ಹಿರಿಯ ಜೀವದ ಮಾತಿಗೆ ಮೌನವೇ ಶಿಕ್ಷೆಯಾಗಬೇಕೆ?
ಬೆಂಗಳೂರು: ಇಳಿ ವಯಸ್ಸಲ್ಲಿ ಜಾರಿ ಹೋದ ಮಾತಿಗೆ ಮೌನವೇ ಶಿಕ್ಷೆಯಾಗಬೇಕೆ? ಮೈಸೂರಿನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ನೀಡಿದ ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ, ಇನ್ನು ಮುಂದೆ ಸಾರ್ವಜನಿಕ ಕಾರ್ಯಕ್ರಮವೇ ಬೇಡವೆಂದು ಮೌನಕ್ಕೆ ಜಾರಿರುವ ಕ್ರಮ ಇಂತಹದೊಂದು ಪ್ರಶ್ನೆಗೆ ಕಾರಣವಾಗಿದೆ.
ಅಲ್ಲದೇ, 81ರ ವಯಸ್ಸಿನಲ್ಲಿ ಹಿರಣ್ಣಯ್ಯ ಆಡಿದ ಮಾತನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳದೇ ಬಿಡಬಹುದಾದ ಸಾಧ್ಯತೆಗಳಿದ್ದಾಗ್ಯೂ, ಹೇಳಿಕೆಯನ್ನು ವಿವಾದವಾಗಿಸಿ, ಕಾರ್ಯಕ್ರಮದಲ್ಲಿ ದಾಂಧಲೆ ನಡೆಸಿ, ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯವನವರನ್ನು ಕ್ಷಮೆಯಾಚಿಸುವಂತೆ ಒತ್ತಡ ತಂದ ವ್ಯವಸ್ಥೆಯ ಕ್ರಮ ಅನುಮಾನ ಸೃಷ್ಟಿಸಿದೆ.
ಮಾಸ್ಟರ್ ಹಿರಣ್ಣಯ್ಯ ರಂಗ ಭೂಮಿಯ ಹಿರಿಯ ಕಲಾವಿದರು. ಅವರು ಮಾಸ್ಟರ್ ಎಂದೇ ಖ್ಯಾತಿಯಾಗಿದ್ದಕ್ಕೆ ಅಭಿನಯವೇ ಕಾರಣ. ಆರಂಭದಿಂದಲೂ ರಾಜಕೀಯ ವಿಡಂಬನೆಯನ್ನೆ ತಮ್ಮ ರಂಗ ವೇದಿಕೆಯ ಕಥಾವಸ್ತುವಾಗಿಸಿಕೊಂಡ ಅವರು, 'ಲಂಚವಾತಾರ' ನಾಟಕದ ಮೂಲಕ ಹಲವು ವರ್ಷಗಳಿಂದ ಇಲ್ಲಿನ ರಾಜಕೀಯ ವ್ಯವಸ್ಥೆಯನ್ನು, ರಾಜಕಾರಣಿಗಳನ್ನು ತಮ್ಮದೇ ಶೈಲಿಯ ಮಾತುಗಳಿಂದ ಟೀಕಿಸಿದ್ದಾರೆ. ಚುಚ್ಚಿದ್ದಾರೆ. ಅಣಕಿಸಿದ್ದಾರೆ. ಆ ಕಾರಣದಿಂದಲೇ ಕರ್ನಾಟಕದಲ್ಲಿ ಅವರು ಜನಪ್ರಿಯತೆ ಪಡೆದುಕೊಂಡವರು.
ಹಾಗಂತ ಆಗ ವಿವಾದಗಳೇ ಇಲ್ಲ ಅಂತಿರಲಿಲ್ಲ, ಅನೇಕ ಕಡೆಗಳಲ್ಲಿ ಅವರ ನಾಟಕ ಪ್ರದರ್ಶನಕ್ಕೂ ಅಡೆ ತಡೆಗಳಾಗಿದ್ದು ಇತ್ತು. ಆದರೆ, ಅತಿರೇಕಕ್ಕೆ ಹೋಗಿ ಅವರು, ಅವಮಾನ ಅನುಭವಿಸಿದ್ದು ಇರಲಿಲ್ಲ. ರಾಜಕಾರಣಿಗಳನ್ನು ಬಹಿರಂಗವಾಗಿಯೇ ಟೀಕಿಸುವ, ಅಣಕಿಸುವ ಹಂತಗಳು ಕೂಡ ಆಗ ಆರೋಗ್ಯಕರವಾಗಿದ್ದವು. ಆವತ್ತಿನ ಕಾಲಘಟ್ಟ ಕೂಡ, ಇವುಗಳನ್ನು ತೀರಾ ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡಿರಲಿಲ್ಲ. ಕಲಾವಿದರಿಗೆ ಆ ಮಟ್ಟಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಜವೇ ನೀಡಿತ್ತು.
ಇದರ ಅನುಭವದಲ್ಲಿಯೇ ಸಮಾಜದ, ರಾಜಕಾರಣದ, ರಾಜಕಾರಣಿಗಳ ಅಂಕು ಡೊಂಕುಗಳನ್ನು ಟೀಕಿಸುತ್ತಾ ಬಂದ ಮಾಸ್ಟರ್ ಹಿರಣ್ಣಯ್ಯ, ನಾಡಿನ ಘಟಾನುಘಟಿ ರಾಜಕಾರಣಿಗಳಿಗೂ ಹತ್ತಿರವಾಗಿದ್ದರು. ಅವರ ವಿಶ್ವಾಸಗಳಿಸಿಕೊಂಡಿದ್ದರು. ಜಾತಿ ಕೂಡ ಅವತ್ತಿಗೆ ಗೌಣವೇ ಆಗಿತ್ತು. ಆದರೆ, ಇಂದು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಿದೆ ಎನ್ನುವುದಕ್ಕೆ, ಅರಳು ಮರಳು ವಯಸ್ಸಿನ ಮಾತುಗಳಿಗೂ ಇಲ್ಲಿ ಶಿಕ್ಷೆ ಎನ್ನುವುದಕ್ಕೆ ಮೈಸೂರಿನ ಘಟನೆ ಸಾಕ್ಷಿ ಆಗಿದೆ.
ಈ ವಿವಾದಿಂದಲೇ ಹಿರಣ್ಣಯ್ಯ, ಬಹಿರಂಗ ಕ್ಷಮೆ ಕೇಳಿ, ಸಾರ್ವಜನಿಕ ಕಾರ್ಯಕ್ರಮವೇ ಬೇಡವೆಂದು ಮೌನಕ್ಕೆ ಜಾರಿದ್ದರೂ ಅವರನ್ನು ಸಮಾಧಾನಿಸುವ ಕೆಲಸ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರಿಂದಾಗಲಿ, ಕ್ಷಮೆ ಕೇಳಿಸಿಕೊಂಡ ಮುಖ್ಯಮಂತ್ರಿಗಳಿಂದಾಗಲಿ ಆಗದಿರುವುದು ದುರಂತವೇ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

