ಅಕ್ಕಿ ಜೊತೆ ಅಧಿಕಾರ; ವರ್ಷಾಂತ್ಯಕ್ಕೆ ಕರೆಂಟ್ ಗುಣಾಕಾರ

ಬೆಂಗಳೂರು: ಅಗ್ಗದ ಅಕ್ಕಿ ಯೋಜನೆಯೊಂದಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 'ಕಾಂಗ್ರೆಸ್' ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆ ಬರೆ ನೀಡಿ ವರ್ಷ ಪೂರ್ತಿಗೊಳಿಸುತ್ತಿದೆ!
'ಜೀವನದಲ್ಲಿ ನನಗೂ ಒಮ್ಮೆ ಸಿಎಂ ಆಗಬೇಕೆಂಬ ಕನಸಿದೆ' ಎಂದು ಆಗಾಗ ಹೇಳುತ್ತಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾದರೆ ಆಡಳಿತದಲ್ಲಿ 'ಗೋಚರ' ಬದಲಾವಣೆಯ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ದಿನದಿಂದಲೇ ಜನಪ್ರಿಯ ಯೋಜನೆಗಳ ಮಳೆ ಸುರಿಸಿದ ಸಿದ್ದು ಸರ್ಕಾರಕ್ಕೆ ಇಂದಿಗೆ ಒಂದು ವರ್ಷ.
ಪ್ರತಿಪಕ್ಷಗಳ ಪ್ರಕಾರ ಸರ್ಕಾರ ಇನ್ನು ಟೇಕಾಫೇ ಆಗಿಲ್ಲಾರಿ! ಕಾಂಗ್ರೆಸ್ನವರ ಪ್ರಕಾರ ವೇಗವಾಗಿ ಮತ್ತು ಜನಪರವಾಗಿ ಓಡುತ್ತಿದೆ. ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯಗೆ ಸಿಕ್ಕಿದ್ದು ಮಿಶ್ರಫಲ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರಣಾಳಿಕೆ ಆಶಯ ಈಡೇರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಬರೆದ ಪತ್ರ ಹಾಗೂ ಸಚಿವರ ಮೌಲ್ಯಮಾಪನದ ಹೇಳಿಕೆ ಸರ್ಕಾರ ಮತ್ತು ಪಕ್ಷದಲ್ಲಿನ ಸಮನ್ವಯತೆಯ ಕೊರತೆ ಎತ್ತಿ ಆಡಿತು. ಅನ್ನಭಾಗ್ಯ ಯೋಜನೆಯ ಮೆರಗನ್ನು ಮೌಢ್ಯ ನಿಷೇಧ ಕಾಯಿದೆ ಜಾರಿ ಯತ್ನ ನುಂಗಿ ಹಾಕಿತು.
ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಗೆಲವಿನ ಖುಷಿ, ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಪುಟದ ಸಚಿವರೊಬ್ಬರ ತಲೆದಂಡದೊಂದಿಗೆ ಕಪ್ಪುಗಟ್ಟಿತು. ಒಟ್ಟಿನಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಸಿದ್ದರಾಮಯ್ಯನವರಿಗೆ ಪ್ರತಿದಿನ 'ಯುಗಾದಿ'. ಜನರಿಂದ ಪಡೆದ ಪ್ರಶಂಸೆಗೆ ಸಮ ಮತ್ತು ವಿರುದ್ಧವಾದ ಹತಾಶೆಯನ್ನು ಉಂಡಿದ್ದಾರೆ.
ಹೋಗ್ಲಿ, ಜನ ಸಿದ್ದರಾಮಯ್ಯನವರ ಸರ್ಕಾರವನ್ನು ನಿಜಕ್ಕೂ ಮೆಚ್ಚಿಕೊಂಡಿದ್ದಾರೆಯೇ? ಮೇ 16ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶದ ಮೂಲಕ ಉತ್ತರ ನೀಡುತ್ತೇನೆ ಎನ್ನುತ್ತಾನೆ ರಾಜ್ಯದ ಮತದಾರ!
ಖುದ್ದು ಸಿದ್ದರಾಮಯ್ಯನವರೇ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ವರ್ಷ ತುಂಬಿದ ಸಂಭ್ರಮ-ಸಂತಾಪದ ಆಚರಣೆಗೆ ಸಿದ್ಧರಾಗಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ಭಟಿಸಿದ್ದ ಗಣಿಗಾರಿಕೆ, ಸಕ್ಕರೆ ಹಾಗೂ ಶಿಕ್ಷಣ ಲಾಬಿಯನ್ನು ಹತ್ತಿಕ್ಕುವುದಕ್ಕೆ ಸಿದ್ದರಾಮಯ್ಯ ಇನ್ನೂ ತಿಣುಕುತ್ತಿದ್ದಾರೆ. ಏಕೆಂದರೆ ಬಿಜೆಪಿಗಿಂತಲೂ ಕಾಂಗ್ರೆಸ್ನೊಳಗೆ ಇದರ ಬೇರು ಆಳ. ಸರ್ವರಿಗೂ ಸಮಬಾಳು-ಸಮಪಾಲು ತತ್ವ ಒಪ್ಪಿಕೊಂಡರೂ ಒಲ್ಲದ ಮನಸಿನಿಂದಲೇ 'ಆಪ್ತವರ್ಗ'ದ ಮಾತಿಗೆ ಗೋಣು ಬಗ್ಗಿಸುತ್ತಿದ್ದಾರೆ. ಸಬ್ಸಿಡಿಯನ್ನೂ ನೀಡಬೇಕು, ಅಭಿವೃದ್ಧಿಯನ್ನೂ ಸಾಧಿಸಬೇಕೆಂಬ ಜರೂರತ್ತಿನಲ್ಲಿ ಸಿಲುಕಿದ್ದಾರೆ. ಆರ್ಥಿಕ ಶಿಸ್ತು ಮೂಡಿಸಬೇಕೆಂಬ ಇಚ್ಛೆ ಇದ್ದರೂ ಖಜಾನೆ ಪೂರ್ತಿ ತುಂಬಿಲ್ಲ.
ಒಂದು ವರ್ಷ ತುಂಬುವ ಹೊತ್ತಿಗೆ ಸಿದ್ದರಾಮಯ್ಯನವ ಸರ್ಕಾರ 'ಸ್ವಲ್ಪ ಹುಳಿ-ಸ್ವಲ್ಪ ಸಿಹಿ' ಭಾವನೆ ಮೂಡಿಸಿದೆ. ಇಷ್ಟೆಲ್ಲ ಗೊಂದಲದ ಮಧ್ಯೆ ನಿಂತಿರುವ ಸಿದ್ದು ಸರ್ಕಾರಕ್ಕೆ ಮೇ 16ರಂದು ರಾಜ್ಯದ ಜನತೆ ಅಂಕ ನೀಡಲಿದ್ದಾರೆ. ಆದಾಗಿಯೂ ಹುಟ್ಟುಹಬ್ಬದ ಹೊಸ್ತಿಲಲ್ಲಿರುವ ಈ ಸರ್ಕಾರದ ಸಾಧನೆಯನ್ನು ಅದೇ ಜಾರಿಗೆ ತಂದ 10 ಸತ್ಕಾರ್ಯ ಮತ್ತು 10 ಎಡವಟ್ಟುಗಳ ಮೂಲಕ ತೂಕ ಮಾಡೋಣ...
10 ಸತ್ಕಾರ್ಯ
ಕೆಜಿಗೆ ರು. 1 ದರದಲ್ಲಿ ರಾಜ್ಯದ 1 ಕೋಟಿ ಬಡ ಕುಟುಂಬಗಳ ಹಸಿವು ಇಂಗಿಸುವ ಅನ್ನಭಾಗ್ಯ ಯೋಜನೆ. ಇದಕ್ಕಾಗಿ ವಾರ್ಷಿಕ 4.5 ಸಾವಿರ ಕೋಟಿ ಸಬ್ಸಿಡಿ
ಋಣಮುಕ್ತ ಯೋಜನೆ ಅನ್ವಯ ಪರಿಶಿಷ್ಟ ಜಾತಿ, ವರ್ಗ, ಅಲ್ಪಸಂಖ್ಯಾತರು, ಹಿಂದುಳಿದವರು ಮಾಡಿದ್ದ ರು. 1368 ಕೋಟಿ ಸಾಲ ಮನ್ನಾ.
ಅಂಗನವಾಡಿ ಮತ್ತು ಶಾಲಾ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗಾಗಿ ಕ್ಷೀರಭಾಗ್ಯ ಯೋಜನೆ. 1 ಕೋಟಿ ಮಕ್ಕಳಿಗೆ ಇದರ ಫಲಾನುಭವ. ಹಾಲು ಉತ್ಪಾದಕರಿಗೆ ರು. 4 ಪ್ರೋತ್ಸಾಹ ಧನ ಹೆಚ್ಚಳ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ.
ಕೃಷಿ ಬೆಲೆ ಆಯೋಗ ರಚನೆ. ರೈತರಿಗೆ ರು. 2 ಲಕ್ಷದವರೆಗೆ ಬಡ್ಡಿ ರಹಿತ ಸಾಲ.
ರೈತರ ಅಭ್ಯುದಯಕ್ಕಾಗಿ ಈ ಸಾಲಿನಲ್ಲಿ ರು. 500 ಕೋಟಿ ವೆಚ್ಚದಲ್ಲಿ ಜಾರಿಯಾಗಲಿದೆ ಕೃಷಿಭಾಗ್ಯ.
ಬಯಲು ಸೀಮೆ ಪ್ರದೇಶಕ್ಕೆ ನೀರುಣಿಸಲು ರು. 12916 ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ.
ಲೈಂಗಿಕ ಅಲ್ಪಸಂಖ್ಯಾತರು ಮತ್ತು ವಿಧವೆಯರಿಗಾಗಿ 'ಮನಸ್ವಿನಿ' ಮತ್ತು 'ಮೈತ್ರಿ' ಯೋಜನೆ.
24 ಲಕ್ಷ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರು. 600 ಕೋಟಿ ನಿಗದಿ.
10 ಎಡವಟ್ಟುಗಳು
ಮುಸ್ಲಿಂ ಯುವತಿಯರ ಕಲ್ಯಾಣ ಮಹೋತ್ಸವಕ್ಕೆ 'ಶಾದಿಭಾಗ್ಯ'.
ಹಿಂದುಳಿದ ವರ್ಗಗಳ ಶಾಲಾ ಮಕ್ಕಳಿಗೆ ಮಾತ್ರ ಪ್ರವಾಸ ಭಾಗ್ಯ.
ಬುದ್ಧಿಜೀವಿಗಳ ಸಂಸರ್ಗದಲ್ಲಿ ಬೆಳೆದ ಕಾರಣಕ್ಕೆ ಮೌಢ್ಯ ನಿಯಂತ್ರಣ ಕಾಯಿದೆ ಜಾರಿಗೊಳಿಸಲು ಹೋಗಿ ಎಡವಿದ್ದು.
ಪಿಯು ಮಕ್ಕಳಿಗೆ ಕಂಪ್ಯೂಟರ್ ಕೊಡುವುದಾಗಿ ಭರವಸೆ ನೀಡಿ ಕೈ ಎತ್ತಿದ್ದು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ವಿಫಲ. ರೈತ ವಿಠಲ ಅರಬಾವಿ ಆತ್ಮಹತ್ಯೆ.
ರಾಜಕೀಯ ಪರಿಣಾಮಗಳಿಗೆ ಹೆದರಿ ವರ್ಷ ಕಳೆದರೂ ನಿಗಮ-ಮಂಡಳಿ ನೇಮಕ ಪ್ರಕ್ರಿಯೆ ನಡೆಸದಿರುವುದು.
ಸಾರಿಗೆ, ನೀರು, ವಿದ್ಯುತ್ ಹಾಗೂ ಟೋಲ್ ಬೆಲೆ ಹೆಚ್ಚಳ.
ಆಪ್ತ ಸಚಿವರ ಅಂದಾ'ದುಂಧಿ'ಗೆ ಕಡಿವಾಣ ಹಾಕದಿರುವುದು.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ 'ನರಹರ ಮೋದಿ' ಹೇಳಿಕೆಗಾಗಿ ಆಯೋಗದಿಂದ ಎಚ್ಚರಿಕೆ ಪಡೆದಿದ್ದು.
ರೈತ ವಿಠಲ ಅರಬಾವಿ ಕುಡಿದು ಸತ್ತ ಎಂದು ಪ್ರಚಾರ ಸಂದರ್ಭದಲ್ಲಿ ಹೇಳಿದ್ದು.
ರಾಘವೇಂದ್ರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


