ಪ್ರಧಾನ ಸುದ್ದಿ

ಇಂದು ಮೋದಿ ನಮ್ಮ ಪ್ರಧಾನಿ, ಹೀಗಾಗಿ ಅವರ ಗೌರವಿಸುವುದು ಎಲ್ಲರ ಕರ್ತವ್ಯವೂ

Published On :

ಮೊಟ್ಟ ಮೊದಲಿಗೆ ನಾನು ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿಯವರನ್ನು ಅಭಿನಂದಿಸಲು ಇಷ್ಟಪಡುತ್ತೇನೆ. ಮೋದಿಯವರು ಹೊಸ ಆಸೆಗಳ ಮಧ್ಯೆ ಪ್ರಧಾನಿಯಾಗಿದ್ದಾರೆ. ಚುನಾವಣೆ ಫಲಿತಾಂಶಕ್ಕೂ ಮುಂಚೆ ನರೇಂದ್ರ ಮೋದಿ ಗೆದ್ದು ಬರದಿದ್ದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದೆ, ಮೋದಿ ಪ್ರಧಾನಿಯಾದರೆ ಇಷ್ಟ ಪಡದೇ ಇರಬಹುದು ಎಂದೆನಿಸಿಕೊಂಡಿದ್ದೆ.
ಫಲಿತಾಂಶ ಬಂದ ಎರಡನೇ ದಿನ ರಾತ್ರಿ ನನ್ನ ಸ್ನೇಹಿತರೊಬ್ಬರು ಔತಣಕೂಟ ಇಟ್ಟುಕೊಂಡಿದ್ದರು, ಅದಕ್ಕಾಗಿ ನನ್ನನ್ನು ಫಲಿತಾಂಶ ಬರುವ 2 ದಿನ ಮುಂಚೆಯೇ ಆಹ್ವಾನಿಸಲು ಫೋನಾಯಿಸಿದ್ದರು. '17ರ ರಾತ್ರಿ ಪಾರ್ಟಿಯಿದೆ, ದಯವಿಟ್ಟು ಬನ್ನಿ ಎಂದರು.' ಆದರೆ ನಾನು ಹೇಳಿದ್ದೆ, 'ನನ್ನ ಮೂಡ್ ಸರಿ ಇರಲ್ಲ, ಏಕೆಂದರೆ ಮೋದಿ ಗೆಲ್ಲುವ ಎಲ್ಲ ಸಂಭವವೂ ಇದೆ. ಮೋದಿ ಗೆಲ್ಲದಿದ್ದರೇ ಚೆನ್ನಾಗಿರುತ್ತೆ ಎಂದು ಭಾವಿಸಿದವನು ನಾನು. ಬರೋಕೆ ನನಗೆ ಉತ್ಸಾಹ ಇರಲ್ಲ'. ಆದರೆ ಮೋದಿಯುವರು ಗೆದ್ದ ಮೇಲೆ ಪ್ರಜಾಪ್ರಭುತ್ವ ರೀತಿಯಲ್ಲಿ ಗೆದ್ದವರ ಬಗ್ಗೆ ಸಂದೇಹ ಪಡುವುದು ತಪ್ಪು ಎನಿಸಿತು. ಹೀಗಾಗಿ ಫಲಿತಾಂಶದ ಮಾರನೇಯ ದಿನದ ಪಾರ್ಟಿಯಲ್ಲಿ ಭಾಗವಹಿಸಿ ಖುಷಿ ಪಟ್ಟು ಬಂದೆ. ಸದ್ಯಕ್ಕೆ ಮೋದಿಯ ಮೊದಲ ಪ್ರಯತ್ನದಲ್ಲಿಯೇ ನನ್ನಲ್ಲಿದ್ದ ಭಯ ನಿವಾರಣೆಯಾಗಿದೆ. ನಾನು ಏನೇನು ಅಂದುಕೊಂಡಿದ್ದೆನೋ ಅದು ಆಗದಿರಬಹುದು ಎಂದು ಅನಿಸಲು ಪ್ರಾರಂಭವಾಗಿದೆ. 'ಇಂಥವರು ಬಂದರೆ ಹೀಗೆ ಆಗೋಗತ್ತೆ' ಎಂಬ ವಿಚಿತ್ರವಾದ ಭಯದಲ್ಲಿ ಕೆಲವೊಮ್ಮೆ ನಾವಿರುತ್ತೇವೆ. ಆದರೆ ಹಾಗಾಗದಿರಲು ಸಾಧ್ಯ ಎನ್ನುವುದು ಮೋದಿಯ ಮೊದಲ ಹೆಜ್ಜೆಯಲ್ಲಿ ಅನಿಸಿದೆ.
ಮೋದಿ ಬರಬಾರದು ಎಂದು ಅನ್ನುತ್ತಿದ್ದವರ ಸಾಲಿನಲ್ಲಿದ್ದ ನನಗೆ, ಆದರೆ ಇಂದು ಮೋದಿ ನಮ್ಮ ಪ್ರಧಾನಿ. ಸಂವಿಧಾನ ಬದ್ಧವಾಗಿ ಜನರು ಹೊಂದುವ ಆಸೆ, ಆಕಾಂಕ್ಷೆಗಳನ್ನು ನಾನು ಹೊಂದಿದ್ದೇನೆ. ಮುಂಚೆ ಕೇವಲ ಭಯದಿಂದ ಮೋದಿಯನ್ನು ನೋಡುತ್ತಿದ್ದೆ. ಅವರು ನೀಡಿರುವ ಭರವಸೆಯನ್ನು ನಂಬಿ ಆಶಾಭಾವನೆಯಿಂದ ಎದುರು ನೋಡುತ್ತಿದ್ದೇನೆ, ಮೋದಿಯನ್ನು ಅಷ್ಟೇ ಪ್ರಮುಖವಾಗಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಕೂಡ. ಇದನ್ನು ಮರೆಯಬಾರದು.
ಪಾಕಿಸ್ತಾನದ ಪ್ರಧಾನಿ ಸೇರಿದಂತೆ ಸಾರ್ಕ್ ದೇಶಗಳ ಪ್ರಮುಖರನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನು ಸೇರಿದಂತೆ ಅವರ ಮೊದಲ ಹೆಜ್ಜೆಗಳು ಸರಿ ಎನಿಸುತ್ತವೆ. ಮತ್ತೊಂದೆಡೆ ಅಮಿತಾಬ್ ಬಚ್ಚನ್, ಲತಾ ಮಂಗೇಶ್ಕರ್, ಸಲ್ಮಾನ್ ಖಾನ್ ಕರೆದ್ರು. ಇಂತಹ ಕೆಲ ಕ್ರಮಗಳ ಮೂಲಕ ಒಂದು ಭರವಸೆ ನೀಡುತ್ತಿದ್ದಾರೆ, ಯಾರೂ ಭಯಪಡಬೇಕಿಲ್ಲ ಎಂಬ ಸಂದೇಶ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಕೂಡ ಇದಕ್ಕೆ ಧ್ವನಿಗೂಡಿಸಿ, 'ನಮ್ಮದು ಎಲ್ಲರನ್ನೂ ಒಳಗೊಂಡ ಸರ್ಕಾರ, ಯಾರಿಗೂ ಸೀಮಿತವಾಗಿಲ್ಲ' ಎಂದು ಹೇಳುತ್ತಾರೆ. ಮೋದಿಯ ಬಗ್ಗೆ ನನ್ನಲ್ಲಿದ್ದ 'ರಿಸರ್ವೇಷನ್‌' ದೂರವಾಗಿದೆ. ನನ್ನಲ್ಲಿರುವ ಅರ್ಧ ಭಾಗ ಭಯ, ಆತಂಕ ಹೋಗಿದೆ.
ಆದ್ದರಿಂದ ಮೋದಿ ನೇತೃತ್ವದ ಈ ಸರ್ಕಾರವನ್ನು ಆಸೆ ಹಾಗೂ ಭಯದ ಸರ್ಕಾರ ಎಂದು ಬಣ್ಣಿಸುತ್ತೇನೆ. ಉನ್ಮಾದದಲ್ಲಿ ಆಸೆಯನ್ನು ಪಡುವಂತಹ ಮಟ್ಟಕ್ಕೆ ನಾವು ಹೋಗಿದ್ದೇವೆ. ಇದಕ್ಕೆ ನಮ್ಮ ಊರಿನ ಒಂದು ಉದಾಹರಣೆ ನೀಡುತ್ತೇನೆ. ಚುನಾವಣೆಗೆ ಎರಡು ದಿನವಿದ್ದಾಗ ಗೌರಿಬಿದನೂರಿಗೆ ಹೋಗಿದ್ದೆ, ಆಗ ಅಲ್ಲಿ ಹುಲ್ಲಿನ ಗುಡಿಸಲಿನಲ್ಲಿದ್ದ ಮಹಿಳೆಯೊಬ್ಬಳು ನನ್ನನ್ನು ಕೇಳಿದಳು, 'ಸ್ವಾಮಿ ಮೋದಿ ಏನೋ ಬರ್ತಾರಂತೆ, ಅವರು ಬಂದ್ರೆ ಮನೆಗೆ ಹಾಕಿರುವ ಹುಲ್ಲೆಲ್ಲ ತೆಗೆದು ಎರಡೇ ತಿಂಗಳಲ್ಲಿ ಟಾರ್ಸಿ ಹಾಕ್ತಾರಂತೆ, ಹೌದಾ...?' ಈ ಎರಡು ತಿಂಗಳಲ್ಲಿ ಜಗತ್ತಿನ ಯಾವುದೇ ಪ್ರಧಾನಿಯ ಬಳಿಯೂ ಇಂತಹದೊಂದು ಪವಾಡ ಮಾಡಲು ಸಾಧ್ಯವಿಲ್ಲ. ಆದರೆ ಜನರಲ್ಲಿ ಈ ರೀತಿಯ ಉನ್ಮಾದದ ಆಸೆಗಳು ಹುಟ್ಟಿಕೊಂಡಿರುವುದು ನಿಜ. 'ಮೋದಿ ಬಂದರೆ ಹಾಗೆ ಮಾಡ್ತಾರಂತೆ, ಹೀಗೆ ಮಾಡ್ತಾರಂತೆ' ಎಂಬ ಮಾತುಗಳು ಎಲ್ಲ ಕಡೆಯೂ ಕೇಳಿಬರುತ್ತಿದೆ. ಪವಾಡದ ಮಟ್ಟಕ್ಕೆ ನಿರೀಕ್ಷೆಗಳನ್ನು ಹುಟ್ಟಿಸಿರುವ ಪ್ರಧಾನಿ ಇವರು. ಆದರೆ ಪವಾಡವನ್ನು ಆಡಳಿತದಲ್ಲಿ ಮಾಡಲು ಸಾಧ್ಯವಿಲ್ಲ, ಅಧಿಕಾರಕ್ಕೆ ಬಂದ ಒಂದು ತಿಂಗಳು ಕಾಲ ಈ ರೀತಿ ಇರುತ್ತದೆ. ನಂತರ ಸಾಮಾನ್ಯವಾಗಿ ವಾಸ್ತವಕ್ಕೆ ಜನರು ಬರುತ್ತಾರೆ. ನಾನು ಅವರಿಂದ ನಿರೀಕ್ಷಿಸುವುದು ವಾಸ್ತವದ ಕೆಲಸವೇ ಹೊರತು ಉನ್ಮಾದದ ಆಸೆಯನ್ನಲ್ಲ.
ಕಳೆದ 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಬಾಂಬ್ ಸ್ಪೋಟಗಳನ್ನು ನಾವು ನೋಡಿದ್ದೇವೆ. ಈ ಸಂಬಂಧ ಕಾಂಗ್ರೆಸ್ ಸರ್ಕಾರ ಏನು ಮಾಡಿಲ್ಲ, ಕೇವಲ ಓಲೈಕೆ ಮಾಡಿಕೊಂಡೇ ಸುಮ್ಮನಿದೆ. ಆದರೆ ನರೇಂದ್ರ ಮೋದಿ ಬಂದರೆ ಪಾಕಿಸ್ತಾನಕ್ಕೆ ಬುದ್ದಿ ಕಲಿಸ್ತಾರೆ, ಯುದ್ಧ ಮಾಡ್ತಾರೆ ಎಂಬ ಮಾತುಗಳು ಇದ್ದಾವೆ. ಇದು ಮೋದಿಯನ್ನು ಗೆಲ್ಲಿಸಿದ ಕೆಲ ಜನರ ಅತಿಯಾದ ಆಸೆಗಳು. ಆದರೆ ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಒಂದೊಮ್ಮೆ ಯುದ್ಧ ಮಾಡದರೆ ದೇಶವು ಆರ್ಥಿಕವಾಗಿ 10 ವರ್ಷ ಹಿಂದೆ ಹೋಗುತ್ತದೆ, ಇದರಿಂದ ಮೋದಿಗೆ ಕೆಟ್ಟ ಹೆಸರು ಬರುತ್ತದೆ. ಆದರೆ ಅಧಿಕಾರವೇರುವ ಪ್ರಧಾನಿಗೆ ಒಂದು ವಿವೇಚನೆ ಹಾಗೂ ಚಿಂತನೆಯನ್ನು ನೀಡುತ್ತದೆ. ಹುಚ್ಚು ಕುದುರೆ ಏರಿ ಆಡಳಿತ ನಡೆಸಿದಂತೆ ಆಗುವುದಿಲ್ಲ. ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ಆಡಳಿತ ಹಾಗೂ ಇತರ ಮಾರ್ಗಗಳ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವ ಆಲೋಚನೆಯನ್ನು ಮೋದಿಯಲ್ಲಿ ಕಾಣಸಿಗಬಹುದು.
ಇಂದು ಮೋದಿ ಅಥವಾ ಬಿಜೆಪಿ ಗೆಲ್ಲಲು ಕೇವಲ ಮೋದಿ ಅಲೆ ಕಾರಣವಲ್ಲ. ಬದಲಾಗಿ ಕಾಂಗ್ರೆಸ್‌ನ ನಿರಾಡಳಿತ ಹಾಗೂ ದುರಾಡಳಿತದ ವಿರುದ್ಧ ಶೇ.30ರಷ್ಟು ಜನ ಮತ ಹಾಕಿದ್ದಾರೆ. ಕಳೆದ 10 ವರ್ಷದಲ್ಲಿ ಕಾಂಗ್ರೆಸ್ ನೀಡಿದಂತಹ ನಿರಾಶಾವಾದಿ ಸರ್ಕಾರವನ್ನು ನಾವು ನೋಡಿಯೇ ಇರಲಿಲ್ಲ. ಯಾರೋ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಇನ್ಯಾವುದೇ ಕಾಂಗ್ರೆಸ್ ನಾಯಕರಲ್ಲಿ ಗೆಲ್ಲಬೇಕು ಎನ್ನುವ ಉತ್ಸಾಹವೇ ಇರಲಿಲ್ಲ. ಹಗರಣಗಳ ಮಧ್ಯೆ ಕೆಲ ಒಳ್ಳೆಯ ಕೆಲಸ ಮಾಡಿದ್ದರೂ ಅದನ್ನು ಹೇಳಿಕೊಳ್ಳುವಂತಹ ಸ್ವಂತಿಕೆಯನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಹಗರಣಗಳ ಮೇಲಿನ ಆರೋಪಕ್ಕೆ ಪ್ರತ್ಯುತ್ತರ ನೀಡುವ ಉತ್ಸಾಹವನ್ನು ಕೂಡ ಕಾಂಗ್ರೆಸ್ ಕಳೆದುಕೊಂಡಿತ್ತು. ಇದರಿಂದ ಕೊನೆ ಕೊನೆಗೆ ಜನರಿಗೆ ಕಾಂಗ್ರೆಸ್ ಹಾಗೂ ಅದರ ನಾಯಕತ್ವದ ಮೇಲೆ ವಿಶ್ವಾಸವೇ ಇಲ್ಲದಂತಾಗಿತ್ತು, ಮತದಾರರು ಕಾಂಗ್ರೆಸ್ ಬಗ್ಗೆ ಜಿಗುಪ್ಸೆ ತಾಳಿದ್ದರು. ಆದ್ದರಿಂದ ಮೋದಿಗೆ ಬಂದ ಎಲ್ಲ ಮತಗಳು ಧನಾತ್ಮಕ ಮತಗಳಲ್ಲ. ಹಿಂದಿನ ಸರ್ಕಾರಕ್ಕೆ ಶಾಪ ಹಾಕಿಕೊಂಡು ಬಿಜೆಪಿಗೆ ನೀಡಿರುವ ಅವಕಾಶದ ಮತಗಳು ಇವೆ. ಇದಕ್ಕೆ ಪೂರಕವೆಂಬಂತೆ ತಮಿಳುನಾಡು, ಪಶ್ಚಿಮಬಂಗಾಳ, ಕೇರಳ ಹಾಗೂ ಓಡಿಶಾಗಳಲ್ಲಿ ಬಿಜೆಪಿಗೆ ಸೀಟುಗಳೇ ಬಂದಿಲ್ಲ. ಎಲ್ಲಿ ಕಾಂಗ್ರೆಸ್ ಅಸ್ತಿತ್ವವಿಲ್ಲವೋ ಅಥವಾ ಉತ್ತಮ ನಾಯಕತ್ವ ಇದೆಯೇ ಅಲ್ಲೆಲ್ಲ ಆಯಾ ಪಕ್ಷಗಳೇ ತಮ್ಮ ಪ್ರಾಬಲ್ಯ ಮುಂದುವರಿಸಿವೆ. ಕಾಂಗ್ರೆಸ್ ಎಲ್ಲೆಲ್ಲಿ ಪ್ರಬಲವಾಗಿತ್ತೋ ಅಲ್ಲಿ ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ಜನ ಮತ ನೀಡಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ಜತೆ ನಿತೀಶ್ ಕುಮಾರ್ ಹೋಗುತ್ತಾರೆ ಎಂಬ ಪುಕಾರು ಇದ್ದರಿಂದ ಅಲ್ಲಿ ಕೂಡ ಬಿಜೆಪಿ ಜಯಭೇರಿ ಭಾರಿಸಿತು. ಈ ಚುನಾವಣೆ ಕೂಡ ಕೆಲ ರಾಜ್ಯ ಹೊರತುಪಡಿಸಿ ಕಾಂಗ್ರೆಸ್ ವಿರೋಧಿ ಹಾಗೂ ಮೋದಿ ಅಲೆಯ ಮೇಲೆ ನಿಂತಿತ್ತು. ಆದ್ದರಿಂದ ನಾನು ಹೇಳಿದ್ದೆಲ್ಲ ಜನ ಒಪ್ಪಿದ್ದಾರೆ ಎಂಬ ಭಾವನೆ ಮೋದಿಯವರಲ್ಲಿರಲ್ಲ, ಇದನ್ನು ತಿಳಿದು ಮೋದಿ ಕೆಲಸ ಮಾಡಬಹುದು. ಆ ನಿಟ್ಟಿನಲ್ಲಿ ಅವರು ಹೆಜ್ಜೆ ಇಡುತ್ತಿದ್ದಾರೆ ಕೂಡ.
ಇದರೊಂದಿಗೆ ಕಾಂಗ್ರೆಸ್ ಮೇಲಿನ ಸೇಡಿಗಾಗಿ ಕೆಲ ಉತ್ತಮ ಯೋಜನೆಗಳನ್ನು ಕೈಬಿಡುವ ಅಪಾಯವಿರುತ್ತದೆ. ಹಿಂದಿನ 10 ವರ್ಷದ ಆಡಳಿತದಲ್ಲಿ ಶಿಕ್ಷಣ ಹಕ್ಕು ಕಾಯಿದೆ, ಆಹಾರ ಭದ್ರತಾ ಕಾಯಿದೆ ಹಾಗೂ ಮಾಹಿತಿ ಹಕ್ಕು ಕಾಯಿದೆಯಂತಹ ಜನೋಪಯೋಗಿ ಅಂಶವನ್ನು ಕಾಂಗ್ರೆಸ್ ತಂದಿದೆ. ಮಾಹಿತಿ ಹಕ್ಕು ಕಾಯಿದೆಯ ಫಲವಾಗಿಯೇ ಮೋದಿ ಪ್ರಧಾನಿಯಾದರು ಎಂದು ನಂಬಿದವನು ನಾನು. ಕಾಯಿದೆಯ ಲಾಭ ಪಡೆದು ಸುಬ್ರಹ್ಮಣ್ಯ ಸ್ವಾಮಿಯಂತವರು ಹಿಂದಿನ ಸರ್ಕಾರದ ಅನೇಕ ಹಗರಣಗಳನ್ನು ಹೊರತಂದಿದ್ದು. ಅವರೇ ಜನರಿಗೆ ಕೊಟ್ಟ ಕಾಯಿದೆ ಭಸ್ಮಾಸುರನ ತರಹ ಅವರಿಗೆ ಮುಳುವಾಯಿತು. ಇನ್ನು ಆಹಾರ ಭದ್ರತೆ ಹಾಗೂ ಶಿಕ್ಷಣ ಹಕ್ಕು ಕಾಯಿದೆ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ. ಆದರೆ ಈ ಕಾಯಿದೆಯ ಅನುಷ್ಠಾನವನ್ನು ಕಾಂಗ್ರೆಸ್ ಸಮರ್ಪಕವಾಗಿ ಮಾಡಲಿಲ್ಲ, ಇದನ್ನು ಮೋದಿ ಯಶಸ್ವಿಯಾಗಿಸಬೇಕು.
ಇನ್ನು ಈ ಸರ್ಕಾರ ಬರುವ ಮುಂಚೆ ಜನರಲ್ಲಿ ಭರವಸೆ ಮೂಡಿಸಿದ ಯೋಜನೆ ಗಂಗಾ-ಕಾವೇರಿ ನದಿ ಜೋಡಣೆ. ವಾಜಪೇಯಿ ಅವರ ಕಾಲದಲ್ಲಿ ಇದು ಅರ್ಧಕ್ಕೆ ನಿಂತಿತ್ತು. ಮೋದಿ ಇದನ್ನು ಮಾಡುತ್ತಾರೆ ಎನಿಸುತ್ತದೆ. ಏಕೆಂದರೆ ಮೋದಿಯಲ್ಲಿ ಒಂದು ಸಂಕಲ್ಪವಿದೆ, ಹಟವಿದೆ. ಈ ಹಟವನ್ನು ಹಿಡಿದು ಅವರು ಹಿಡಿದ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಕಾಣಿಸುತ್ತಿದೆ, ಇಂತಹದೊಂದು ಆಸೆಯೂ ಇದೆ. ಇದರ ಜತೆಗೆ ಅನ್ನ, ವಿದ್ಯುತ್, ನೀರು ಹಾಗೂ ಶಿಕ್ಷಣಕ್ಕೆ ಕುರಿತಂತೆ ಆಮೂಲಾಗ್ರವಾಗಿ ಯೋಜನೆಗಳ ಅನುಷ್ಠಾನ ಮಾಡಬೇಕು.
ಇನ್ನು ಭಯವೆಂದರೆ ಅವರು ಕೇವಲ ಪಕ್ಷ ಹಾಗೂ ಕಾರ್ಯಕರ್ತರ ಉತ್ಸಾಹಕ್ಕೆ ಅನುಗುಣವಾಗಿ ಹೋಗದಿರಲಿ ಎಂಬ ಮನವಿಯಿದೆ. ಅವರು ಹೇಳಿದಂತೆ ಕೇಳಲು ಹೊರಟರೇ ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕು, ಚೀನಾದ ಮೇಲೆ ಕ್ರಮ ಜರುಗಿಸಬೇಕು, ಇಂತಹ ವಿಪರೀತಗಳೇ ಇರಬಹುದು. ಆದರೆ ಇದನ್ನು ಮಾಡಿದರೆ ದೇಶ ಒಂದೆರಡು ದಶಕಗಳ ಹಿಂದೆ ಸರಿದಿಬಿಡುತ್ತದೆ. ಬದಲಾಗಿ ರಾಜತಾಂತ್ರಿಕವಾಗಿ ಹಾಗೂ ಸಮರ್ಥವಾಗಿ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಈ ಸರ್ಕಾರವಾದರೂ ಕೆಲಸ ಮಾಡಬೇಕು. ಈ ಶಕ್ತಿ ಮೋದಿಗಿದೆ ಎಂದು ನಂಬಿದ್ದೇನೆ.
ಮೋದಿ ಮೇಲೆ ಮತ್ತೊಂದು ಗುರುತರ ಜವಾಬ್ದಾರಿಯಿದೆ. ಈ ಸರ್ಕಾರಕ್ಕೆ ಪ್ರತಿಪಕ್ಷವೇ ಇಲ್ಲ. ತಾನು ಮಾಡುವ ಪ್ರತಿ ಕೆಲಸವನ್ನು ತಾನೇ ಪ್ರತಿಪಕ್ಷವಾಗಿ ನೋಡುವ ಮನೋಭಾವವನ್ನು ಮೋದಿ ಬೆಳೆಸಿಕೊಳ್ಳಬೇಕು. ಅವರೇ ಪ್ರತಿಪಕ್ಷಗಳನ್ನು ಕಟ್ಟಬೇಕಾಗುತ್ತದೆ. ಹೊಗಳುಭಟರನ್ನು ಬೆಳೆಸುವ ಬದಲು ಟೀಕಾಕಾರರನ್ನು ಬೆಳೆಸಬೇಕಿದೆ. ಸದನದಲ್ಲಿ ಕುಳಿತು ಟೀಕಿಸುವವರೆಲ್ಲ ಸೋತಿದ್ದಾರೆ. ಗೆದ್ದವರಲ್ಲಿ ಕೆಲವರು ಕೂಡ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಅವರ ಮೇಲೆ ಅಥವಾ ಕೆಲಸದ ಮೇಲೆ ಬರುವ ಟೀಕೆಗಳನ್ನು ಶಾಂತಚಿತ್ತದಿಂದ ಕೇಳುವ ಮನಸ್ಸು ಹೊಂದಿರಬೇಕು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ಅನಿವಾರ್ಯವಾಗುತ್ತವೆ, ಇದು ದೊಡ್ಡ ಅಪಾಯ ಕೂಡ. ಜನತೆ ಹಾಗೂ ಮಾಧ್ಯಮಗಳ ಟೀಕೆಗಳನ್ನು ಸಹಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಚ್ಯುತಿಯಾಗದಂತೆ ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಯುವಜನರ ಕನಸಿನ ಮೇಲೆ ಬಂದ ಸರ್ಕಾರವಿದು. ಅವರ ಆಸೆಯನ್ನು ಈಡೇರಿಸುವ ಯಶಸ್ವಿ ಸರ್ಕಾರವಾಗಲಿ ಎಂದು ನಾನು ಹಾರೈಸುತ್ತೇನೆ. ಮತ್ತು ಎಲ್ಲರ ಭಯ, ಅನುಮಾನಗಳನ್ನು ದೂರಮಾಡಲಿ ಎಂದು ಆಶಿಸುತ್ತೇನೆ.

- ಟಿ.ಎನ್. ಸೀತಾರಾಮ್,
ಚಿತ್ರ ನಿರ್ದೇಶಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.