ರಮಾಣದಲ್ಲಿ ಸೇರಿರುತ್ತಾರೆ. ಹೀಗಾಗಿ ಅಲ್ಲಿ ರ್ಯಾಲಿ ನಡೆಸಲು ಸಾಧ್ಯವಿಲ್ಲ. ಇಷ್ಟು ಮಾತ್ರವಲ್ಲ ಈ ಸ್ಥಳದಲ್ಲಿ ಕೋಮು ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಭೀತಿ ಉಂಟಾಗುತ್ತದೆ. ಇದರ ಜತೆಗೆ ಸಾರ್ವಜನಿಕರಿಂದಲೂ ಈ ಸ್ಥಳದಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು ಮನವಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಬುಧವಾರವಷ್ಟೇ ಬೇನಿಯಾ ಬಾಗ್‌ನಲ್ಲಿ ರ್ಯಾಲಿ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು ಎನ್ನುವುದು ಜಿಲ್ಲಾಡಳಿತದ ವಾದ.
ಬಿಜೆಪಿ ಟೀಕೆ: ವಾರಾಣಸಿ ಜಿಲ್ಲಾಡಳಿತದ ಕ್ರಮವನ್ನು ಬಿಜೆಪಿ ನಾಯಕ ಅರುಣ್ ಜೇಟ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮೇ 10ರಂದು ರೋಡ್‌ಶೋ ನಡೆಸಲು ಅನುಮತಿ ನೀಡಿ, ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿರುವ ನರೇಂದ್ರ ಮೋದಿ ಅವರಿಗೆ ರ್ಯಾಲಿ ನಡೆಸಲು ಅನುಮತಿ ನೀಡದೆ ಇರುವ ಜಿಲ್ಲಾಡಳಿತ ಮತ್ತು ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಜೇಟ್ಲಿ ಆಯೋಗಕ್ಕೆ ಪತ್ರವನ್ನೂ ಬರೆದಿದ್ದಾರೆ.
ಇಂದು ಧರಣಿ: ಆಯೋಗ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ. ಅದನ್ನು ಖಂಡಿಸಿ ನವದೆಹಲಿಯಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿ ಮತ್ತು ವಾರಾಣಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ.
ಶನಿವಾರ ರಾಹುಲ್ ರೋಡ್ ಶೋ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ವಾರಾಣಸಿಯ ವಿವಿಧ ಭಾಗಗಳಲ್ಲಿ ಮೇ 10ರಂದು ರೋಡ್ ಶೋ ನಡೆಸಲಿದ್ದಾರೆ. ಈ ದಿನ ಅಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವೂ ಹೌದು. ಮೇ 5ರಂದು ಅಮೇಠಿಯಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದ ನರೇಂದ್ರ ಮೋದಿ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಎದುರಾಗಿ ಪ್ರಚಾರ ನಡೆಸುವ ನಿರ್ಧಾರವನ್ನು ರಾಹುಲ್ ಕೈಗೊಂಡರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ತಿಳಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.