ಪ್ರಧಾನ ಸುದ್ದಿ

ಆರಂಭವಾದ ಮುಖಂಡರ ರಾಜಿನಾಮೆ ಪರ್ವ

ಆರಂಭವಾದ ಮುಖಂಡರ ರಾಜಿನಾಮೆ ಪರ್ವ
Published On :

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ದಿನಾಂಕವನ್ನು ಮೇ 20ಕ್ಕೆ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಶನಿವಾರ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಅವಿರತ ಶ್ರಮವನ್ನು  ಸಭೆಯಲ್ಲಿ ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದಿಸಲಾಯಿತು.
ಕೆಲವು ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕಾರದ ದಿನಾಂಕವನ್ನು ಶನಿವಾರ ಪ್ರಕಟಿಸಲಿಲ್ಲ. ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ನಾಯಕರಾದ ಲಾಲ್‌ಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್, ಮುರುಳಿ ಮನೋಹರ ಜೋಷಿ, ಅರುಣ್ ಜೇಟ್ಲಿ, ಅನಂತಕುಮಾರ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಮೋದಿ ಅವರನ್ನು ಅಭಿನಂದಿಸುವ ನಿರ್ಣಯ ಅಂಗೀಕರಿಸಲಾಗಿದೆ. ಜತೆಗೆ ಬಿಜೆಪಿಗೆ ಗೆಲುವು ನೀಡಿದ ರಾಷ್ಟ್ರದ ಜನತೆಯನ್ನು ಅಭಿನಂದಿಸುವ ನಿರ್ಣಯವನ್ನೂ ಅಂಗೀಕರಿಸಿದೆ.  ಇದಕ್ಕೂ ಮುನ್ನ ಬಿಜೆಪಿಗೆ ಅಭೂತಪೂರ್ವ ಗೆಲವು ತಂದುಕೊಟ್ಟ ನರೇಂದ್ರಮೋದಿಗೆ ರಾಜಧಾನಿಯಲ್ಲಿ ಶನಿವಾರ ವಿರೋಚಿತ ಸ್ವಾಗತ ನೀಡಲಾಯಿತು.
ಅಧಿಕಾರ ಸ್ವೀಕಾರ ಮಾಡುವ ದಿನಾಂಕದ ಬಗ್ಗೆ ಊಹಾಪೋಹಾ ಬೇಡ, ದಿನಾಂಕ ಇನ್ನು ನಿರ್ಧಾರವಾಗಿಲ್ಲ, 20 ರಂದು ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸುತ್ತೇವೆ.
- ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ನಿತೀಶ್ ರಾಜಿನಾಮೆ ನೀಡಿದ್ದಾರೆ ಎಂಬ ವಿಚಾರ ನನಗೆ ಗೊತ್ತಾಯಿತು. ರಾಜಕೀಯ ಬೆಳವಣಿಗೆಯನ್ನು ನಾನು ಗಮನಿಸುತ್ತಿದ್ದೇನೆ. ಚುನಾವಣೆಯಲ್ಲಿ ಜೆಡಿಯುವನ್ನು ಮತದಾರರು ತಿರಸ್ಕರಿಸಿದ್ದಾರೆ. ಸದ್ಯಕ್ಕೆ ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ.
- ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಅಧ್ಯಕ್ಷ

ಗುರು ಶಿಷ್ಯರ ಆಲಿಂಗನ
ವಿರೋಚಿತ ಜಯ ಸಿಕ್ಕ ನಂತರ ನಡೆದ ಮೊದಲ ಸಂಸದೀಯ ಮಂಡಳಿ ಸಭೆಯ ಪ್ರಮುಖ ಆಕರ್ಷಣೆಯಾಗಿದ್ದು ನರೇಂದ್ರಮೋದಿ. ಸಭೆ ಆರಂಭಕ್ಕೂ ಮುನ್ನವೇ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರಿಗೆ ಮೋದಿ  ತಲೆಭಾಗಿ, ಕಾಲುಮುಟ್ಟಿ ವಂದಿಸಿದರು. ಇದಕ್ಕೆ ಪ್ರತಿಯಾಗಿ ಆಡ್ವಾಣಿ, ತಮ್ಮ ಶಿಷ್ಯ ಮೋದಿ ಅವರನ್ನು ಆಲಂಗಿಸಿ ಅಭಿನಂದಿಸಿದರು. ಬಹುತೇಕ ನಾಯಕರು ಮೋದಿಗೆ ಆತ್ಮೀಯ ಆಲಿಂಗನ ನೀಡಿದರು ಆಶಿರ್ವದಿಸಿದರು. ಸಭೆ ಔಪಚಾರಿಕವಾಗಿ ಆರಂಭವಾಗುವ ಮುನ್ನ ಬಹುತೇಕ ಎಲ್ಲ ನಾಯಕರೂ ಬಿಗಿದಂತೆ ಕುಳಿತಿದ್ದರು. ಯಾರ ಮುಖದಲ್ಲೂ ನಗು ಅರಳಿರಲಿಲ್ಲ. ಸಭೆ ಪ್ರಾರಂಭವಾದ ನಂತರವಷ್ಟೆ ನಾಯಕರ ಮುಖದಲ್ಲಿ ನಗೆ ಅರಳಿದ್ದು.

ಪ್ರಮಾಣವಚನ 21ರಂದು ಇಲ್ಲ
ನವದೆಹಲಿ:
ನರೇಂದ್ರ ಮೋದಿ ಮೇ 21ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ಅನುಮಾನವೇ? ಹೌದೆನ್ನುತ್ತವೆ ಮೂಲಗಳು. ಈ ಹಿಂದೆ ಪ್ರಧಾನಿಯಾಗಿ ಪ್ರಮಾಣವಚನ ಸ್ಪೀಕರಿಸಲು ಮೋದಿ ಮೇ 21ಅನ್ನು ಆಯ್ಕೆ ಮಾಡಿಕೊಂಡಿದ್ದರು. ಮೋದಿ
ಅವರ ಭವಿಷ್ಯವನ್ನು ನೋಡಿಕೊಂಡು ಈ ದಿನ ಆಯ್ಕೆ ಮಾಡಲಾಗಿತ್ತು. ಆದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದದ್ದು ಇದೇ ದಿನ. ಹಾಗಾಗಿ ಮಾಜಿ ಪ್ರಧಾನಿ ಮೃತಪಟ್ಟ ದಿನದಂದು ಪ್ರಮಾಣ ವಚನ ಸ್ಪೀಕರಿಸಿದರೆ ಟೀಕೆಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಪ್ರಮಾಣವಚನಕ್ಕೆ ಬೇರೆ ದಿನವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.