ಅರ್ಥ ವ್ಯವಸ್ಥೆಗೆ ಬಲ ತುಂಬುವುದೇ ಮೋದಿ ಜಗತ್ತು?

ನವದೆಹಲಿ: ಮೋದಿ ವಿದೇಶಾಂಗ ನೀತಿ ಹೇಗಿರಬಹುದು? ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿರುವ ಪ್ರಶ್ನೆ ಇದು. ಆದರೆ ಮೋದಿಗೆ ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ವರ್ಷದ ಹಿಂದೆ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಅವರು ಹೇಳಿದ್ದು ಒಂದೇ ಮಾತು- 'ನನ್ನ ವಿದೇಶಾಂಗ ನೀತಿ ಏನಿದ್ದರೂ ಆರ್ಥಿಕ ಕೇಂದ್ರಿತವಾದದ್ದು'.
ವಿದೇಶಾಂಗ ನೀತಿ ಭಾರತೀಯ ಆರ್ಥಿಕತೆಗೆ ಬಲ ತುಂಬುವಂತಿರಬೇಕು ಎನ್ನುವುದು ಅವರ ಪ್ರತಿಪಾದನೆ. ಭಾರತೀಯ ರಾಯಭಾರಿಗಳಿಗೆ ಮೋದಿ ಸರ್ಕಾರದಿಂದ ರವಾನೆಯಾಗಲಿರುವ ಸೂಚನೆಯೂ ಸ್ಪಷ್ಟ- 'ಸಂಬಂಧದ ಕುರಿತು ತಂತ್ರ ಹೆಣೆಯುವುದಕ್ಕಿಂತ ವಾಣಿಜ್ಯ ಒಪ್ಪಂದಗಳ ಕುರಿತು ಅಲೋಚಿಸಿ'. ಪಾಕಿಸ್ತಾನ, ಚೀನಾದಂಥ 'ಅಪಾಯಕಾರಿ' ನೆರೆರಾಷ್ಟ್ರಗಳನ್ನೂ ವಾಣಿಜ್ಯ 'ಆಮಿಷ'ದ ಮೂಲಕ ಮೆತ್ತಗಾಗಿಸಬಹುದು ಎನ್ನುವುದು ಮೋದಿ ನಿಲುವು. ಆರ್ಥಿಕತೆಯ ಜತೆಯೇ ದೇಶದ ಭದ್ರತೆಯನ್ನೂ ಬಲಪಡಿಸುವ ಗುರಿ ಅವರದು.
ಮಿತ್ರ ಡೆನ್ಮಾರ್ಕ್
ಮೋದಿ ವಿರುದ್ಧ ವೀಸಾ ನಿರ್ಬಂಧ ಹೇರದ ಏಕೈಕ ಯುರೋಪಿಯನ್ ರಾಷ್ಟ್ರ ಡೆನ್ಮಾರ್ಕ್. ಪುರುಲಿಯಾ ಶಸ್ತ್ರಾಸ್ತ್ರ ಪ್ರಕರಣದ ಆರೋಪಿ ಕಿಮ್ ಡೆವಿಯನ್ನು ವಶಕ್ಕೆ ಒಪ್ಪಿಸಲು ನಿರಾಕರಿಸಿದ್ದರಿಂದ ಈ ದೇಶದ ಜತೆ ಕಾಂಗ್ರೆಸ್ ಸಂಬಂಧ ಹಳಸಿತ್ತು. ಮೋದಿ ಮಾತ್ರ ಬಾಂಧವ್ಯ ಮುಂದುವರಿಸಿದ್ದರು. ಇನ್ನು ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಸುಧಾರಣೆಯಾಗುವುದು ನಿಶ್ಚಿತ.
ತೋಪುಖಾನೆ ಇಸ್ರೇಲ್
ಭಯೋತ್ಪಾದನೆ ಹತ್ತಿಕ್ಕುವುದು, ಸೈಬರ್ ಭದ್ರತೆ ಮಾತ್ರವಲ್ಲದೇ ರಕ್ಷಣಾ ವಿಚಾರಗಳಲ್ಲಿಯೂ ಇಸ್ರೇಲ್ ಅನ್ನು ಪಾಲುದಾರನನ್ನಾಗಿ ಮಾಡಿಕೊಳ್ಳಬಹುದು. ಹೀಗಾಗಿ ರಕ್ಷಣಾ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದಗಳು ಮುಂದುವರಿಯಬಹುದು. ಇಸ್ರೇಲ್ನ ಆಧುನಿಕ ಕೃಷಿ ಪದ್ಧತಿಯೂ ಮೋದಿ ಮೇಲೆ ಪ್ರಭಾವ ಬೀರಿರುವುದು ದಿಟ.
ಮಾರ್ಗದರ್ಶಕ ಸಿಂಗಾಪುರ
ಸುಮಧುರ ಬಾಂಧವ್ಯ ಹೊಂದಿರುವ ಸಿಂಗಾಪುರ ಪ್ರಧಾನಿ ಗೊ ಚೋಕ್ ಥಾಂಗ್ ಅವರು ಮೋದಿಗೆ 'ಇಂಟರ್ನ್ಯಾಶನಲ್ ಮೆಂಟರ್' ಆಗಬಹುದು. 'ನೀವು ಆರ್ಥಿಕ ಹಕ್ಕು ಪಡೆಯದಿದ್ದರೆ ಯಾವ ತಂತ್ರಗಳೂ ಫಲ ನೀಡುವುದಿಲ್ಲ' ಎನ್ನುವುದು ಥಾಂಗ್ ಸಲಹೆ. ಪಿ.ವಿ.ನರಸಿಂಹರಾವ್ ಸೇರಿದಂತೆ ಎಲ್ಲ ಪ್ರಧಾನಿಗಳಿಗೂ ಸಿಂಗಾಪುರ ಹೇಳುತ್ತಿದ್ದ ಕಿವಿಮಾತು ಎಂದರೆ 'ಪೂರ್ವದತ್ತಲೂ ಕಣ್ಣು ಹಾಯಿಸಿ' ಎನ್ನುವುದು. ಅದೇ ಮಾತನ್ನು ಥಾಂಗ್ ಸಹ ಮೋದಿಗೆ ಹೇಳಬಹುದು.
ಜಪಾನ್ ಕಾರ್ಖಾನೆ
ಚೀನಾ ಮಣಿಸಲು ಜಪಾನ್ ಭಾರತವನ್ನು ಓಲೈಸುತ್ತಿದೆ. ಉತ್ಪಾದನಾ ಕ್ಷೇತ್ರದಲ್ಲಿ ಚೀನಾಕ್ಕೆ ಪ್ರಬಲ ಸ್ಪರ್ಧಿಯಾಗಿ ಭಾರತದ ಆರ್ಥಿಕತೆಯಲ್ಲೂ ಸ್ಥಾನ ಗಿಟ್ಟಿಸುವುದು ಟೋಕಿಯೊ ಆಸೆ. ಅದನ್ನು ಮೋದಿ ಚೆನ್ನಾಗಿಯೇ ಬಳಸಿಕೊಳ್ಳಬಹುದು. ದೆಹಲಿ-ಮುಂಬೈ ಕೈಗಾರಿಕೆ ಕಾರಿಡಾರ್ ಸೇರಿದಂತೆ ಜಪಾನ್ ಕೈಗೆತ್ತಿಕೊಂಡಿರುವ ಶೇ. 40ರಷ್ಟು ಯೋಜನೆಗಳು ಗುಜರಾತ್ ಮೂಲಕ ಹಾದು ಹೋಗುತ್ತಿವೆ ಎನ್ನುವುದು ಗಮನಾರ್ಹ. ಸೇನಾ ತಾಂತ್ರಿಕತೆ ವಿಚಾರದಲ್ಲಿಯೂ ಜಪಾನ್ ನೆರವು ಪಡೆಯಬಹುದು.
ಬೆದರಿಸುವ ಪಾಕಿಸ್ತಾನ
ಪಾಕಿಸ್ತಾನವೂ ಸೇರಿದಂತೆ ಎಲ್ಲರೊಂದಿಗೂ ವಾಣಿಜ್ಯ ಸಂಬಂಧ ಹೊಂದಿರಬೇಕು ಎನ್ನುವುದು ಮೋದಿ ನಿಲುವು. 'ಭಯೋತ್ಪಾದನೆ ಬೇಡ, ವ್ಯಾಪಾರ ವಹಿವಾಟು ಇರಲಿ' ಎನ್ನುವ ಮೂಲಕ ಮೋದಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ರಯತ್ನ ಮಾಡಬಹುದು. ವಾಜಪೇಯಿ ಮತ್ತು ಮನಮೋಹನ ಸಿಂಗ್ ಆರಂಭಿಸಿದ್ದ ಶಾಂತಿ ಮಾತುಕತೆಗಳಿಗೆ ಮತ್ತೆ ಚಾಲನೆ ನೀಡಬಹುದು.
ಹೂಡಿಕೆದಾರ ಚೀನಾ
ಯುಪಿಎ ಅವಧಿಯಲ್ಲಿ ಗಡಿ ತಂಟೆ ಸೇರಿದಂತೆ ಹಲವು ವಿಚಾರಗಳಿಗಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ. ಆದಾಗ್ಯೂ ಚೀನಾ ಸಾವಿರಾರು ಕೋಟಿ ಡಾಲರ್ ಮೊತ್ತವನ್ನು ಭಾರತದ ಮೂಲಸೌಲಭ್ಯ ವಲಯದಲ್ಲಿ ಹೂಡಲು ಸಿದ್ಧವಿದೆ. 'ಹೂಡಿಕೆ ಆಮಿಷ'ದ ಮೂಲಕವಾಗಿಯೇ ಚೀನಾದೊಂದಿಗಿನ ಗಡಿ ವಿವಾದ ಬಗೆಹರಿಸಿಕೊಳ್ಳುವ ಚತುರತೆಯನ್ನು ಮೋದಿ ತೋರಬಹುದು.
ಸೀಮಿತ ಅಮೆರಿಕ
'ಮೋದಿ ಜತೆಗಿನ ಅಮೆರಿಕದ ಬಾಂಧವ್ಯ ಉಲ್ಲಸಿತವಾಗಿರದೇ ಇರಬಹುದು, ಆದರೆ ಉತ್ಪಾದಕತೆ ದೃಷ್ಟಿಯಿಂದ ಪ್ರಮುಖವಾದುದು' ಎಂದು ಅಮೆರಿಕದ ವಿಶ್ಲೇಷಕ ಆ್ಯಶ್ಲೆ ಟೆಲ್ಲಿಸ್ ಅಭಿಪ್ರಾಯಪಟ್ಟಿದ್ದಾರೆ. ಬರಾಕ್ ಒಬಾಮ ಅಧಿಕಾರದಲ್ಲಿ ಇರುವವರೆಗೆ 'ವ್ಯಾಪಾರ ಮತ್ತು ರಕ್ಷಣೆ' ಎರಡೇ ವಿಚಾರಗಳಿಗೆ ಸಂಬಂಧ ಸೀಮಿತಗೊಳಿಸುವ ಸಾಧ್ಯತೆ ಇದೆ. ಪ್ರಮುಖ ವಿಚಾರಗಳಲ್ಲಿ ಮೂಗು ತೂರಿಸುವ ಅಮೆರಿಕ ಚಾಳಿಗೆ ಮೋದಿ ಕಡಿವಾಣ ಹಾಕುವುದು ನಿಶ್ಚಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


