ಪ್ರಧಾನ ಸುದ್ದಿ

ನವ ಮನ್ವಂತರಕ್ಕೆ ಆಯ್ತು ನಾಂದಿ

ನವ ಮನ್ವಂತರಕ್ಕೆ ಆಯ್ತು ನಾಂದಿ
Published On :

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ
: ಮೈನ್ ನರೇಂದ್ರ ದಾಮೋದರ ದಾಸ್ ಮೋದಿ ಶಪಥ್ ಲೇಥಾ... ಕಂಚಿನ ಕಂಠದ ಧ್ವನಿ ರಾಷ್ಟ್ರಪತಿ ಭವನದ ಹೊರ ಆವರಣದಲ್ಲಿ ಅನುರಣಿಸುತ್ತಿದ್ದಂತೆ ಮೊಳಗಿದ ಚಪ್ಪಾಳೆ, ಜಯಘೋಷಗಳು ಭಾರತ ಪ್ರಜಾಪ್ರಭುತ್ವದ ಹೊಸ ಮನ್ವಂತರಕ್ಕೆ ಮುನ್ನುಡಿಯಾದವು.
ಪ್ರಜಾಪ್ರಭುತ್ವ ನೆಲೆವೀಡಾದ ದಕ್ಷಿಣಾ ಏಷ್ಯಾದ ಎಲ್ಲಾ ರಾಷ್ಟ್ರಗಳ ಪ್ರಮುಖರು, ದೇಶ- ವಿದೇಶಗಳ ಗಣ್ಯಾತಿಗಣ್ಯರು ಸೇರಿದಂತೆ ನಾಲ್ಕು ಸಾವಿರಕ್ಕು ಮಿಕ್ಕಿ ನೆರೆದಿದ್ದ ರಾಷ್ಟ್ರಪತಿ ಭವನದ ಆವರಣ ನರೇಂದ್ರಮೋದಿ ನೇತೃತ್ವದ ಸುಭದ್ರ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ತಂದೆಗೆ ನೆರವಾಗಲು ಟೀ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿ ತನ್ನ ಸತತ ಪರಿಶ್ರಮ ಮತ್ತು ಸಾಧನೆಯಿಂದ ಪ್ರಧಾನಿ ಹುದ್ದೆಗೆ ಏರಿದ ಕ್ಷಣ ಪ್ರಜಾಪ್ರಭುತ್ವದ ಹಿರಿಮೆ, ಎಲ್ಲ ಸಾಧ್ಯತೆ ಮತ್ತು ಸಾರ್ಥಕತೆಗಳ ನಡುವೆ ಮತ್ತೊಂದು ಮಟ್ಟಿಲು ಏರಿತು. ಇಡೀ ರಾಷ್ಟ್ರಪತಿ ಭವನದ ಆವರಣ ಪ್ರಜಾಪ್ರಭುತ್ವದ ಸಂಭ್ರಮ, ಸಡಗರಗಳ ಸಮ್ಮಿಳನಗೊಂಡಂತಿತ್ತು. ಸ್ಥಿರ ಸರ್ಕಾರ ಹಾಗೂ ಸ್ವಚ್ಛ ಆಡಳಿತದ ಭರವಸೆ ನೀಡಿ 16ನೇ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿದ ನರೇಂದ್ರಮೋದಿ ಅವರೊಂದಿಗೆ ಕರ್ನಾಟಕದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ 23 ಮಂದಿ ಸಂಪುಟ ದರ್ಜೆ ಸಚಿವರು, 10 ಮಂದಿ ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರು ಹಾಗೂ ಕರ್ನಾಟಕದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಹನ್ನೊಂದು ಮಂದಿ ರಾಜ್ಯ ಸಚಿವರು ಪ್ರಮಾಣ ಸ್ವೀಕರಿಸಿದರು.
ಮೋದಿ ಚಿಕ್ಕ- ಚೊಕ್ಕ ಸಂಪುಟ ರಚಿಸಿದ್ದಾರೆ. ಆಡಳಿತ ಸುಧಾರಣೆ ಮತ್ತು ಮಿತವ್ಯಯ ಸಾಧನೆಯ ನಿಟ್ಟಿನಲ್ಲಿ ಮೋದಿ ಅವರದು ದಿಟ್ಟ ಹೆಜ್ಜೆ. ಹಿರಿ ಮತ್ತು ಕಿರಿಯ ತಲೆಮಾರುಗಳ ನಡುವೆ ಸಮನ್ವಯ, ರಾಜಕೀಯ ಅನುಭವ ಮತ್ತು ತಾಂತ್ರಿಕ ಪರಿಣತಿ ಸಮ್ಮಿಳನ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿರುವ ಮೋದಿ ಸಂಪುಟ ರಚನೆಯೆಂಬ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಭಾರಿಸಿದ್ದಾರೆ. ಮೋದಿ ತಮ್ಮ ಸಂಪುಟದಲ್ಲೀಗ ಏಳು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿರುವುದಷ್ಟೆ ಅಲ್ಲ, ಪ್ರಮುಖ ಖಾತೆಗಳ ಹೊಣೆಯನ್ನೂ ವಹಿಸಿದ್ದಾರೆ.
ಬಿಜೆಪಿಗೆ ಬಹುಮತ ಬಂದಿದ್ದರೂ ಚುನಾವಣೆ ವೇಳೆ ಜತೆಯಾಗಿದ್ದ ಅಂಗ ಪಕ್ಷಗಳಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ತಾವು ಎಲ್ಲರನ್ನು ಒಳಗೊಳ್ಳುವ ಆಡಳಿತ ನೀಡುತ್ತೇವೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅಭಿವೃದ್ಧಿ ಮಂತ್ರದೊಂದಿಗೆ ಚುನಾವಣಾ ಯಾತ್ರೆ ಆರಂಭಿಸಿದ್ದ ನರೇಂದ್ರ ಮೋದಿ ನಾಡಿನುದ್ದಕ್ಕೂ ಮಿಂಚಿನಂತೆ ಸಂಚರಿಸಿ ನಡೆಸಿದ್ದ ಪ್ರಚಾರ ಭಾಷಣಗಳಲ್ಲಿ ರಾಷ್ಟ್ರದ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ್ದರು. ಸರ್ಕಾರ ಪಾತ್ರ ತಗ್ಗಿಸಿ ಆಡಳಿತದ ಪಾತ್ರ ಹಿಗ್ಗಿಸುವ ಮಾತನ್ನಾಡಿದ್ದ ಮೋದಿ, ಪ್ರಾರಂಭದಲ್ಲೇ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಆಯಾ ವಲಯದ ಇಲಾಖೆಗಳನ್ನು ಒಗ್ಗೂಡಿಸಿ  ಖಾತೆ ಹಂಚಿಕೆ ಮಾಡಿದ್ದಾರೆ. ಇದು ಯೋಜನೆಗಳಿಗೆ ತ್ವರಿತ ಅನುಮತಿ, ಅನುಮೋದನೆ, ಜಾರಿ ಮತ್ತು ನಿರ್ವಹಣೆಗೆ ಅನುಕೂಲವಾಗಲಿದೆ. ಮೋದಿ ಅವರ ಈ ಕ್ರಮ ಅವರು ಮುಂದೆ ಇಡುವ ಹೆಜ್ಜೆಗಳ ಮಾರ್ಗಸೂಚಿಯೂ ಹೌದು.

ದೇವರ ಹೆಸರಲ್ಲಿ ಪ್ರಮಾಣ ಸ್ವೀಕಾರ
ನರೇಂದ್ರ ಮೋದಿ ಸೇರಿದಂತೆ ಬಹುತೇಕ ಸದಸ್ಯರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ ಮೂವರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಂಜೆ ಆರು ಗಂಟೆಗೆ ಆರಂಭವಾದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏಳುವರೆಗೆ ಮುಕ್ತಾಯಗೊಂಡಿತು. ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರು, ಭಾರತದಲ್ಲಿರುವ ಎಲ್ಲಾ ದೂತವಾಸಗಳ ರಾಯಭಾರಿಗಳು, ಧಾರ್ಮಿಕ ಮುಖಂಡರು, ಸಿನಿಮಾ ತಾರೆಗಳು, ಹಾಲಿ ಹಾಗೂ ಮಾಜಿ ಕ್ರಿಕೆಟ್ ಪಟುಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಸಮಾಜ ವಿವಿಧ ಸ್ತರಗಳ ಎಲ್ಲರನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಇಡೀ ಸಮಾರಂಭ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನೆಡೆಸಲಿರುವ ಸರ್ಕಾರದ ಪ್ರಾತ್ಯಕ್ಷಿಕೆಯಂತಿತ್ತು.

ಆತ್ಮೀಯತೆ
ಪ್ರಮಾಣ ವಚನ ಸ್ವೀಕರಿಸಲು ನರೇಂದ್ರಮೋದಿ ಹೆಸರನ್ನು ಕರೆಯುತ್ತಿದ್ದಂತೆ ವೇದಿಕೆಯತ್ತ ಬಂದ ಮೋದಿ ಅವರು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪ್ರೀತಿಯಿಂದ ವಂದಿಸಿದರು. ಪ್ರಣವ್ ಮುಖರ್ಜಿ ಅವರು ಅಷ್ಟೆ ಆತ್ಮೀಯತೆಯಿಂದ ಅಭಿನಂದಿಸಿ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಮೋದಿ ಮತ್ತೆ ರಾಷ್ಟ್ರಪತಿಗಳಿಗೆ ವಂದಿಸಿದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಸಹಿ ಹಾಕಿದರು. ಅದು ಅವರು ಪ್ರಧಾನಿಯಾಗಿ ಹಾಕಿದ ಮೊದಲ ಸಹಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.