ಪ್ರಧಾನ ಸುದ್ದಿ

ಕಿಮ್ಮನೆ ಬದಲು ಕಾಗೋಡುಗೆ ಪಟ್ಟ?: ಕೈ ಹಿಟ್ಲಿಸ್ಟ್ ರೆಡಿ

ಕಿಮ್ಮನೆ ಬದಲು ಕಾಗೋಡುಗೆ ಪಟ್ಟ?: ಕೈ ಹಿಟ್ಲಿಸ್ಟ್ ರೆಡಿ
Published On :

ಕೈ ಪಾಳಯಕ್ಕೆ ಶಕ್ತಿ ನೀಡಲು ಸ್ಪೀಕರ್ಗೆ ಮಂತ್ರಿ ಪಟ್ಟ ಸಾಧ್ಯತೆ

-ವಿಶೇಷ ವರದಿ
ಶಿವಮೊಗ್ಗ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ನಲ್ಲೂ ಚಟುವಟಿಕೆ ಆರಂಭವಾಗಿದೆ. ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸುವ ಉದ್ದೇಶದಿಂದ ಕಾಗೋಡು ತಿಮ್ಮಪ್ಪ ಅವರಿಗೆ ಮಂತ್ರಿ ಪದವಿ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಈ ಮಧ್ಯೆ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆಯವರು ಪಕ್ಷ ಸಂಘಟನೆಯಲ್ಲಿ ವಿಫಲರಾಗಿರುವುದಕ್ಕೆ ತಲೆದಂಡ ತೆರಬೇಕಾದ ಸಾಧ್ಯಾಸಾಧ್ಯತೆ ಕುರಿತೂ ಚರ್ಚೆ ನಡೆದಿದೆ.
ತೀರ್ಥಹಳ್ಳಿಗೆ ಉಸ್ತುವಾರಿ: ಕಿಮ್ಮನೆ ರತ್ನಾಕರ್ ಮಂತ್ರಿ ಪದವಿ ಸ್ವೀಕರಿಸಿ ಒಂದು ವರ್ಷವಾಯಿತು. ಆದರೆ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಉಪಯೋಗವಾಗಿಲ್ಲ. ಕಿಮ್ಮನೆ ಕೇವಲ ತೀರ್ಥಹಳ್ಳಿಗಷ್ಟೇ ಸೀಮಿತವಾಗಿಬಿಟ್ಟರು. ತೀರ್ಥಹಳ್ಳಿ ಉಸ್ತುವಾರಿ ಸಚಿವರಾದರು ಎಂದು ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರು ಹೇಳಿಕೊಳ್ಳುವಂತಾದರು.
ಕಿಮ್ಮನೆಯವರು ಪ್ರಾಮಾಣಿಕರು, ದಕ್ಷರೆಂದು ಹೇಳಿಸಿಕೊಂಡರೆ ಸಾಲದು, ವ್ಯವಸ್ಥೆಯಲ್ಲಿ ಒಂದಷ್ಟು ಚಲನೆ ನೀಡಬೇಕು, ಕ್ಷೇತ್ರಕ್ಕೆ ವಿಶೇಷ ಅನುದಾನ ತರಬೇಕು. ಆದರೆ, ಅವರ ವೈಯಕ್ತಿಕ ಪ್ರಯತ್ನದಿಂದಲೇ ಜಿಲ್ಲೆಗೆ ಏನೆಲ್ಲಾ ಯೋಜನೆ ತಂದರು, ಯಾವೆಲ್ಲಾ ಸಮಸ್ಯೆಗೆ ಪರಿಹಾರಕೊಟ್ಟರು ಎಂದರೆ ಉತ್ತರವೇ ಸಿಗುವುದಿಲ್ಲ ಎಂದು ಕಾಂಗ್ರೆಸ್ ಪಾಳಯದಲ್ಲಿನ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಎಸ್ಎಂಕೆ ಬಣ: ಕಿಮ್ಮನೆಯವರನ್ನು ಸುಲಭವಾಗಿ ಮಂತ್ರಿ ಪದವಿಯಿಂದ ಕೆಳಗಿಳಿಸುವುದು ಸಾಧ್ಯವಿಲ್ಲ. ಅವರು ಎಸ್ಎಂಕೆ ಬಣದಲ್ಲಿ ಗುರುತಿಸಿಕೊಂಡವರು ಎಂಬ ಮಾತಿದೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತ ನೆಪವಾಗಿಟ್ಟುಕೊಂಡು ಮಂತ್ರಿ ಪದವಿ ವಾಪಸು ಪಡೆಯುವ ಉದ್ದೇಶ ಸಿದ್ದರಾಮಯ್ಯ ಬಣದ್ದು. ಹೀಗಾಗಿ ಸಿದ್ದರಾಮಯ್ಯ ಬಣ ಸಿದ್ಧಪಡಿಸಿದ ಹಿಟ್ ಲಿಸ್ಟ್ ಸಚಿವರ ಪಟ್ಟಿಯಲ್ಲಿ ಕಿಮ್ಮನೆ ಹೆಸರು ನಮೂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಎಸ್ಎಂಕೆ ತಮ್ಮವರನ್ನು ಉಳಿಸಿಕೊಳ್ಳಲು ಪಟ್ಟು ಹಿಡಿದರೆ ಬೇರೆ ಖಾತೆಗೆ ಕಿಮ್ಮನೆ ವರ್ಗಾವಣೆಯಾದರೂ ಆಶ್ಚರ್ಯವಿಲ್ಲ.
ಈಡಿಗ ಸಮುದಾಯ ಗುರಿ: ಇನ್ನೊಂದೆಡೆ ಶಿವಮೊಗ್ಗದಲ್ಲ್ಲಿ ಕಾಂಗ್ರೆಸ್ನಿಂದ ದೂರವಾದ ಈಡಿಗ ಸಮುದಾಯವನ್ನು ಪುನಃ ತನ್ನತ್ತ ಸೆಳೆದುಕೊಳ್ಳಲು ಕಾಗೋಡು ತಿಮ್ಮಪ್ಪನವರಿಗೆ ಮಂತ್ರಿ ಸ್ಥಾನ ಕರುಣಿಸುವುದು ಅನಿವಾರ್ಯ. ಹಾಗೆಯೇ ಯಡಿಯೂರಪ್ಪ ಅವರ ಅಬ್ಬರ ಮೆಟ್ಟಿ ನಿಲ್ಲುವ ಶಕ್ತಿ ಕಾಗೋಡು ಹೊರತಾಗಿ ಕಿಮ್ಮನೆಯವರಿಗೆ ಬರಲು ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್ ಮುಖಂಡರ ವಾದ.


ಕುಮಾರ್ ಬಂಗಾರಪ್ಪ ಬಲಿಪಶು


ವಿಧಾನಪರಿಷತ್, ರಾಜ್ಯಸಭೆ ಸೇರಿದಂತೆ ಪಕ್ಷದಿಂದ ದೊರೆಯಬಹುದಾಗಿದ್ದ ಅಧಿಕಾರದ ಅವಕಾಶವನ್ನು ಕುಮಾರ್ ಬಂಗಾರಪ್ಪ ತಪ್ಪಿಸಿಕೊಂಡಿದ್ದಾರೆ. ಇದಕ್ಕೆ ಅವರೇ ನೇರವಾಗಿ ಎಷ್ಟು ಕಾರಣರೋ, ಪಕ್ಷದೊಳಗಿನ ಅವರ ಶತ್ರುಗಳೂ ಅಷ್ಟೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಕೊನೆ ಹಂತದವರೆಗೆ ಟಿಕೆಟ್ಗಾಗಿ ಹೋರಾಡಿದ್ದ ಕುಮಾರ್ ಬಂಗಾರಪ್ಪ ಪಕ್ಷದ ವಿರುದ್ಧವೇ ದನಿ ಎತ್ತಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಅವರು ಮೌನ ವಹಿಸಿದ್ದರೂ, ಅಂದಿನ ಘಟನೆಗಳು ತಿರುಗುಬಾಣವಾಗಿ ಪರಿಣಮಿಸಿವೆ. ಜಿಲ್ಲೆಯ ಪ್ರಮುಖ ನಾಯಕರು ಈಗಾಗಲೇ ರಾಜ್ಯ ನಾಯಕರ ಕಿವಿಕಚ್ಚಿದ್ದು, ಕುಮಾರ್ ಬಂಗಾರಪ್ಪನವರಿಗೆ ಯಾವುದೇ ಹುದ್ದೆ ಸಿಗದಂತೆ ಲಾಬಿ ನಡೆಸಿದ್ದಾರೆ. ಕುಮಾರ್ ಪಕ್ಷ ವಿರೋಧಿ ಚಟುವಟಿಕೆಗೆ ಶಿಸ್ತು ಕ್ರಮ ಎದುರಿಸದಿದ್ದರೆ ಅದೇ ಅವರ ಪಾಲಿನ ಯಶಸ್ಸು ಎಂದು ಹಿರಿಯ ಮುಖಂಡರೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.