ಸೋಲಿನ ಹೊಣೆ ಹೊತ್ತು ಹೊರನಡೆಯುತ್ತಿರುವ ನಾಯಕರು

ನವದೆಹಲಿ/ಪಟನಾ/ಗುವಾಹಟಿ: ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೇರುತ್ತಿದ್ದಂತೆ ರಾಜಿನಾಮೆ ಪರ್ವ ಶುರುವಾಗಿದೆ. ಅದಕ್ಕೆ ಮೊದಲ ಬಲಿಯಾದದ್ದು ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್. ತೀರಾ ಹೀನಾಯವಾಗಿ ಸೋಲು ಅನುಭವಿಸಿದ ಕಾಂಗ್ರೆಸ್ನಲ್ಲೂ ರಾಜಿನಾಮೆ ನಿರ್ಧಾರ ಶುರುವಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ತಮ್ಮ ಪದತ್ಯಾಗಕ್ಕೆ ನಿರ್ಧಾರ ಮಾಡಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ನ ಸೋಲಿನ ಹೊಣೆ ಹೊತ್ತಿರುವ ತರುಣ್ ಗೊಗೋಯ್ ಒಂದು ವಾರದೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ತ್ಯಾಗಪತ್ರ ನೀಡಲಿದ್ದಾರೆ.
ಪದ ತೊರೆದ ನಿತೀಶ್
ಬಿಜೆಪಿ ಜತೆಗೆ ಇದ್ದಿದ್ದರೆ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಿತ್ತಲ್ಲವೇ ಎಂದು ಜೆಡಿಯು ಶಾಸಕ ಜ್ಞಾನೇಂದ್ರ ಸಿಂಗ್ ಗಾಯ್ನು ಜೆಡಿಯು ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಇದಾಗಿ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಿನಾಮೆ ನಿರ್ಧಾರ ಪ್ರಕಟಿಸಿದರು. ಆದರೆ ವಿಧಾನಸಭೆ ವಿಸರ್ಜನೆ ವದಂತಿಯನ್ನು ಅಲ್ಲಗಳೆದಿದ್ದಾರೆ. ಪಕ್ಷ ಕೇವಲ 2 ಸ್ಥಾನ ಪಡೆದು ಹೀನಾಯ ಸ್ಥಿತಿಗೆ ತಲುಪಿರುವುದರಿಂದ ಕೃಷಿ ಸಚಿವ ನರೇಂದ್ರ ಸಿಂಗ್ ಬಿಜೆಪಿ ನಾಯಕರನ್ನು ಸಂಪರ್ಕಿಸಿದ್ದರು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭಿನ್ನಮತ ತಪ್ಪಿಸಲು ನಿತೀಶ್ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇಂದು ಸಭೆ: ಜೆಡಿಯು ಶಾಸಕಾಂಗ ನಾಯಕನ ಆಯ್ಕೆಗೆ ಭಾನುವಾರ ಪಟನಾದಲ್ಲಿ ಸಭೆ ಇದೆ. ಆದರೆ ಸರ್ಕಾರಕ್ಕೆ ಬಹುಮತದ ಕೊರತೆಯಾಗಿಲ್ಲ ಎಂದಿದ್ದಾರೆ ನಿತೀಶ್.
ಅಮ್ಮ, ಮಗನ ನಿರ್ಧಾರ?
ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ನವದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಇಬ್ಬರೂ ನಾಯಕರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ರಾಹುಲ್ ತಂಡದಲ್ಲಿದ್ದ ಜೈರಾಮ್ ರಮೇಶ್, ಮಧುಸೂದನ ಮಿಸ್ತ್ರಿ, ಅಜಯ್ ಮಾಕನ್, ಮೋಹನ್ ಗೋಪಾಲ್, ಮೋಹನ್ ಪ್ರಕಾಶ್ ಅವರನ್ನು ಕಾರ್ಯಕಾರಿಣಿ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಫಲಿತಾಂಶವನ್ನು ಮೊದಲೇ ಊಹಿಸಿದಂತಿದ್ದ ಕಾಂಗ್ರೆಸ್ ಮುಖಂಡರು ಮತಎಣಿಕೆಗೆ ಎರಡು ದಿನ ಇರುವಾಗ ಸಾಮೂಹಿಕ ಹೊಣೆಗಾರಿಕೆಯ ಮಾತನಾಡಿದ್ದರು.
ಪ್ರಧಾನಿ ವಿದಾಯ
ಹತ್ತು ವರ್ಷ ಆಡಳಿತ ನಡೆಸಿದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಶನಿವಾರ ರಾಜಿನಾಮೆ ನೀಡಿದ್ದಾರೆ. ಅಧಿಕೃತ ನಿವಾಸದಲ್ಲಿ ಕೊನೆ ಸಂಪುಟ ಸಭೆ ನಡೆಸಿ ರಾಜಿನಾಮೆ ನಿರ್ಧಾರ ಕೈಗೊಂಡರು. ಜತೆಗೆ 15ನೇ ಲೋಕಸಭೆ ವಿಸರ್ಜಿಸುವ ಬಗ್ಗೆ ರಾಷ್ಟ್ರಪತಿಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಂಡರು. ನಂತರ ರಾಷ್ಟ್ರಪತಿಯವರನ್ನು ಭೇಟಿಯಾಗಿ ರಾಜಿನಾಮೆ ನೀಡಿದರು.
ಇದಕ್ಕೂ ಮೊದಲು ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದನ್ನು ವಿವರಿಸಿದರು. ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದು ಯುಪಿಎ ಸಾಧನೆ ಎಂದರು.
ಗೊಗೋಯ್?
ಅಸ್ಸಾಂನಲ್ಲಿ ಕಾಂಗ್ರೆಸ್ ಸೋತಿರುವ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಶುಕ್ರವಾರ ತರುಣ್ ಗೊಗೋಯ್ ಪ್ರಕಟಿಸಿದ್ದರು. ಆದರೆ ಶನಿವಾರ ಮಾತನಾಡಿದ ಅವರು ಒಂದು ವಾರದೊಳಗೆ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. 'ಮುಖ್ಯಮಂತ್ರಿಯಾಗಿ ಮೂರು ಬಾರಿ ಆಯ್ಕೆಯಾದಾಗ ಕೊಂಚ ಅಹಂಕಾರ ಬಂದಿರುತ್ತದೆ. ಯಾರೊಬ್ಬರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಭಾವನೆ ಬರುತ್ತದೆ' ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


