ಪ್ರಿಯಾಂಕಾ ಕರೆತಂದಿದ್ರೆ ಮೋದಿ ಅಲೆ ಎದುರಿಸಬಹುದಿತ್ತು

ಬೀದರ್: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರಂತೆ ವಾಕ್ಚಾತುರ್ಯ ಹೊಂದಿರುವ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಚಾರಕ್ಕೆ ಕರೆತಂದಿದ್ದರೆ ಚುನಾವಣೆಯ ಚಿತ್ರಣವೇ ಬದಲಾಗುತ್ತಿತ್ತು. ಅವರನ್ನು ಕಡೆಗಣಿಸಿದ್ದರಿಂದಲೇಇಂದು 'ಕೈ' ಕೈ ಹಿಚುಕಿಕೊಳ್ಳುವಂತಾಗಿದೆ.ಪ್ರಿಯಾಂಕಾ ಗಾಂಧಿ ಅವರೇನಾದರೂಪ್ರಚಾರಕ್ಕೆ ಧುಮುಕುತ್ತಿದ್ದರೆ ಮೋದಿ ಅಲೆಯನ್ನು ಯಶಸ್ವಿಯಾಗಿ ಎದುರಿಸಬಹುದಿತ್ತು...!
ಇಷ್ಟೆಲ್ಲ ಹೇಳಿದ್ದು ಬೇರಿನ್ಯಾರೂ ಅಲ್ಲ, ಮಾಜಿ ಸಿಎಂ, ಬೀದರ್ನ ಮಾಜಿ ಸಂಸದ ಧರಂಸಿಂಗ್! ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ ಯುವಕರನ್ನು ಸೆಳೆಯುವುದು ನಿಜ. ಆದರೆ, ಇಂದಿನ ಚುನಾವಣಾ ಪರಿಸ್ಥಿತಿಯಲ್ಲಿ ಪ್ರಿಯಾಂಕಾ ದೇಶದ ಯುವ ಜನಾಂಗವನ್ನಷ್ಟೇ ಅಲ್ಲ, ಇಂದಿರಾಗಾಂಧಿ ಅವರಂತೆ ಮಹಿಳಾ ಮತಗಳನ್ನೂ ಸೆಳೆಯುವಲ್ಲೂ ಸಫಲರಾಗುತ್ತಿದ್ದರು. ನಾನೂ ಎಐಸಿಸಿ ಸದಸ್ಯ. ಮುಂದಿನ ದಿನಗಳಲ್ಲಿ ಸೋಲಿನ ಪರಮಾರ್ಶೆ ವಿಷಯ ಬಂದಾಗ ಹೈಕಮಾಂಡ್ ಮುಂದೆ ನನ್ನ ಈ ಮಾತು ಪಕ್ಷದ ಮುಂದೆ ಇಡುತ್ತೇನೆ ಎಂದಿದ್ದಾರೆ ಧರಂ.
ಚುನಾವಣೆಯಲ್ಲಿ ಅಷ್ಟೇ ಅಲ್ಲ ಕ್ಷೇತ್ರಕ್ಕೂ ಹೊಸ ಮುಖವಾಗಿದ್ದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿರುದ್ಧ ಭಾರಿ ಸೋಲು ಅನುಭವಿಸಿದ ನಂತರ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಧರಂಸಿಂಗ್ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿವರಗಳನ್ನು ನೀಡಿದರು.
- ಕಾಂಗ್ರೆಸ್ ಹೀನಾಯ ಸೋಲಿಗೆ ಏನು ಕಾರಣ?
ಮೊದಲು ನಾವು ಕಾಂಗ್ರೆಸ್ ಸಾಧನೆಗಳ ವಿವರಗಳನ್ನು ಜನರತ್ತ ತಲುಪಿಸಲು ಸೋತಿದ್ದೇವೆ. ಕಾರ್ಯಕರ್ತರು ಈ ಕೆಲಸ ಮಾಡಬೇಕಿತ್ತು. ಅವರೂ ಎಡವಿದ್ದಾರೆ. ನರೇಂದ್ರ ಮೋದಿ ಅಲೆ ಆರಂಭದಲ್ಲಿ ಏನೂ ಇರಲಿಲ್ಲ. ಅದಾಗಲೇ ಕಾಂಗ್ರೆಸ್ ಸಾಧನೆಗಳನ್ನು ನಾವು ಜನಮನದಲ್ಲಿ ಬಿತ್ತಬೇಕಾಗಿತ್ತು.
-ಕೈ ಸೋಲಿನ ಹಿಂದೆ ಅವರ ಪಕ್ಷದವವರ ಕೈವಾಡ ಇದೆಯೇ?
ಮೋದಿ ಅಲೆಯಲ್ಲಿ ಕೊಚ್ಚಿ ಹೋಗುತ್ತೇವೆ. ಇಷ್ಟೊಂದು ಕಡಿಮೆ ಸ್ಥಾನಕ್ಕೆ ಕುಸಿಯುತ್ತೇವೆ ಎಂಬುವುದನ್ನು ನಿರೀಕ್ಷಿಸಿರಲಿಲ್ಲ. ಒಳಗಿನವರ ಕೈವಾಡದ ಮಾತುಗಳು ಕೇಳಿ ಬಂದಿವೆ. ಅದು ಎಷ್ಟು ಸತ್ಯ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
-ರಾಹುಲ್ ಹವಾ ಮೋದಿ ಗಾಳಿ ಮುಂದೆ ಠುಸ್ಸೆಂದಿತು ಎನ್ನಿ..
ಇಲ್ಲಿ ರಾಹುಲ್ ಗಾಂಧಿ ಅವರು ವಿಫಲವಾದ್ರು ಅನ್ನೋದಕ್ಕಿಂತ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಚಾರದ ಮೈದಾನಕ್ಕಿಳಿಸಿದ್ರೆ ಚಿತ್ರಣವೇ ಬೇರೆಯಾಗುತ್ತಿತ್ತು. ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರಂತೆ ವಾಕ್ಚಾತುರ್ಯ ಹೊಂದಿರುವ ಪ್ರಿಯಾಂಕ ಜನಮನ ಸೆಳೆಯುವಲ್ಲಿ ಸಕ್ಸಸ್ ಆಗೋದ್ರಲ್ಲಿ ಎರಡು ಮಾತಿರಲಿಲ್ಲ...
ಪ್ರಿಯಾಂಕಾ ದೇಶದ ಯುವ ಜನಾಂಗವನ್ನಷ್ಟೇ ಅಲ್ಲ, ಇಂದಿರಾಗಾಂಧಿ ಅವರಂತೆ ಮಹಿಳಾ ಮತಗಳನ್ನು ಸೆಳೆಯುತ್ತಿದ್ದರು. ಪ್ರಿಯಾಂಕಾ ವರ್ಚಸ್ಸೇ ಬೇರೆ. ಈ ಕುರಿತು ಈಗಷ್ಟೇ ಚರ್ಚಿಸಲಾಗುತ್ತಿದೆ. ಇದು ಮೊದಲೇ ಆಗಬೇಕಿತ್ತು.
-ಬೀದರ್ನಲ್ಲಿ ಕೈ ಶಾಸಕರ ಕ್ಷೇತ್ರದಲ್ಲಿಯೇ ಕಡಿಮೆ ಮತ ಬಂದಿವೆಯಲ್ಲಾ?
ಹೌದು. ಇದು ಅನಿರೀಕ್ಷಿತ. ಕ್ಷೇತ್ರದ ಶಾಸಕರು ಸಾಕಷ್ಟು ಕೆಲಸಮಾಡಿದ್ದಾರೆ. ಆದರೆ ಜನರನ್ನು ಮತಗಟ್ಟೆವರೆಗೆ ತರುವಲ್ಲಿ ಹಿಂದೆ ಬಿದ್ದಂತೆ ಕಾಣುತ್ತದೆ. ಈಗ ಅದೆಲ್ಲ ಮುಗಿದ ಮಾತು.
- ಚುನಾವಣೆಗೂ ಮುನ್ನ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಗ್ಗೆ ಅಪಸ್ವರ ಇತ್ತಲ್ಲ..?
ಜಿಲ್ಲಾ ಉಸ್ತುವಾರಿ ಮಂತ್ರಿ ಉಮಾಶ್ರೀ ಒಬ್ಬ ಮಹಿಳೆ. ಅವರ ಕ್ಷೇತ್ರದಲ್ಲಿ ಓಡಾಡಲೂ ಆಕೆಗೆ ಪುರುಸೊತ್ತಿಲ್ಲ. ಅಷ್ಟಕ್ಕೂ ಇಂಥ ಮಾತುಗಳು ಅಲ್ಲಲ್ಲಿ ಕೇಳಿಬಂದಿವೆ. ಆದರೆ ನಾನು ಯಾರ ಮುಂದೆಯೂ ಈ ಕುರಿತು ದೂರಿಲ್ಲ. ದೂರೋದೂ ಇಲ್ಲ.
-ಅಪ್ಪಾರಾವ್ ಸೌದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


