ಬಿಜೆಪಿ ಗೆಲವಿನ ಸಡಗರ; ಕೈ ಕಟ್ಟಿ ಕುಳಿತ ನಾಯಕರು!

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಇತ್ತ ಜಯುದ ಕೇಕೆ, ಅತ್ತ ನೀರವ ಮೌನ!
ಬಿಜೆಪಿ ಕಚೇರಿಯಲ್ಲಿ ಹರ್ ಹರ್ ಮೋದಿ ಎಂಬ ಮುಗಿಲು ಮುಟ್ಟುವ ಘೋಷಣೆ, ಬಾವುಟಗಳ ಹಾರಾಟ, ಪಟಾಕಿಗಳ ಸಿಡಿತ, ಉತ್ಸಾಹಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರಿಂದ ಹರಸಾಹಸ. ಸದಾ ಗಿಜಿಗುಡುತ್ತಿದ್ದ ಕಾಂಗ್ರೆಸ್ ಕಚೇರಿ ಮುಂದೆ ಜನರ ಸುಳಿವೇ ಇಲ್ಲ. ನಾಯಕರ ಸುಳಿವೇ ಇಲ್ಲ.
ಬಿಜೆಪಿ ಅಧಿಕಾರಕ್ಕೆ ಬರುತ್ತದೆಂಬ ಮುನ್ಸೂಚನೆ ಸಿಕ್ಕಿದ್ದರಿಂದ ಬೆಳಿಗ್ಗೆಯಿಂದಲೇ ಜನಸಾಗರ ಬಿಜೆಪಿ ಕಚೇರಿಯತ್ತ ಹರಿದು ಬಂದಿತ್ತು. ಅಶೋಕ ರಸ್ತೆಯ ಇಕ್ಕೆಲಗಳಲ್ಲೂ ಪ್ರವೇಶ ನಿರ್ಬಂಧಿಸಿದ್ದರೂ ಕಾರ್ಯಕರ್ತರು ಮೋದಿ ವಿಜಯೋತ್ಸವ ಆಚರಣೆಗೆ ಮುನ್ನುಗ್ಗುತ್ತಲೇ ಇದ್ದರು.
ಇಡೀ ಅಶೋಕ ರಸ್ತೆಯಲ್ಲಿ ರಾಶಿ ರಾಶಿ ಸಿಹಿ ಜತೆಗೆ ಮುಗಿಲು ಮುಟ್ಟುವ ಸಂಭ್ರಮ. ಬಿಜೆಪಿ ಕಚೇರಿ ಒಳ ಬರಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಅಮಿತ್ ಶಾ, ನರೇಂದ್ರ ಮೋದಿ ಸೇರಿದಂತೆ ಇತರೆ ನಾಯಕರು ಹರಸಾಹಸ ಮಾಡಬೇಕಾಯಿತು. ದೆಹಲಿಯ ಬೀದಿ ಬೀದಿಯಲ್ಲಿ ಸಿಕ್ಕ ಜನರಿಗೆ ಕಾರ್ಯಕರ್ತರು ಸಿಹಿ ಹಂಚಿ ಖುಷಿ ಹಂಚಿಕೊಂಡರು.
ಕಾರ್ಯಕರ್ತರ ಹಷೋದ್ಗಾರದಲ್ಲಿ ಮುಖಂಡರು ಕಳೆದುಹೋಗಿದ್ದರು. ಭಾವಿ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ನಲ್ಲಿಯೇ ಇದ್ದರಿಂದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಎಲ್ಲರ ಕೇಂದ್ರ ಬಿಂದುವಾಗಿದ್ದರು. ಬಿಜೆಪಿಯ ಭವಿಷ್ಯದ ಯೋಚನೆಯನ್ನು ಸಾರುವಂತೆ ಮೊದಲ ಬಾರಿಗೆ ಪ್ರಧಾನ ವೇದಿಕೆಯಲ್ಲಿ ಅಮಿತ್ ಶಾ ಮಿಂಚಿದರು.
ಕಾಂಗ್ರೆಸ್ ಮನೆಯಲ್ಲಿ ನೀರವ ಮೌನ
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರೀಕ್ಷಿಸಿದ್ದಕ್ಕಿಂತ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದ ಪರಿಣಾಮ ಮೊದಲ ದಿನವೇ ಗೋಚರವಾಗಿತ್ತು. ಸದಾ ಗಿಜಿಗುಡುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಗೆ ವೇದಿಕೆ ಸಿದ್ಧಪಡಿಸಿದ ಹಾಗೂ ಕಚೇರಿ ಸಿಬ್ಬಂದಿ ಬಿಟ್ಟರೆ ನಾಯಕರಾರು ಅಲ್ಲಿ ಸುಳಿದಾಡಲಿಲ್ಲ. ವಿಶೇಷ ಎಂದರೆ ಫಲಿತಾಂಶ ಘೋಷಣೆ ಆಗುವ ಮುನ್ನವೇ ಕಾಂಗ್ರೆಸ್ ಕಚೇರಿಗೆ ಮಂಕು ಕವಿದಿತ್ತು.
ಅದು ಕಾಂಗ್ರೆಸ್ ಕಚೇರಿಗಷ್ಟೇ ಸೀಮಿತವಾಗಿರಲಿಲ್ಲ. ಸೋನಿಯಾ ಗಾಂಧಿ ಅವರ ಭೇಟಿಗೆ ಸಮಯ ಕೋರಲು ಆಗಮಿಸುತ್ದಿದ್ದ ಕಾಂಗ್ರೆಸ್ ನಾಯಕರು ಶುಕ್ರವಾರ ಜನಪಥ್ ನಂ.10 (ಸೋನಿಯಾ ಗಾಂಧಿ ನಿವಾಸ) ಹತ್ತಿರವೂ ಸುಳಿಯಲಿಲ್ಲ. ಹಿಂದೆಲ್ಲ ಸೋತಾಗ ಸಂತೈಸುತ್ತಿದ್ದ ಮಂದಿಯೂ ಕಾಣಲಿಲ್ಲ. ಸಂಜೆ ಮಾಧ್ಯಮಗೋಷ್ಠಿ ನಡೆದಾಗಲೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಿಂದೆ ಮುಂದೆ ಇರುತ್ತಿದ್ದವರು ಬೆರಳೆಣಿಕೆಯಷ್ಟಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


