ಭರತ ಖಂಡದ ಸಪ್ತ ನಾಯಕರ ಸಮ್ಮುಖದಲ್ಲಿ ಭಾರತ ವರ್ಷಕ್ಕೆ ಸಾರಥಿಯಾದ ನರೇಂದ್ರ

-ಚಿಕ್ಕ ಸಂಪುಟ, ದಕ್ಷ ಆಡಳಿತದ ಸಂಕಲ್ಪ ಜಾರಿ ಮೋದಿ ಯುಗಾರಂಭ, 44 ಸಚಿವರ ಪ್ರಮಾಣ
ನವದೆಹಲಿ: 'ಚಿಕ್ಕ ಸಂಪುಟ, ದಕ್ಷ ಆಡಳಿತ'. ನೂತನ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಮತ್ತು ಸಂಪುಟದ ಸಂಕೇತ. ಪ್ರತಿಭೆ ಮತ್ತು ಸಾಮರ್ಥ್ಯವೇ ಮಾನದಂಡವಾಗಿ ರೂಪುಗೊಂಡ 44 ಸಚಿವರ ಎನ್ಡಿಎ ಸರ್ಕಾರ ಸೋಮವಾರ ಸಂಜೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿದೆ. ಇದು ದೇಶ ಕಂಡ ಇದುವರೆಗಿನ ಚಿಕ್ಕ ಮಂತ್ರಿಮಂಡಲ.
ರಾಷ್ಟ್ರಪತಿ ಭವನದ ಅಂಗಳದಲ್ಲಿ ಸಂಜೆ 6 ಗಂಟೆಗೆ ಸರಿಯಾಗಿ ಮೋದಿ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು. ಮೋದಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಡಿ.ವಿ.ಸದಾನಂದ ಗೌಡ ಅವರು ಮೋದಿ ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಆರು ಹಿರಿಯ ಸಚಿವರು.
ಇದು ನಿಸ್ಸಂದೇಹವಾಗಿಯೂ ಮೋದಿ ಸಂಪುಟ. '75 ವರ್ಷ ದಾಟಿದವರಿಗೆ ಸಂಪುಟದಲ್ಲಿ ಸ್ಥಾನವಿಲ್ಲ' ಮತ್ತು 'ನಾಯಕರ ಮಕ್ಕಳಿಗೆ ಮಂತ್ರಿಗಿರಿ ಬೇಡ' ಎನ್ನುವ ತಮ್ಮ ನಿಲುವಿನಲ್ಲಿ ಮೋದಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕೆಲಸದ ಬಗ್ಗೆ ತಮಗೆ ಯಾರಲ್ಲಿ ವಿಶ್ವಾಸ ಇದೆಯೊ ಅವರನ್ನು ಮಾತ್ರವೇ ತಮ್ಮ ತಂಡಕ್ಕೆ ಆರಿಸಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆವರೆಗೂ ಮೋದಿ ತಮ್ಮ ಸಂಪುಟದ ಕುರಿತು ರಹಸ್ಯ ಕಾಪಾಡಿಕೊಂಡಿದ್ದರು. ಸಂಭಾವ್ಯ ಸಚಿವರನ್ನು ಗುಜರಾತ್ ಭವನದ ಚಹಾಕೂಟಕ್ಕೆ ಆಹ್ವಾನಿಸುವುದರೊಂದಿಗೆ ಆ ಕುತೂಹಲಕ್ಕೆ ತೆರೆ ಬಿತ್ತು. ಮಿತ್ರಪಕ್ಷಗಳಾದ ಶಿವಸೇನೆ, ಲೋಕಜನಶಕ್ತಿ ಪಾರ್ಟಿ, ತೆಲುಗು ದೇಶಂ, ಶಿರೋಮಣಿ ಅಕಾಲಿ ದಳಗಳಿಗೆ ತಲಾ ಒಂದು ಸ್ಥಾನ ನೀಡಲಾಗಿದೆ.
ಅಚ್ಚರಿ ಎಂದರೆ ರಾಜೀವ್ ಪ್ರತಾಪ್ ರೂಡಿ, ಶಹನವಾಜ್ ಹುಸೇನ್, ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಹೊರಗಿಟ್ಟಿರುವುದು. ಈ ಮೂವರು ನಾಯಕರಲ್ಲದೆ ಮೋದಿ ಆಪ್ತ ಅಮಿತ್ ಶಾ ಅವರಿಗೂ ವರ್ಷದೊಳಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳ ಪಕ್ಷದ ಹೊಣೆ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಸಾರ್ಕ್ ದೇಶಗಳ ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದು ನೂತನ ಪ್ರಧಾನಿಗೆ ಶುಭ ಹಾರೈಸಿದರು.
ರಾಜ್ಘಾಟ್ಗೆ ಭೇಟಿ
ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ದೇಶದ 15ನೇ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದರು. ರಾಜ್ಘಾಟ್ನಲ್ಲಿ ಮೋದಿ 10 ನಿಮಿಷ ಕಳೆದರು. ಬಳಿಕ ಟ್ವೀಟ್ ಮಾಡಿದ ಮೋದಿ, 'ಈಗ ಅಟಲ್ಜೀ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದೇನೆ' ಎಂದರು. ಅದರಂತೆ ಅನಾರೋಗ್ಯ ಪೀಡಿತರಾಗಿರುವ ವಾಜಪೇಯಿ ಮನೆಗೆ ತೆರಳಿ ಅವರ ಹಾರೈಕೆ ಪಡೆದು ವಾಪಸಾದರು. ಮೋದಿ ರಾಜ್ಘಾಟ್ಗೆ ತೆರಳಿದ್ದ ವೇಳೆ ಹರ್ಷವರ್ಧನ್, ವಿಜಯ್ ಗೋಯಲ್, ವಿಜೇಂದರ್ ಗುಪ್ತಾ ಸೇರಿ ದೆಹಲಿ ಬಿಜೆಪಿಯ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶ ಬೆಸೆದ ಸಂಪುಟ
ಜಮ್ಮು-ಕಾಶ್ಮೀರದಿಂದ ಡಾ.ಜಿತೇಂದ್ರ ಸಿಂಗ್, ಕನ್ಯಾಕುಮಾರಿ ಸಂಸದ ಪಿ.ರಾಧಾಕೃಷ್ಣನ್, ಅರುಣಾಚಲ ಪ್ರದೇಶದಿಂದ ಕಿರೇನ್ ರಿಜಿಜು, ಗುಜರಾತ್ನಿಂದ ಬಾಲ್ಯನ್ ಮನ್ಸೂಖ್ಭಾಯ್ ವಾಸವಾ ಮಂತ್ರಿಯಾಗಿದ್ದಾರೆ.
ಕೇರಳ, ರಾಜಸ್ಥಾನಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ
ರಾಜಸ್ಥಾನದಲ್ಲಿ ಎಲ್ಲ 25 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದ್ದರೂ ಅಲ್ಲಿನ ಲೋಕಸಭಾ ಸದಸ್ಯರಿಗೆ ಪ್ರಾತಿನಿಧ್ಯ ನೀಡದಿರುವುದು ಅಚ್ಚರಿ
ಸಂಸತ್ ಸದಸ್ಯರಲ್ಲದ ಮಂತ್ರಿಗಳು
ಪ್ರಕಾಶ್ ಜಾವಡೇಕರ್, ನಿರ್ಮಲಾ ಸೀತಾರಾಮನ್, ರಾಧಾ ಮೋಹನ್
75 ದಾಟಿದವರಿಗಿಲ್ಲ ಸ್ಥಾನ
75ರ ನೀತಿ ಹಿನ್ನೆಲೆಯಲ್ಲಿ ಹಿರಿಯ ನಾಯಕ ಡಾ.ಮುರಳಿ ಮನೋಹರ ಜೋಶಿ, ಶಾಂತಕುಮಾರ್, ಬಿ.ಸಿ.ಖಂಡೂರಿ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ನೂತನ ಸಚಿವರ ಪೈಕಿ ನಜ್ಮಾ ಹೆಫ್ತುಲ್ಲಾ (74), ಕಲ್ರಾಜ್ ಮಿಶ್ರಾ (73) ಇಬ್ಬರೇ 70 ದಾಟಿದವರು. ಹೆಚ್ಚಿನವರು 60ರ ಪ್ರಾಯದ ಆಸುಪಾಸಿನಲ್ಲಿದ್ದಾರೆ. ಮುಖ್ಯಮಂತ್ರಿಗಳ ಮಕ್ಕಳನ್ನೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.
74 ವರ್ಷದ ನಜ್ಮಾ ಹೆಫ್ತುಲ್ಲಾ ಹಿರಿಯ ಸಚಿವೆ
38 ವರ್ಷದ ಸ್ಮೃತಿ ಇರಾನಿ ಕಿರಿಯ ಸಚಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


